ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಂ.ಶ್ರೀ ಪುನರ್‌ಮೌಲ್ಯೀಕರಣ ಅನಿವಾರ್ಯ: ರಾಗೌ

Last Updated 1 ಏಪ್ರಿಲ್ 2011, 6:25 IST
ಅಕ್ಷರ ಗಾತ್ರ

ಮೈಸೂರು: ಬಿ.ಎಂ.ಶ್ರೀಕಂಠಯ್ಯನವರ ವೈಭವೀಕರಣವನ್ನು ಬಿಟ್ಟು ನಿರ್ಲಿಪ್ತಭಾವದಿಂದ ಅವರನ್ನು ಪುನರ್‌ಮೌಲ್ಯೀಕರಣಕ್ಕೆ ಒಳಗಾಗಿಸುವುದು ತೀರಾ ಅನಿವಾರ್ಯವಾಗಿದೆ ಎಂದು ವಿಮರ್ಶಕ ಡಾ.ರಾಮೇಗೌಡ ಅವರು ಅಭಿಪ್ರಾಯಪಟ್ಟರು. ನಗರದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಬಿ.ಎಂ.ಶ್ರೀ ಅವರ 127ನೆ ಜನ್ಮದಿನೋತ್ಸವ ಹಾಗೂ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಿಎಂಶ್ರೀ ಇಂಗ್ಲಿಷ್ ಪ್ರಾಧ್ಯಾಪಕರಾದರೂ ಕನ್ನಡದ ಬಗ್ಗೆ ಅಪಾರವಾದ ಕಾಳಜಿಯನ್ನು ಇಟ್ಟುಕೊಂಡಿದ್ದರು. ಇದಕ್ಕೆ ಅವರು ಕನ್ನಡ ನಾಡು- ನುಡಿ ಸಂಸ್ಕೃತಿ ಕುರಿತು ಆಡಿರುವ ಮಾತುಗಳೇ ಸಾಕ್ಷಿಯಾಗಿವೆ. ಇಂಗ್ಲಿಷ್ ಪ್ರಾಧ್ಯಾಪಕರು ಎಂದರೆ ಇಂಗ್ಲಿಷರೆ ಎಂಬ ಕೀಳರಿಮೆಯನ್ನು ತೊಡೆದುಹಾಕಿ ಕನ್ನಡಿಗರೂ ಇಂಗ್ಲಿಷ್ ಪ್ರಾಧ್ಯಾಪಕರಾಗಬಲ್ಲರು ಎಂಬ ಆತ್ಮವಿಶ್ವಾಸ ತುಂಬಿದವರು ಬಿಎಂಶ್ರೀ   ಅವರಿಂದ ಕನ್ನಡ ನೆಲದಲ್ಲಿ ಹೊಸ ಜಾಗೃತಿ ಆರಂಭವಾಯಿತು ಎಂಬುದು ನಿಜವಾದರೂ ಕನ್ನಡದ ಒಟ್ಟು ಸಾಂಸ್ಕೃತಿಕ ಪಲ್ಲಟ ಆಗಲಿಲ್ಲ.

ಕನ್ನಡ ನವೋದಯ ಎಂದರೆ ಕೇವಲ ಇಂಗ್ಲಿಷ್ ನವೋದಯ ಅಲ್ಲ. ಇಂಗ್ಲಿಷ್ ನವೋದಯ, ಸಮಕಾಲೀನ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಇದರಿಂದಾದ ಸಾಮಾಜಿಕ ಸಂಚಲನಚಗಳು ಒಟ್ಟಾಗಿ ಕನ್ನಡ ನವೋದಯ. ಇಂತಹ ಸಮಗ್ರ ಕನ್ನಡ ನೆಲದ ನವೋದಯ ನೇಕಾರರಾಗಿ ಬಿಎಂಶ್ರೀ ಹೊರಹೊಮ್ಮಲಿಲ್ಲ. ಅವರನ್ನು ಪುನರ್ ಮೌಲ್ಯೀಕರಣದಿಂದ ಕಟ್ಟಿ ಕೊಳ್ಳಬೇಕು ಎಂದರು. 

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ.ಕೆ.ಎನ್.ಗಂಗಾನಾಯಕ್ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಪ್ರೊ.ಸುಧಾಕರ, ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಪಂಡಿತಾರಾಧ್ಯ, ಪ್ರೊ.ಸಿ.ನಾಗಣ್ಣ, ಪ್ರೊ.ಜಿ.ಆರ್.ತಿಪ್ಪೇಸ್ವಾಮಿ, ಪ್ರೊ.ಕೃಷ್ಣಮೂರ್ತಿ ಹನೂರು, ಡಾ.ಜಯಲಕ್ಷ್ಮೀ ಸೀತಾಪುರ, ಡಾ.ಅಕ್ಕಮಹಾದೇವಿ, ಡಾ.ಚಂದ್ರಶೇಖರ ಎನ್.ಬೆಟ್ಟಹಳ್ಳಿ, ಪಿ.ಮಣಿ, ಡಾ.ಗೌರೀಶ್, ಸಂಶೋಧಕರಾದ ಹೊಂಬಯ್ಯ, ಬಿ.ನಾಗವ್ವನವರ, ಯೋಗಿಶ್, ಕುಮಾರ್, ವಿಜಯ್, ಭಾರತಿ, ರುದ್ರೇಶ್ ಇತರರು ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT