ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಒ ಕಚೇರಿಗೆ ಬೀಗ

Last Updated 14 ಡಿಸೆಂಬರ್ 2012, 10:54 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಎಂಟು ತಿಂಗಳಾದರೂ ವೇತನ ದೊರೆಯದ ಕಾರಣ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಸಿಬ್ಬಂದಿ ತಾವೇ ಮುಂದಾಗಿ ಕಚೇರಿಗೆ ಬೀಗ ಜಡಿದು ಗುರುವಾರದಿಂದ ಅನಿರ್ದಿಷ್ಟ ಅವಧಿಯವರೆಗೆ ಮುಷ್ಕರ ಹಮ್ಮಿಕೊಂಡಿದ್ದಾರೆ.

`ಎಂಟು ತಿಂಗಳು ಕಳೆದರೂ ಸಂಬಳ ಸಿಕ್ಕಿಲ್ಲ. ಈ ತಿಂಗಳಾದರೂ ಬಂದೀತು ಎಂಬ ಆಶಾಭಾವನೆ ಯೊಂದಿಗೆ  ಕೆಲಸ ಮಾಡುತ್ತ ಬಂದಿದ್ದೇವೆ. ಈ ತಿಂಗಳ ನಿರೀಕ್ಷೆಯೂ ಹುಸಿಯಾಗಿದೆ. ಹೀಗಾಗಿ ಈ ಪ್ರತಿಭಟನೆ ಮಾಡುತ್ತಿದ್ದೇವೆ' ಎಂದು ಸಿಬ್ಬಂದಿ ತಿಳಿಸಿದರು.

`ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಬೇರ್ಪಡಿಸಿ 2011 ಜೂನ್ 3ರಂದು ಇಲ್ಲಿ ನೂತನ ಕಚೇರಿ ತೆರೆಯಲಾಯಿತು. 2012 ಮಾರ್ಚ್ ವರೆಗೆ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ವೇತನದ ಬಟವಡೆ ಮಾಡಲಾಯಿತು. ಅನಂತರ ವೇತನ ಬಾರದೆ ಪರಿತಪಿಸುವಂತಾಗಿದೆ' ಎಂದು ವ್ಯವಸ್ಥಾಪಕ ಎಂ. ಎಲ್. ನನ್ನಾರಿ, ಶಿಕ್ಷಣ ಸಂಯೋಜಕರಾದ ಜಿ. ಎಫ್. ಬಂಡಗಿ ಮತ್ತು ಎಂ. ವೈ. ಮರೆಪ್ಪನವರ ಅಳಲು ತೋಡಿಕೊಂಡರು.

`ದಸರಾ, ದೀಪಾವಳಿ ಸೇರಿದಂತೆ ಅನೇಕ ಹಬ್ಬ, ಹರಿದಿನಗಳನ್ನು ಸಂಭ್ರಮದಿಂದ ಆಚರಿಸಲಾಗಲಿಲ್ಲ. ಹೊಸ ಮನೆ ಕಟ್ಟಿದ ಹಾಗೂ  ವಾಹನ ತೆಗೆದುಕೊಂಡ ಸಾಲದ ಕಂತನ್ನು ಪಾವತಿಸದೇ ನರಳುವಂತಾಗಿದೆ. ಕಿರಾಣಿ ಅಂಗಡಿಯವರೂ ನಮಗೆ ದಿನಸಿ ವಸ್ತುಗಳನ್ನು ಉದ್ರಿ ಕೊಡಲು ಹಿಂದೆ, ಮುಂದೆ ನೋಡುತ್ತಿದ್ದಾರೆ' ಎಂದು ಅವರು ನೊಂದು ನುಡಿದರು.

`ನನ್ನ ಪತ್ನಿಯ ಹೃದಯ ಶಸ್ತ್ರ ಚಿಕಿತ್ಸೆ  ಮಾಡಿಸಲಾಗಿದೆ. ಸಂಬಳ ದೊರೆಯದ ಕಾರಣ ಆಕೆಯ ಔಷಧೋಪಚಾರಕ್ಕೂ ದುಡ್ಡಿಲ್ಲ ದಾಗಿದೆ. ಪತ್ನಿಯ ಆರೋಗ್ಯದಲ್ಲಿ ಏನಾದರೂ ಹೆಚ್ಚು- ಕಡಿಮೆಯಾದರೆ ನನ್ನ ಗತಿಯೇನು ಎಂಬುದು ತೋಚ ದಾಗಿದೆ' ಎಂದು ಆಕಾಶ ದಿಟ್ಟಿಸಿದರು ಕಚೇರಿ ಜವಾನ ಎ.ಎಚ್. ನದಾಫ್.

`ಕೆಲಸ ಮಾಡಿದರೂ ಕೈಗೆ ಸಂಬಳ ಸಿಗದೇ ಇರುವುದರಿಂದಾಗಿ ದ್ವಿತೀಯ ದರ್ಜೆ ಸಹಾಯಕ ಬಿ. ಎಸ್. ತಿಗಡಿ ಮಾನಸಿಕವಾಗಿ ತೀವ್ರ ಜರ್ಝರಿತರಾಗಿ ಹೋದರು.  ಪರಿಣಾಮ ಅವರಿಗೆ ಲಘು ಹೃದಯಾ ಘಾತವೂ ಸಂಭವಿಸಿತು. ಬೈಲಹೊಂಗಲ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡಿದ್ದು, ಸದ್ಯ ದೀರ್ಘಾವಧಿ ರಜೆಯ ಮೇಲೆ ಅವರಿದ್ದಾರೆ' ಎಂದು ಪ್ರತಿಭಟನೆ ನಿರತ ಸಿಬ್ಬಂದಿ ಮಾಹಿತಿ ನೀಡಿದರು.`ಸಂಬಳ ಕೈಸೇರುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ' ಎಂದೂ ಅವರು ಘೋಷಿಸಿದರು.

ಬೆಂಬಲ: ರಾಜ್ಯ ನೌಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಎಸ್. ಕಲ್ಮಠ, ನಿರ್ದೇಶಕ ಎಂ. ಎಫ್. ಜಕಾತಿ, ಶಿಕ್ಷಕರ ಸಂಘಟನೆ ತಾಲ್ಲೂಕು ಅಧ್ಯಕ್ಷ ಆರ್. ಎಸ್. ಹೊಳಿ, ಮುಖ್ಯಾಧ್ಯಾಪಕ ಜಿ. ಪಿ. ಉಮರ್ಜಿ ಪ್ರತಿಭಟನೆ ಸ್ಥಳಕ್ಕಾಗಮಿಸಿ ತಮ್ಮ ಬೆಂಬಲವನ್ನು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT