ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ, ಮೆಟ್ರೊ ರೈಲಿಗೆ ಏಕರೂಪದ ಟಿಕೆಟ್

Last Updated 2 ಫೆಬ್ರುವರಿ 2011, 20:25 IST
ಅಕ್ಷರ ಗಾತ್ರ


ಬೆಂಗಳೂರು:  ‘ಬಿಎಂಟಿಸಿ ಬಸ್ ಹಾಗೂ ಮೆಟ್ರೊ ರೈಲು ಸಾರಿಗೆಯ ಪ್ರಯಾಣಕ್ಕೆ ಏಕರೂಪದ ಟಿಕೆಟ್‌ಗಳನ್ನು ಪರಿಚಯಿಸಲಾಗುವುದು. ಈ ಬಗ್ಗೆ ಮೆಟ್ರೊ ನಿಗಮದ ಅಧಿಕಾರಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ’ ಎಂದು ಸಾರಿಗೆ ಸಚಿವ ಆರ್.ಅಶೋಕ ಅವರು  ತಿಳಿಸಿದರು.

ನಗರದಲ್ಲಿ ಬುಧವಾರ ಬಿಎಂಟಿಸಿ ಏರ್ಪಡಿಸಿದ್ದ ಬಸ್ ದಿನದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಯಾಣಿಕರು ಎರಡು ಸಾರಿಗೆಗಳಲ್ಲಿ ಬೇರೆ ಬೇರೆ ಟಿಕೆಟ್‌ಗಳನ್ನು ಖರೀದಿಸುವ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಮಾತುಕತೆ ಅಂತಿಮವಾದ ನಂತರ ತಿಂಗಳ ಹಾಗೂ ದಿನದ ಪಾಸುಗಳನ್ನು ಪರಿಚಯಿಸಲಾಗುವುದು’ ಎಂದು ಹೇಳಿದರು.

‘ಪರಿಸರ ಹಾನಿ ತಡೆಗಟ್ಟುವ ಉದ್ದೇಶದಿಂದ ದೆಹಲಿಯಲ್ಲಿರುವಂತೆ ಸಿಎನ್‌ಜಿ (ನೈಸರ್ಗಿಕ ಅನಿಲ) ಮಾದರಿಯ ವಾಹನಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳಲು ಸಿದ್ಧವಿದೆ. ಸಿಎನ್‌ಜಿ ಅಳವಡಿಸಿಕೊಳ್ಳಲು ಸುಮಾರು ರೂ 150ರಿಂದ 200 ಕೋಟಿ ವೆಚ್ಚವಾಗಬಹುದು ಎಂಬ ಅಂದಾಜಿದೆ. ಅದನ್ನು ಭರಿಸಲು ಸಂಸ್ಥೆ ಸಿದ್ಧವಿದೆ. ಅದಕ್ಕೆ ಕೋರ್ಟ್ ಅನುಮತಿ ನೀಡಬೇಕಾಗುತ್ತದೆ.ಇದನ್ನು ಅಳವಡಿಸಿಕೊಳ್ಳುವ ಕುರಿತ ನಿರ್ಧಾರವೂ ಪರಿಶೀಲನೆಯಲ್ಲಿದೆ. ಆ ಮೂಲಕ ವಾಯು ಮಾಲಿನ್ಯದಿಂದ ಉಂಟಾಗುವ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಆಶಯ ಸಂಸ್ಥೆಗೆ ಇದೆ’ ಎಂದು ಅವರು ಪ್ರಕಟಿಸಿದರು.

‘ಬಸ್‌ಗಳಂಥ ಸಮೂಹ ಸಾರಿಗೆಯಲ್ಲೇ ಜನರು ಪ್ರಯಾಣಿಸುವುದರಿಂದ ಆಗುವ ಲಾಭಗಳ ಬಗ್ಗೆ ಪ್ರಚಾರ ಮಾಡಲು ಒಂದು ವರ್ಷದ ಹಿಂದೆ ಈ ದಿನಾಚರಣೆ ಆರಂಭಿಸಲಾಯಿತು. ಇನ್ನು ಮುಂದೆಯೂ ಇದು ಮುಂದುವರೆಯಲಿದೆ. ಅದೇ ರೀತಿ ಮೈಸೂರಿನಲ್ಲಿಯೂ ಬಸ್ ದಿನ ಆಚರಿಸಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

26 ರಾಷ್ಟ್ರೀಯ ಪ್ರಶಸ್ತಿಗಳು: ಸಾರಿಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಇಲ್ಲಿಯವರೆಗೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಸ್ಥೆಗಳಿಗೆ ದಕ್ಷತೆ ಹಾಗೂ ಗುಣಮಟ್ಟದ ನಿರ್ವಹಣೆಗಾಗಿ ರಾಷ್ಟ್ರಮಟ್ಟದಲ್ಲಿ 26 ಪ್ರಶಸ್ತಿಗಳು ಸಂದಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ಕೇಂದ್ರ ಸರ್ಕಾರ ಅತಿ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ ಎಂದು ಸ್ಮರಿಸಿದರು.

 ಕಾರು, ದ್ವಿಚಕ್ರ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬರುವ ನಾಲ್ಕು ವರ್ಷಗಳಲ್ಲಿ ಸಂಸ್ಥೆಯು 10,000 ಬಸ್‌ಗಳನ್ನು ಖರೀದಿಸಲಿದೆ ಎಂದು ಸಚಿವ ಅಶೋಕ ಹೇಳಿದರು. ಪ್ರಯಾಣಿಕರಿಗೆ ಹೃದಯ ತಪಾಸಣೆಯನ್ನು ಬಸ್ ನಿಲ್ದಾಣಗಳಲ್ಲೇ ಕೈಗೊಳ್ಳುವ ಕುರಿತು ಹೃದಯತಜ್ಞ ಡಾ.ದೇವಿಶೆಟ್ಟಿ ಅವರೊಂದಿಗೆ ಚರ್ಚಿಸಿದ್ದೇನೆ. ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ಕೇಂದ್ರವನ್ನು ಆರಂಭಿಸಲಾಗುವುದು. ಅಂಚೆ ಕಚೇರಿಗಳನ್ನೂ ಬಸ್ ನಿಲ್ದಾಣದಲ್ಲಿ ಸ್ಥಾಪಿಸುವ ಯೋಜನೆ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಮಾತನಾಡಿದರು.ಇಕೊ ವಾಚ್ ಸಂಸ್ಥಾಪಕ ಸುರೇಶ್ ಹೆಬ್ಳೀಕರ್ ಮಾತನಾಡಿ, ‘ಜಾಗತೀಕರಣ ನೀತಿ ಬಂದ ನಂತರ ಗ್ರಾಹಕ ಸಂಸ್ಕೃತಿ ಬೆಳೆಯುತ್ತಿದೆ. ಎಲ್ಲರಿಗೂ ದ್ವಿಚಕ್ರ ವಾಹನಗಳು. ಎಸಿ ನಿಯಂತ್ರಿತ ಕಾರುಗಳನ್ನು ಹೊಂದಲು ಬಯಸುತ್ತಾರೆ. ಅಂಥ ಮನೋಭಾವ ಬದಲಾಗಬೇಕು. ಬಿಎಂಟಿಸಿ ಬಸ್ ದಿನ ಆಚರಿಸುವುದರಿಂದ ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರುಗಳ ಓಡಾಟ ಕಡಿಮೆಯಾಗಿರುವುದು ಸಮಾಧಾನಕರ ಅಂಶ’ ಎಂದು ಸಂಸ್ಥೆಯ ಯತ್ನವನ್ನು ಶ್ಲಾಘಿಸಿದರು.

ಪರಿಸರವಾದಿ ಯಲ್ಲಪ್ಪ ರೆಡ್ಡಿ, ನಗರ ಭೂಸಾರಿಗೆ ನಿಗಮ ನಿರ್ದೇಶನಾಲಯದ ಆಯುಕ್ತೆ ಮಂಜುಳಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಜಮೀರ್ ಪಾಷಾ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ, ಬಿಎಂಟಿಸಿ ಭದ್ರತೆ ಹಾಗೂ ವಿಚಕ್ಷಕ ವಿಭಾಗದ ನಿರ್ದೇಶಕ ಅರುಣ್ ಚಕ್ರವರ್ತಿ, ಸಾರಿಗೆ ಇಲಾಖೆ ಆಯುಕ್ತ ಭಾಸ್ಕರರಾವ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT