ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ಮ್ಯೂಸಿಯಂ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಮಾನಗಳು, ಬಾಹ್ಯಾಕಾಶ ನೌಕೆಗಳು, ಬಾಹ್ಯಾಕಾಶ ತಂತ್ರಜ್ಞಾನ ಮುಂತಾದವುಗಳ ಬಗ್ಗೆ ಆಸಕ್ತಿ ಇದ್ದವರು ಭೇಟಿ ಕೊಡಲೇಬೇಕಾದ ವಸ್ತು ಸಂಗ್ರಹಾಲಯವೇ (ಮ್ಯೂಸಿಯಂ) ಅಮೆರಿಕದ ವರ್ಜೀನಿಯ ರಾಜ್ಯದ ಶಾಂಟಿಲಿಯಲ್ಲಿ ಇರುವ ಸ್ಟೀವನ್ ಎಫ್ ಉಡ್ವರ್ ಹ್ಯಾಜಿ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಸೆಂಟರ್.

ಇದು ವಾಷಿಂಗ್ಟನ್‌ಗೆ ಅತ್ಯಂತ ಸಮೀಪದಲ್ಲಿದೆ. ಪಕ್ಕದಲ್ಲಿಯೇ ಡಲ್ಲಾಸ್ ವಿಮಾನ ನಿಲ್ದಾಣವೂ ಇದೆ. ಹೀಗಾಗಿ ಈ ಮ್ಯೂಸಿಯಂನ ಮೇಲ್ಭಾಗದ ವೀಕ್ಷಣಾ ಕೊಠಡಿಯಲ್ಲಿ ನಿಂತು ಡಲ್ಲಾಸ್‌ನಲ್ಲಿ ಬಂದಿಳಿಯುವ, ಹೊರಡುವ ವಿಮಾನಗಳನ್ನು ನೋಡಬಹುದು.

ನಿಲ್ದಾಣದ ವಾಯುಯಾನ ನಿಯಂತ್ರಣ ಕೇಂದ್ರದ ಕಾರ್ಯ ನಿರ್ವಹಣೆ ತಿಳಿಯಬಹುದು, ವಿಮಾನ ಚಾಲಕರು ಮತ್ತು ನಿಯಂತ್ರಣ ಕೇಂದ್ರದ ಸಿಬ್ಬಂದಿ ನಡುವಿನ ಸಂದೇಶ ವಿನಿಮಯ ಆಲಿಸಬಹುದು. ಇಡೀ ಅಮೆರಿಕದ ವಾಯುಯಾನ ನಿಯಂತ್ರಣ ವಿಧಾನಗಳ ಪರಿಚಯ ಇಲ್ಲಿ ನಿಮಗೆ ಆಗುತ್ತದೆ.

ಶಬ್ದಾತೀತ ವೇಗದಲ್ಲಿ ಸಂಚರಿಸುವ ಕಾನ್‌ಕಾರ್ಡ್, ಅತ್ಯಂತ ಐಷಾರಾಮಿ 110 ಸ್ಪೆಷಲ್ ಲಿಟ್ಲ್ ಬುಚ್, ವಿಶ್ವದ ಅತ್ಯಂತ ವೇಗದ ಜೆಟ್ ವಿಮಾನ ಲಾಕ್‌ಹಿಡ್ ಎಸ್‌ಆರ್ 71 ಬ್ಲಾಕ್‌ಬರ್ಡ್, ಬೃಹದಾಕಾರದ ಬೋಯಿಂಗ್ 707ನ ಮೂಲ ಮಾದರಿ ಡ್ಯಾಷ್ 80, ನಮ್ಮ ದೇಶದ ಸೂರ್ಯಕಿರಣ್ ವಿಮಾನಗಳಂತೆ ಗಗನದಲ್ಲೇ ಕಸರತ್ತು ಮಾಡುವ ಡಿ ಹ್ಯಾವಿಲೆಂಡ್ ಚಿಪ್‌ಮಂಕ್ ಸೇರಿದಂತೆ ನೂರಾರು ವಿಮಾನಗಳು, ವೈವಿಧ್ಯಮಯ ಹೆಲಿಕಾಪ್ಟರುಗಳು ಈ ಮ್ಯೂಸಿಯಂನಲ್ಲಿವೆ.

ಇಲ್ಲಿನ ಸ್ಟಿಮ್ಯುಲೇಟರ್‌ನಲ್ಲಿ ಕುಳಿತರೆ- ಗಗನ ನೌಕೆಯ ಕುಲುಕಾಟ, ವೇಗ, ಬಾಹ್ಯಾಕಾಶಕ್ಕೆ ಹೋಗಿ ಅಟ್ಟಣಿಗೆ ತಲುಪಿ ಮತ್ತೆ ಭೂಮಿಗೆ ಬರುವ ವರೆಗಿನ ಎಲ್ಲ ರೋಮಾಂಚಕಾರಿ ಅನುಭವ ನಿಮಗಾಗುತ್ತದೆ. ಇಲ್ಲಿರುವ ವಿಮಾನದ ಪುಟ್ಟ ಆಟಿಗೆಯ ಮಾದರಿಯ ಮೂಲಕ ವಿಮಾನ ಹಾರಾಟದ ಸಮಗ್ರ ತಂತ್ರಜ್ಞಾನ ತಿಳಿದುಕೊಳ್ಳಬಹುದು.

ಇಲ್ಲಿನ ಎಲ್ಲಕ್ಕಿಂತ ಮುಖ್ಯವಾದ ಆಕರ್ಷಣೆಯೆಂದರೆ ಅಮೆರಿಕದ ನಾಸಾ ತಯಾರಿಸಿದ್ದ ಮೊಟ್ಟಮೊದಲ ಬಾಹ್ಯಾಕಾಶ ನೌಕೆ `ದಿ ಎಂಟರ್‌ಪ್ರೈಸ್~ (ಇದನ್ನು ವಿವಿಧ ಪ್ರಯೋಗಗಳಿಗೆ ಬಳಸಿಕೊಂಡು ದೊರೆತ ಮಾಹಿತಿಗಳನ್ನು ಆಧರಿಸಿ ಬಾಹ್ಯಾಕಾಶ ನೌಕೆ `ಕೊಲಂಬಿಯಾ~ ನಿರ್ಮಾಣಗೊಂಡಿತ್ತು). ಅದರ ಗಾತ್ರ, ತಂತ್ರಜ್ಞಾನ ಸಾಮಾನ್ಯರನ್ನು ಬೆರಗುಗೊಳಿಸುತ್ತದೆ.

1965ರಲ್ಲಿ ಬಾಹ್ಯಾಕಾಶದಲ್ಲಿ ಹದಿಮೂರೂವರೆ ದಿನ ಭೂಮಿಗೆ ಪ್ರದಕ್ಷಿಣೆ ಹಾಕಿದ್ದ ಜೆಮಿನಿ 7 `ಬಾಹ್ಯಾಕಾಶ ಕೋಶ~ವೂ ಇಲ್ಲಿದೆ. ಇದರಲ್ಲಿಯೇ ಗಗನಯಾತ್ರಿಗಳಾದ ಫ್ರಾಂಕ್ ಬೋರ್ಮನ್ ಮತ್ತು ಜೇಮ್ಸ ಲೊವೆಲ್ 9 ಲಕ್ಷ ಕಿಮಿ ಪ್ರಯಾಣಿಸಿ ಭೂಮಿಗೆ 206 ಸುತ್ತು ಹಾಕಿದ್ದರು.

ವಿಮಾನಗಳ ನಿರ್ಮಾಣದ ಆರಂಭಿಕ ಕಾಲದಲ್ಲಿ ತಯಾರಾದ ಲೋಹದ ಹಕ್ಕಿಗಳು, ಆಗಿನಿಂದ ಈಗಿನ ವರೆಗಿನ  ಕ್ಷಿಪಣಿಗಳು, ಬಾಂಬ್‌ಗಳು, ರಾಕೆಟ್‌ಗಳು, 50ರ ದಶಕದಲ್ಲಿಯೇ ಅಮೆರಿಕ ನಿರ್ಮಿಸಿದ್ದ ಚಾಲಕ ರಹಿತ ದ್ರೋಣ್ ಸಮರ ವಿಮಾನ, `ಎಕ್ಸ್‌ಪ್ಲೋರರ್~ ಸರಣಿಯ ಅನೇಕ ಉಪಗ್ರಹಗಳೆಲ್ಲವನ್ನೂ ಇಲ್ಲಿ ನೋಡಬಹುದಾಗಿದೆ.

ಇವು ವೈಮಾನಿಕ, ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗಳ ಮೇಲೆ, ಮಾನವನ ಸಾಹಸ ಪ್ರವೃತ್ತಿ, ಕುತೂಹಲ, ಹೊಸತರ ಹುಡುಕಾಟದ ಮೇಲೆ ಬೆಳಕು ಚೆಲ್ಲುತ್ತವೆ.

ಗಗನಯಾತ್ರಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಅನೇಕ ಸಲ ಹೋಗಿ ಬಂದ `ಡಿಸ್ಕವರಿ~ ಬಾಹ್ಯಾಕಾಶ ನೌಕೆ ಇದೇ ಏಪ್ರಿಲ್‌ನಲ್ಲಿ ಈ ವಸ್ತುಸಂಗ್ರಹಾಲಯದ ಹೊಸ ಸದಸ್ಯನಾಗಿ ಸೇರ್ಪಡೆಯಾಗಲಿದೆ.

ಡಿ. 25 ಹೊರತುಪಡಿಸಿ ವರ್ಷದ ಉಳಿದೆಲ್ಲ ದಿನ ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ತೆರೆದಿರುವ ಈ ವಿಶಿಷ್ಟ ಮ್ಯೂಸಿಯಂಗೆ ಪ್ರವೇಶ ಶುಲ್ಕ ಉಚಿತ. ಅದೂ ಒಂದು ವಿಶೇಷ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT