ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ಎತ್ತರಕ್ಕೇರಲಿದೆ: ಚೆಟ್ರಿ

Last Updated 27 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಐ ಲೀಗ್‌ನ ಪ್ರಸಕ್ತ ಋತುನಲ್ಲಿ ಸವಾಲು ಒಡ್ಡಲಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ನವೋಲ್ಲಾಸದ ಬುಗ್ಗೆಯಂತಿದ್ದು, ಎತ್ತರದ ಸಾಧನೆ ತೋರಿದರೆ ಅಚ್ಚರಿ ಪಡುವಂತಹದ್ದೇನಿಲ್ಲ ಎಂದು ಈ ತಂಡದ ನಾಯಕ ಸುನಿಲ್ ಚೆಟ್ರಿ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಇಲ್ಲಿನ ಅಶೋಕ ನಗರದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬಿಎಫ್‌ಸಿ ಆಟಗಾರರ ಜತೆ ಸುನಿಲ್ ಅಭ್ಯಾಸ ನಡೆಸುತ್ತಿದ್ದಾರೆ. ಶನಿವಾರ ಬೆಳಿಗ್ಗೆ ಕ್ರೀಡಾಂಗಣದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರ ಜತೆ ಮಾತನಾಡಿದ ಅವರು `ಇಲ್ಲಿನ ವ್ಯವಸ್ಥೆ ಬಹಳ ಚೆನ್ನಾಗಿದೆ. ಆ್ಯಶ್ಲೆ ವೆಸ್ಟ್‌ವುಡ್ ಅವರ ಅನುಭವದ ಮಾತುಗಳು ಮತ್ತು ಅವರು ಕಲಿಸುತ್ತಿರುವ ಕೆಲವು ತಂತ್ರಗಳು ತಂಡದ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿದೆ' ಎಂದರು.

`ಈ ತಂಡದಲ್ಲಿ ಬಹುತೇಕ ಎಲ್ಲರೂ ಪರಸ್ಪರ ಹೊಸಬರೇ. ಆದರೆ ಕೆಲವೇ ದಿನಗಳಲ್ಲಿ ಒಂದು ಬಲಿಷ್ಠ ತಂಡವಾಗಿ ನಾವೆಲ್ಲರೂ ಹೊರಹೊಮ್ಮಲಿದ್ದೇವೆ. ಲೀಗ್ ಹಣಾಹಣಿಗೆ ಇನ್ನೂ ಸಮಯವಿದೆ. ಅದರೊಳಗೆ ನಾವೆಲ್ಲರೂ ಅತ್ಯುತ್ತಮವಾದ ಹೊಂದಾಣಿಕೆಯ ಆಟವಾಡಲಿದ್ದೇವೆ' ಎಂದರು.

`ಈ ತಂಡದಲ್ಲಿ ಹದಿ ಹರೆಯದ ಆಟಗಾರರೇ ಹೆಚ್ಚಾಗಿದ್ದು, ಎಲ್ಲರಲ್ಲೂ ಹುಮ್ಮಸ್ಸು ತುಂಬಿ ತುಳುಕುತ್ತಿದೆ. ಇದು ಮುಂದಿನ ದಿನಗಳಲ್ಲಿ ತಂಡ ಅದ್ಭುತ ಸಾಮರ್ಥ್ಯ ತೋರಲು ನೆರವಾಗಲಿದೆ' ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ `ಗೋವಾದ ಬಗ್ಗೆ ನನಗೆ ತುಂಬಾ ಪ್ರೀತಿ. ಚರ್ಚಿಲ್ ಬ್ರದರ್ಸ್ ಜತೆಗಿನ ದಿನಗಳನ್ನು ಮರೆಯಲಾರೆ. ಆದರೆ ಬೆಂಗಳೂರು ಕೂಡಾ ನನಗೆ ಬಹಳ ಇಷ್ಟ. ಇದೀಗ ಈ ಕ್ಲಬ್‌ನ ಆಡಳಿತ ಮಂಡಳಿ ತಂಡಕ್ಕೆ ಮಾಡಿರುವ ವ್ಯವಸ್ಥೆ ಆಟಗಾರರಿಗೆ ಬಹಳ ಉತ್ತೇಜನಕಾರಿಯಾಗಿದೆ' ಎಂದರು.

ಕಳೆದ ಒಂದು ದಶಕದಿಂದ ಭಾರತದ ಅಗ್ರಮಾನ್ಯ ಆಟಗಾರರಾಗಿರುವ ಸುನಿಲ್ ಚೆಟ್ರಿ ಪ್ರಸಕ್ತ ಭಾರತ ತಂಡದ ನಾಯಕರೂ ಹೌದು.

ಮಹತ್ವದ ಸಾಧನೆಗೆ ಅವಕಾಶ ಇದೆ: `ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ಆಶಯ ನನಗೆ ಬಹಳ ಇಷ್ಟವಾದುದರಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ' ಎಂದು ಬಿಎಫ್‌ಸಿಯ ಪ್ರಧಾನ ಕೋಚ್ ಆ್ಯಶ್ಲೆ ವೆಸ್ಟ್‌ವುಡ್ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

ಯೂರೊಪ್‌ನ ಪ್ರತಿಷ್ಠಿತ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಮಾಜಿ ಆಟಗಾರರಾದ ವೆಸ್ಟ್‌ವುಡ್, ಇಂಗ್ಲೆಂಡ್‌ನಲ್ಲಿ ಒಂದೆರಡು ತಂಡಗಳಿಗೆ ಹಿಂದೆ ಸಹಾಯಕ ಕೋಚ್ ಆಗಿ ಕಾರ್ಯ ನಿರ್ವಹಿಸಿದವರು. `ಭಾರತದ ಆಟಗಾರರ ಬಗ್ಗೆ ನನಗೆ ಸಂಪೂರ್ಣವಾಗಿ ಗೊತ್ತಿಲ್ಲ. ಆದರೆ ಏಷ್ಯಾದಲ್ಲಿ ಫುಟ್‌ಬಾಲ್ ಚಟುವಟಿಕೆ, ತಂತ್ರ ಇತ್ಯಾದಿ ಬಗ್ಗೆ ನನಗೆ ಗೊತ್ತಿದೆ' ಎಂದರು.

`ಪ್ರಸಕ್ತ ಬಿಎಫ್‌ಸಿಯಲ್ಲಿ ಉತ್ಸಾಹಿ ಆಟಗಾರರ ಗುಂಪು ಇದೆ. ಇಡೀ ತಂಡ ಚುರುಕುತನದ ಮಹಾಪೂರದಂತಿದೆ. ಈ ತಂಡವನ್ನು ಭಾರತದ ಮಟ್ಟಿಗೆ ಎತ್ತರಕ್ಕೇರಿಸುವ ಜತೆಗೆ ನಾನೂ ಒಬ್ಬ ಪರಿಪೂರ್ಣ ಕೋಚ್ ಆಗಿ ಬೆಳೆಯಲು ಬಹಳಷ್ಟು ಅವಕಾಶ ಇಲ್ಲಿದೆ' ಎಂದೂ ವೆಸ್ಟ್‌ವುಡ್ ಹೇಳಿದರು.

ಬಿಎಫ್‌ಸಿ ಆಟಗಾರರು ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರಲ್ಲದೆ, ಈಗಾಗಲೇ ಎರಡು ದಿನ ಕಂಠೀರವ ಕ್ರೀಡಾಂಗಣದಲ್ಲಿ ಫಿಟ್‌ನೆಸ್‌ಗಾಗಿ ವ್ಯಾಯಮ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT