ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್ ಪ್ರಣಯ ರಾಜ ವಿಧಿವಶ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್‌ನ ಖ್ಯಾತ ಚಲನಚಿತ್ರ ತಯಾರಕ ಹಾಗೂ `ಪ್ರಣಯ  ರಾಜ~ ಎಂದೇ ಖ್ಯಾತರಾಗಿದ್ದ ಯಶ್ ರಾಜ್ ಚೋಪ್ರಾ ಅವರು ಭಾನುವಾರ ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಸೆಪ್ಟೆಂಬರ್ 27ರಂದು 80ನೇ ಹುಟ್ಟುಹಬ್ಬವನ್ನು ಆಚರಿಸಿದ್ದ ಚೋಪ್ರಾ ಅವರು ಡೆಂಗೆ ಜ್ವರದ ಸೋಂಕಿನ ಕಾರಣದಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಕಳೆದ ವಾರ ದಾಖಲಾಗಿದ್ದರು. ಕೆಲವು ದಿನಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅವರಿಗೆ ಪತ್ನಿ, ಪುತ್ರರಾದ ಚಿತ್ರ ತಯಾರಕ ಆದಿತ್ಯ ಚೋಪ್ರಾ ಮತ್ತು ನಟ- ನಿರ್ಮಾಪಕ ಉದಯ್ ಚೋಪ್ರಾ ಇದ್ದಾರೆ.

ಹಿಂದಿ ಚಿತ್ರೋದ್ಯಮದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಚಿತ್ರ ತಯಾರಕರಲ್ಲಿ ಒಬ್ಬರು ಎಂಬ ಹೆಗ್ಗಳಿಕೆ ಪಡೆದಿರುವ ಯಶ್ ಚೋಪ್ರಾ, ತಮ್ಮ ಐದು ದಶಕಗಳ  ವೃತ್ತಿಜೀವನದಲ್ಲಿ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಿಸಿದ್ದರು.
ಅವರು ತಯಾರಿಸಿದ್ದ `ತ್ರಿಶೂಲ್~, `ದೀವಾರ್~ `ಸಿಲ್‌ಸಿಲಾ~, ಚಾಂದನಿ ಮತ್ತು `ದಿಲ್ ತೊ ಪಾಗಲ್ ಹೈ~, `ದಿಲ್‌ವಾಲೆ ದುಲ್ಹನಿಯಾ ಲೆ ಜಾಯೆಂಗೆ~ ಚಿತ್ರಗಳು ಬಾಲಿವುಡ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದವು.

ನವೆಂಬರ್ 13ರಂದು ಬಿಡುಗಡೆಗೊಳ್ಳಲು ಸಜ್ಜಾಗಿರುವ `ಜಬ್ ತಕ್ ಹೈ ಜಾನ್~ ಚಿತ್ರವು ನಿರ್ದೇಶಕನಾಗಿ ತಮ್ಮ ವೃತ್ತಿ ಜೀವನದ ಕೊನೆಯ ಚಿತ್ರವಾಗಲಿದೆ ಎಂದು ಚೋಪ್ರಾ ತಮ್ಮ ಸೆ.27ರಂದು ನಡೆದ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಘೋಷಿಸಿದ್ದರು.

1932ರ ಸೆಪ್ಟೆಂಬರ್ 27ರಂದು ಪಾಕಿಸ್ತಾನದ ಲಾಹೋರ್‌ನ ಪಂಜಾಬ್ ಕುಟುಂಬದಲ್ಲಿ ಜನಿಸಿದ್ದ ಯಶ್ ರಾಜ್ ಚೋಪ್ರಾ ಅವರ ಕುಟುಂಬವು ದೇಶ ವಿಭಜನೆ ನಂತರ ಭಾರತಕ್ಕೆ ಬಂದು ನೆಲೆಸಿತ್ತು.ತಾವೊಬ್ಬ ಎಂಜಿನಿಯರ್ ಆಗಬೇಕು ಎಂದು ವಿದ್ಯಾರ್ಥಿ ದೆಸೆಯಲ್ಲಿ ಅವರು ಬಯಸಿದ್ದರು. ಆದರೆ ಚಲನಚಿತ್ರದ ಬಗೆಗೆ ಇದ್ದ ತುಡಿತ ಅವರನ್ನು ಮುಂಬೈಯತ್ತ ಕರೆದೊಯ್ದಿತ್ತು.

ಆರಂಭದಲ್ಲಿ ಐ.ಎಸ್. ಜೋಹರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಚೋಪ್ರಾ, ನಂತರ ತಮ್ಮ ಹಿರಿಯ ಸಹೋದರ ಬಿ.ಆರ್. ಚೋಪ್ರಾ ಅವರಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು.
1959ರಲ್ಲಿ ತಮ್ಮದೇ ಆದ `ಧೂಲ್ ಕಾ ಫೂಲ್~ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸಿದ್ದರು. 50ರ ಮತ್ತು 60ರ ದಶಕದಲ್ಲಿ ಚೋಪ್ರಾ ಸಹೋದರರು ಜೊತೆಯಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು.

ಬಹು ತಾರಾಗಣದ ಕಲ್ಪನೆಯನ್ನು ಬಾಲಿವುಡ್‌ನಲ್ಲಿ ಪರಿಚಯಿಸಿದ, 1965ರಲ್ಲಿ ಬಿಡುಗಡೆಗೊಂಡಿದ್ದ `ವಕ್ತ್~ ಚಿತ್ರ ಚೋಪ್ರಾ ಅವರಿಗೆ ಯಶಸ್ಸಿನ ಜೊತೆಗೆ ಖ್ಯಾತಿ  ತಂದುಕೊಟ್ಟಿತ್ತು.

1973ರಲ್ಲಿ ಅವರು `ಯಶ್ ರಾಜ್ ಫಿಲ್ಮ್ಸ್~ ಎಂಬ ತಮ್ಮದೇ ಆದ ಚಿತ್ರ ನಿರ್ಮಾಣ ಕಂಪೆನಿ ಸ್ಥಾಪಿಸಿದ್ದರು.
ವೃತ್ತಿ ಜೀವನವನ್ನು 50ರ ದಶಕದ ಅಂತ್ಯದಲ್ಲಿ ಆರಂಭಿಸಿದ್ದ ಚೋಪ್ರಾ ಅವರಿಗೆ ಪ್ರೇಕ್ಷಕರ ನಾಡಿಮಿಡಿತ ಚೆನ್ನಾಗಿ ತಿಳಿದಿತ್ತು. ನಂತರದ ಪ್ರತಿ ದಶಕದಲ್ಲಿ ಅವರು ಅತ್ಯಂತ ಯಶಸ್ವಿ ಚಿತ್ರಗಳನ್ನೂ ನೀಡುತ್ತಾ ಚಿತ್ರ ರಸಿಕರ ಮನಸ್ಸು ಗೆದ್ದಿದ್ದರು.

ಆರಂಭದಲ್ಲಿ `ತ್ರಿಶೂಲ್~, `ದೀವಾರ್~ನಂಥ ಹೊಡೆದಾಟಗಳೇ ವಿಜೃಂಭಿಸುತ್ತಿದ್ದ ಚಿತ್ರಗಳನ್ನು ತಯಾರಿಸಿದ್ದ ಅವರು ನಂತರದ ದಿನಗಳಲ್ಲಿ ಪ್ರೀತಿ-ಪ್ರೇಮ-ಪ್ರಣಯದ ಕಥಾ ಹಂದರಗಳನ್ನು ಹೊಂದಿರುವ ಚಿತ್ರಗಳತ್ತ ವಾಲಿದ್ದರು.
ಚೋಪ್ರಾ ಅವರ `ತ್ರಿಶೂಲ್~ ಚಿತ್ರ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ `ಆ್ಯಂಗ್ರಿ-ಯಂಗ್ ಮ್ಯಾನ್~ ಖ್ಯಾತಿ ತಂದುಕೊಟ್ಟಿತ್ತು.

ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವು ಪುರಸ್ಕಾರಗಳು ಯಶ್ ಚೋಪ್ರಾ ಅವರ ಮುಡಿಗೇರಿವೆ. ಹನ್ನೊಂದು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಇವುಗಳಲ್ಲಿ ನಾಲ್ಕು ಪ್ರಶಸ್ತಿಗಳು ನಿರ್ದೇಶನ ವಿಭಾಗದಲ್ಲಿ ದೊರಕಿವೆ.

ಗಣ್ಯರ ಸಂತಾಪ: ಚೋಪ್ರಾ ನಿಧನಕ್ಕೆ ಚಿತ್ರೋದ್ಯಮದ ಗಣ್ಯರು ಕಂಬನಿ ಮಿಡಿದಿದ್ದಾರೆ.
`ಯಶ್ ಅವರು ಚಿತ್ರೋದ್ಯಮದ ಗುರು. ಅವರು ಉತ್ಸಾಹದ ಚಿಲುಮೆಯಂತಿದ್ದರು. ಅವರು ಎಂದೆಂದಿಗೂ ಸ್ಮರಣೀಯರು~ ಎಂದು ಚಿತ್ರ ತಯಾರಕ ಸುಭಾಷ್ ಘಾಯ್ ಹೇಳಿದ್ದಾರೆ.ಚೋಪ್ರಾ ನಿಧನಕ್ಕೆ ಆಘಾತ ವ್ಯಕ್ತಪಡಿಸಿರುವ `ನಿರ್ದೇಶಕ-ನಿರ್ಮಾಪಕ ಮಹೇಶ್ ಭಟ್, `ಇದು ಹೃದಯ ಒಡೆಯುವ ಸುದ್ದಿ~ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT