ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಸ್ಟನ್‌ನಲ್ಲಿ ಸ್ಫೋಟ

ಮ್ಯಾರಥಾನ್ ಮುಗಿಯುವ ಸ್ಥಳದಲ್ಲಿ ದುಷ್ಕೃತ್ಯ * ಕಸದ ಡಬ್ಬಿಯಲ್ಲಿದ್ದ ಬಾಂಬ್
Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬಾಸ್ಟನ್ (ಪಿಟಿಐ): ಅಮೆರಿಕದ ಬಾಸ್ಟನ್ ನಗರದಲ್ಲಿ ಸೋಮವಾರ `ಬಾಸ್ಟನ್ ಮ್ಯಾರಥಾನ್' ಮುಕ್ತಾಯದ ಸಂದರ್ಭದಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದ ಜನರ ಸಂತಸಕ್ಕೆ ಭಂಗ ತರುವಂತೆ ಅವಳಿ ಸ್ಫೋಟಗಳು ಸಂಭವಿಸಿದ್ದು, ಎಂಟು ವರ್ಷದ ಬಾಲಕ ಸೇರಿ ಮೂರು ಜನ ಸತ್ತಿದ್ದಾರೆ. 140ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 17 ಜನರ ಸ್ಥಿತಿ ಚಿಂತಾಜನಕವಾಗಿದೆ.

42 ಕಿ.ಮೀ. ಉದ್ದದ ಮ್ಯಾರಥಾನ್ ಹಾದಿಯ ಇಕ್ಕೆಲಗಳಲ್ಲಿ ಸ್ಪರ್ಧಾಳುಗಳನ್ನು ಹುರಿದುಂಬಿಸಲು ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದರು. ಮ್ಯಾರಥಾನ್ ಮುಕ್ತಾಯದ ಸ್ಥಳದಲ್ಲಿ ಒಂದರ ಹಿಂದೆ ಒಂದರಂತೆ ಎರಡು ಸ್ಫೋಟಗಳು ಸಂಭವಿಸಿದವು. ಕಸದ ಡಬ್ಬಿಯಲ್ಲಿ ಇಡಲಾಗಿದ್ದ ಬಾಂಬ್ 27,000 ಮ್ಯಾರಥಾನ್ ಓಟಗಾರರು ಗುರಿ ತಲುಪುವ ಹೊತ್ತಿಗೆ ಸರಿಯಾಗಿ ಸ್ಫೋಟಿಸಿತು.

ಸ್ಫೋಟದ ಶಬ್ದದಿಂದ ಗಲಿಬಿಲಿಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದರಿಂದ ಭಾರಿ ಗೊಂದಲಮಯ ಸನ್ನಿವೇಶ ಉದ್ಭವಿಸಿತು. ಕೆಲವರ ಕಾಲು ತುಂಡಾಗಿತ್ತು. ಮತ್ತೆ ಕೆಲವರು ಅಳುತ್ತಿದ್ದರು. ಗಾಯಾಳುಗಳ ರಕ್ತ, ಕಸ, ಕಡ್ಡಿಗಳು ಹಾದಿಯ ಇಕ್ಕೆಲಗಳಲ್ಲಿ ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. `ಮೊದಲ ಸ್ಫೋಟ ನಡೆದ ಸ್ಥಳದಿಂದ ನಾನು 20-25 ಅಡಿ ದೂರದಲ್ಲಿದ್ದೆ. ನನ್ನ ಪಕ್ಕದಲ್ಲಿದ್ದ ಆರೇಳು ಜನ ಸ್ಫೋಟದ ತೀವ್ರತೆಗೆ ತತ್ತರಿಸಿ ಹೋದರು. ಒಬ್ಬಾಕೆ ಸತ್ತುಹೋದಳು. ಮತ್ತೊಬ್ಬನ ಎರಡು ಕಾಲು ತುಂಡಾಗಿವೆ' ಎಂದು ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ತನ್ನ ಪತ್ನಿಗಾಗಿ ಕಾಯುತ್ತಿದ್ದ ವೈದ್ಯ ಅಲನ್ ಪಾಂಟರ್ ತಿಳಿಸಿದ್ದಾರೆ.

ಈ ಸ್ಫೋಟಗಳಿಗೆ ಕಾರಣರಾದವರ ಕುರಿತು ಮಾಹಿತಿ ದೊರಕಿಲ್ಲವಾದರೂ ಅಮೆರಿಕ ಸರ್ಕಾರ ಇದನ್ನು ಭಯೋತ್ಪಾದನಾ ಕೃತ್ಯ ಎಂದೇ ಪರಿಗಣಿಸಿದೆ. ಶೋಧ ಕಾರ್ಯದ ನಂತರ ಇದೇ ನಗರದಲ್ಲಿ ಮತ್ತೆರಡು ಬಾಂಬ್ ಸಲಕರಣೆಗಳು ಪತ್ತೆಯಾಗಿವೆ. ಈ ನಗರದಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೆ ಅವರ‌್ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಶಿಕ್ಷೆ- ಒಬಾಮ: ಘಟನೆ ಕುರಿತು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, `ಕೃತ್ಯಕ್ಕೆ ಕಾರಣರಾದವರ ಬಗ್ಗೆ ಕೂಡಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ, ಯಾರೇ ಸ್ಫೋಟ ನಡೆಸಿರಲಿ. ಅವರಿಗೆ ಸೂಕ್ತ ಶಿಕ್ಷೆಯಾಗಲಿದೆ' ಎಂದು ಹೇಳಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್, ಲಾಸ್ ಏಂಜಲೀಸ್, ಷಿಕಾಗೊ ಮತ್ತು ವಾಷಿಂಗ್ಟನ್ ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನನಿಬಿಡ ಸ್ಥಳದಲ್ಲಿ ನಡೆದ ಈ ಸ್ಫೋಟ ಅಮೆರಿಕದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಲ್ಲಿಯೂ ಕೊರತೆಯಿದೆ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸ್ಫೋಟ ನಡೆದ ಸ್ಥಳ ಜನಪ್ರಿಯ ಪ್ರವಾಸಿ ತಾಣವೂ ಆಗಿದ್ದು, ಮಾಲ್‌ಗಳು, ರೆಸ್ಟೋರೆಂಟ್‌ಗಳು ಇವೆ.

ಅಜಿತ್ ಪೈ ಪಾರು
ಬಾಸ್ಟನ್: ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ    ಭಾರತ ಮೂಲದ ಅಜಿತ್ ಪೈ ಎಂಬುವವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು `ಡಲ್ಲಾಸ್ ಮಾರ್ನಿಂಗ್ ನ್ಯೂಸ್' ಪತ್ರಿಕೆ ವರದಿ ಮಾಡಿದೆ.

ಅಜಿತ್ ಪೈ, 26.2 ಮೈಲು ದೂರವನ್ನು 3 ಗಂಟೆ 2 ನಿಮಿಷ 16 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದರು. ಅಲ್ಲೇ ಇವರ ತಂದೆ ಮತ್ತು ಕುಟುಂಬ ವರ್ಗದವರೆಲ್ಲಾ ನಿಂತು ಸಂಭ್ರಮಿಸಿದ್ದರು. ಅಲ್ಲಿಂದ ಸ್ವಲ್ಪ ದೂರದಲ್ಲಿ ಅಜಿತ್ ತಾಯಿ ಮತ್ತು ಪತ್ನಿ  ನಿಂತು ಚಪ್ಪಾಳೆ ತಟ್ಟಿದ್ದರು. ಅಲ್ಲೇ ಒಂದು ಗಂಟೆಯ ನಂತರ ಮೊದಲ ಸ್ಫೋಟ ಸಂಭವಿಸಿದ್ದು. ಹೀಗೆ ಬೇರೆ ಬೇರೆ ಕಡೆ ನಿಂತಿದ್ದ ಕುಟುಂಬದ ಸದಸ್ಯರೆಲ್ಲರೂ ಸ್ಫೋಟದ ನಂತರ ಹಾದಿ ತಪ್ಪಿದರಾದರೂ, ನಂತರ ಬಾಸ್ಟನ್ ಕಾಲೇಜು ಬಳಿ ಒಗ್ಗೂಡಿದರು ಎಂದೂ ಪತ್ರಿಕೆಯಲ್ಲಿ ಬರೆಯಲಾಗಿದೆ.

ಆ ಸಂದರ್ಭದಲ್ಲಿ ಮಾತನಾಡಿದ ಅಜಿತ್ ಪೈ `ಈ ಸ್ಪರ್ಧೆಯ ವೇಳೆ ಎಲ್ಲೆಲ್ಲೂ ಸಂಭ್ರಮ ಎದ್ದು ಕಾಣುತಿತ್ತು. ಆದರೆ ಕೆಲವೇ ಸಮಯದಲ್ಲಿ ನಡೆದ ಇಂತಹದ್ದೊಂದು ಭಯಾನಕ ಕೃತ್ಯದಿಂದ ಪ್ರತಿಯೊಬ್ಬರ ಮೊಗದಲ್ಲಿ ಭೀತಿ, ಆತಂಕ ತಾಂಡವವಾಡುತ್ತಿತ್ತು' ಎಂದು ಹೇಳಿದ್ದನ್ನು ವರದಿ ಉಲ್ಲೇಖಿಸಿದೆ.

ಸ್ಥಳೀಯ ಉಗ್ರರ ಕೈವಾಡ?
ಬಾಸ್ಟನ್ (ಪಿಟಿಐ): ಬಾಸ್ಟನ್ ಸ್ಫೋಟದ ಘಟನೆ ಕುರಿತು ಈಗ ವಿಭಿನ್ನ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲ ಭದ್ರತಾ ವಿಶ್ಲೇಷಕರು ಇದು ಸ್ಥಳೀಯ ಉಗ್ರರ ಕೃತ್ಯ ಎಂದು ವಿಶ್ಲೇಷಿಸಿದ್ದಾರೆ. ಆದರೆ ಸ್ಫೋಟದಲ್ಲಿ ಮಧ್ಯಪ್ರಾಚ್ಯದ ವ್ಯಕ್ತಿಗಳು ಭಾಗಿಯಾಗಿರಬಹುದು ಎಂದು ಅಮೆರಿಕದ ಫೆಡರಲ್ ತನಿಖಾ ದಳ ಎಫ್‌ಬಿಐ ಸೇರಿದಂತೆ ಇತರ ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.

ಸ್ಫೋಟಕ್ಕೆ ಬಳಸಲಾದ ಸಲಕರಣೆಗಳು ಕಚ್ಚಾ ಸ್ವರೂಪದ್ದಾಗಿದ್ದು, ವಿದೇಶಿ ಸರ್ಕಾರ ಅಥವಾ ಅಲ್‌ಖೈದಾದಂತಹ ಜಾಗತಿಕ ಭಯೋತ್ಪಾದನಾ ಸಂಘಟನೆ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಕಡಿಮೆ ಎಂದು ಬಾಂಬ್ ತಜ್ಞರು ಶಂಕಿಸಿದ್ದಾರೆ. ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಸೌದಿ ಅರೇಬಿಯಾ ಪ್ರಜೆಯೊಬ್ಬನನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT