ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ನವ ನಿರ್ದೇಶಕಿಯರು

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅದು `ಲಕ್ ಬೈ ಛಾನ್ಸ್~ ಸಿನಿಮಾ ಚಿತ್ರೀಕರಣದ ಸಂದರ್ಭ. ಚಿತ್ರದ ನಿರ್ದೇಶಕಿ ಝೋಯಾ ಅಖ್ತರ್ ಹಾಗೂ ಆಕೆಯ ಕಿರಿಯ ಸಹೋದರ ಫರ‌್ಹಾನ್ ಅಖ್ತರ್ ಚಿತ್ರೀಕರಣದ ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದರು.

ಸ್ಟೀಡಿಕ್ಯಾಮೆರಾದ ನಿರ್ವಾಹಕ ಶಾಟ್‌ಗಳನ್ನು ಹೊಂದಿಸಿಕೊಂಡ ನಂತರ, ಫರ‌್ಹಾನ್ ಅಖ್ತರ್ ಅವರನ್ನು `ಹೇಗಿದೆ ಸರ್...? ಓಕೆನಾ ಸರ್...~ ಎಂದು ಪ್ರಶ್ನಿಸುತ್ತಿದ್ದನಂತೆ.

ವಾಸ್ತವವಾಗಿ ಆತ ಈ ಪ್ರಶ್ನೆಗಳನ್ನು ಕೇಳಬೇಕಿದ್ದುದು ಚಿತ್ರನಿರ್ದೇಶಕಿಗೆ. ಮತ್ತೆ ಮತ್ತೆ ಆ ಕ್ಯಾಮೆರಾಮನ್ ಫರ‌್ಹಾನ್ ಅವರನ್ನೇ ಪ್ರಶ್ನಿಸುತ್ತಿದ್ದಾಗ ಝೋಯಾಗೆ ತಡೆಯಲಾಗಲಿಲ್ಲವಂತೆ. ತಕ್ಷಣವೇ ಅವನನ್ನು ಹತ್ತಿರಕ್ಕೆ ಕರೆದು ಅತ್ಯಂತ ಸೌಮ್ಯವಾಗಿ
`ನೋಡು ಈ ಸಿನಿಮಾದ ನಿರ್ದೇಶಕಿ ನಾನು. ನಿನಗೆ ಏನೇ ಅನ್ನಿಸಿದರೂ ಅದನ್ನು ನನಗೇ ಹೇಳಬೇಕು ಮತ್ತು ಕೇಳಬೇಕು~ ಎಂದರಂತೆ. ಕೂಡಲೇ ಆತ `ಇಲ್ಲ, ಇಲ್ಲ.. ನೀವು ನನ್ನ ಸಹೋದರಿ ಇದ್ದಂತೆ...~ ಎಂದು ಆತ ಮಾತು ಮುಂದುವರಿಸುವ ಮುನ್ನವೇ ಝೋಯಾ, ಅವನನ್ನು ಅರ್ಧದಲ್ಲೇ ತಡೆದು, `ನಾನು ನಿನ್ನ ಸಹೋದರಿ ಅಲ್ಲ. ನಿರ್ದೇಶಕಿ. ನಿನಗಿದನ್ನು ತಾಳಿಕೊಳ್ಳಲಾಗದಿದ್ದಲ್ಲಿ ನಾವು ಒಟ್ಟಿಗೆ ಕೆಲಸ ಮಾಡಲಾಗದು  ...!~ಎಂದರಂತೆ. ಕಡೆಗೆ ಆತನಿಗೆ ತನ್ನ ತಪ್ಪಿನ ಅರಿವಾಗಿತ್ತು.

ಹಿಂದಿ ಚಿತ್ರರಂಗದ ಖ್ಯಾತ ಸಿನಿಮಾ ಸಾಹಿತಿ ಹಾಗೂ ಸಂಗೀತ ರಚನೆಕಾರ ಜಾವೇದ್ ಅಖ್ತರ್ ಅವರ ಪುತ್ರಿಯಾದ 38 ವರ್ಷದ ಝೋಯಾ ಅಖ್ತರ್ ಈಗ ಬಾಲಿವುಡ್‌ನ ಅತ್ಯಂತ ಭರವಸೆಯ ಸಮಕಾಲೀನ ನಿರ್ದೇಶಕಿ. ಸಹಜವಾಗಿಯೇ ಮುಂಬೈನ ಸಿನಿಮಾ ಜಗತ್ತಿನಲ್ಲಿ ಪರದೆಯ ಹಿಂದೆ ಪುರುಷರದ್ದೇ ಕಾರುಬಾರು.
 
ಚಿತ್ರದ ಸಂಪಾದನೆ, ಸಂಭಾಷಣೆ, ನಿರ್ಮಾಣದಂತಹ ಎಲ್ಲ ವಿಭಾಗಗಳಲ್ಲೂ ಅವರದೇ ಪಾರುಪತ್ಯ. ಆಗಾಗ್ಗೆ ಪುರುಷರ ಈ ಭದ್ರಕೋಟೆಯನ್ನು ಕೆಲವರು ಅಲ್ಲಾಡಿಸುತ್ತಿದ್ದರಾದರೂ ಕಳೆದೊಂದು ದಶಕದಿಂದ ಯಾರೂ ಅಂತಹ ಪ್ರತಿಭಾವಂತ ಮಹಿಳೆ ಕಂಡುಬಂದಿರಲಿಲ್ಲ. ಈಗ ಝೋಯಾ ಈ ಪಾರುಪತ್ಯವನ್ನು ಬಲವಾಗಿ ಅಲ್ಲಾಡಿಸಿದ್ದಾರೆ.

 `ಮುಖ್ಯವಾಹಿನಿಯ ನಿರ್ದೇಶನದ ಸಾಲಿನಲ್ಲಿ ಝೋಯಾ ಚೆಂಬಳಕಿನಂತೆ ಕಂಗೊಳಿಸುತ್ತಿದ್ದಾರೆ~ ಎನ್ನುತ್ತಾರೆ ಸೋನಿ ಪಿಕ್ಚರ್ಸ್‌ ಎಂಟರ್‌ಟೈನ್‌ಮೆಂಟ್‌ನ ಉಪಾಧ್ಯಕ್ಷ ಅಮಿ ಪಾಸ್ಕಲ್. ಡ್ರೀಮ್ ವರ್ಕ್ಸ್ ಮುಖ್ಯಸ್ಥ ಸ್ಟೇಸಿ ಸ್ನೈಡರ್ ಅವರದ್ದೂ ಇದೇ ಅಭಿಪ್ರಾಯ.

ಬಾಲಿವುಡ್ ಹೀರೋಯಿನ್‌ಗಳು ಸದಾ ಮಾಧ್ಯಮಗಳ ಆಕರ್ಷಣೆಯಾದರೆ ನಾಯಕ ನಟರು ಇಲ್ಲಿನ ಸಿನಿಮಾಗಳ ಶಕ್ತಿ ಕೇಂದ್ರ ಇದ್ದಂತೆ. ಅದರಲ್ಲೂ ಎರಡು ದಶಕಗಳಿಂದ ಅಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅಕ್ಷರಶಃ ಬಾಲಿವುಡ್‌ನ ಸರದಾರರಾಗಿ ತಮ್ಮ ಆಳ್ವಿಕೆ ಮುಂದುವರಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಇವತ್ತು ಅಖ್ತರ್‌ನಂಥವರು ಬಾಲಿವುಡ್‌ನಲ್ಲಿ ತಮ್ಮದೇ ಆದ ಹೊಸ ಯಶೋಗಾಥೆಯೊಂದಕ್ಕೆ ನಾಂದಿ ಹಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವ ಹಂತ ತಲುಪಿದ್ದಾರೆ. ಈ ಹಿಂದಿನ ಮಹಿಳಾ ಸಿನಿಮಾ ನಿರ್ದೇಶಕಿಯರಂತೆ ಕೌಟುಂಬಿಕ ಕಥಾಹಂದರಗಳ ಹಾಗೂ ಸಣ್ಣ ಬಜೆಟ್‌ನ ಚಿತ್ರಗಳಲ್ಲಷ್ಟೇ ತಮ್ಮ ಪ್ರಯೋಗಶೀಲತೆ ಮೆರೆದವರು ಎಂಬಂತಹ ಅಪವಾದಕ್ಕೂ ಹೊರತಾಗುತ್ತಿದ್ದಾರೆ.

ಪ್ರಸ್ತುತ ಝೋಯಾ ಅವರ ನಿರ್ದೇಶನದ ಚಿತ್ರ `ಜಿಂದಗಿ ನ ಮಿಲೇಗಿ ದೊಬಾರ~ ಪ್ರೇಕ್ಷಕರು ಮತ್ತು ಚಿತ್ರ ವಿಮರ್ಶಕರಲ್ಲಿ ಹೊಸ ಸಂಚಲನ ಉಂಟು ಮಾಡಿದೆ.

ಮನಸೆಳೆವ ಚಿತ್ರದ ಸಂಭಾಷಣೆ, ನಿರ್ದೇಶನದ ಮೇಲಿನ ಬಿಗಿ ಹಿಡಿತ ಹಾಗೂ ಬೆಚ್ಚಿಬೀಳಿಸುವಂತಹ ಚಿತ್ರ ನಿರ್ಮಾಣದ ಶೈಲಿಯಿಂದಾಗಿ ಇದು ಗಳಿಕೆಯಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲೇ ಅಗ್ರ ಸ್ಥಾನದಲ್ಲಿದೆ. ಬ್ರಿಟನ್‌ನಲ್ಲಿ ಏಳನೇ ಸ್ಥಾನ ಹಾಗೂ ಅಮೆರಿಕದಲ್ಲಿ 15ನೇ ಸ್ಥಾನದಲ್ಲಿದೆ ಎಂದು `ಬಾಕ್ಸ್ ಆಫೀಸ್ ಆಫ್ ಇಂಡಿಯಾ.ಕಾಮ್~ ಹೇಳುತ್ತಿದೆ.  ಬಾಲಿವುಡ್‌ನಲ್ಲಿ ಈ ವರ್ಷದ ಮೂರನೇ ಅತ್ಯಂತ ದೊಡ್ಡ ಬಜೆಟ್‌ನ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಬೆನ್ನಿಗೇರಿಸಿಕೊಂಡು ನಿರಾತಂಕ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಬಿಡುಗಡೆಯಾದ ಐದೇ ವಾರಗಳಲ್ಲಿ 19 ದಶಲಕ್ಷ ಡಾಲರ್‌ಗಳನ್ನು ಬಾಚಿರುವುದು ಸೋಜಿಗವೇ ಸರಿ.

 ಕಳೆದೊಂದು ದಶಕದಲ್ಲಿ ಅತ್ಯುತ್ತಮ ಬಾಲಿವುಡ್  ಚಿತ್ರವೊಂದನ್ನು ಮಹಿಳೆ ನಿರ್ದೇಶಿಸಿದ್ದಾಳೆ ಎಂಬಂತಹ ಮಾತುಗಳನ್ನು ಕೆಲವರಾದರೂ ಹೇಳಿದ್ದಾರೆ.  ಚಿತ್ರಕಥೆಯೂ ಮಹಿಳೆಯರದೇ. ಝೋಯಾ ಹಾಗೂ ರೀಮಾ ಕಾಗ್ತಿ ಜೊತೆಗೂಡಿ ಇದನ್ನು ಬರೆದಿದ್ದಾರೆ. ಝೋಯಾ ಪಾಲಿಗೆ ಇದು ನಿರ್ದೇಶನದಲ್ಲಿ ಎರಡನೇ ಸಿನಿಮಾ.

ಮಹಿಳಾ ನಿರ್ದೇಶಕಿಯರು ಎಂದರೆ ಮಹಿಳೆಯರನ್ನೇ ಕೇಂದ್ರಬಿಂದುವಾಗಿಸಿ ಕೊಂಡು ಚಿತ್ರ ನಿರ್ಮಿಸಬೇಕೆಂಬ ಪರಿಪಾಠಕ್ಕೆ ಗಾವುದ ದೂರದಲ್ಲಿರುವ ಚಿತ್ರವಿದು.

ಹಿಂದಿ ಸಿನಿಮಾ ಪ್ರಪಂಚದ ಮಹಿಳಾ ನಿರ್ದೇಶಕಿಯರಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಮೀರಾ ನಾಯರ್, ಜಿಂದಗಿ... ಸಿನಿಮಾದ ಬಗ್ಗೆ ಹೆಮ್ಮೆಯ ಮಾತುಗಳನ್ನು ದಾಖಲಿಸಿದ್ದಾರೆ.

ಈ ಕುರಿತು ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಅವರು, `ಇವತ್ತಿನ ಬಾಲಿವುಡ್‌ನಲ್ಲಿ ಮಹಿಳೆಯರು ದೊಡ್ಡ ಬಜೆಟ್ಟಿನ ಸಿನಿಮಾ ತೆಗೆಯುವ ಸಾಹಸ ಮಾಡುತ್ತಿದ್ದಾರೆ. ತಮ್ಮದೇ ಆದ ದೃಷ್ಟಿಕೋನದಲ್ಲಿ, ಮಾರುಕಟ್ಟೆಯ ಬೇಕುಬೇಡಗಳಿಗೆ ಅನುಗುಣವಾಗಿ  ನಿರ್ಮಾಣ, ನಿರ್ದೇಶನಗಳಿಗೆ ಕೈ ಹಾಕುತ್ತಿದ್ದಾರೆ.

ನಾಯಕಿಯರನ್ನೇ ಮುಖ್ಯವಾಗಿಸಿಕೊಂಡು ಕಥೆ ಹೆಣೆಯುವ ಹಳೆಯ ಸೂತ್ರಗಳಿಗಿಂತ ಬಹುದೂರ ಸಾಗಿ ಆಲೋಚಿಸುತ್ತಿದ್ದಾರೆ. ನಿಜವಾಗಿಯೂ ಇದು ಮೆಚ್ಚತಕ್ಕ ವಿಷಯ. ಈ ಸಾಲಿನಲ್ಲಿ ಇದಕ್ಕೆ ಫರ‌್ಹಾ ಖಾನ್‌ರಂಥವರ ಸಾಧನೆಗಳನ್ನೂ ಉದಾಹರಿಸಬಹುದು~ ಎಂದು ಶ್ಲಾಘಿಸಿದ್ದಾರೆ.

ಝೋಯಾ ಅವರ ಸೋದರ ಸಂಬಂಧಿಯೂ ಆಗಿರುವ ಫರ‌್ಹಾ ಖಾನ್ 1992ರಲ್ಲಿ ನೃತ್ಯನಿರ್ದೇಶಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದವರು. ವೇಗದ ಹಾಡುಗಳಿಗೆ ಚೆಂದಾಗಿ ಹಾಗೂ ನಿಪುಣತೆಯಿಂದ ನಿರ್ದೇಶನ ನೀಡುವಲ್ಲಿ ಎತ್ತಿದ ಕೈ ಎನಿಸಿಕೊಂಡವರು.

ಹಿಂದಿ ಸಿನಿಮಾದ ಡ್ಯಾನ್ಸ್ ಸೆಟ್‌ಗಳಲ್ಲಿ ಸೃಜನಶೀಲತೆಯನ್ನು ಯಾವ ರೀತಿ ತುಂಬಬೇಕು ಎಂಬುದಕ್ಕೆ ತಮ್ಮಳಗಿನ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಯಶಸ್ವಿಯಾದವರು. 2004ರಲ್ಲಿ ಫರ‌್ಹಾ ಖಾನ್ ನೃತ್ಯ ನಿರ್ದೇಶನ ನೀಡಿದ `ಮೈ ಹ್ಞೂಂ ನಾ~ ಚಿತ್ರವಾಗಲಿ, 2007ರಲ್ಲಿ ತೆರೆಕಂಡ `ಓಂ ಶಾಂತಿ~ಯೇ ಆಗಲಿ ಗಳಿಸಿದ ಯಶಸ್ಸು ಅದ್ಭುತ ಎನಿಸುವಂಥಾದ್ದು.

`ಓ ಶಾಂತಿ~ಯಂತೂ ಆ ವರ್ಷದ ಹಿಂದಿ ಸಿನಿಮಾಗಳಲ್ಲೇ ಹೆಚ್ಚು ಹಣ ಗಳಿಸಿದ ಎರಡನೇ ಚಿತ್ರ ಎಂಬ ಹಿರಿಮೆ ಹೊಂದಿತ್ತು. ಅಷ್ಟೇಕೆ 2010ರಲ್ಲಿ ತೆರೆಕಂಡ `ತೀಸ್ ಮಾರ್ ಖಾನ್~ ಚಿತ್ರ ಕೂಡಾ ಫರ‌್ಹಾ ಖಾನ್‌ರ ನೈಪುಣ್ಯತೆಗೆ ಕನ್ನಡಿ ಹಿಡಿಯಿತು.

`ದೋಭಿ ಘಾಟ್~ (ಮುಂಬೈ ಡೈರೀಸ್) ಚಿತ್ರದ ನಿರ್ದೇಶಕಿಯಾದ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಕೂಡಾ ಬಾಲಿವುಡ್‌ನ ಮತ್ತೊಂದು ಪ್ರತಿಭೆ. ಇವರೀಗ ತಮ್ಮ ಎರಡನೇ ಚಿತ್ರದ ಕಥಾ ರಚನೆಯಲ್ಲಿ ಅತ್ಯಂತ ಬ್ಯುಸಿಯಾಗಿದ್ದಾರೆ. ಇಂಥವರೆಲ್ಲಾ ಮುಖ್ಯವಾಹಿನಿಯ ಸಿನಿಮಾಗಳ ಸಾಲಿನಲ್ಲಿ ಭರವಸೆಯ ಬುಗ್ಗೆಯನ್ನೇ ಚಿಮ್ಮಿಸಿದ್ದಾರೆ.

ತಮ್ಮ ಮುಂದಿನ ಚಿತ್ರದಲ್ಲಿ ಮಹಿಳೆಯರ ಧ್ವನಿಗೇ ಪ್ರಮುಖ ಆದ್ಯತೆ ನೀಡಲು ಕಿರಣ್ ರಾವ್ ಇಚ್ಛಿಸಿದ್ದಾರಂತೆ. `ಮಹಿಳೆಯೊಬ್ಬಳು ಪುರುಷನಿಗಿಂತ ಎಷ್ಟು ಮುಖ್ಯ ಎಂಬ ಅಂಶವನ್ನೇ ಕೇಂದ್ರವಾಗಿಸಿಕೊಂಡು ನಾನು ಈ ಚಿತ್ರ ನಿರ್ದೇಶಿಸಲು ಆಲೋಚಿಸುತ್ತಿದ್ದೇನೆ. ಯಾವುದೇ ನಾಟಕ ಅಥವಾ ಸಿನಿಮಾವೇ ಆಗಲಿ ಬಲಿಷ್ಠವಾದ ಮಹಿಳಾ ಕೇಂದ್ರಿತ ವಸ್ತು ಹೊಂದಿಲ್ಲವೆಂದರೆ ಅದು ಅಪೂರ್ಣವಾಗುತ್ತದೆ~ ಎಂದು ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿರುವ ಕಿರಣ್ ಹೇಳಿಕೆ ಅವರ ಮುಂದಿನ ಹಾದಿಯ ದಿಕ್ಸೂಚಿ ಎಂಬಂತಿದೆ.

ವಿಶೇಷವೆಂದರೆ ಎರಡನೇ ತಲೆಮಾರಿಗೆ ಸೇರಿದ ಈ ಮಹಿಳಾ ನಿರ್ದೇಶಕಿಯರೆಲ್ಲಾ ವಿಭಿನ್ನ ಆಲೋಚನೆ, ದೃಷ್ಟಿಕೋನ ಮತ್ತು ತಮ್ಮದೇ ಆದ ವೃತ್ತಿಯ ನೈಪುಣ್ಯತೆಯನ್ನು ಹೊಂದಿರುವಂಥವರು. ಇವರ ನೋಟವೆಲ್ಲಾ ಕೇವಲ ಸಾಧನೆಯ ಕಡೆಗೆ.

ಲಿಂಗಾಧಾರಿತ ವಿಷಯಗಳ ಬಗ್ಗೆ ಇವರೆಂದೂ ಅಷ್ಟಾಗಿ ತಲೆ ಕೆಡಿಸಿಕೊಂಡವರಲ್ಲ. ಇವರ ವೃತ್ತಿಬದ್ಧತೆಯ ಛಾಪುಗಳನ್ನು ಗಮನಿಸಿದಾಗ ಇವರ ಕ್ರಿಯಾಶೀಲತೆಯ ಸಾಮರ್ಥ್ಯ ಎಂಥವರಿಗೂ ಅರ್ಥವಾಗುತ್ತದೆ.

`ಲಿಂಗ ಬೇಧದ ಬಗ್ಗೆ ಮಾತನಾಡುತ್ತಾ ಕೂರುವುದು ಎಂದರೆ ಅದು ಸಮಯವನ್ನು ವ್ಯರ್ಥ ಮಾಡಿದಂತೆ~ ಎಂಬುದು ಝೋಯಾ ಅವರ ಅನಿಸಿಕೆ. `ಎಷ್ಟೇ ಆದರೂ ನಾವು ಹೆಣ್ಣೆಂಬ ಬಗ್ಗೆ ನಮಗೆ ಅರಿವಿದೆ. ಆದರೂ ಸಿನಿಮಾ ಎಂದಾಗ ಇವನ್ನೆಲ್ಲಾ ಬದಿಗಿಡಬೇಕಾಗುತ್ತದೆ. ಯಾರಿಗಾದರೂ ಏನನ್ನಾದರೂ ಹೇಳಬೇಕಾದರೆ ನಮ್ಮ ದಾರ್ಷ್ಟ್ಯವನ್ನು ಖಂಡಿತವಾಗಿಯೂ ಮೆರೆಯಬೇಕಾಗುತ್ತದೆ~ ಎಂಬುದು ಅವರ ಸ್ಪಷ್ಟ ನುಡಿ.

2012ಕ್ಕೆ ಹಿಂದಿ ಸಿನಿಮಾ ಜಗತ್ತಿಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇವುಗಳಲ್ಲಿ ಮೂರು ಸಿನಿಮಾಗಳು ಪುರುಷರ ನಿರ್ದೇಶನ ಹೊಂದಿದ್ದರೆ ಒಂದು ಚಿತ್ರ ಝೋಯಾ ಅವರದ್ದು. ಸದ್ಯಕ್ಕೀಗ ಝೋಯಾ ಈ ದಿಸೆಯಲ್ಲಿ ತನ್ಮಯವಾಗಿದ್ದಾರೆ.

`ಈ ನಾಲ್ಕೂ ಚಿತ್ರಗಳ ನಿರ್ಮಾಣದ್ಲ್ಲಲಿ ಜಿದ್ದಾಜಿದ್ದಿನ ಸ್ಪರ್ಧೆ ಇದೆ. ಆದರೆ ಅಂತಿಮವಾಗಿ ನಾಲ್ಕೂ ಚಿತ್ರಗಳು ಹೊರಬಂದಾಗ ಇವುಗಳಲ್ಲಿ ಮಹಿಳೆ ನಿರ್ಮಿಸಿರುವ ಚಿತ್ರ ಯಾವುದೆಂಬುದು ಗೊತ್ತಾಗಲಿಕ್ಕಿಲ್ಲ. ಬಹುಶಃ ಇಂತಹುದೊಂದು ಅಂತರವನ್ನು ನಾನು ಖಂಡಿತಾ ಮುರಿಯಬ್ಲ್ಲಲೆ~ ಎಂಬುದು ಝೋಯಾ ಅವರ ಆತ್ಮವಿಶ್ವಾಸ.

ನ್ಯೂಯಾರ್ಕ್ ಟೈಮ್ಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT