ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಪಿಗೆ ಬ್ರಾಹ್ಮಣ ಮತಗಳು ನಿರ್ಣಾಯಕ

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಾರಣಾಸಿ: `ಆಜ್ ಮನು ಹೋತಾ ತೋ, ಓ ಬಿ ಹಮಾರ ಪಾರ್ಟಿ ಮೇ ಹೋತಾ~ (ಈಗ `ಮನು~ ಇದ್ದಿದ್ದರೆ ಆತ ಕೂಡಾ ನಮ್ಮ ಪಕ್ಷದಲ್ಲಿ ಇರುತ್ತಿದ್ದ) ಎಂದು ಮುಂದಿನ ಮಾತಿಗೆ ಅವಕಾಶವೇ ನೀಡದಂತೆ ಸಜ್ಜನ್ ಮಿಶ್ರಾ ನನ್ನ ಬಾಯಿ ಮುಚ್ಚಿಸಿದ. ಇತ್ತೀಚೆಗಷ್ಟೇ ಅಗಲಿದ ತಂದೆಯ ಪಿಂಡ ಗಂಗೆಯಲ್ಲಿ ಬಿಟ್ಟು ಕೊಳಕು ನೀರಲ್ಲಿ ಮುಳುಗಿ ಬಿಸಿಲಿಗೆ ಮೈಯೊಡ್ಡಿ ಕೂತಿದ್ದ ಈ ಯುವಕ ಉನ್ನೌವ್‌ನಿಂದ ಬಂದವ. ಉಳಿದೆಲ್ಲ ಪಕ್ಷಗಳನ್ನು `ಮನುವಾದಿಪಕ್ಷ~ಗಳೆಂದು ಹೀಗಳೆಯುತ್ತಾ ಬಂದ ಬಿಎಸ್‌ಪಿಗೆ ಕಳೆದ ಬಾರಿ ಮತಹಾಕಿದ್ದ ಮಿಶ್ರಾ ಈಗ `ದಲಿತ್-ಬ್ರಾಹ್ಮಣ್ ಭಾಯಿಚಾರಾ~ದ ಬೆಂಬಲಿಗ.

`ಬ್ರಾಹ್ಮಣ್ ಕೋ ಸಾತ್ ಮೇ ಲೇನೇ ಕೆ ಬಾದ್ ಬಿಎಸ್‌ಪಿ ಕೋ ಲುಕ್ಸಾನ್ ತೋ ನಹೀಂ ಹುವಾ ನಾ ?~ (ಬ್ರಾಹ್ಮಣರ ಜತೆ ಸೇರಿದ ನಂತರ ಬಿಎಸ್‌ಪಿಗೆ ನಷ್ಟ ಆಗಿಲ್ಲವಲ್ಲಾ?)-ಮಿಶ್ರಾನ ಈ ಪ್ರಶ್ನೆ ಕೂಡಾ ಸರಿಯಾಗಿಯೇ ಇತ್ತು. ಹದಿನಾರು ವರ್ಷಗಳ ನಂತರ ಕಳೆದ ಚುನಾವಣೆಯಲ್ಲಿ ಮೊದಲ ಬಾರಿ ಉತ್ತರಪ್ರದೇಶದಲ್ಲಿ ಒಂದೇ ಪಕ್ಷಕ್ಕೆ ಸರ್ಕಾರ ರಚಿಸುವಷ್ಟು ಬಹುಮತ ಸಿಕ್ಕಿದ್ದನ್ನು ಆತ ಪರೋಕ್ಷವಾಗಿ ಪ್ರಸ್ತಾಪಿಸಿದ್ದ. `ಜಮಾನ ಬದಲ್‌ಗಯಾ ಸಾಬ್, ಉಸ್‌ಕೆ ಸಾಥ್ ಚಲ್‌ನಾ ಹೈ~ ಎಂದು ತತ್ವಜ್ಞಾನಿಯಂತೆ ಮಾತನಾಡಿದ ಆತ ಒಣಗಿದ ಬಟ್ಟೆಯನ್ನು ಎತ್ತಿಕೊಂಡು ಹೊರಟುಬಿಟ್ಟ.

ಮಿಶ್ರಾನ ರಾಜಕೀಯ ಪ್ರಜ್ಞಾವಂತಿಕೆ ಅಚ್ಚರಿ ಉಂಟು ಮಾಡಲಿಲ್ಲ, ಉಳಿದೆಲ್ಲರಿಗಿಂತ ಮೊದಲೇ ಶಿಕ್ಷಣದ ಅವಕಾಶ ಪಡೆದ ಬ್ರಾಹ್ಮಣರಲ್ಲಿ ಅದು ಮೊದಲಿನಿಂದಲೂ ಇತ್ತು. ಅಚ್ಚರಿ ಉಂಟು ಮಾಡಿರುವುದು ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ಭಾಗವೇ ಆಗಿರುವ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಇಲ್ಲಿನ ಬ್ರಾಹ್ಮಣ ಮತ್ತು ದಲಿತ `ಸೋದರತ್ವ~ದ ಜಾತಿ ಸೂತ್ರ.
 
ಏಳುವರ್ಷಗಳ ಹಿಂದೆ ಲಖನೌದಲ್ಲಿ ಬಿಎಸ್‌ಪಿ `ಬ್ರಾಹ್ಮಣ ಮಹಾ ರ‌್ಯಾಲಿ~ ನಡೆಸಿದಾಗ ಬಹಳಷ್ಟು ಸಮಾಜವಿಜ್ಞಾನಿಗಳು ಕೂಡಾ ಬಿಎಸ್‌ಪಿ ಕಾರ್ಯತಂತ್ರದ ಯಶಸ್ಸಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಮಾಯಾವತಿ ನಿರೀಕ್ಷಿಸಿದಷ್ಟು ಬ್ರಾಹ್ಮಣ ಮತಗಳು ಬರಲಾರದು, ದಲಿತ ಮತದಾರರು ಪಕ್ಷ ಬಿಟ್ಟು ಹೋಗಬಹುದು ಇತ್ಯಾದಿ ಅಪಸ್ವರಗಳು ಆಗ ಕೇಳಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆ ಈ ಲೆಕ್ಕಚಾರಗಳನ್ನೆಲ್ಲ ತಲೆಕೆಳಗೆ ಮಾಡಿತ್ತು.

 1995ರಲ್ಲಿ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಮುರಿದುಬಿದ್ದ ನಂತರ ಬಿಜೆಪಿ ಜತೆ ಬಿಎಸ್‌ಪಿ ಕೈಜೋಡಿಸಿದಾಗಲೇ ಈ ಹೊಸ ಜಾತಿ ಸಮೀಕರಣಕ್ಕೆ ಬೀಜಾಂಕುರವಾಗಿತ್ತು. ಕಾನ್ಸಿರಾಮ್ ಅವರು ಬಿಜೆಪಿ ಜತೆಗಿನ ಮೈತ್ರಿಯನ್ನು ಸಮರ್ಥಿಸುತ್ತಾ ` ದಲಿತರ ಪಾಲಿಗೆ ಬ್ರಾಹ್ಮಣರಿಗಿಂತ ಠಾಕೂರ್-ಯಾದವ್ ಮೊದಲಾದ ಮಧ್ಯಮ ಜಾತಿಗಳೇ ಹೆಚ್ಚು ಅಪಾಯಕಾರಿ. ಬದಲಾಗಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತರು ಮತ್ತು ಬ್ರಾಹ್ಮಣರ ನಡುವೆ ಹಿತಾಸಕ್ತಿಗಳ ಸಂಘರ್ಷ ಹೆಚ್ಚಿಲ್ಲ. ಆದರೆ ಇದೇ ಮಾತನ್ನು ಭೂ ಒಡೆತನ ಹೊಂದಿರುವ ಠಾಕೂರ್ ಇಲ್ಲವೇ ಇತರ ಹಿಂದುಳಿದ ಜಾತಿಗಳಾದ ಯಾದವ್,ಕುರ್ಮಿ,ಕೊಯಿರಿಗಳ ಬಗ್ಗೆ ಹೇಳುವ ಹಾಗಿಲ್ಲ~ ಎಂದು ಹೇಳಿದ್ದರು.

ರಾಜ್ಯದಲ್ಲಿ ಅಧಿಕಾರ ಹಿಡಿಯಲೇಬೇಕಾಗಿದ್ದರೆ ಇಂತಹದ್ದೊಂದು ಸಾಹಸವನ್ನೋ, ದುಸ್ಸಾಹಸವನ್ನೋ ಬಿಎಸ್‌ಪಿ ಮಾಡಲೇಬೇಕಿತ್ತು. ಕೇವಲ ಶೇಕಡಾ 21ರಷ್ಟಿರುವ ದಲಿತರ ಮತಗಳನ್ನು ಕಟ್ಟಿಕೊಂಡು ಸ್ವಂತಬಲದಿಂದ ಸರ್ಕಾರ ರಚಿಸುವುದು ಅಸಾಧ್ಯ ಎಂದು ಕಾನ್ಸಿರಾಮ್ ಅವರಿಗೆ ಗೊತ್ತಿತ್ತು. 1985ರಲ್ಲಿ ಮೊದಲಬಾರಿ ಚುನಾವಣೆಗೆ ಸ್ಪರ್ಧಿಸಿದಂದಿನಿಂದ ಹೆಚ್ಚಾಗುತ್ತಾ ಬಂದಿದ್ದ ಬಿಎಸ್‌ಪಿ ಮತಪ್ರಮಾಣ 2002ರಲ್ಲಿ ಶೇಕಡಾ 23ಕ್ಕೆ ತಲುಪಿತ್ತು.
 
ಇದನ್ನು ಕನಿಷ್ಠ ಶೇಕಡಾ 5-6ರಷ್ಟು ಹೆಚ್ಚಿಸದೆ ಹೋದರೆ ಸ್ವಂತಬಲದಿಂದ ಸರ್ಕಾರ ರಚಿಸುವುದು ಸಾಧ್ಯ ಇಲ್ಲ ಎಂದು ಸ್ಪಷ್ಟವಾದ ನಂತರವೇ ಬಿಎಸ್‌ಪಿ ಬಹಳ ಗಂಭೀರವಾಗಿ `ಬ್ರಾಹ್ಮಣ್ ಜೋಡೋ~ ಆಂದೋಲನವನ್ನು ಪ್ರಾರಂಭಿಸಿದ್ದು. ದೇಶದ ಜನಸಂಖ್ಯೆಯಲ್ಲಿ ಶೇಕಡಾ ನಾಲ್ಕರಷ್ಟಿರುವ ಬ್ರಾಹ್ಮಣರು ಉತ್ತರಪ್ರದೇಶದಲ್ಲಿ ಮಾತ್ರ ಶೇಕಡಾ ಹತ್ತರಷ್ಟಿರುವುದು ಕೂಡಾ ಬಿ ಎಸ್‌ಪಿ ಈ ಹೊಸ ಜಾತಿ ಸೂತ್ರ ಹೆಣೆಯಲು ಪ್ರೇರಣೆ ನೀಡಿರಬಹುದು.

ಉತ್ತರಪ್ರದೇಶದ ಸಾಮಾಜಿಕ ಸ್ಥಿತಿ ಕೂಡಾ ಮಾಯಾವತಿ ಪ್ರಯೋಗಕ್ಕೆ ಹದವಾಗಿತ್ತು. ಪಾರಂಪರಿಕವಾಗಿ ಠಾಕೂರರ ದಬ್ಬಾಳಿಕೆಯಿಂದ ರೋಸಿಹೋಗಿದ್ದ ಬ್ರಾಹ್ಮಣರಲ್ಲಿ ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಧಿಕಾರ ಪಡೆದು ಬಲಾಢ್ಯರಾಗಿುವ ಯಾದವರ ಬಗ್ಗೆ ಅಸಹನೆ ಹೆಚ್ಚಾಗುತ್ತಿತ್ತು. ರಾಜ್ಯದ ಬಿಜೆಪಿ ಕೂಡಾ ಠಾಕೂರರ ನಿಯಂತ್ರಣದಲ್ಲಿಯೇ ಇದ್ದ ಕಾರಣ ಅಲ್ಲಿಯೂ ಅವಕಾಶಗಳು ಇರಲಿಲ್ಲ.

ಇಂತಹ ಸಮಯದಲ್ಲಿ ಯಾದವ ಮತ್ತು ಠಾಕೂರರನ್ನು ಎದುರು ಹಾಕಿಕೊಂಡ ಮಾಯಾವತಿಯವರ ಜತೆ ಸೇರಿಕೊಳ್ಳುವುದರಲ್ಲಿ ಬ್ರಾಹ್ಮಣರಿಗೂ ಲಾಭ ಇತ್ತು. ಜಾತಿ ಆಧರಿತ ರಾಜಕಾರಣದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ತಮ್ಮ ಜಾತಿಬಲದಿಂದ ರಾಜಕೀಯ ಅಧಿಕಾರ ಪಡೆಯುವುದು ಸಾಧ್ಯವೇ ಇಲ್ಲ ಎಂದು ತಿಳಿದುಕೊಂಡಿದ್ದ ಬ್ರಾಹ್ಮಣರಿಗೆ  ಮಾಯಾವತಿಯವರು ನೀಡಿದ ಅವಕಾಶ ಮುಚ್ಚಿಹೋಗಿದ್ದ ರಾಜಕೀಯ ಕ್ಷೇತ್ರದ ಬಾಗಿಲು ತೆರೆದಿತ್ತು.

ಉತ್ತರಪ್ರದೇಶದಲ್ಲಿ ದಲಿತರು ಮತ್ತು ಬ್ರಾಹ್ಮಣರು ಒಟ್ಟಾಗಿ ಮತಹಾಕುವುದು ಹೊಸತೇನಲ್ಲ. ದಶಕಗಳ ಕಾಲ ಹೆಚ್ಚು ಕಡಿಮೆ 1985ರ ವರೆಗೆ ಕಾಂಗ್ರೆಸ್ ಓಟ್ ಬ್ಯಾಂಕಿನಲ್ಲಿ ಮುಸ್ಲಿಮರ ಜತೆಯಲ್ಲಿ ಇದ್ದದ್ದು ಈ ಎರಡು ಜಾತಿಗಳು. ಮತದಾರರ ಹಿನ್ನೆಲೆಯನ್ನು ನೋಡಿದರೆ  ಮೂರು ದಶಕಗಳ ಹಿಂದಿನ ಕಾಂಗ್ರೆಸ್ ಪಕ್ಷವೇ ಈಗಿನ ಬಿಎಸ್‌ಪಿ. ಕಾಂಗ್ರೆಸ್ ಪಕ್ಷವನ್ನು ಪಾರಂಪರಿಕವಾಗಿ ಬೆಂಬಲಿಸುತ್ತಾ ಬಂದಿದ್ದ ಬಹುತೇಕ ದಲಿತರು ಮತ್ತು ದೊಡ್ಡ ಪ್ರಮಾಣದಲ್ಲಿ ಬ್ರಾಹ್ಮಣರು ಹಾಗೂ ಸಣ್ಣ ಪ್ರಮಾಣದಲ್ಲಿ ಮುಸ್ಲಿಮರು ಬಿಎಸ್‌ಪಿಯನ್ನು ಕಳೆದ ಚುನಾವಣೆಯಲ್ಲಿ ಬೆಂಬಲಿಸಿದ್ದರು. ಇವರ ಜತೆಗೆ ಅತೀ ಹಿಂದುಳಿದ ಜಾತಿಗಳಿಗೂ ಅವಕಾಶ ನೀಡಿ ಮಾಯಾವತಿ ತಮ್ಮ ಜತೆ ಇಟ್ಟುಕೊಂಡಿದ್ದಾರೆ.

ಈ ಪ್ರಯೋಗವನ್ನು ಕೂಡಾ ಮಾಯಾವತಿ ಎಚ್ಚರಿಕೆಯಿಂದ ಮಾಡಿದ್ದಾರೆ. ಇಡೀ ರಾಜ್ಯ ಪ್ರವಾಸ ಮಾಡಿ ಬ್ರಾಹ್ಮಣರಲ್ಲಿ ತಮ್ಮ ಬಗ್ಗೆ ವಿಶ್ವಾಸ ಹುಟ್ಟುವಹಾಗೆ ಮತ್ತು ದಲಿತರಲ್ಲಿ ಅಭದ್ರತೆ-ಸಂಶಯ ಮೂಡದಂತೆ ನೋಡಿಕೊಂಡಿದ್ದಾರೆ. ಜಿಲ್ಲೆಜಿಲ್ಲೆಗಳಲ್ಲಿ ಭಾಯಿಚಾರಾ ಸಮ್ಮೇಳನಗಳನ್ನು ನಡೆಸಿದ್ದಾರೆ. 2007ರಲ್ಲಿ 86 ಬ್ರಾಹ್ಮಣರಿಗೆ ಟಿಕೆಟ್‌ನೀಡಿದ್ದರು, ಅವರಲ್ಲಿ 43 ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ 74 ಬ್ರಾಹ್ಮಣರಿಗೆ ಟಿಕೆಟ್ ನೀಡಿದ್ದಾರೆ. ಬ್ರಾಹ್ಮಣರಿಗೆ ಟಿಕೆಟ್ ನೀಡುವಾಗಲೂ ಕಳೆದ 2-3 ಚುನಾವಣೆಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಸೋತಿರುವ ಕ್ಷೇತ್ರಗಳನ್ನು ಆರಿಸಿ ನೀಡಿದ್ದಾರೆ. ಈ ಕಾರ್ಯತಂತ್ರ ದಲಿತರ ಮತಗಳನ್ನು ಪಕ್ಷ ನಿಲ್ಲಿಸುವ ಯಾವುದೇ ಜಾತಿಯ ಅಭ್ಯರ್ಥಿಗೆ ಸುಲಭದಲ್ಲಿ ವರ್ಗಾವಣೆ ಮಾಡುವ ಮಾಯಾವತಿ ಅವರ ರಾಜಕೀಯ ಶಕ್ತಿಯಿಂದಾಗಿ ಹಿಂದಿನ ಚುನಾವಣೆಯಲ್ಲಿ ಯಶಸ್ಸು ಕಂಡಿತ್ತು. ಈ ಬಾರಿ?

ಮಾಯಾವತಿ ಪಾಲಿನ ಹೊಸ ಮಗ್ಗುಲಮುಳ್ಳಾಗಿ ಬಿಎಸ್‌ಪಿಯ ಬ್ರಾಹ್ಮಣ ಮುಖವೆಂದೇ ಬಣ್ಣಿಸಲಾಗುತ್ತಿರುವ ರಾಜ್ಯಸಭಾ ಸದಸ್ಯ ಸತೀಶ್‌ಚಂದ್ರ ಮಿಶ್ರಾ ಕಾಡುವ ಸಾಧ್ಯತೆಗಳಿವೆ. ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ಮಿಶ್ರಾ ಅವರ ಪಾತ್ರ ದಲಿತರಲ್ಲಿ ಅಸಮಾಧಾನ ಮೂಡಿಸಿದೆ. ಇದೇ ವೇಳೆ ಕೈಗೆ ಸಿಗದಷ್ಟು ಮೇಲೇರಿಹೋಗಿರುವ ಮಿಶ್ರಾ ಬಗ್ಗೆ ಬ್ರಾಹ್ಮಣರಲ್ಲಿಯೂ ಒಳ್ಳೆಯ ಅಭಿಪ್ರಾಯ ಇಲ್ಲ. `ಮಿಶ್ರಾ ಅವರಿಂದ ಈ ಬಾರಿ ಬ್ರಾಹ್ಮಣ ಮತಗಳು ಬಿಎಸ್‌ಪಿಗೆ ಹೆಚ್ಚು ಬರಲಾರದು, ಅವರ ಹುಟ್ಟೂರಾದ ಕಾನ್ಪುರದಲ್ಲಿಯೇ ಅವರಿಗೆ ವಿರೋಧ ಇದೆ~ ಎಂದು ಅವರ ವಿರುದ್ದದ ಆರೋಪಪಟ್ಟಿಯನ್ನೇ ಮಂಡಿಸಿದವರು ಕನ್ಯಾಕುಬ್ಜ್ ಬ್ರಾಹ್ಮಣ ಸಭಾದ ಕಾರ್ಯದರ್ಶಿ ರಾಜಾರಾಮ್ ಶುಕ್ಲಾ. ಚುನಾವಣಾ ಪ್ರಚಾರದಲ್ಲಿ ಮಾಯಾವತಿ ನಂತರದ ಸ್ಥಾನದಲ್ಲಿರುವ ಮಿಶ್ರಾ ಅವರ ಅನೇಕ ಪ್ರಚಾರ ಸಭೆಗಳಿಗೆ ಸೇರಿರುವ ಜನರ ಸಂಖ್ಯೆ 100-200 ದಾಟಿಲ್ಲ. ಬ್ರಾಹ್ಮಣರು ಹಳೆಯ ಪಕ್ಷಗಳ ಕಡೆ ನೋಡುತ್ತಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT