ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ತಡೆಗೆ ಕೋರ್ ಕಮಿಟಿ

Last Updated 19 ಫೆಬ್ರುವರಿ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಅಧ್ಯಕ್ಷತೆಯಲ್ಲಿ ‘ಕೋರ್ ಕಮಿಟಿ’ ರಚಿಸಿದ್ದು, ಇದು ಆರು ತಿಂಗಳಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವರದಿ ನೀಡಲಿದೆ.

ಈ ಕುರಿತು ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನ್ಯಾ.ಪಾಟೀಲ್ ವಿವರಿಸಿದರು. ಸಾಮೂಹಿಕ ವಿವಾಹದ ಹೆಸರಿನಲ್ಲಿ ಗಣ್ಯರ ಸಮ್ಮುಖದಲ್ಲಿಯೇ ಬಾಲಕಿಯರ ಮದುವೆ ಕೂಡ ನಡೆಯುತ್ತಿರುವ ಬಗ್ಗೆ 2006ರಲ್ಲಿ ಮುತ್ತಮ್ಮ ದೇವಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯ ಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾ ಗೀಯ ಪೀಠ ಹೊರಡಿಸಿರುವ ಆದೇಶದ ಅನ್ವಯ ಸರ್ಕಾರ ಈ ಸಮಿತಿ ರಚಿಸಿದೆ.ಕಂದಾಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯ ದರ್ಶಿಗಳು ಸಮಿತಿಯ ಇತರ ಸದಸ್ಯರಾಗಿದ್ದಾರೆ ಎಂದರು.

ಅಂಕಿ-ಅಂಶ: ಈ ಸಂದರ್ಭದಲ್ಲಿ  ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳ ಕುರಿತಾಗಿ ಅವರು ಅಂಕಿ ಅಂಶ ನೀಡಿದರು. ರಾಜ್ಯದಾದ್ಯಂತ ಶೇ 58ರಷ್ಟು ಬಾಲಕ-ಬಾಲಕಿಯರು ಇಂತಹ ವಿವಾಹಕ್ಕೆ ಒಳಗಾಗುತ್ತಿದ್ದಾರೆ. ಈ ಪೈಕಿ ಶೇ 45-68ರಷ್ಟು ಉತ್ತರ ಕರ್ನಾಟಕ ಭಾಗದ 9 ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂದರು.

ಈ ಪದ್ಧತಿಗೆ ಕಾರಣ ಏನು? ಅವುಗಳನ್ನು ತಡೆಯಲು ಏನು ಯೋಜನೆ ರೂಪಿಸಬೇಕು, ಯೋಜನೆ ಜಾರಿಗೊಳಿಸುವುದು ಹೇಗೆ ಎಂಬಿ ತ್ಯಾದಿಯಾಗಿ ವರದಿಯಲ್ಲಿ ವಿಶದಪಡಿಸಲಾಗು ವುದು. ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಾಗುವುದು. ಇದು ಕೇವಲ ನಾಮಕಾವಸ್ತೆ ವರದಿಯಾಗಿರದೆ, ಇಂಥ ಒಂದು ಪದ್ಧತಿಗೆ ಮಂಗಳ ಹಾಡುವ ನಿಟ್ಟಿನಲ್ಲಿ ವರದಿ ರೂಪಿಸಲಾಗುವುದು. ಯಾವುದೇ ಕಾರಣಕ್ಕೂ ಕೋರ್ಟ್ ನೀಡಿರುವ ಆರು ತಿಂಗಳ ಗಡುವಿನ ವಿಸ್ತರಣೆಗೆ ಕೋರುವುದಿಲ್ಲ. ನಿಗದಿತ ಅವಧಿ ಯಲ್ಲಿಯೇ ಕೆಲಸ ಪೂರೈಸಲಾಗುವುದು ಎಂದು ಪಾಟೀಲ್ ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಸಾಮೂಹಿಕ ವಿವಾಹಗಳ ಸಂದರ್ಭದಲ್ಲಿ ಬಾಲ್ಯ ವಿವಾಹ ನಡೆಯುವುದು ಹೆಚ್ಚಾಗಿದೆ.ಇಂತಹ ಸಂದರ್ಭಗಳಲ್ಲಿ ಮಕ್ಕಳ ವಯಸ್ಸಿನ ಬಗ್ಗೆ ಸುಳ್ಳು ಪ್ರಮಾಣ ಪತ್ರ ನೀಡುವ ವೈದ್ಯರು ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗುವುದು.

ಅದರಂತೆ, ಸಾಮೂಹಿಕ ವಿವಾಹ ಕಾರ್ಯ ಕ್ರಮ ಆಯೋಜನೆ ಮಾಡಿದಂತಹ ಸಂದರ್ಭ ಗಳಲ್ಲಿ ಒಂದು ವಾರ ಮುಂಚೆಯೇ ವಧು- ವರರ ಪಟ್ಟಿಯನ್ನು ಕಾರ್ಯಕ್ರಮ ಆಯೋಜಕರು ಆಯಾ ಕ್ಷೇತ್ರಾಧಿಕಾರಿಗಳಿಗೆ ನೀಡಬೇಕು. ಅವರು ವಧು-ವರರ ವಯಸ್ಸನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ವರದಿಯಲ್ಲಿ ಸೂಚಿಸ ಲಾಗುವುದು ಎಂದರು.

ಸಲಹೆಗಳಿಗೆ ಆಹ್ವಾನ: ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಲಹೆ ಸೂಚನೆ ನೀಡಬಹುದು ಎಂದು ನ್ಯಾ.ಪಾಟೀಲ್ ತಿಳಿಸಿ ದರು. ಸಂಪರ್ಕಿಸಬಹುದಾದ ದೂ: 080 223 52152/ 2203 4004. ನಿವೃತ್ತ ಐಎಎಸ್ ಅಧಿಕಾರಿ ಲೂಕೋಸ್ ವಲ್ಲತ್ತರೈ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಿ.ಎನ್.ಸೀತಾರಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT