ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲೇಖಾನ್ ನೆನಪಿನಲ್ಲಿ ಅಪರೂಪದ ಸಪ್ತಸಿತಾರ್

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರಿನ ‘ಅಂತರಾ’ ಕಲಾವಿದರ ಸಂಘಟನೆಯ ಸಹಯೋಗದೊಂದಿಗೆ ಉಸ್ತಾದ ಬಾಲೇಖಾನ್ ಮೆಮೋರಿಯಲ್ ಟ್ರಸ್ಟ್ ಭಾನುವಾರ ಧಾರವಾಡದ ಖಾನ್ ಸಹೋದರರ ವಿಶಿಷ್ಟವಾದ ದ್ರುಪದ್ ಶೈಲಿಯ ‘ಸಪ್ತಸಿತಾರ’ ವಾದನ ಆಯೋಜಿಸಿದೆ.

ಇದರಲ್ಲಿ ಸಿತಾರ್ ದಿಗ್ಗಜ ದಿ. ಬಾಲೇಖಾನ್ ಕುಟುಂಬದ ಉಸ್ತಾದ ಹಮೀದ ಖಾನ್, ಛೋಟೆ ರಹಿಮತ್‌ಖಾನ್, ರಫೀಕ್ ಖಾನ್, ಷಫಿಕ್ ಖಾನ್, ರಯಿಸ್‌ಖಾನ್, ಹಫೀಜ ಖಾನ್ ಹಾಗೂ ಮೋಹಸಿನ್ ಖಾನ್ ಸಿತಾರ್ ಸುಧೆ ಹರಿಸಲಿದ್ದಾರೆ. ಜೊತೆಗೆ ಪೂರ್ಣಿಮಾ ಭಟ್ ಕುಲಕರ್ಣಿಯವರ ಹಿಂದುಸ್ತಾನಿ ಗಾಯನವೂ ಕಳೆ ನೀಡಲಿದೆ.

ವಿಶಿಷ್ಟವಾದ ಈ ಸಪ್ತಸಿತಾರ ವಾದನವು ಉಸ್ತಾದ ಬಾಲೇಖಾನರ ಗ್ವಾಲಿಯರ್. ಕಿರಾಣಾ ಘರಾಣೆಗೆ ಸೇರಿದ ಸಿತಾರ ರತ್ನ ರಹಿಮತ್‌ಖಾನರ ವಂಶಾವಳಿಯು ಕರ್ನಾಟಕಕ್ಕೆ ಕೊಟ್ಟ ಒಂದು ಅದ್ಭುತ ಕೊಡುಗೆ. 1995 ರಲ್ಲಿ ರುಕ್ಮಾ ನಾರಾಯಣರ ಪ್ರೋತ್ಸಾಹದಿಂದ ಉಸ್ತಾದ ಬಾಲೇಖಾನರು ತಮ್ಮ ಸಹೋದರರನ್ನು ಸಪ್ತ ಸ್ವರದ ಒಂದು ಗುಚ್ಛದೊಂದಿಗೆ ಬೆಂಗಳೂರಿನ ಕಲಾಕ್ಷಿತಿಯಲ್ಲಿ ಒಂದೆಡೆ ಸೇರಿಸಿದಾಗ ಪ್ರೇಕ್ಷಕರಿಂದ ಸ್ವಾಗತ ಮತ್ತು ಪ್ರಶಂಸೆ ಸಿಕ್ಕಿತು. ನಂತರ ದೆಹಲಿ, ಬಿಜಾಪುರ, ಕೊಲ್ಲಾಪುರ, ಧಾರವಾಡ ಮುಂತಾದ ಕಡೆ ಕೂಡ ಈ ಕಾರ್ಯಕ್ರಮ ಭಾರಿ ಜನಪ್ರಿಯವಾಗಿತ್ತು.

2007 ರಲ್ಲಿ ಉಸ್ತಾದ ಬಾಲೇಖಾನರ ದೇಹಾವಸಾನದ ನಂತರ ಅವರ ಮಗ ಹಫೀಜಖಾನರು ಬೆಂಗಳೂರಿನಲ್ಲಿ ನೆಲೆಸಿ ಸಿತಾರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಅಲ್ಲದೆ ಪುಣೆಯಲ್ಲಿರುವ ಅಣ್ಣ ರಯಿಸಖಾನರೊಂದಿಗೆ ಉಸ್ತಾದ ಬಾಲೇಖಾನ ಸ್ಮರಣಾರ್ಥ ಟ್ರಸ್ಟ್ ಸ್ಥಾಪಿಸಿ ಹಿಂದುಸ್ತಾನಿ ಸಂಗೀತದ ಏಳ್ಗೆ ಮತ್ತು ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

ಸಪ್ತಸಿತಾರದಲ್ಲಿ ಸಂಗೀತ ಗುಚ್ಛದ ಒಂದೊಂದು ಸ್ವರವು ಕಾಮನ ಬಿಲ್ಲಿನ ಸಪ್ತ ರಂಗುಗಳಾಗಿ ಸಂಗೀತದ ರಸಿಕರನ್ನು ರಂಜಿಸಲಿವೆ. ಇವರಿಗೆ ಕೊಲ್ಕತ್ತಾದ ಪ್ರಖ್ಯಾತ ತಬಲಾ ವಾದಕ ಪಂಡಿತ ಅಭಿಜಿತ ಬ್ಯಾನರ್ಜಿ ಸಾಥ ನೀಡಲಿದ್ದಾರೆ.

ಪಂಡಿತ್ ಬಸವರಾಜ ರಾಜಗುರು, ಮುರಲಿ ಮನೋಹರ ಶುಕ್ಲಾ ಹಾಗೂ ಉಷಾ ಬೆಪ್ಪಲ್‌ಕಟ್ಟಿಯವರ ಶಿಷ್ಯರಾದ ಪೂರ್ಣಿಮಾ ಭಟ್ ಅವರಿಗೆ ಗುರುಮೂರ್ತಿ ವೈದ್ಯ (ತಬಲಾ) ಹಾಗೂ ಅಶ್ವಿನ್ ವಲಾವಲ್‌ಕರ (ಹಾರ್ಮೋನಿಯಂ) ಸಾಥ್ ನೀಡುತ್ತಾರೆ.
ಸ್ಥಳ: ಜಯನಗರ 8ನೇ ಬ್ಲಾಕ್‌ನ ಜೆಎಸ್‌ಎಸ್ ಸಭಾಂಗಣ. ಸಂಜೆ 5.30. ದೇಣಿಗೆ ಪಾಸ್‌ಗಳಿಗೆ: 96320 33600.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT