ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶಕ್ಕೆ ಸುನೀತಾ ಯಶಸ್ವಿ ಪಯಣ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ): 195 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದು ದಾಖಲೆ ಬರೆದಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ ಬಾಹ್ಯಾಕಾಶದಲ್ಲಿರುವ ತಮ್ಮ ಹೊಸ ಮನೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದಾರೆ.

46 ವರ್ಷದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ, ರಷ್ಯಾದ ಸೋಯುಜ್ ಕಮಾಂಡರ್ ಯೂರಿ ಮಲೆಂಚೆಂಕೊ ಮತ್ತು ಜಪಾನ್‌ನ ಫ್ಲೈಟ್ ಎಂಜಿನಿಯರ್ ಅಕಿಹಿಕೊ ಹೊಶಿಡೆ ಅವರೊಂದಿಗೆ ಮಂಗಳವಾರ ಬೆಳಿಗ್ಗೆ 10.21 ಗಂಟೆಗೆ (ಭಾರತೀಯ ಕಾಲಮಾನ ) ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. ಸೋಯುಜ್ ಗಗನನೌಕೆಯನ್ನು ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಸಲಾಯಿತು.

ಈ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನೀತಾ ಇತರ ಗಗನಯಾತ್ರಿಗಳ ಜತೆ ನಾಲ್ಕು ತಿಂಗಳ ಕಾಲ ತಂಗಲಿದ್ದಾರೆ.
`ಇಲ್ಲಿ ಎಲ್ಲವೂ ಸರಿಯಾಗಿದೆ~ ಎಂದು ನಿಲ್ದಾಣ ತಲುಪಿದ ನಂತರ ಮಲೆಚೆಂಕೊ ರಷ್ಯಾದ ಕೊರೊಲೆವ್‌ನಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನಿಸಿದ್ದಾರೆ. ಸುನಿತಾ ಇದೇ 14ರಂದು ಕಜಕ್‌ಸ್ತಾನದ ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ಅಂತರಿಕ್ಷ ಮಹಾಯಾನ ಆರಂಭಿಸಿದ್ದರು. 

 ಸುನೀತಾ ಮತ್ತು ಅವರ ಇಬ್ಬರು ಸಹ ಗಗನಯಾತ್ರಿಗಳು, ಈಗಾಗಲೇ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ರಷ್ಯಾದ ಕಮಾಂಡರ್ ಗೆನಡಿ ಪದಲ್ಕಾ ಮತ್ತು ಅವರ ಸಹೋದ್ಯೋಗಿ ಸರ್ಗಿ ರೆವಿನ್ ಮತ್ತು ನಾಸಾ ಗಗನಯಾತ್ರಿ ಜೋ ಅಕಬಾ ಅವರನ್ನು ಸೇರಿಕೊಂಡರು. 

 ಈ ಆರು ಗಗನ ಯಾತ್ರಿಗಳು ಎರಡು `ಬಾಹ್ಯಾಕಾಶ ನಡಿಗೆ~ ಸೇರಿದಂತೆ 30ಕ್ಕೂ ಅಧಿಕ ವೈಜ್ಞಾನಿಕ ಸಂಶೋಧನೆಗಳನ್ನು ಬಾಹ್ಯಾಕಾಶ ಕೇಂದ್ರದಲ್ಲಿ ಕೈಗೊಳ್ಳಲಿದ್ದಾರೆ. ಲಂಡನ್ ಒಲಿಂಪಿಕ್ಸ್ ನೆನಪಿಗಾಗಿ ಆಟದ ಸ್ಪರ್ಧೆ ನಡೆಸಲೂ ಸಹ ಯೋಜಿಸಿದ್ದಾರೆ.  

ಅಕಬಾ, ಪದಲ್ಕಾ ಮತ್ತು ರೆವಿನ್ ಅವರು ಸೆಪ್ಟೆಂಬರ್ 17ರಂದು ಭೂಮಿಗೆ ಹಿಂದಿರುಗಲಿದ್ದಾರೆ. ಇದಕ್ಕೂ ಮುನ್ನ ಪದಲ್ಕಾ ಅವರು 33ನೇ ಅಂತರಿಕ್ಷ ಮಹಾಯಾನದ ಕಮಾಂಡರ್ ಆಗಿರುವ ಸುನಿತಾ ವಿಲಿಯಮ್ಸಗೆ ಬಾಹ್ಯಾಕಾಶ ನಿಲ್ದಾಣದ ಜವಾಬ್ದಾರಿ ವಹಿಸಿಕೊಡಲಿದ್ದಾರೆ. ಸುನೀತಾ ಆರಂಭಿಸಿದ್ದ ಈ ಮಹಾಯಾನ ಕಾಕತಾಳೀಯವೆಂಬಂತೆ ಅಮೆರಿಕದ ಮೊದಲ ಗಗನ ನೌಕೆ ಅಪೊಲೊ-ಸೋಯುಜ್ ಪರೀಕ್ಷಾ ಯೋಜನೆಯ 37 ವಾರ್ಷಿಕ ವರ್ಷಾಚರಣೆಯಂದು ಆರಂಭವಾಗಿದೆ.

ಜುಲೈ 15, 1975ರಲ್ಲಿ ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಪೊಲೊ ಗಗನ ನೌಕೆ ಮತ್ತು ರಷ್ಯಾದ ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ಸೋಯುಜ್ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಲಾಗಿತ್ತು. ಎರಡು ದಿನಗಳ ನಂತರ ಈ ಎರಡೂ ನೌಕೆಗಳು ಜೋಡಣೆಯಾಗಿದ್ದವು.

ಮಂಗಳಯಾನಕ್ಕೆ ತಿಂಡಿ, ತಿನಿಸು
ಹ್ಯೂಸ್ಟನ್ (ಎಪಿ):
ಗಗನಯಾತ್ರಿ ಸುನೀತಾ ವಿಲಿಯಮ್ಸ ಮತ್ತು ಅವರ ಸಹದ್ಯೋಗಿಗಳು ಮಂಗಳವಾರವಷ್ಟೇ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದರೆ, ಇತ್ತ ನಾಸಾದ ಕೆಲವು ವಿಜ್ಞಾನಿಗಳು 2030ರಲ್ಲಿ ಕೈಗೊಳ್ಳುವ `ಮಂಗಳ ಗ್ರಹ ಯಾನ~ಕ್ಕೆ ಸರಿ ಹೊಂದುವ ತಿಂಡಿ-ತಿನಿಸುಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT