ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವೇ ಚಂದ ರಜೆಯೆಂಬ ಆನಂದ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಶಿಕ್ಷಕರು 8- 10 ತಿಂಗಳು ತರಗತಿಯಲ್ಲಿ ನೀಡುವ ಹೋಮ್‌ವರ್ಕ್ ಒತ್ತಡ, ಪುಸ್ತಕಗಳ ಹೊರೆ ಹಾಗೂ ಬಾಯಿ ಪಾಠ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ನಾನಾ ವಿಷಯಗಳನ್ನು ಕಷ್ಟಪಟ್ಟು ಕಲಿಯುವ ಮಕ್ಕಳಿಗೆ ಒಂದಿಷ್ಟು ವಿಶ್ರಾಂತಿ ಸಿಗುವುದು ಪರೀಕ್ಷೆ ನಂತರ, ಬೇಸಿಗೆ ರಜಾದಿನಗಳಲ್ಲಿ ಅಜ್ಜಿ- ತಾತಂದಿರ ಊರುಗಳಿಗೆ ಹೋದಾಗ ಮಾತ್ರ.
 
ಹಳ್ಳಿಯೆಂದರೆ ಅವರಿಗೆ ಖುಷಿಯೋ ಖುಷಿ! ಆದಷ್ಟು ಬೇಗ ಅಜ್ಜಿ ಊರು ಸೇರಬೇಕೆನ್ನುವ ಹಂಬಲ. ಅಜ್ಜ ಅಜ್ಜಿಗೂ ಮೊಮ್ಮಕ್ಕಳ ಜೊತೆ ಆಟವಾಡುವ ಯೋಗಾ ಯೋಗ. ಬೆಣ್ಣೆ, ತುಪ್ಪ, ಸಿಹಿ ತಿಂಡಿ ತಿನಿಸುಗಳು ರೆಡಿ.

ತಾತ ಹೊಲ ಗದ್ದೆಗಳಿಗೆ ಮೊಮ್ಮಕ್ಕಳನ್ನು ಕರೆದೊಯ್ದು ಕೆಸರು ಗದ್ದೆ ಹಾಗೂ ನೀರು ಕಾಲುವೆಗಳಲ್ಲಿ ನೀರಾಟ ಆಡಿಸುತ್ತಾರೆ. ಬಾವಿಯಲ್ಲಿ ಈಜು ಕಲಿಸುವುದು, ಗಿಡ ಮರ ಬಳ್ಳಿ, ಪಶು ಪಕ್ಷಿಗಳ ಪರಿಚಯ, ಪಕ್ಷಿಗಳ ಗೂಡು ತಂದುಕೊಡುವುದು, ಗುಬ್ಬಿ, ಗೀಜಗ, ಕೌಜ, ಬೆಳವ, ಗೋರವಂಕ ಮುಂತಾದ ಮೊಟ್ಟೆಗಳ ವಿವರಣೆ ನೀಡುತ್ತಾರೆ. ಮೊಮ್ಮಕ್ಕಳಿಗೆ ಪುಟ್ಟ ಪುಟ್ಟ ಹುಲ್ಲು ಮತ್ತು ಕಟ್ಟಿಗೆ ಹೊರೆ ಹೊರಿಸಿ ಅದು ಕೆಳಗೆ ಬಿದ್ದಾಗ ಬಾಯ್ತುಂಬಿ ನಗುತ್ತಾರೆ. ಎಮ್ಮೆ ಮೇಲೆ ಕುಳ್ಳಿರಿಸಿ ಸವಾರಿ ಮಾಡಿಸುವುದು ತಾತನ ಕೆಲಸ.

ಅಜ್ಜಿಯ ಪಾಲಂತೂ ಅದ್ಭುತ. ರಾತ್ರಿ ಹೊತ್ತು ಊಟ ಮುಗಿಸಿ ಅಂಗಳದಲ್ಲಿ ಮೊಮ್ಮಕ್ಕಳನ್ನು ಕೂರಿಸಿಕೊಂಡು ರಾಜ- ರಾಣಿಯರ ಕತೆ, ರಾಕ್ಷಸರ ಕತೆ, ಒಗಟು ಬಿಡಿಸುವುದು. ಮಾತಿಗೊಂದು ಗಾದೆ, ಜನಪದ ಹಾಡು ಹಾಡುವುದಲ್ಲದೆ ಮೊಮ್ಮಕ್ಕಳಿಗೆ ಹಾಡುವುದನ್ನು ಕಲಿಸುತ್ತಾರೆ.
 
ಚೌಕಾಬಾರ, ಅಚಗುಳಿ ಮಣೆಯಾಟ, ಬಸವನಕಟ್ಟೆ, ಆನೆ ಪಳ್ಳಮ್ಮ, ಕಡ್ಡಿಯಾಟ, ರಂಗೋಲಿ ಬಿಡಿಸುವುದು, ಕಸೂತಿ ಕೆಲಸ ಇತ್ಯಾದಿ ಹೇಳಿಕೊಡುತ್ತಾರೆ.
ಅತ್ತೆ, ಮಾವ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಅಣ್ಣ, ತಮ್ಮ, ಅಕ್ಕ ತಂಗಿ, ಮನೆ ಮಂದಿಯ ಜೊತೆ ಒಡನಾಟ; ಹೀಗೆ ಬಂಧುತ್ವ ಬೆಸೆದು ಕೊಳ್ಳಲು ಅಜ್ಜಿಮನೆ ಅವಕಾಶ ಕೊಡುತ್ತದೆ.

ಸ್ವಯಂ ಕಲಿಕೆ
ಮಕ್ಕಳು ತಮ್ಮಷ್ಟಕ್ಕೆ ತಾವೇ ಸಲಿಸಾಗಿ ತಮಗೆ ತೋಚಿದ್ದನ್ನು ಕಲಿಯುತ್ತ ಬುದ್ಧಿ ಚುರುಕುಗೊಳಿಸುತ್ತ ಲವಲವಿಕೆಯಿಂದ ತಮ್ಮ ಕೆಲಸದಲ್ಲಿ ತಲ್ಲೀನವಾಗುವುದು ರಜೆ ಕಾಲದಲ್ಲೇ. ನಿಂತ ನೀರಿಗೆ ಕಲ್ಲು ಎಸೆದು ರಾಡಿ ಎಬ್ಬಿಸುವುದಂತೂ ಮಕ್ಕಳಿಗೆ ಬಲು ಪ್ರೀತಿಯ ಆಟ.

ಮರಲೆಕಾಯಿ ಹಾಗೂ ತಂಗಟೆ ಕವಲು ಕಡ್ಡಿಗಳನ್ನು ಸವರಿ ಹೊಟ್ಟೆ (ದೊಡ್ಡ) ಮುಳ್ಳಿನ ಕೋಡಣಸು ಇಟ್ಟು ಅದರ ತುದಿಗೆ ಚಳ್ಳೆ ಹಣ್ಣುಸಿಕ್ಕಿಸಿ ಓಟದ ಹೋರಿಯಾಟ, ತೆಂಗಿನ ಮಟ್ಟೆಗೆ ಗೂಟಬಡಿದು ಎಳೆದಾಡುವ ಎಳೆದಾಟ, ಉಗುಣೆಬಳ್ಳಿ, ಬಟ್ಟೆ ಬಳ್ಳು ಹಾಗೂ ಗೋಣಿದಾರ ಕಟ್ಟಿ ಆಡುವ ಬಸ್ಸಿನ ಆಟ, ಪೊರಕೆಕಡ್ಡಿ, ಸೆಪ್ಪೆದಂಟುಗಳಿಂದ ಗೂಡು ತಯಾರಿಸುವುದು, ಜೇಡಿಮಣ್ಣಿನಿಂದ ಎತ್ತಿನಬಂಡಿ, ಗಣಪ, ಆನೆ, ನೀರಿನ ಬುಗ್ಗೆ ತಯಾರಿಕೆ, ಚಿತ್ರ ಬಿಡಿಸುವುದು ಇತ್ಯಾದಿ ಅವರ ಕ್ರಿಯಾಶೀಲತೆಗೆ ಸಾಣೆ ಹಿಡಿಯುವ ಚಟುವಟಿಕೆಗಳು.

ಚಿನ್ನಿದಾಂಡು, ಉಪ್ಪಾರಪಟ್ಟೆ, ಕಣ್ಣಮುಚ್ಚಾಲೆ, ಕುಂಟಿಮುಟ್ಟುವ ಆಟ, ಕುಂಟಬಿಲ್ಲೆ, ಮರಕೋತಿ, ಗುದ್ಗಂಟಲ ಆಟ, ಅಪ್ಪಾಳೆ ತಿಪ್ಪಾಳೆ, ಗೋಲಿ, ಹುಲ್ಲಿನ ಗರಿ ಮತ್ತು ಬಳ್ಳಿಯಲ್ಲಿನ ಹೂ ಎಣಿಕೆ, ಗಜ್ಜುಗ, ಚಿಟ್ಟೆ, ಕೋಲಾಟ (ಕೀಟ) ಹಿಡಿಯುವುದು, ಕೋಳಿ, ಗುಬ್ಬಿ ಮರಿಗಳನ್ನು ಓಡಿಸಿಕೊಂಡು ಹೋಗುವುದು, ಮುಖಕ್ಕೆ ಸುಣ್ಣ ಬಳಿದುಕೊಂಡು ಬಿಲ್ಲು ಬಾಣ, ಗದೆ ತಯಾರಿಸಿಕೊಂಡು ಬಯಲಾಟ, ಪೌರಾಣಿಕ ವೇಷ ಧರಿಸಿಕೊಂಡು ನಾಟಕವಾಡುವುದು, ಗೆಳೆಯರೊಂದಿಗೆ ಆಡುವ ಆಟಗಳು ಮಕ್ಕಳ ಉಲ್ಲಾಸ ಹೆಚ್ಚಿಸುತ್ತವೆ.

ಮಕ್ಕಳು ಚಿಗುರಿನಂತೆ. ದಿನಂಪ್ರತಿ ದೊಡ್ಡವರಾದಂತೆ ಕಳೆದು ಹೋಗುವ ಬಾಲ್ಯ ಬರೀ ನೆನಪಾಗೇ ಉಳಿಯುತ್ತದೆ. ಬಾಲ್ಯದ ಆಟವಂತೂ ಜೀವಂತ. ಆದರೆ ಸ್ವಾಭಾವಿಕ ಕಲಿಕೆ ಜೀವನ ಪರ್ಯಂತ ಮರೆಯಲಾಗದ ಅನುಭವ ನೀಡುತ್ತದೆ.

ಬಾಲ್ಯದಲ್ಲಿ ಆರಾಮವಾಗಿ ಹೊಲ ಗದ್ದೆಗಳಲ್ಲಿ ತಿರುಗಾಡುತ್ತ ಹಸಿರು ಸೊಪ್ಪು, ಹಸಿ ತರಕಾರಿಗಳನ್ನು ತಿಂದು ಆರೋಗ್ಯವಾಗಿ ವಿಹರಿಸುತ್ತ ಪಕ್ಷಿಗಳ ಕೂಗನ್ನು ಅನುಕರಿಸುತ್ತ ಮಾಡುವ ಚೇಷ್ಟೆ ಅವರ ಸರ್ವಾಂಗೀಣ ವಿಕಾಸಕ್ಕೂ ಒಳ್ಳೆಯದು.

ಆದರೆ ವರ್ಷವಿಡಿ ಮಕ್ಕಳು ಹೀಗೇಕೆ ನಮ್ಮ ಜೊತೆ ಉಲ್ಲಾಸದಿಂದ ಇರುವುದಿಲ್ಲ ಗೊತ್ತೇ. ಗದರಿಸಿ, ಹೊಡೆದು ಬಡಿದು ಭಯದ ವಾತಾರಣದಲ್ಲಿ ಕಲಿಸುವ ಮತ್ತು ಅಂಕವನ್ನು ಅಚ್ಚೊತ್ತುವ ನಮಗೆ ಇದೆಲ್ಲಾ ಹೇಗೆ ತಿಳಿದೀತು?

ಮೊನ್ನೆ ತಾನೆ ಮೂರನೇ ತರಗತಿ ಪಾಸಾದ ಮಗನನ್ನು ಕರೆದುಕೊಂಡು ಪಕ್ಕದ ಆಂಧ್ರದ ಅಜ್ಜಿ ಮನೆಯಲ್ಲಿ ಬಿಟ್ಟು ಅಂದೇ ವಾಪಸ್ ಆದೆ. ಮತ್ತೆ ಒಂದು ವಾರದ ನಂತರ ಕರೆತರಲು ಹೋದಾಗ ಮಗನಲ್ಲಿ ಸಾಕಷ್ಟು ಸಹಜ ಬದಲಾವಣೆ ಆಗಿರುವುದು ನನ್ನಲ್ಲಿ ಅಚ್ಚರಿ ಉಂಟು ಮಾಡಿತು.
 
ಆತ  ಗೆಳೆಯರ ಜೊತೆಗೂಡಿ ತೆಲುಗು ಅಕ್ಷರಗಳನ್ನು ಸಲಿಸಾಗಿ ಕಲಿತಿದ್ದ, ತೆಲುಗು ಪದ್ಯಗಳನ್ನು ಆನಂದದಿಂದ ಹಾಡುತ್ತಿದ್ದ, ಅಕ್ಷರ ಅಕ್ಷರ ಜೋಡಿಸಿ ವೃತ್ತ ಪತ್ರಿಕೆ ಓದುತ್ತಿದ್ದ, ಸ್ನೇಹಿತರಿಗೂ     ಒಂದಿಷ್ಟು ಕನ್ನಡ ಕಲಿಸಿದ್ದ. ಇಷ್ಟನ್ನೇ ಶಾಲೆಯಲ್ಲಿ ಕಲಿತು ಮಾಡು ಎಂದರೆ ಸುತಾರಾಂ ಸಾಧ್ಯ ಆಗುತ್ತಿರಲಿಲ್ಲ.

ಮಾಂಟೆಸ್ಸರಿ ಶಿಕ್ಷಣದ ಅಸ್ತಿಭಾರ ಹಾಕಿದ ಮೇಡಂ ಮಾಂಟೆಸರಿ ಹೇಳುವಂತೆ `ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡಿ ಕಲಿಸಬಾರದು. ತಂದೆ ತಾಯಿಗಳು ಮಕ್ಕಳಿಗೆ ಮಾರ್ಗದರ್ಶಕರಾಬೇಕೇ ಹೊರತು ಆಜ್ಞೆ ಮಾಡುವವರು ಆಗಬಾರದು~.

ಪೋಷಕರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕದೆ, ಟಿವಿ ಹಾಗೂ ಮೊಬೈಲ್ ಪೋನಿನ ಆಟಕ್ಕಷ್ಟೇ ಸೀಮಿತವಾಗಲು ಬಿಡದೆ, ನಗರದಲ್ಲಿ ನಡೆಸುವ ಬೇಸಿಗೆ ಶಿಬಿರಗಳಿಗೆ ಅಂಟಿಕೊಳ್ಳದೆ ಅದರ ಆಚೆಗೂ ಕಲಿಯಲು ಸಾಕಷ್ಟು ಅವಕಾಶ ಇರುವ ಹಳ್ಳಿಗಳಿಗೆ ರಜೆಯಲ್ಲಿ ಕಳಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT