ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ. ಜಯಶ್ರೀ, ಗೋಡ್ಖಿಂಡಿಗೆ ಪ್ರಶಸ್ತಿ ಪ್ರದಾನ

Last Updated 2 ಜೂನ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು : `ಹಿರಿಯ ರಂಗನಟಿ ಬಿ.ಜಯಶ್ರೀ ಮತ್ತು ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರು ತಮ್ಮಲ್ಲಿರುವ ಉನ್ನತ ಪ್ರತಿಭೆಯ ಮೂಲಕ ತಮ್ಮ ಹಿರಿಯರಿಗೆ ಕೀರ್ತಿ ತರುತ್ತಿದ್ದಾರೆ' ಎಂದು ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಹೇಳಿದರು.

ಗೋಕುಲ ಸಂಗೀತ ಶಾಲೆಯು ಭಾನುವಾರ ನಗರದಲ್ಲಿ ಆಯೋಜಿಸಿದ್ದ `ಕಲಾರ್ಣವ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಟಕರಂಗ ಮತ್ತು ಕೊಳಲು ವಾದನದಲ್ಲಿ ಬಹು ದೊಡ್ಡ ಹೆಸರು ಮಾಡಿರುವ ಗುಬ್ಬಿ ವೀರಣ್ಣ, ವೆಂಕಟೇಶ್ ಗೋಡ್ಖಿಂಡಿ ಅವರಂತಹ ಸಾಧಕರ ಕುಟುಂಬದಿಂದ ಬಂದಿರುವ ಬಿ.ಜಯಶ್ರಿ ಮತ್ತು ಗೋಡ್ಖಿಂಡಿ ಅವರು ತಮ್ಮ ಸಾಧನೆಯ ಮೂಲಕ ಹೆಮ್ಮೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರವೀಣ್ ಗೋಡ್ಖಿಂಡಿ ಮಾತನಾಡಿ, ನನ್ನ ಪ್ರತಿ ಕಾರ್ಯಕ್ರಮವು ನನಗೆ ಕಲಿಕೆಯಿದ್ದಂತೆ. ನಾನು ನೀಡುವ ಕಾರ್ಯಕ್ರಮದಲ್ಲಿ ಹೊಸ ಹೊಸ ಸಂಗತಿಗಳನ್ನು ಕಲಿಯುತ್ತೇನೆ. ಹಾಗಾಗಿ ಈ ಮಟ್ಟದ ಸಾಧನೆ ಸಾಧ್ಯವಾಗಿದೆ.
ಕಲಾವಿದರನ್ನು ಉನ್ನತ ಸಾಧನೆಗೆ ಪ್ರೇರೇಪಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗನಟಿ ಬಿ.ಜಯಶ್ರೀ ಅವರಿಗೆ `ವಿದ್ಯಾರ್ಣವ' ಮತ್ತು ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಮತ್ತು ಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರಿಗೆ `ಕಲಾವತಂಸ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಚಿತ್ರ ಸಾಹಿತಿ ಕೆ.ಕಲ್ಯಾಣ್, ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್.ಸುರೇಶ್, ಹಿರಿಯ ಕೊಳಲು ವಾದಕ ವೆಂಕಟೇಶ್ ಗೋಡ್ಖಿಂಡಿ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾವುಕರಾದ ಜಯಶ್ರೀ
`ನಾಟಕ ಮುಗಿಸಿ ಹೊರಗೆ ಬಂದರೆ ನನ್ನ ತಾಯಿ ನನಗೆ ದೃಷ್ಟಿ ತೆಗೆಯುತ್ತಿದ್ದರು. ಅವರೆಲ್ಲರ ಪ್ರೀತಿ, ಪ್ರೋತ್ಸಾಹ ನನ್ನ ಸಾಧನೆಗೆ ಸ್ಫೂರ್ತಿ. ಪ್ರವೀಣ್ ಗೋಡ್ಖಿಂಡಿ ಅವರು ಕೊಳಲು ನುಡಿಸುತ್ತಿದ್ದರೆ ಮನಸ್ಸು ತಣಿಯುತ್ತದೆ. ಅವರೊಬ್ಬ ಅದ್ಭುತ ಕಲಾವಿದ. ಅವರು ತಮ್ಮ ಸಾಧನೆಯ ಮೂಲಕ ತಮ್ಮ ತಂದೆಗೆ ಗೌರವ ತಂದಿದ್ದಾರೆ. ನಮ್ಮ ಪ್ರತಿ ಸಾಧನೆಯು ನಮ್ಮ ಪೋಷಕರಿಗೆ ಗೌರವ ತರುವ ಸಂಗತಿ' ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT