ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಲಿಗಳ ತವರೂರು ಹಿರೇಬಲ್ಲ

Last Updated 4 ಜನವರಿ 2011, 9:00 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಗ್ರಾಮದ ದೇವತೆ, ಶಾಲೆ, ದನಕರುಗಳು, ಚಾವಡಿ, ಅರಳಿಕಟ್ಟೆ ಮುಂತಾದವು ಗ್ರಾಮದ ಭಾಗವಾಗಿರುವಂತೆ ಅಸಂಖ್ಯಾತ ಬಾವಲಿಗಳು ತಾಲ್ಲೂಕಿನ ಹಿರೇಬಲ್ಲ ಗ್ರಾಮದ ಒಂದು ಭಾಗವಾಗಿದ್ದು ಸಂರಕ್ಷಣೆಗೆ ಒಳಪಟ್ಟಿವೆ.  ತೆಲುಗಿನಲ್ಲಿ ಸೀಕರೇವುಲು, ತೋಲುಜಿಬ್ಬಾಳ್ಳು ಎಂದೆಲ್ಲಾ ಕರೆಯುವ ಬಾವಲಿಗಳು ಈ ಗ್ರಾಮದ ಅತಿ ದೊಡ್ಡ ಮರಗಳಾದ ಆಲ, ಅರಳಿ ಹಾಗೂ ಹಿಪ್ಪೆ ಮರಗಳಲ್ಲಿ ವಾಸಿಸುತ್ತಿವೆ. ಗ್ರಾಮದ ಬಿ.ವಿ.ನಾರಾಯಣಸ್ವಾಮಿ ಅವರಿಗೆ ಸೇರಿದ ಜಮೀನಿನಲ್ಲಿರುವ ಬೃಹದಾಕಾರದ ವೃಕ್ಷಗಳಲ್ಲಿ ನೂರಾರು ಬಾವಲಿಗಳು ಹಲವಾರು ವರ್ಷಗಳಿಂದ ಜೀವಿಸುತ್ತಿವೆ.

 ಹಕ್ಕಿಗಳಂತೆ ಸ್ವತಂತ್ರವಾಗಿ ಹಾರಬಲ್ಲ ಏಕಮಾತ್ರ ಸಸ್ತನಿಯಾದ ಬಾವಲಿಯು ಸಂಘಜೀವಿ. ಅವುಗಳ ವಾಸಸ್ಥಾನವನ್ನು ತೊಂದರೆಗೊಳಪಡಿಸದಿದ್ದರೆ ನೂರಾರು ವರ್ಷಗಳು ಒಂದೇ ನೆಲೆಯಲ್ಲಿ ಜೀವಿಸುತ್ತವೆ. ರಾತ್ರಿಯೆಲ್ಲಾ ಆಹಾರದ ಬೇಟೆಯನ್ನಾಡಿ ಬೆಳಗಿನ ಜಾವ ರೆಂಬೆಗಳಿಗೆ ನೇತು ಬಿದ್ದು ನಿದ್ರಿಸುವ ನಿಶಾಚರ ಜೀವಿಗಳಿವು. 

 ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ರೋಗಗಳಿಗೆ ಬಾವಲಿಗಳ ಮಾಂಸ ಮದ್ದೆಂಬ ನಂಬಿಕೆಯಿಂದ ಬೇಟೆಯಾಡುತ್ತಾರೆ. ಇದಕ್ಕೆ ಅಪವಾದವೆಂಬಂತೆ ಇಲ್ಲಿ ಯಾರೂ ಬೇಟೆಯಾಡುವುದಿಲ್ಲ ಮತ್ತು ಹೊರಗಿನಿಂದಲೂ ಯಾರನ್ನು ಬೇಟೆಯಾಡಲು ಬಿಡುವುದಿಲ್ಲ. ಹೀಗಾಗಿ ಮರಕ್ಕೆ ನೇತು ಹಾಕಿಕೊಂಡು ಗ್ರಾಮಸ್ಥರ ಮನದೊಳಗೂ ಕೊಂಡಿ ಬೆಸೆದಿವೆ.

‘ನಾನು ಸಣ್ಣವನಿದ್ದಾಗ ಯಾರಾದರೂ ಬಾವಲಿಯ ಬೇಟೆಗೆಂದು ಬಂದರೆ ನಮ್ಮ ತಾತ ಅಟ್ಟಿಸಿಕೊಂಡು ಹೋಗುತ್ತಿದ್ದುದು ನೆನಪಿದೆ. ಬಾವಲಿಗಳಿಂದ ನಮಗ್ಯಾರಿಗೂ ತೊಂದರೆಯಿಲ್ಲ.ಅದಕ್ಕೆ ನಾವ್ಯಾಕೆ ತೊಂದರೆ ಮಾಡಬೇಕು. ನಮಗೆ ಇಲ್ಲಿ ಜೀವಿಸಲು ಹಕ್ಕಿರುವಂತೆ ಬಾವಲಿಗಳಿಗೂ ಇದೆ. ನಮ್ಮ ಗ್ರಾಮದ ವಿಶೇಷತೆ’ ಎಂದು ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT