ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಎಂಎಲ್ ಅವ್ಯವಹಾರ: ಮಾಹಿತಿ ನೀಡಲು ಸಿಬಿಐಗೆ ಗಡುವು

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್) ಅಧಿಕಾರಿಗಳ ವಿರುದ್ಧ ನಡೆದಿರುವ ತನಿಖೆಯ ವಸ್ತುಸ್ಥಿತಿ ವಿವರಿಸಲು ಸಿಬಿಐಗೆ ಹೈಕೋರ್ಟ್ ಮೂರು ದಿನಗಳ ಗಡುವು ನೀಡಿದೆ.

ಬಿಇಎಂಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿಆರ್‌ಎಸ್ ನಟರಾಜನ್ ಅವರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಕೋರಿ ಆಂಧ್ರ ಪ್ರದೇಶದ ನಿವಾಸಿ ಕೆ.ಎಸ್. ಶಾಸ್ತ್ರಿ ಅವರು ಸಲ್ಲಿಸಿರುವ ಅರ್ಜಿ ಇದಾಗಿದೆ.

2009-10ರ ಅವಧಿಯಲ್ಲಿ ನಟರಾಜನ್ ಅವರು 677 ಕೋಟಿ ಹಾಗೂ 2010-11ನೇ ಸಾಲಿನಲ್ಲಿ ಸುಮಾರು 538 ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆಸಿದ್ದಾರೆ. ಈ ಅವ್ಯವಹಾರದ ಪ್ರಾಥಮಿಕ ತನಿಖೆ ನಡೆಸುತ್ತಿರುವ ಸಿಬಿಐ, ಕೆಳ ಹಂತದ ಅಧಿಕಾರಿಗಳ ಹೆಸರನ್ನು ಮಾತ್ರ ಬಹಿರಂಗಗೊಳಿಸಿದ್ದು, ನಟರಾಜನ್ ವಿರುದ್ಧ ಯಾವುದೇ ಮಾಹಿತಿ ನೀಡಲಿಲ್ಲ.
 
ಈ ಬಗ್ಗೆ ಸಂಸತ್ತಿನಲ್ಲಿ ಕೂಡ ಚರ್ಚೆಯಾಗಿದೆ. ಆದರೆ ಏನೂ ಪ್ರಯೋಜನ ಆಗಿಲ್ಲ. ಆದುದರಿಂದ ಕ್ರಮಕ್ಕೆ ಸಿಬಿಐಗೆ ಆದೇಶಿಸಬೇಕು ಎನ್ನುವುದು ಅರ್ಜಿದಾರರ ಬೇಡಿಕೆ.

ಈ ಹಿನ್ನೆಲೆಯಲ್ಲಿ ಸಿಬಿಐ ಇಲ್ಲಿಯವರೆಗೆ ಏನು ಮಾಡಿದೆ ಎಂದು ತಿಳಿಯಬಯಸಿದ ನ್ಯಾಯಮೂರ್ತಿ ಎನ್.ಆನಂದ ಅವರು ಇದೇ 6ರವರೆಗೆ ಗಡುವು ನೀಡಿದ್ದಾರೆ.

`ಸಿಬಿಐ ತನಿಖೆ ಇಲ್ಲ~
ಕ್ರಿಮಿನಲ್ ಪ್ರಕರಣಗಳ ವಕೀಲರಾಗಿದ್ದ ಮಂಗಳೂರು ಮೂಲದ ನೌಶಾದ್ ಖಾಸಿಂಜಿ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್‌ನ ಏಕಸದಸ್ಯಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದು ಮಾಡಿದೆ.

`ಇದು ಸಿಬಿಐಗೆ ವಹಿಸಿಕೊಡುವಂತಹ ಪ್ರಕರಣ ಎಂದು ಮೇಲ್ನೋಟಕ್ಕೆ ಸಾಬೀತು ಆಗುತ್ತದೆಯೇ, ಇಲ್ಲವೇ ಎಂಬ ಬಗ್ಗೆ ಏಕಸದಸ್ಯಪೀಠ ಸರಿಯಾಗಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸಿದ ನಂತರ ಆದೇಶ ಹೊರಡಿಸಬೇಕು~ ಎಂದು ಸೂಚಿಸಿದ ವಿಭಾಗೀಯ ಪೀಠ, ವಿಚಾರಣೆಯನ್ನು ಏಕಸದಸ್ಯಪೀಠಕ್ಕೆ ವರ್ಗಾಯಿಸಿದೆ. ಈಗ ಅಲ್ಲಿ ಪುನಃ ವಿಚಾರಣೆ ಮುಂದುರಿಯಲಿದೆ.

2009ರ ಜೂನ್ 26ರಂದು ಮಂಗಳೂರಿನಲ್ಲಿ ಈ ಕೊಲೆ ನಡೆದಿತ್ತು. ಪ್ರಕರಣದ ವಿಚಾರಣೆಯನ್ನು ಸಿಐಡಿ ತನಿಖೆ ವಹಿಸಿಕೊಡಲಾಗಿತ್ತು. ಆದರೆ ತಮ್ಮ ಪತಿಯ ಕೊಲೆಯಲ್ಲಿ ಕೆಲವು ಪೊಲೀಸರು ಶಾಮೀಲು ಅಗಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಯಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಅವರ ಪತ್ನಿ ನುಸ್ರತ್ ಜಹಾನ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಏಕಸದಸ್ಯಪೀಠ ಸಿಬಿಐ ತನಿಖೆಗೆ ವಹಿಸಿತ್ತು.

ಹಾಜರಾಗದ ಶೆಟ್ಟರ್
ಲಂಚ ಪಡೆದಿರುವ ಆರೋಪ ಹೊತ್ತ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರ ವಿರುದ್ಧ ದಾಖಲಾಗಿರುವ ದೂರಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿ ಲೋಕಾಯುಕ್ತ ವಿಶೇಷ ಕೋರ್ಟ್ ಬುಧವಾರ ಆದೇಶಿಸಿದೆ.

ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬರಬೇಕಿದ್ದ ಮಾಜಿ ಸ್ಪೀಕರ್ ಜಗದೀಶ ಶೆಟ್ಟರ್ ಅವರು ವಿಧಾನ ಮಂಡಲದ ಕಲಾಪದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಬರಲು ಆಗುತ್ತಿಲ್ಲ ಎಂದು ಅವರ ಪರ ವಕೀಲರು ತಿಳಿಸಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಯಿತು.

ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಒಂದನೇ ದೂರಿನ ಆದೇಶವನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಇದೇ ಶನಿವಾರ ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT