ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಂದ್ರಾ ವಿರುದ್ಧ ಟೀಕಾ ಪ್ರಹಾರ

ಶೂಟಿಂಗ್‌ ಸ್ಪರ್ಧಿ ಹೇಳಿಕೆಗೆ ಚೌಟಾಲಾ ಆಕ್ಷೇಪ
Last Updated 6 ಸೆಪ್ಟೆಂಬರ್ 2013, 19:51 IST
ಅಕ್ಷರ ಗಾತ್ರ

ಚಂಡೀಗಡ (ಐಎಎನ್‌ಎಸ್‌): ಐಒಸಿ ಮತ್ತು ಐಒಎ ನಡುವಿನ ತಿಕ್ಕಾಟ ವೈಯಕ್ತಿಕ ಆರೋಪ ಪ್ರತ್ಯಾರೋಪಗಳ ‘ಕದನ’ಕ್ಕೆ ಕಾರಣವಾಗಿದೆ.

ಒಲಿಂಪಿಯನ್‌ ಶೂಟರ್‌ ಅಭಿನವ್‌ ಬಿಂದ್ರಾ ಐಒಸಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆದರೆ, ಅಮಾನತುಗೊಂಡಿರುವ ಭಾರತ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಅಭಯ್‌ ಸಿಂಗ್ ಚೌಟಾಲಾ ವೈಯಕ್ತಿಕ ಟೀಕೆಗೆ ಮುಂದಾಗಿದ್ದಾರೆ.

‘ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಂದ್ರಾ ತಂದೆ ಎ.ಎಸ್‌. ಬಿಂದ್ರಾ 2009ರಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಬಿಂದ್ರಾ ಮೊದಲು ತಮ್ಮ ಸಮಸ್ಯೆಯ ಬಗ್ಗೆ ಯೋಚಿಸಲಿ. ನಂತರ ಐಒಎಯನ್ನು ಕಳಂಕಿತರಿಂದ ಮುಕ್ತವಾಗಿ ಮಾಡುವ ಕುರಿತು ಮಾತನಾಡಲಿ’ ಎಂದು ಚೌಟಲಾ ಟೀಕಿಸಿದ್ದಾರೆ.

ಒಲಿಂಪಿಯನ್‌ ಸುಶೀಲ್‌ ಕುಮಾರ್‌ ಮತ್ತು ಬಿಂದ್ರಾ ಅವರು ಐಒಸಿ ತೀರ್ಮಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ ಕ್ರೀಡಾ ಆಡಳಿತದಲ್ಲಿ ಮನೆಮಾಡಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಐಒಸಿ ಸೂಕ್ತ ನಿರ್ಧಾರ ಕೈಗೊಂಡಿದೆ  ಎಂದು ಅವರು  ಹೇಳಿದ್ದರು.

‘ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು’
ನವದೆಹಲಿ ವರದಿ: ‘ಐಒಎ ಮತ್ತು ಐಒಸಿ ನಡುವಿನ ವಿವಾದ ಬೇಗನೇ ಪರಿಹಾರವಾಗಬೇಕು. ಆಗ,ಅಂತರ­ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಸ್ಪರ್ಧಿಗಳು ರಾಷ್ಟ್ರ ಧ್ವಜದ ಅಡಿ ಸ್ಪರ್ಧಿಸಲು ಸಾಧ್ಯವಾಗುತ್ತದೆ’ ಎಂದು ಕ್ರೀಡಾ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

‘ಐಒಸಿ ನೀಡಿರುವ ನಿರ್ದೇಶನವನ್ನು ದಿಕ್ಕು ತಪ್ಪಿಸಲು ಚೌಟಾಲ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದು ದಿಕ್ಕು ತಪ್ಪಿಸುವ ಸಮಯವಲ್ಲ. ಐಒಎಯನ್ನು ಶುದ್ದಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಿಯಮಗಳಿಗೆ ಬದ್ಧವಾಗಿ ಪಾರದರ್ಶಕ ಆಡಳಿತ ನಡೆಸಬೇಕು’ ಎಂದೂ ಅವರು ನುಡಿದಿದ್ದಾರೆ.

‘ಕ್ರೀಡಾಡಳಿತವನ್ನು ಸ್ವಚ್ವಗೊಳಿಸಲು ಪಣ ತೊಟ್ಟಿರುವ ಭಾರತದ ಕ್ರೀಡಾಪಟುಗಳ ಆಸಕ್ತಿಯನ್ನು ಬೆಂಬಲಿಸಿ ಕ್ರಮ ಕೈಗೊಳ್ಳಲು ಐಒಎಗೆ ಇದು ಸೂಕ್ತ ಸಮಯ’ ಎಂದು ಸಚಿವರು ಹೇಳಿದ್ದಾರೆ.

ದೋಷಾರೋಪ ಪಟ್ಟಿಯಲ್ಲಿ ಹೆಸರು  ಇರುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎನ್ನುವ ಐಒಸಿ ನಿರ್ದೇಶನವನ್ನು ಕ್ರೀಡಾ ಸಚಿವರು ಸ್ವಾಗತಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT