ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ, ಬಿಪಿಇಡಿ ಕೋರ್ಸ್: ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದು

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಇಡಿ ಮತ್ತು ಬಿಪಿಇಡಿ ಕೋರ್ಸ್‌ಗಳ ಪ್ರವೇಶಕ್ಕೆ ಪ್ರತಿ ವರ್ಷ ನಡೆಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈ ವರ್ಷ ಕೈಬಿಡಲಾಗಿದ್ದು, ಕೇವಲ ಬಿ.ಎ., ಬಿಎಸ್ಸಿ ಪದವಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ರಾಜ್ಯದಲ್ಲಿ 428 ಬಿ.ಇಡಿ ಕಾಲೇಜುಗಳಿದ್ದು, ಸರ್ಕಾರಿ ಕೋಟಾದಲ್ಲಿ 22,950 ಸೀಟುಗಳು ಲಭ್ಯವಿವೆ. ಅಲ್ಲದೆ ಆಡಳಿತ ಮಂಡಳಿ ಕೋಟಾ ಸೀಟುಗಳು ಸೇರಿದರೆ ಒಟ್ಟು ಸುಮಾರು 40 ಸಾವಿರ ಸೀಟುಗಳು ಲಭ್ಯವಾಗುತ್ತವೆ.

ಆದರೆ ಇಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಆಕಾಂಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿ.ಇಡಿಗೆ ಪ್ರವೇಶ ಪರೀಕ್ಷೆ ನಡೆಸದೆ ಇರುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ.

ಅಲ್ಲದೆ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಅರ್ಜಿಗಾಗಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳ (ಡಯೆಟ್) ಮುಂದೆ ಸಾಲಿನಲ್ಲಿ ನಿಂತು ಪರದಾಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಅಥವಾ ಬ್ರೌಸಿಂಗ್ ಸೆಂಟರ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೇಂದ್ರೀಕೃತ ದಾಖಲಾತಿ ಘಟಕದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಮಂಗಳವಾರ ಮಧ್ಯರಾತ್ರಿಯಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಇದೇ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅಕ್ಟೋಬರ್ ಕೊನೆಯ ವಾರ ಅರ್ಹತೆ ಆಧಾರದ ಮೇಲೆ ಸಂಬಂಧಪಟ್ಟ ಕಾಲೇಜುಗಳಲ್ಲಿ ದಾಖಲಾತಿ ನಡೆಯಲಿದೆ. ನವೆಂಬರ್ ಮೊದಲ ವಾರದಲ್ಲಿ ತರಗತಿಗಳು ಆರಂಭವಾಗಲಿವೆ.

ರಾಜ್ಯದಲ್ಲಿ 2003-04ರಿಂದ ಬಿ.ಇಡಿ ಮತ್ತು ಬಿಪಿಇಡಿ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷಾ ಪದ್ಧತಿ ಜಾರಿಗೆ ಬಂದಿತ್ತು. ಈ ಕೋರ್ಸ್‌ಗಳಿಗೆ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇರುತ್ತಿದ್ದರಿಂದ ಪ್ರವೇಶ ಪರೀಕ್ಷೆ ನಡೆಸಿ, ಪದವಿ ಮತ್ತು ಪ್ರವೇಶ ಪರೀಕ್ಷೆಯಲ್ಲಿನ ತಲಾ ಶೇ 50ರಷ್ಟು ಅಂಕಗಳನ್ನು ಗಣನೆಗೆ ತೆಗೆದುಕೊಂಡು ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈಗ ಬಿ.ಇಡಿ, ಬಿಪಿಇಡಿ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಇಳಿಮುಖವಾಗಿದೆ.

ಕಳೆದ ವರ್ಷ ಸರ್ಕಾರಿ ಕೋಟಾದಡಿ 22,950 ಸೀಟುಗಳು ಲಭ್ಯವಿದ್ದವು. ಆದರೆ ಅರ್ಜಿ ಸಲ್ಲಿಸಿದವರ ಸಂಖ್ಯೆ 19 ಸಾವಿರ ಮಾತ್ರ! ಅರ್ಜಿ ಹಾಕಿದ ಎಲ್ಲರಿಗೂ ಸೀಟುಗಳು ಲಭ್ಯವಾದವು.

 ಆದರೆ ಅರ್ಜಿ ಸಲ್ಲಿಸಿದವರ ಸಂಖ್ಯೆ 19 ಸಾವಿರ ಮಾತ್ರ! ಅರ್ಜಿ ಹಾಕಿದ ಎಲ್ಲರಿಗೂ ಸೀಟುಗಳು ಲಭ್ಯವಾದವು.   ಅಲ್ಲದೆ ಸರ್ಕಾರಿ ಕೋಟಾದ ಎಲ್ಲ ಸೀಟುಗಳು ಭರ್ತಿಯಾಗಲಿಲ್ಲ. ಹೀಗಾಗಿ ಪ್ರವೇಶ ಪರೀಕ್ಷೆ ನಡೆಸುವ ಕಸರತ್ತು ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯದಲ್ಲಿ 9 ಸರ್ಕಾರಿ, 43 ಅನುದಾನಿತ ಮತ್ತು 376 ಅನುದಾನರಹಿತ ಬಿ.ಇಡಿ ಕಾಲೇಜುಗಳಿವೆ. ಸರ್ಕಾರಿ ಕಾಲೇಜುಗಳಲ್ಲಿ ಶೇ 100ರಷ್ಟು ಸೀಟುಗಳು ಸರ್ಕಾರಿ ಕೋಟಾಗೆ ಲಭ್ಯವಾಗಲಿವೆ. ಅನುದಾನಿತ ಕಾಲೇಜುಗಳಲ್ಲಿ ಶೇ 75ರಷ್ಟು ಸೀಟುಗಳನ್ನು ಸರ್ಕಾರಿ ಮತ್ತು ಶೇ 25ರಷ್ಟು ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿ ಮಾಡಲಾಗುತ್ತದೆ. ಅನುದಾನರಹಿತ ಕಾಲೇಜುಗಳಲ್ಲಿ ಶೇ 50:50ರ ಪ್ರಮಾಣದಲ್ಲಿ ಸರ್ಕಾರಿ ಮತ್ತು ಆಡಳಿತ ಮಂಡಳಿ ಕೋಟಾ ಸೀಟುಗಳು ಹಂಚಿಕೆಯಾಗಲಿವೆ.

ಕುಸಿದ ಬೇಡಿಕೆ: ರಾಜ್ಯದಲ್ಲಿ 4278 ಸರ್ಕಾರಿ ಮತ್ತು 3367 ಅನುದಾನಿತ ಪ್ರೌಢಶಾಲೆಗಳಿವೆ. ಸರ್ಕಾರಿ ಶಾಲೆಗಳಲ್ಲಿ 37,752 ಮತ್ತು ಅನುದಾನಿತ ಶಾಲೆಗಳಲ್ಲಿ 28,348 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 40 ಸಾವಿರ ಮಂದಿ ಬಿ.ಇಡಿ ಪಡೆದು ಹೊರಬರುತ್ತಿದ್ದಾರೆ. ಆದರೆ ಇಷ್ಟೇ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗುತ್ತಿಲ್ಲ. ಬೇಡಿಕೆ ಕುಸಿಯಲು ಇದೇ ಕಾರಣ ಎನ್ನಲಾಗಿದೆ.

ಕಳೆದ 3-4 ವರ್ಷಗಳಿಂದ ರಾಜ್ಯದಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕವಾಗಿಲ್ಲ. ಹುದ್ದೆಗಳು ಖಾಲಿ ಇಲ್ಲದೆ ಇರುವುದೇ ಇದಕ್ಕೆ ಕಾರಣ. ನಿವೃತ್ತಿಯಿಂದಾಗಿ ಸುಮಾರು ಐದು ಸಾವಿರ ಹುದ್ದೆಗಳು ಈಗ ಲಭ್ಯವಾಗಲಿದ್ದು, ಅವುಗಳ ಭರ್ತಿಗೆ ಅನುಮತಿ ಕೋರಿ ಶಿಕ್ಷಣ ಇಲಾಖೆಯು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಒಪ್ಪಿಗೆ ದೊರೆತ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

8-10 ವರ್ಷಗಳ ಹಿಂದೆ ರಾಜ್ಯದಲ್ಲಿ ನಾಯಿಕೊಡೆಗಳಂತೆ ಬಿ.ಇಡಿ ಕಾಲೇಜುಗಳು ಆರಂಭವಾದವು. ಈಗ ಅದರ ಪರಿಣಾಮ ಎದುರಿಸುವಂತಾಗಿದೆ. ಹಿಂದೆ ಸೀಟಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರೆ, ಈಗ ವಿದ್ಯಾರ್ಥಿಗಳಿಗಾಗಿ ಸೀಟುಗಳು ಕಾಯುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT