ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಯಲ್ಲಿ ಅಪರೂಪದ ಪಕ್ಷಿಗಳ ದರ್ಶನ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯ(ಬಿಆರ್‌ಟಿ)ದಲ್ಲಿ ಒಂದೂವರೆ ದಶಕದ ನಂತರ ಅರಣ್ಯ ಇಲಾಖೆಯಿಂದ ಪ್ರಥಮ ಬಾರಿಗೆ ವೈಜ್ಞಾನಿಕವಾಗಿ ಪಕ್ಷಿಗಳ ಗಣತಿ ಶನಿವಾರ ಆರಂಭಗೊಂಡಿತು.

ಮೊದಲ ದಿನವೇ ಹಳದಿ ಕೊರಳಿನ ಪಿಕಳಾರ (ಯಲೊ ಥ್ರೋಟೆಡ್ ಬುಲ್‌ಬುಲ್), ಕರಿತಲೆಯ ಹೊನ್ನಕ್ಕಿ (ಬ್ಲಾಕ್ ಹೆಡೆಡ್ ಒರಿಯಲ್), ಮಲಬಾರ್ ಗಿಳಿ (ಮಲಬಾರ್ ಪ್ಯಾರಕೀಟ್), ಸಣ್ಣ ಕುಟ್ರ (ವೈಟ್ ಚೀಕ್ಡ್ ಬಾರ್ಬೆಟ್), ಕೆಂದಲೆ ಗಿಳಿ (ಪ್ಲಮ್ ಹೆಡೆಡ್ ಪ್ಯಾರಕೀಟ್), ನೀಲಿ ತಲೆಯ ಬಂಡೆ ಸಿಳ್ಳಾರ (ಬ್ಲೂ ಹೆಡೆಡ್ ರಾಕ್ ಥ್ರಸ್)ದಂತಹ ಅಪರೂಪದ ಪಕ್ಷಿಗಳು ಗಣತಿದಾರರಿಗೆ ದರ್ಶನ ನೀಡಿವೆ.

ರಾಜ್ಯದ ಧಾರವಾಡ, ಬಳ್ಳಾರಿ, ಬೆಳಗಾವಿ, ಬೆಂಗಳೂರಿನ ಪಕ್ಷಿ ತಜ್ಞರು, ವನ್ಯಜೀವಿ ಪರಿಪಾಲಕರು ಗಣತಿಯಲ್ಲಿ ಭಾಗವಹಿಸಿದ್ದಾರೆ. ಆಂಧ್ರ ಪ್ರದೇಶ, ತಮಿಳುನಾಡು, ಕೇರಳದ ಪರಿಣತ ಪಕ್ಷಿತಜ್ಞರೂ ಇದರಲ್ಲಿ ಪಾಲ್ಗೊಂಡಿದ್ದಾರೆ.

ರಕ್ಷಿತಾರಣ್ಯದ ಎಲ್ಲಾ ವಲಯಗಳನ್ನು ಒಳಗೊಂಡಂತೆ 3 ಕಿ.ಮೀ. ಉದ್ದದ 22 ಸೀಳುದಾರಿ (ಟ್ರಾನ್ಸೆಕ್ಟ್ ಲೈನ್) ಗುರುತಿಸಲಾಗಿದೆ. ಒಟ್ಟು 11 ತಂಡ ರಚಿಸಲಾಗಿದೆ. ಬೂದಿಪಡಗ, ಜೋಡಿಗೆರೆ, ಹೊನ್ನಮೇಟಿ, ಮಾವತ್ತೂರು, ಮಂಜಿಗೆರೆ, ಬುರಡೆ, ಚಿನ್ನಾರೆ, ಗುಂಡಾಲ್, ಕುರಿಮಂದೆ, ಬಿಳಿಗಿರಿರಂಗನಬೆಟ್ಟ, ಕೆ. ಗುಡಿ ಪ್ರದೇಶದಲ್ಲಿ ಗಣತಿ ನಡೆಯುತ್ತಿದೆ.

ಗಣತಿ ಸ್ಥಳಕ್ಕೆ ಭೇಟಿ ನೀಡಿದ್ದ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮ ಪತ್ರಕರ್ತರೊಂದಿಗೆ ಮಾತನಾಡಿ, `ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಬಿಆರ್‌ಟಿಯಲ್ಲಿ ಪಕ್ಷಿಗಳ ಗಣತಿ ನಡೆಯುತ್ತಿದೆ. ರಾಜ್ಯದ ಎಲ್ಲಾ ಹುಲಿ ರಕ್ಷಿತಾರಣ್ಯ ಹಾಗೂ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಪಕ್ಷಿ ಗಣತಿಗೆ ಇಲಾಖೆ ನಿರ್ಧರಿಸಿದೆ. ಶೀಘ್ರವೇ, ಅಗತ್ಯ ಸಿದ್ಧತೆ ಮಾಡಿಕೊಂಡು ವೈಜ್ಞಾನಿಕವಾಗಿ ಗಣತಿ ನಡೆಸಲಾಗುವುದು' ಎಂದು ಹೇಳಿದರು.

`ಬಿಳಿಗಿರಿರಂಗನ ಬೆಟ್ಟದಲ್ಲಿರುವ `ಗೊರುಕನ' ರೆಸಾರ್ಟ್‌ಗೆ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ನೀಡಿಲ್ಲ. ಕಂದಾಯ ಇಲಾಖೆಗೆ ಸೇರಿದ ಜಮೀನಿನಲ್ಲಿ ರೆಸಾರ್ಟ್ ಕಾರ್ಯನಿರ್ವಹಿಸುತ್ತಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸಂಬಂಧಪಟ್ಟ ಇಲಾಖೆಯು ತೆರವಿಗೆ ಕ್ರಮ ಕೈಗೊಳ್ಳಬೇಕಿದೆ' ಎಂದರು.

ಬಳಿಕ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ. ಹೊಸಮಠ, ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ವಿಜಯ್ ಮೋಹನ್‌ರಾಜ್ ಅವರೊಟ್ಟಿಗೆ ಗಣತಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾನುವಾರವೂ ಪಕ್ಷಿಗಳ ಗಣತಿ ಕಾರ್ಯ ಮುಂದುವರಿಯಲಿದೆ.

ಸೂಕ್ಷ್ಮ ವಲಯ: ಪ್ರಭಾವಿಗಳ ಅಡ್ಡಿ
ಚಾಮರಾಜನಗರ: `ರಾಜ್ಯದ ಬಿಆರ್‌ಟಿ, ನಾಗರಹೊಳೆ, ದಾಂಡೇಲಿ-ಅಣಶಿ ಹಾಗೂ ಭದ್ರಾ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲೂ ಪರಿಸರ ಸೂಕ್ಷ್ಮ ವಲಯ ಘೋಷಿಸಲು ನಾವು ಸಿದ್ಧರಿದ್ದೇವೆ. ಆದರೆ, ಕೆಲವು ಪ್ರಭಾವಿ ವ್ಯಕ್ತಿಗಳು ಇದಕ್ಕೆ ಅಡ್ಡಗೋಡೆಯಾಗಿದ್ದಾರೆ' ಎಂದು ದೀಪಕ್ ಶರ್ಮ  ಹೇಳಿದರು.

ಪ್ರಸ್ತುತ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಿಸಲಾಗಿದೆ. ಆದರೆ, ಉಳಿದ ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಸಾಕಷ್ಟು ಅಡ್ಡಿ ಎದುರಾಗಿದೆ. ಪರಿಸರ ಪ್ರಿಯರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಕಾನೂನಾತ್ಮಕವಾಗಿಯೇ ಪರಿಸರ ಸೂಕ್ಷ್ಮ ವಲಯದ ಘೋಷಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT