ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಖ್ಯಾತ ನಟ ಶಮ್ಮಿ ಕಪೂರ್ ಇನ್ನಿಲ್ಲ

Last Updated 14 ಆಗಸ್ಟ್ 2011, 6:40 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್ ಚಿತ್ರರಂಗದ ಹಿರಿಯ ನಟ ಶಮ್ಮಿ ಕಪೂರ್ (79) ಭಾನುವಾರ ಬೆಳಿಗ್ಗೆ ಇಲ್ಲಿನ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಶತಮಾನದ 1950-60ರ ಅವಧಿಯಲ್ಲಿ ಶಮ್ಮಿ ಕಪೂರ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಅಭಿನಯದಿಂದ ಜನಮನ್ನಣೆ ಗಳಿಸಿದ್ದರು.

1953 ರಲ್ಲಿ ~ಜೀವನ ಜ್ಯೋತಿ~ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ~ದಿಲ್ ದೇಖೆ ದೇಖೋ~, ~ಜಂಗ್ಲಿ~, ~ಕಾಶ್ಮೀರ್ ಕಿ ಕಲಿ~, ~ತೀಸ್ರಿ ಮಂಜಿಲ್~, ~ಆನ್ ಇವನಿಂಗ್ ಇನ್ ಪ್ಯಾರಿಸ್~, ~ಬ್ರಹ್ಮಚಾರಿ~ ಮೊದಲಾದ ಚಿತ್ರಗಳಿಂದ ಆ ಕಾಲದ ಚಿತ್ರರಸಿಕರ ಮನಸೂರೆಗೊಂಡಿದ್ದರು.

ಶಮ್ಮಿ ಕಪೂರ್ ಕಳೆದ ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದರು. ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಶನಿವಾರ ಚಿಕಿತ್ಸೆಗಾಗಿ ಅವರನ್ನು ಬ್ರೀಚ್‌ಕ್ಯಾಂಡಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಲಾಗಿತ್ತು. ಚಿಕಿತ್ಸೆಯು ಫಲಕಾರಿಯಾಗದೇ ಅವರು ವಿಧಿವಶರಾದರು ಎಂದು ಕಪೂರ್ ಕುಟುಂಬದ ಮೂಲಗಳು ತಿಳಿಸಿವೆ.

ಶಮ್ಮಿ ಕಪೂರ್ ಅವರು ಪತ್ನಿ ನೀಲಾ ದೇವಿ, ಮಗ ಆದಿತ್ಯ ರಾಜ್ ಮತ್ತು ಮಗಳು ಕಾಂಚನ್ ದೇಸಾಯಿ ಅವರನ್ನು ಅಗಲಿದ್ದಾರೆ.

ಗಣ್ಯರ ಕಂಬನಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌವ್ಹಾಣ್, ಕೇಂದ್ರದ ಸಚಿವ ವಿಲಾಸರಾವ್ ದೇಶಮುಖ್, ಸುಶಿಲ್ ಕುಮಾರ್ ಶಿಂಧೆ ಸೇರಿದಂತೆ ರಾಜಕೀಯದ ಹಲವು ಗಣ್ಯರು ಹಿರಿಯ ನಟನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
 
ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮ ನಟ, ನಟಿಯರು ಹಾಗೂ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಹಿರಿಯ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT