ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಕಡ್ಡಾಯ: ಕಂಗಾಲಾದ ಆಕಾಂಕ್ಷಿ ಪದವೀಧರರು

Last Updated 17 ಸೆಪ್ಟೆಂಬರ್ 2011, 18:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,765 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗಿದ್ದು, ಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಸ್ನಾತಕೋತ್ತರ ಪದವೀಧರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇದ್ದ ಉಪನ್ಯಾಸಕರ ನೇಮಕಾತಿ ಅಧಿಕಾರವನ್ನು ವಾಪಸ್ ಪಡೆದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಕೇಂದ್ರೀಕೃತ ದಾಖಲಾತಿ ಘಟಕದ ಮೂಲಕ ಈ ಬಾರಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರೂಪಿಸಿರುವ ವಿಶೇಷ ನೇಮಕಾತಿ ನಿಯಮಾವಳಿಗಳನ್ನು (ಕರಡು) ಶುಕ್ರವಾರ ಪ್ರಕಟಿಸಲಾಗಿದೆ.

ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು ಕರಡು ನಿಯಮಾವಳಿಗಳ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಈ ಅವಧಿಯಲ್ಲಿ ಸಲ್ಲಿಸಬಹುದು. ಇದಾದ ನಂತರ ಅಂತಿಮ ಅಧಿಸೂಚನೆ ಹೊರಡಿಸಿ ಅಕ್ಟೋಬರ್‌ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ವಿಶೇಷ ನೇಮಕಾತಿ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಮೇಲ್ವಿಚಾರಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕ ನೇಮಕ ಪ್ರಕ್ರಿಯೆಯನ್ನು ನಡೆಸಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಮೀಸಲಾತಿಗೆ ಅನುಗುಣವಾಗಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

14 ವಿಷಯಗಳಲ್ಲಿ ಖಾಲಿ ಇರುವ 1,765 ಹುದ್ದೆಗಳನ್ನು ಸದ್ಯ ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 1,009 ಹುದ್ದೆಗಳು ವಿಜ್ಞಾನ ಮತ್ತು ವಾಣಿಜ್ಯ ವಿಷಯಕ್ಕೆ ಸೇರಿದವಾಗಿವೆ. ಉಳಿದ ಹುದ್ದೆಗಳು ಕಲಾ ವಿಭಾಗದ ವಿಷಯಗಳಿಗೆ ಸೇರಿವೆ. ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿಯನ್ನು ಕಡ್ಡಾಯ ಮಾಡಿದ್ದರೂ, ಬಿ.ಇಡಿ ಅಥವಾ ಸ್ನಾತಕೋತ್ತರ ಪದವಿಯ ಅಂಕಗಳನ್ನು ನೇಮಕಕ್ಕೆ ಪರಿಗಣಿಸುವುದಿಲ್ಲ. ಕೇವಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯು ಕನ್ನಡವೂ ಸೇರಿದಂತೆ ಒಟ್ಟು ಮೂರು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಕನ್ನಡ ವಿಷಯದ ಪ್ರಶ್ನೆ ಪತ್ರಿಕೆ 150 ಅಂಕಗಳದ್ದಾಗಿದ್ದು, ಇದು ಕೇವಲ ಎಸ್ಸೆಸ್ಸೆಲ್ಸಿ ಮಟ್ಟದ ಅರ್ಹತಾ ಪರೀಕ್ಷೆಯಾಗಿದೆ. ಇದರಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಆದರೆ ಈ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸುವುದಿಲ್ಲ.

ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್, ಗಣಿತ ಸೇರಿದಂತೆ ನಿರ್ದಿಷ್ಟ ವಿಷಯಗಳು 150 ಅಂಕಗಳ ತಲಾ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತವೆ. ಆ ವಿಷಯದ ಪಠ್ಯಕ್ರಮಕ್ಕೆ ಅನುಗುಣವಾಗಿ ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ ನೇಮಕ ಮಾಡಲಾಗುತ್ತದೆ.

ವಿರೋಧ: ಬಿ.ಇಡಿ ಕಡ್ಡಾಯ ಮಾಡಿರುವುದಕ್ಕೆ ಸ್ನಾತಕೋತ್ತರ ಪದವೀಧರರು ವಿರೋಧ ವ್ಯಕ್ತಪಡಿಸಿದ್ದು, ಏಕಾಏಕಿ ಈ ರೀತಿ ಕಡ್ಡಾಯ ಮಾಡಿರುವುದು ಸರಿಯಲ್ಲ. ಸ್ನಾತಕೋತ್ತರ ಪದವೀಧರರಲ್ಲಿ ಶೇ 15ರಿಂದ 20ರಷ್ಟು ಮಂದಿ ಕೂಡ ಬಿ.ಇಡಿ ಮಾಡಿಲ್ಲ. ಸರ್ಕಾರದ ಈ ಕ್ರಮದಿಂದಾಗಿ ಸ್ನಾತಕೋತ್ತರ ಪದವೀಧರರು ನಿರುದ್ಯೋಗಿಗಳಾಗಿಯೇ ಉಳಿಯಬೇಕಾಗುತ್ತದೆ ಎಂದು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹಲವರು ಆತಂಕ ವ್ಯಕ್ತಪಡಿಸಿದರು.

2008ರಲ್ಲಿ ರಾಷ್ಟ್ರಪತಿ ಆಡಳಿತ ಇದ್ದಾಗ ಇದೇ ರೀತಿ ಬಿ.ಇಡಿ ಕಡ್ಡಾಯ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅರೆಕಾಲಿಕ ಉಪನ್ಯಾಸಕರು, ಪದವೀಧರ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳು, ಸ್ನಾತಕೋತ್ತರ ಪದವೀಧರರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗ ಈ ಪ್ರಕ್ರಿಯೆಯನ್ನು ಕೈಬಿಡಲಾಯಿತು.
ಈಗ ಮತ್ತೆ ಅದೇ ರೀತಿ ಮಾಡಿರುವುದು ಸರಿಯಲ್ಲ ಎಂದು ಸ್ನಾತಕೋತ್ತರ ಪದವೀಧರರಾದ ಟಿ.ನಾಗರಾಜ್, ಎಂ. ಜಗದೀಶ್ ಎಸ್.ಪ್ರಕಾಶ್ ಸೇರಿದಂತೆ ಹಲವರು ಟೀಕಿಸಿದರು.

ಅವೈಜ್ಞಾನಿಕ ಕ್ರಮ: ಉಪನ್ಯಾಸಕರ ನೇಮಕಕ್ಕೆ ಬಿ.ಇಡಿ ಕಡ್ಡಾಯ ಮಾಡಿರುವುದು ಅವೈಜ್ಞಾನಿಕ ಕ್ರಮ. ಪ್ರೌಢಶಾಲಾ ಶಿಕ್ಷಕರಿಗೆ ನಿಗದಿಪಡಿಸಿರುವ ಬಿ.ಇಡಿ ವಿದ್ಯಾರ್ಹತೆಯನ್ನು ಉಪನ್ಯಾಸಕರಿಗೂ ವಿಸ್ತರಿಸಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂಬುದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹ.

ಗುಣಮಟ್ಟದ ಬೋಧನೆ ಅಗತ್ಯವಿದೆ ಅನಿಸಿದರೆ ಎಂ.ಎ ಜೊತೆಗೆ ಎಂಫಿಲ್, ಪಿಎಚ್‌ಡಿ ವಿದ್ಯಾರ್ಹತೆ ಹೊಂದಿದವರಿಗೆ, ಎನ್‌ಇಟಿ, ಎಸ್‌ಎಲ್‌ಇಟಿ ಪಾಸಾದವರಿಗೆ ಆದ್ಯತೆ ನೀಡಬೇಕು. ಅದು ಬಿಟ್ಟು ಬಲವಂತವಾಗಿ ಬಿ.ಇಡಿಯನ್ನು ಹೇರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಕೇಂದ್ರ ಸರ್ಕಾರದ ಏಕರೂಪ ಶಿಕ್ಷಣದ ಪ್ರಕಾರ ಬಿ.ಇಡಿ ಕಡ್ಡಾಯ ಮಾಡಬೇಕು ನಿಜ. ಆದರೆ ನಮ್ಮಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಇಲ್ಲ. ಕೇರಳ, ಗುಜರಾತ್ ಮತ್ತು ಕರ್ನಾಟಕದಲ್ಲಿ ಮಾತ್ರ ಪ್ರತ್ಯೇಕ ವ್ಯವಸ್ಥೆ ಇದೆ.
ಕೇಂದ್ರ ಸರ್ಕಾರದ ಪ್ರಕಾರ 9ರಿಂದ 12ನೇ ತರಗತಿ ಪ್ರೌಢಶಾಲೆಯಲ್ಲಿ ಬರುತ್ತದೆ. ಆದರೆ ನಮ್ಮಲ್ಲಿ 8ರಿಂದ 10ನೇ ತರಗತಿ ಪ್ರೌಢಶಾಲೆಯಲ್ಲಿದೆ. ಎರಡು ವರ್ಷಗಳ ಪಿಯುಸಿ ಪ್ರತ್ಯೇಕವಾಗಿದೆ. ಹೀಗಾಗಿ ಬಿ.ಇಡಿ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

`ಬೋಧನಾ ವಿಧಾನ ಹಾಗೂ ಮಕ್ಕಳ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಿ.ಇಡಿ ವಿದ್ಯಾರ್ಹತೆ ಅಗತ್ಯ. ಸ್ನಾತಕೋತ್ತರ ಪದವಿ ಪಡೆದ ಮಾತ್ರಕ್ಕೆ ಬೋಧನೆಗೆ ಸಂಬಂಧಿಸಿದ ಎಲ್ಲ ಕೌಶಲ ಕರಗತ ಆಗುವುದಿಲ್ಲ~ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರನಾಯಕ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT