ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ಕಳೆದುಕೊಳ್ಳುತ್ತಿರುವ ಮಕ್ಕಳು

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಅತ್ತರೇ ಅಳಲಮ್ಮ ಈ ಕೂಸು ನಮಗಿರಲಿ..
ಕೆಟ್ಟರೆ ಕೆಡಲಿ ಮನೆಗೆಲಸ...
ಈ ಜೋಗುಳದ ಹಾಡಿನ ಸಾಲು ಇಂಪಾಗಿರುವಂತೆಯೇ ಅದರೊಳಭಾವದಲ್ಲಿದೆ ಸಮಗ್ರ ಶಿಶುವಿಕಾಸದ ಮಂತ್ರ. ಈ ಭಾವನೆ ಇಂದು ಸೊರಗಿದೆ ಎನ್ನುವುದೇ ಸಂಕಟದ ಸಂಗತಿ. ಮಕ್ಕಳ ಬಹುತೇಕ ವರ್ತನೆಗಳಿಗೆ ಹಿನ್ನೆಲೆಯುಂಟು. ನೋವು, ಸಿಟ್ಟು, ಮೊಂಡುತನ, ಅಸೂಯೆಯ ವರ್ತನೆಗಳೆಲ್ಲಕ್ಕೂ ಮುಂಚಿತವಾಗಿ ಕಾಣಿಸಿಕೊಳ್ಳುವ ವರ್ತನೆ ಎಂದರೇ ಅಳು, ಕಣ್ಣೀರು. ಅಳುವಿನ ಮೂಲಕ ತಮ್ಮ ಅನಿಸಿಕೆ, ಎಚ್ಚರಿಕೆಯನ್ನು ವ್ಯಕ್ತಪಡಿಸದ ಮಕ್ಕಳು ಅಪರೂಪ. ಆಕ್ರೋಶ, ಆವೇಶದ ವರ್ತನೆಗಳು ನಿತ್ಯದ ಅಭ್ಯಾಸವಾಗುವುದಕ್ಕೆ ಮುಂಚಿತವಾಗಿ ಮುನ್ಸೂಚನೆಯಾಗಿ ವ್ಯಕ್ತಗೊಳ್ಳುವಂತಹದ್ದು. ಎಳೆಯ ಮಗುವೊಂದನ್ನು ಮೊಟ್ಟಮೊದಲ ಬಾರಿಗೆ ಗದರಿಸಿದಾಗ ತಕ್ಷಣದಲ್ಲಿಯೇ ಅಳುವುದು ಅಪರೂಪ. ಅಚ್ಚರಿ, ಅಸಹನೆಯ ಮೂಲಕ ಮೊದಲ ವಿರೋಧ ಹೊರಬರುತ್ತದೆ. ಹೀಗೆ ವ್ಯಕ್ತವಾಗುವ ವರ್ತನೆಗಳು ಪೋಷಕರಿಗೆ, ಹಿರಿಯರಿಗೆ, ಅರ್ಥವಾಗುವಂತಹದ್ದಾಗಿದ್ದು ಸ್ವ-ರಕ್ಷಣೆ ಎಂಬ ಜೀವಿಸಹಜ ಗುಣವೇ ಇಲ್ಲಿ ಪ್ರಬಲವಾಗಿರುವುದು.

ಆದರೂ ಇದರ ಬಗ್ಗೆ ಹೆಚ್ಚು ಗಮನ ಕೊಡದೇ ಮೇಲಿಂದ ಮೇಲೆ ತಾವು ಮಾಡುವುದು ಸರಿ ಎನ್ನುವ ಧೋರಣೆ ವಯಸ್ಕರಲ್ಲಿರುವುದಕ್ಕೆ ಕಾರಣಗಳು ಹಲವಾರು. ಅಸಹನೆ, ಹಿಂಸೆ ಮತ್ತು ಹೊಣೆಗೇಡಿತನದ ಮಾನಸಿಕತೆಯೇ ಇದಕ್ಕೆ ಕಾರಣ. ಇಂತಹ ಮಾನಸಿಕ ಸ್ಥಿತಿಯು ಪೋಷಕ, ಶಿಕ್ಷಕ, ಅಥವಾ ಶಾಲೆಯ ಆಡಳಿತ ಮಂಡಲಿಯವರಲ್ಲಿ ಇದ್ದರಂತೂ ಮಕ್ಕಳ ಮನಸ್ಸಿಗೆ ಹಿಂಸೆ ತಪ್ಪಿದ್ದಲ್ಲ. ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಬಿಜಾಪುರದ ಹುಡುಗನ ವರ್ತನೆಯ ಬಗ್ಗೆ ಚರ್ಚೆಯಾಗುತ್ತಿತ್ತು. ಇದರಲ್ಲಿ ಭಾಗವಹಿಸಿದ್ದ ಶಿಕ್ಷಣ ಸಂಸ್ಥೆಯೊಂದರ ಮಾಲೀಕರು ಹುಡುಗನ  ವರ್ತನೆಯು `ಬ್ಲ್ಯಾಕ್ ಮೇಲ್' ತಂತ್ರ ಎನ್ನುವುದರ ಮೂಲಕ ಅಸಹನೆ ವ್ಯಕ್ತಪಡಿಸಿದರು. ಬಾಯಿ ತಪ್ಪಿ ಆಡಿದ ಮಾತಿದು ಎಂದರೂ ಅನೇಕ ಶಾಲಾ ಆಡಳಿತ ಮಂಡಲಿಯವರಲ್ಲಿ ಎದ್ದು ಕಾಣಿಸುವ ಸ್ವಭಾವವಿದು. ಪ್ರಾಥಮಿಕ ಶಿಕ್ಷಣವನ್ನು ಒದಗಿಸುತ್ತಿರುವ ಬಹುಪಾಲು ಸಂಸ್ಥೆಗಳಲ್ಲಿ ಶಿಸ್ತು ಮತ್ತು ಕಲಿಕೆಯ ಹೆಸರಿನಲ್ಲಿ ಮಕ್ಕಳನ್ನು ಹಿಂಸಿಸುವುದು ಸಾಮಾನ್ಯ. ಎಳೆತನದಲ್ಲಿಯೇ ಹೆಚ್ಚು ವಿಷಯಗಳನ್ನು ಕಲಿಸಿಕೊಡುವುದೇ ಸರಿ ಎನ್ನುವುದು ಇಂತಹದೊಂದು ಪ್ರವೃತ್ತಿಯ ಉದಾಹರಣೆ. ಬೆಂಗಳೂರಿನ ಹಲವಾರು `ಅಂತರರಾಷ್ಟ್ರೀಯ ಶಾಲೆ', `ಪಬ್ಲಿಕ್ ಶಾಲೆ', `ಇಂಗ್ಲಿಷ್ ಮೀಡಿಯಂ' ಶಾಲೆಗಳ ಒಳಗೆ ಪ್ರವೇಶಿಸಿದರೆ ಮಕ್ಕಳ ಮನಸ್ಸಿಗೆ ಹಿಡಿಸದ ವಾತಾವರಣ ಎಂತಹದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಬಹಳಷ್ಟು ಪೋಷಕರು ಇದರತ್ತ ಗಮನ ಹರಿಸುವುದಿಲ್ಲ.

ಸಾಮರ್ಥ್ಯವಿರದ ಶಿಕ್ಷಕರಿಂದ ಮಕ್ಕಳ ಮನಸ್ಸು ಹಾಳು: 
ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಕಲಿಯುವುದಿಲ್ಲ ಮತ್ತು ವರ್ತಿಸುವುದಿಲ್ಲ. ತರಗತಿಯಲ್ಲಂತೂ ಇದು ಅತಿ ಸಾಮಾನ್ಯ. ಬೋಧನಾ ಸಾಮರ್ಥ್ಯ ಮತ್ತು ತರಗತಿಯ ನಿರ್ವಹಣಾ ಸಾಮರ್ಥ್ಯವಿರುವ ಶಿಕ್ಷಕರು ಮಾತ್ರ ಇಂತಹ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. ಈ ಸಾಮರ್ಥ್ಯವಿರದ ಶಿಕ್ಷಕರು ಸಮಸ್ಯೆಗಳನ್ನು ಬಿಗಡಾಯಿಸುತ್ತಾರೆ. ನನಗೆ ತಿಳಿದ ಶಾಲೆಯಲ್ಲಿ ಇಂತಹದೊಂದು ಪರಿಸ್ಥಿತಿ ಇದೆ. ಪ್ರಾಥಮಿಕ ಹಂತದಲ್ಲಿ ಪಾಠಹೇಳಿಕೊಡಬೇಕಾಗಿರುವ ಶಿಕ್ಷಕಿಯೊಬ್ಬರಿಗೆ ಅಗತ್ಯ ವಿದ್ಯಾರ್ಹತೆಯೇ ಇಲ್ಲ; ಆಸಕ್ತಿ, ಸಾಮರ್ಥ್ಯವೂ ಇಲ್ಲ. ಆಕೆಯ ತಂದೆ ಆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಇದ್ದಾರೆ ಎನ್ನುವುದೇ ಅರ್ಹತೆ. ಹೀಗಾಗಿ ಅವಳು ಮಾಡಿದ್ದೇ ಪಾಠ. ಮಕ್ಕಳೊಂದಿಗೆ ತರಗತಿಯಲ್ಲಿ ಕೂತು ಶಿಕ್ಷಕಿಯರ ಬೋಧನಾ ರೀತಿಯನ್ನು ಅಳತೆ ಮಾಡುವುದು ಈ ಶಾಲಾ ಆಡಳಿತ ಮಂಡಲಿಯ ಅಧ್ಯಕ್ಷನ ಚಟ. ಇಂತಹ ವರ್ತನೆಗಳಿಗೆ ಕಡಿವಾಣ ಹಾಕುವವರು ಯಾರು?

ನಾವು ಬದುಕಿ ಬಾಳುವ ರೀತಿಯು ಸದಾ ಕಾಲವು ಒಂದೇ ಮಾದರಿಯಲ್ಲಿ ಇರಲು ಸಾಧ್ಯವೇ ಇಲ್ಲ. ನಾಗರಿಕತೆ ಮುಂದುವರೆದಷ್ಟು ಆಚಾರ ವಿಚಾರಗಳಲ್ಲಿಯೂ ಬದಲಾವಣೆಯಾಗುವುದು ಅನಿವಾರ್ಯ. ಮಕ್ಕಳ ಮಾನಸಿಕ ವಿಕಾಸದ ದೃಷ್ಟಿಯಿಂದ ಇದು ನೂರಕ್ಕೆ ನೂರು ಸತ್ಯ. ನಮ್ಮ ಮಕ್ಕಳು ನಮಗಿಂತಲೂ ಚೆನ್ನಾಗಿ ಇರಲಿ ಎನ್ನುವ ಭಾವನೆ ಇರದಿರುವ ಪೋಷಕರು ತುಂಬಾ ಕಡಿಮೆ. ಇಂತಹದೊಂದು ಉದಾತ್ತ ಭಾವನೆ ಇರುವಂತಹ ವಯಸ್ಕರು ಮಕ್ಕಳ ಮಾನಸಿಕ ವಿಕಾಸದ ಮೇಲೆ ಒತ್ತಡ ಹೇರಬಲ್ಲರು. ತಮ್ಮ ಮಕ್ಕಳು ಬೇಗ ಬೆಳೆಯಲಿ, ಎಲ್ಲರಿಗಿಂತಲೂ ಮುಂದಿರಲಿ ಎನ್ನುವ ಭಾವನೆಯೇ ಅದೆಷ್ಟೋ ಮಕ್ಕಳ ಭವಿಷ್ಯದ ಕಾರ್ಮೋಡವಾಗುವುದು. ಏಕೆಂದರೆ, ಮಕ್ಕಳ ವರ್ತನೆಯನ್ನು ನಿರೂಪಿಸುವ ಎರಡು ಪ್ರಬಲ ಪರಿಸರವೆಂದರೆ, ಶಾಲೆ ಮತ್ತು ಮನೆ. ಇವುಗಳಲ್ಲಿ ಇಂದು ಗೊಂದಲವಿದೆ, ಕ್ಷೋಭೆಯೂ ಉಂಟಾಗುತ್ತಿದೆ ಎನ್ನುವುದರ ಸೂಚನೆಗಳು ಮೇಲಿಂದ ಮೇಲೆ ಎಳೆಯರ ಆತ್ಮಹತ್ಯೆ, ಮನೆ ಬಿಟ್ಟು ಓಡಿಹೋಗುವುದು, ಇತರರಿಗೆ ಹಿಂಸೆ ನೀಡುವುದು ಮತ್ತು ಕಲಿಕೆಯಲ್ಲಿ ನಿರಾಸಕ್ತಿಗಳ ಮೂಲಕ ವ್ಯಕ್ತವಾಗುತ್ತಿವೆ. ಇಂತಹದೊಂದು ಪರಿಸ್ಥಿತಿಗೆ ಕಾರಣವೇನು ಎನ್ನುವುದನ್ನು ಗುರುತಿಸುವುದು ಕಷ್ಟವೇನಲ್ಲ.

ಮಕ್ಕಳ ಕೆಲ ಸಮಸ್ಯೆಗಳಿಗೆ ಪೋಷಕರೇ ಕಾರಣ:
ಮಕ್ಕಳಿಗೆ ಅಗತ್ಯವಿರುವಷ್ಟು ಸಮಯ ವಿನಿಯೋಗಿಸುವ ದಿನಗಳು ಪೋಷಕರಲ್ಲಿ ಇಲ್ಲವಾಗಿದೆ. ಹಿಂದೊಮ್ಮೆ ಹೇರಳವಾಗಿ ಸಿಗುತ್ತಿದ್ದ ಸಮಯ ಮತ್ತು ಆವರಣವು ಬಹುಪಾಲು ಮಕ್ಕಳಿಗೆ ಇಂದು ಲಭ್ಯವಿಲ್ಲ. ಇದರ ಪರಿಣಾಮದಿಂದಾಗಿಯೇ ಮಕ್ಕಳ ಮಾನಸಿಕ ಹೊಂದಾಣಿಕೆಯ ವಿಧಾನದಲ್ಲಿಯೂ ಬದಲಾವಣೆಗಳಾಗುತ್ತಿರುವುದು. ಮಕ್ಕಳು ಹುಟ್ಟಿದ ನಂತರದ ಹತ್ತಿಪ್ಪತ್ತು ತಿಂಗಳುಗಳಷ್ಟು ಪೋಷಕರ ಸಾನಿಧ್ಯ ಸಿಕ್ಕಿದರೇ ಹೆಚ್ಚು. ಭಾಷೆ, ಭಾವಗಳನ್ನು ಸಹ ಒತ್ತಡದಿಂದಲೇ ಕಲಿಸುವಂತಹ ಶಿಶು ತರಬೇತಿ ಕೇಂದ್ರಗಳು ತಲೆ ಎತ್ತಿಕೊಂಡಿವೆ. ಸದಾ ಕೆಲಸ, ಒತ್ತಡಗಳಿಗೆ ಸಿಕ್ಕಿಕೊಂಡಿರುವ ಪೋಷಕರು ತಮ್ಮ ಮಕ್ಕಳ ಮೇಲೂ ಅದರ ದುಷ್ಪರಿಣಾಮವನ್ನು ವಿಸ್ತರಿಸುತ್ತಾರೆ. ದಂಪತಿಗಳ ನಡುವೆ ಉಂಟಾಗುವ ಜಗಳ, ಮನಸ್ತಾಪ, ಕೋಪದ ವರ್ತನೆಗಳ ಪರಿಣಾಮ ಮಕ್ಕಳ ಮೇಲೂ ಆಗಬಲ್ಲದು. ಮಕ್ಕಳ ಸಮಸ್ಯೆಗಳನ್ನು ಗುರುತಿಸುವ ವ್ಯವದಾನವನ್ನು ಕಳೆದುಕೊಳ್ಳುತ್ತಿರುವ ವಯಸ್ಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಕ್ಕಳ ವರ್ತನಾ ಸಮಸ್ಯೆಗಳು ಏರುತ್ತಿರಬಹುದೆ?

ಈ ಹಿನ್ನೆಲೆಯಲ್ಲಿ ಕೆಲವು ರಾಷ್ಟ್ರಗಳಲ್ಲಿ ಮಕ್ಕಳ ವರ್ತನೆಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಾರೆ. ಇದೇ ಕಾರಣದಿಂದಲೇ ಭಾರತೀಯ ದಂಪತಿಗಳನ್ನು ನಾರ್ವೆ ಸರ್ಕಾರ ಸೆರೆಮನೆಗೆ ಕಳುಹಿಸಿರುವುದು. ಮಕ್ಕಳ ವರ್ತನೆಗಳನ್ನು ಸರಿಪಡಿಸುವ ಕ್ರಮದಲ್ಲಿ ವಯಸ್ಕರ ದರ್ಪ, ಅಧಿಕಾರಕ್ಕೆ ಬೆಲೆ ಕಡಿಮೆ. ಬದಲಿಗೆ ಮಗುವಿನ ವರ್ತನೆಯನ್ನು ಬದಲಾಯಿಸುವ ಪ್ರಯತ್ನವು  ಪೋಷಕರ ಒರಟುತನ, ಆಕ್ರೋಶದ ಮೂಲಕ ಮಾಡಲಾಗದು ಎನ್ನುವುದೇ ಸ್ಪಷ್ಟ ಸಂದೇಶ.

ಮಕ್ಕಳು ಒಂದಲ್ಲಾ ಒಂದು ರೀತಿಯ ತುಂಟತನ, ಮೊಂಡುತನ,  ವ್ಯಕ್ತಪಡಿಸುವುದು ಸ್ವಾಭಾವಿಕ. ಆದರೆ, ಇಂತಹ ವರ್ತನೆಗಳನ್ನು ಎದುರಿಸುವ ಹಿರಿಯರು ಹೇಗೆ ಸಹಿಸಿಕೊಳ್ಳುತ್ತಾರೆ ಎನ್ನುವುದೇ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಂತಹದ್ದು. ಅಯ್ಯೋ! ಹುಡುಗಾಟದ ವಯಸ್ಸು ಎಲ್ಲವೂ ಕ್ರಮೇಣ ಸರಿ ಹೋಗುವುದು ಎನ್ನುವಂತಹ ಹಿರಿಯರ ಸಂಖ್ಯೆ ಇಂದು ಇಳಿಯುತ್ತಿದೆ. ಈ ಹಿರಿಯರ ಸಮೂಹದಲ್ಲಿ, ಶಿಕ್ಷಕರು, ಪೋಷಕರು ಮತ್ತು ಪಾಲಕರು ಸೇರಿರುತ್ತಾರೆ. ಮಕ್ಕಳ ಸಾಮರ್ಥ್ಯಗಳೆಲ್ಲವನ್ನು ಅತಿ ಶೀಘ್ರವಾಗಿ ಕಂಡುಕೊಳ್ಳಬೇಕೆಂಬ ಹಂಬಲ ಇರುವವರೇ ಮಕ್ಕಳ ಮನಸ್ಸಿನಲ್ಲಿ ಹೆಚ್ಚು ಒತ್ತಡ ತರುವಂತಹವರು ಎಂದೆನಿಸುತ್ತದೆ. ಎರಡನೇ ವಯಸ್ಸಿನಿಂದಲೇ ಶಾಲೆಯ ಶಿಸ್ತಿಗೆ ಮಕ್ಕಳನ್ನು ಒಡ್ಡುವ ಪೋಷಕರ ಸಂಖ್ಯೆ ಹೆಚ್ಚುತ್ತಿದೆ.
ಮಕ್ಕಳ ನಡೆನುಡಿಗಳ ಬಗ್ಗೆ ಪೋಷಕರ ಆಸಕ್ತಿ ಕಡಿಮೆಯಾಗುತ್ತಿದೆಯೆ?

ಮಕ್ಕಳ ಶಿಕ್ಷಣ, ವ್ಯಕ್ತಿತ್ವದ ವಿಕಾಸದ ರೀತಿ ಸರಿಯಾಗಿ ನೆರವೇರುತ್ತಿಲ್ಲ ಎನ್ನುವುದು ನಿಗೂಢ ಸಂಗತಿಯೇನಲ್ಲ. ಹಿಂಸೆಗೆ ಒಳಗಾಗುತ್ತಿರುವ ಮಕ್ಕಳು, ಹಿಂಸೆಯತ್ತ ವಾಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದರ ನಿದರ್ಶನಗಳು ಮೇಲಿಂದ ಮೇಲೆ ಸಾರ್ವಜನಿಕರ ಗಮನಕ್ಕೆ ಬರುತ್ತಿದೆ. ಮಕ್ಕಳ ನಡೆನುಡಿಗಳು ಹತಾಶೆ, ಒತ್ತಡಗಳ ಸಂಕೇತವಾಗುತ್ತಿವೆ ಎನ್ನುವುದೇ ಇದರ ಅರ್ಥ. ಬುದ್ಧಿ ಹೇಳಿದ ಶಿಕ್ಷಕರನ್ನೇ ಸಾಯಿಸುವ ವರ್ತನೆ ಒಂದು ಕಡೆ ಕಂಡುಬಂದರೆ, ತಿಳಿವಳಿಕೆ ಹೇಳಿದರೆ ಜೀವವನ್ನೇ ತೆಗೆದುಕೊಳ್ಳುವ ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರಿ, ತಪ್ಪುಗಳನ್ನು ಗುರುತಿಸುವ ಮಾನಸಿಕ ಸಾಮರ್ಥ್ಯ ಮೂಡದಿರುವ ಮಕ್ಕಳಯ್ಲೂ ಸಹ ಜೀವ ತೆಗೆದುಕೊಳ್ಳುವ ಮನಸ್ಸು ಬರಬಲ್ಲದು ಎನ್ನುವುದು ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವಷ್ಟು ವ್ಯವದಾನವು ಹಿರಿಯರಲ್ಲಿ ಇಂಗಿಹೋಗಿದೆಯೇ ಎಂದು ಕೇಳಬೇಕೆನಿಸುತ್ತದೆ. ಇತ್ತೀಚೆಗೆ ಸಾವನ್ನಪ್ಪಿದ ಬಿಜಾಪುರದ ಕಿರಿಯನ ಸಾವು ಆಕಸ್ಮಿಕ ಅಥವಾ ದುರದೃಷ್ಟಕರ ಸಂಗತಿ ಎನ್ನುವಂತಹದ್ದಲ್ಲ. ಶಾಲೆಯ ಆವರಣ, ಮನೆಯ ವಾತಾವರಣ, ಸಾಮಾಜಿಕ ಸನ್ನಿವೇಶಗಳೆಲ್ಲವು ಮಕ್ಕಳ ಮನಸ್ಸಿಗೆ ಹೊರೆಯಾಗುತ್ತಿದೆ ಎನ್ನುವುದರ ಸೂಚನೆ ಇದು ಇರಬಹುದಲ್ಲವೆ?

(ಲೇಖಕರು ಮನೋವಿಜ್ಞಾನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT