ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ನ ಐರನ್‌ಮ್ಯಾನ್ ಅಧ್ಯಾಯ ಅಂತ್ಯ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಹಿಂದಿ ಚಿತ್ರರಂಗದ ಆ್ಯಕ್ಷನ್ ಹೀರೊ ದಾರಾಸಿಂಗ್ ಅವರನ್ನು ನಾನು ಮೆಚ್ಚಿಕೊಳ್ಳಲು ಒಂದು ಪ್ರಬಲ ಕಾರಣವಿದೆ. ಅರವತ್ತರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ದಾರಾಸಿಂಗ್ ತರಹ ಮೈಕಟ್ಟು ಹೊಂದಿದ್ದ ನಟ ಯಾರಿದ್ದರು? ಹೀಗಾಗಿ ಆ ದಶಕದ ಎಲ್ಲ ಯುವಕರೂ ದಾರಾಸಿಂಗ್ ಅಭಿಮಾನಿಗಳಾಗಿ ಬಿಟ್ಟಿದ್ದರು. ಫೈಟಿಂಗ್, ಕುಸ್ತಿ, ಹೋರಾಟಗಳಿಂದ ಕೂಡಿದ್ದ ಅವರ ಚಲನಚಿತ್ರಗಳನ್ನು ನೋಡಲು ಹಾತೊರೆಯುತ್ತಿದ್ದರು. ಕ್ಲಾಸಿಗೆ ಚಕ್ಕರ್ ಹಾಕಿ ದಾರಾಸಿಂಗ್ ಚಿತ್ರಗಳಿಗೆ ಕ್ಯೂ ನಿಂತಿರುತ್ತಿದ್ದರು. ಸಹಜವಾಗಿ ಪೈಲ್ವಾನ್ ಆಗಿದ್ದ ದಾರಾಸಿಂಗ್ ಚಿಕ್ಕಂದಿನಿಂದಲೂ ಅದೇ ಅಖಾಡಾದಲ್ಲಿ ಉರುಳಾಡಿ ಬೆಳೆದದ್ದರಿಂದ ಅವರ ಮೈಕಟ್ಟು ಸಿನಿಮಾತೆರೆಯ ಮೇಲೆ ಒಂದು ಆಕರ್ಷಣೆಯೇ ಆಗಿತ್ತು.  ತೆರೆಯ ಮೇಲೆ ಮಿಂಚುವ ಕನಸಿನ ನಾಯಕನ ತರಹ ಇರಬೇಕು ಎಂದು ಭ್ರಮಿಸುವ ಯುವಜನಾಂಗದ ಕನಸು ಸಿನಿಮಾ ಉದಯಿಸಿದ ದಿನದಿಂದಲೇ ಇದೆಯಲ್ಲವೇ?  ದಾರಾಸಿಂಗ್ ಚಿತ್ರಗಳನ್ನು ನಾನು ನೋಡುತ್ತ್ದ್ದಿದುದು ಅದರ ಆ್ಯಕ್ಷನ್ ಗುಣಗಳಿಗಾಗಿ ಎನ್ನುವುದಕ್ಕಿಂತ ಸಣಕಲನಾಗಿದ್ದ ನಾನು ದಾರಾಸಿಂಗ್ ತರಹ ಆಗಬೇಕು ಎನ್ನುವ ಆಕಾಂಕ್ಷೆಗಾಗಿ ಎನ್ನಬಹುದು. ದಾರಾಸಿಂಗ್ ಈಗ ಕಣ್ಮರೆಯಾದ ಮೇಲೂ ಬಾಲಿವುಡ್, ಅವರ ದೈತ್ಯದೈಹಿಕ ಶಕ್ತಿಯನ್ನೇ  ಹೆಚ್ಚಾಗಿ ಗುಣಗಾನ ಮಾಡುತ್ತಿದೆ. 83 ವರ್ಷ ವಯಸ್ಸಿನ  ದಾರಾಸಿಂಗ್, ತೆರೆಯ ಮೇಲೆ ಆಟ ಮುಗಿಸಿ ಹೋಗಿದ್ದಾರೆ. ನನ್ನ ಆಸೆ ಇನ್ನೂ ಈಡೇರಲೇ ಇಲ್ಲ. ನಾನಿನ್ನೂ ಸಣಕಲನಾಗಿಯೇ ಉಳಿದಿದ್ದೇನೆ.

ದಾರಾಸಿಂಗ್ ಇನ್ನಿಲ್ಲ
ಮುಂಬೈ (ಪಿಟಿಐ): ಐದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕುಸ್ತಿ ಪಟು, ಬಾಲಿವುಡ್‌ನ ಜನಪ್ರಿಯ ನಟ, ಕಿಂಗ್‌ಕಾಂಗ್ ಖ್ಯಾತಿಯ ದಾರಾಸಿಂಗ್ (83) ಗುರುವಾರ ಬೆಳಿಗ್ಗೆ ನಿಧನರಾದರು.

ಜುಲೈ 7ರಂದು ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದಿದ್ದ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ದೇಹಸ್ಥಿತಿ ಸುಧಾರಿಸಲೇ ಇಲ್ಲ.

140 ಚಿತ್ರಗಳಲ್ಲಿ ಅಭಿನಯಿಸಿರುವ ದಾರಾಸಿಂಗ್, ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸುವ ನಟನಾಗುವ ಮುನ್ನ ವಿಶ್ವ ಕುಸ್ತಿ ಚಾಂಪಿಯನ್ ಆಗಿದ್ದರು.

ಕಾಮನ್‌ವೆಲ್ತ್ ಚಾಂಪಿಯನ್ ಕೂಡ ಆಗಿದ್ದರು. ಅವರ ಮೊದಲ ಪತ್ನಿಯ ಪುತ್ರ ಪ್ರದ್ಯುಮ್ನ ಸಿಂಗ್ ರಾಂಧವ, ದ್ವಿತೀಯ ಪತ್ನಿಯ ಪುತ್ರ ಕಿರುತೆರೆ ನಟ ವಿಂದು ದಾರಾಸಿಂಗ್ ಸೇರಿ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
 


ಅಂದಿನ ದಿನಗಳಲ್ಲೇ ದಾರಾಸಿಂಗ್‌ನನ್ನು `ಐರನ್ ಮ್ಯಾನ್~ ಎಂದೇ ಕರೆಯುತ್ತಿದ್ದರು. `ದಾರಾಸಿಂಗ್ ಐರನ್ ಮ್ಯಾನ್~ ಎನ್ನುವ ಚಿತ್ರವೇ ತೆರೆ ಕಂಡಿತ್ತು. ಈಗಿನ ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್, ಟಾರ್ಜಾನ್ ಮೊದಲಾದ ಎಲ್ಲ ಅತಿಮಾನುಷ ಶಕ್ತಿ ಇರುವ ಚಿತ್ರಗಳ ಹೀರೋಗಳು ತಮ್ಮ ಬಲಾಢ್ಯ ಮೈಕಟ್ಟಿನಿಂದಲೇ ಗೆಲ್ಲುತ್ತಾ ಹೋಗುತ್ತಾರೆ. ಇತ್ತೀಚಿನ ಹೀರೋಗಳು ಸಿಕ್ಸ್‌ಪ್ಯಾಕ್, ಏಯ್ಟ ಪ್ಯಾಕ್..ಎನ್ನುತ್ತಾ, ಕಸರತ್ತು ಮಾಡಿ, ಕಡ್ಡಾಯವಾಗಿ ಮೈ ಊದಿಸಿಕೊಳ್ಳುತ್ತಾರೆ. ಸಲ್ಮಾನ್‌ಖಾನ್ ಇಂಜೆಕ್ಷನ್ ಚುಚ್ಚಿಸಿಕೊಂಡು ಅಂಗಸೌಷ್ಠವವನ್ನು ಉಬ್ಬಿಸಿಕೊಂಡದ್ದು ಸುದ್ದಿಯಾಗಿತ್ತು. `ಘಜನಿ~ಯಲ್ಲಿ ಅಮೀರ್ ಖಾನ್ ಮಾಡಿದ್ದೂ ಅದೇ. ರಾ-1 ರಲ್ಲಿ ಅಂತಹ ಸಿಕ್ಸ್‌ಪ್ಯಾಕ್ ಮಾಡಿಕೊಂಡು ಸೂಪರ್‌ಮ್ಯಾನ್ ಆಗಲು ಹೋದ ಶಾರೂಖ್‌ಖಾನ್ ನಗೆಪಾಟಲಾಗಲಿಲ್ಲವೇ?  60 ವರ್ಷಗಳ ಅವಧಿಯಲ್ಲಿ ದಾರಾಸಿಂಗ್ ಅವರಂತಹ ಮತ್ತೊಬ್ಬ ಪೈಲ್ವಾನ್ ಚಿತ್ರರಂಗದಲ್ಲಿ ಕಾಣಲಿಲ್ಲ ಎನ್ನುವುದೇ ವಿಶೇಷ. ಹೀಗಾಗಿ ದಾರಾಸಿಂಗ್, ಚಿತ್ರರಂಗ ಪ್ರವೇಶಿಸಿದ ದಿನದಿಂದ (1952) ಅಭಿಮಾನಿಗಳನ್ನು ಆಕರ್ಷಿಸಿದರು. ಶರಟಿಲ್ಲದೆ ತೆರೆಯ ಮೇಲೆ ಕಾಣಿಸಿಕೊಂಡ ಮೊದಲ ಹೀರೊ ಕೂಡ ಅವರೇ.

 ದಾರಾಸಿಂಗ್- ಮುಮ್ತಾಜ್  ಅತ್ಯಂತ ಜನಪ್ರಿಯ ಜೋಡಿ. ಇವರಿಬ್ಬರೂ 16 ಚಿತ್ರಗಳಲ್ಲಿ ಅಭಿನಯಿಸಿ ದಾಖಲೆ ಮಾಡಿದರು. ಇವುಗಳಲ್ಲಿ ಹತ್ತು ಚಿತ್ರಗಳು ಸೂಪರ್‌ಹಿಟ್ ಆದವು. ಫೌಲಾದ್, ವೀರ ಭೀಮಸೇನ, ಹರ್ಕ್ಯುಲಸ್, ಆಂಧಿ ಔರ್ ತೂಫಾನ್, ಟಾರ್ಜಾನ್ ಕಮ್ಸ ಟು ಡೆಲ್ಲಿ, ಟಾರ್ಜಾನ್ ಅಂಡ್ ಕಿಂಗ್‌ಕಾಂಗ್... ಮೊದಲಾದ ಚಿತ್ರಗಳು ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದ್ದವು. ಅವರ ಚಿತ್ರಗಳು ಬಿರುಗಾಳಿ ಇದ್ದಂತೆ. ಆರಂಭದಿಂದ ಕೊನೆಯವರೆಗೆ ಸಾಹಸಗಳೇ ಅಧಿಕ. ಆಯಾ ತೂಫಾನ್..ಎಂದೇ ಅಭಿಮಾನಿಗಳು ಅವರನ್ನು ಕರೆಯುತ್ತಿದ್ದರು. ಇದರ ಪರಿಣಾಮ ಹೇಗಾಯಿತೆಂದರೆ ಬಹಳಷ್ಟು ಪೈಲ್ವಾನರು ಚಿತ್ರರಂಗ ಪ್ರವೇಶಿಸಿದರು. ಆದರೆ ಎಲ್ಲರೂ ಹೀರೋಗಳಾಗಲು ಸಾಧ್ಯವಾಗಲಿಲ್ಲ. ಪೈಲ್ವಾನರು ಖಳನಾಯಕರಾಗಿ ಕಾಲ ಹಾಕಬೇಕಾಯಿತು. ದಿಲೀಪ್‌ಕುಮಾರ್, ದೇವಾನಂದ್, ರಾಜ್‌ಕಪೂರ್, ರಾಜೇಂದ್ರಕುಮಾರ್, ಶಮ್ಮಿಕಪೂರ್, ಶಶಿಕಪೂರ್ ಮೊದಲಾದವರೆಲ್ಲಾ ಜನಪ್ರಿಯತೆ ಪಡೆದಿದ್ದ ಕಾಲದಲ್ಲಿ ದಾರಾಸಿಂಗ್ ತಮ್ಮದೇ ಆದ ಚಿತ್ರಾಭಿಮಾನಿಗಳ ಗುಂಪೊಂದನ್ನು ಬೆಳೆಸಿದರು. ದಾರಾಸಿಂಗ್ ಚಿತ್ರ ನೋಡುವ ಅಭಿಮಾನಿಗಳಿಗಾಗಿಯೇ ಚಿತ್ರಕತೆ ಹೆಣೆಯಲಾಯಿತು. ಅವರ ಶಕ್ತಿಯನ್ನು ಬಾಲಿವುಡ್ ಚೆನ್ನಾಗಿಯೇ ಬಳಸಿಕೊಂಡಿತು. ಹೀಗಾಗಿ ಅವರಿಗೆ ಎಲ್ಲ ಭಾಷೆಗಳಲ್ಲೂ, ಎಲ್ಲ ರಾಜ್ಯಗಳಲ್ಲೂ ಅಭಿಮಾನಿಗಳಿದ್ದರು. ಸಾಹಸ ಮೆರೆಯುವ ನಾಯಕ ಪ್ರಧಾನ ಚಿತ್ರಗಳಿಗೆ ಎಲ್ಲ ಕಡೆ ಅಭಿಮಾನಿಗಳಿರುತ್ತಾರೆ. ಫೈಟಿಂಗ್‌ಗೆ ಬಹಳ ಹೆಸರಾಗಿದ್ದ ಎಂಜಿಆರ್ ಚಿತ್ರಗಳನ್ನು ಹಿಂದಿ ಭಾಷಿಕರು, ಮುಸ್ಲಿಂ ಯುವಕರು ಇಷ್ಟಪಟ್ಟು ನೋಡುತ್ತಿದ್ದರು. ರಜನೀಕಾಂತ್ ಅಭಿನಯದ `ಎಂದಿರನ್~ (ರೋಬೊ) ಚಿತ್ರವನ್ನು ದೇಶದ ಎಲ್ಲ ಭಾಷಿಕರೂ ನೋಡಿದರು. ದಾರಾಸಿಂಗ್ ಅಂತಹ ಅಯಸ್ಕಾಂತೀಯ ವರ್ಚಸ್ಸನ್ನು ಬಿಟ್ಟು ಹೋಗಿದ್ದಾರೆ.

ಅಮೃತಸರ ಜಿಲ್ಲೆಯ ಜಾಟ್ ಕುಟುಂಬದಲ್ಲಿ 1928 ರಲ್ಲಿ ಜನಿಸಿದ ದಾರಾಸಿಂಗ್‌ಗೆ ಚಿಕ್ಕಂದಿನಿಂದ ಕುಸ್ತಿ ಬಗ್ಗೆಯೇ ಆಸಕ್ತಿ. ಹುಡುಗ ಗಟ್ಟಿಮುಟ್ಟಾಗಿದ್ದಾನೆ ಎಂದು ಕುಟುಂಬದಲ್ಲೂ ಅವನಿಗೆ ಪೋಷಣೆ ಚೆನ್ನಾಗಿಯೇ ದೊರಕಿತು. ಹೀಗಾಗಿ ವಯಸ್ಕನಾಗುತ್ತಿದ್ದಂತೆಯೇ ಸಿಂಗಪುರ, ಮಲೇಷಿಯಾಗಳಲ್ಲಿ ಹೋಗಿ ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು, ಎದುರಾಳಿ ಪೈಲ್ವಾನನನ್ನು ಎತ್ತಿ ಒಗೆಯುವುದು, ದುಡ್ಡು ಬಾಚಿಕೊಳ್ಳುವುದು ಅವರ ಹವ್ಯಾಸವಾಗಿ ಬಿಟ್ಟಿತು. ಒಂದು ಕಾಲದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರಾಗಿದ್ದ ಕಿಂಗ್‌ಕಾಂಗ್ ( ಆಸ್ಟ್ರೇಲಿಯಾ), ಜಾರ್ಜ್ ಗೋರ್ಡಿಕೊ (ಕೆನಡಾ), ಜಾನ್ ಡಿಸಿಲ್ವ (ನ್ಯೂಜಿಲೆಂಡ್) ಅವರುಗಳನ್ನೆಲ್ಲಾ ಚಿತ್ ಮಾಡಿದ ಖ್ಯಾತಿ ದಾರಾಸಿಂಗ್ ಜೊತೆ ಇದೆ. ಅಂದಿನ ದೈತ್ಯನಾಗಿದ್ದ ಕಿಂಗ್‌ಕಾಂಗ್‌ನನ್ನು  ಅನಾಮತ್ತಾಗಿ ಎತ್ತಿಕೊಂಡು ಗಿರಗಿರನೆ ತಿರುಗಿಸಿ, ಪ್ರೇಕ್ಷಕರ ಮಧ್ಯೆ ಒಗಾಯಿಸಿ, ದಾರಾಸಿಂಗ್ ವಿಶ್ವ ಕುಸ್ತಿ ವಲಯವನ್ನೇ ನಿಬ್ಬೆರಗು ಮಾಡಿದ್ದುಂಟು. ಸೋಲೇ ಇಲ್ಲದ ಕುಸ್ತಿ ಸರದಾರನಾಗಿ ಸತತವಾಗಿ ಐನೂರು ಕುಸ್ತಿ ಪಂದ್ಯಗಳಲ್ಲಿ  ಗೆದ್ದು ದಾಖಲೆ ನಿರ್ಮಿಸಿದವರು ಅವರು. ಹೀಗಾಗಿ ಅವರಿಗೆ ರುಸ್ತುಂ-ಎ-ಪಂಜಾಬ್, ರುಸ್ತುಂ-ಎ-ಹಿಂದ್ ಪ್ರಶಸ್ತಿಗಳೆಲ್ಲಾ ಸಂದವು. 1959 ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಕೂಡ ಆದರು. 1968 ರಲ್ಲಿ ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ ಆದರು. 1983 ರಲ್ಲಿ ಕುಸ್ತಿಯಿಂದಲೇ ನಿವೃತ್ತರಾದರು.

ಒಟ್ಟು 140 ಚಿತ್ರಗಳಲ್ಲಿ ಅಭಿನಯಿಸಿರುವ ದಾರಾಸಿಂಗ್ ಅವುಗಳ ಪೈಕಿ 58 ಚಿತ್ರಗಳ ಹೀರೊ ಆಗಿದ್ದರು. 119 ಹಿಂದಿ ಚಿತ್ರ, 21 ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಏಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆರು ಟಿ.ವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಮಾನಂದ ಸಾಗರ್ ಅವರ `ರಾಮಾಯಣ~ದಲ್ಲಿ ಹನುಮಂತನಾಗಿ ಅವರದು ಬಹುಕಾಲ ನೆನಪಿನಲ್ಲಿ ಉಳಿಯುವ ಅಭಿನಯ. ಆ ಪಾತ್ರಕ್ಕೆ ಅವರಲ್ಲದೆ ಬೇರಾರೂ ಸಾಟಿಯಾಗಲಾರರು ಎನ್ನುವಷ್ಟು ತನ್ಮಯತೆ. ಅದಕ್ಕೆ ಪೂರಕವಾಗಿ ನಿಂತದ್ದು ಅವರ ದೈತ್ಯ ದೇಹ. ಹಲವಾರು ಕಿರುಚಿತ್ರಗಳಲ್ಲೂ ಅವರನ್ನು ಕಾಣಬಹುದಾಗಿತ್ತು.  `ಜಬ್ ವಿ ಮೆಟ್~ (2007 ) ಚಿತ್ರದಲ್ಲಿ ಕರೀನಾ ಕಪೂರ್ ತಾತನಾಗಿ ಕಾಣಿಸಿಕೊಂಡದ್ದೇ ಅವರ ಕೊನೆಯ ಚಿತ್ರ. ಚಿತ್ರರಂಗದಲ್ಲಿ ಅವರು ಜೀವನವನ್ನು ರೂಢಿಸಿಕೊಂಡರು. ಮುಂಬೈನ ಮೊಹಾಲಿಯಲ್ಲಿ ದಾರಾ ಚಲನಚಿತ್ರ ಸ್ಟುಡಿಯೋ ಸ್ಥಾಪಿಸಿದರು. ಪಂಜಾಬಿ ಸಿನಿಮಾಗಳಲ್ಲೂ ತಮ್ಮ ಸೇವೆ ಇರಲಿ ಎಂಬ ಉದ್ದೇಶದಿಂದ ಎರಡು ಪಂಜಾಬಿ ಚಿತ್ರಗಳನ್ನು ನಿರ್ಮಿಸಿದರು. 2003-09 ರ ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಇದು ಬಿಜೆಪಿಯ ಆಯ್ಕೆ.  ರಾಜ್ಯಸಭೆಗೆ ನಾಮಕರಣಗೊಂಡ ಮೊದಲ ಕ್ರೀಡಾಪಟು ದಾರಾಸಿಂಗ್. ಭಾರತೀಯ ಚಿತ್ರರಂಗದಲ್ಲಿ ದಾರಾಸಿಂಗ್ ಅವರಿಗೇ ಒಂದು ಪ್ರತ್ಯೇಕ ಅಧ್ಯಾಯ. ಈಗ ಅದು ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT