ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಕೋರಿಕೆ: ವರಿಷ್ಠರತ್ತ ನೋಟ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷದ ರಾಷ್ಟ್ರೀಯ ನಾಯಕರು ಹೇಳುವವರೆಗೂ ಮುಖ್ಯಮಂತ್ರಿ ಸ್ಥಾನ ಇಲ್ಲ. ಅಲ್ಲಿಯವರೆಗೂ ದಯವಿಟ್ಟು ಪಕ್ಷ ಮತ್ತು ಸರ್ಕಾರದ ಜತೆ ಸಹಕರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಮುಖಂಡರು ಕೋರಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ತಡರಾತ್ರಿವರೆಗೂ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಮುಖ್ಯಂಮತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖಂಡರಾದ ಸಂತೋಷ್, ಸತೀಶ್ ಸಭೆಯಲ್ಲಿ ಭಾಗವಹಿಸಿದ್ದರು. 

 ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿ, ತಮ್ಮ ವಿರುದ್ಧ ಗಂಭೀರವಾದ ಆರೋಪಗಳಿಲ್ಲ. ಹೀಗಾಗಿ ಮತ್ತೆ ಮುಖ್ಯಮಂತ್ರಿ ಮಾಡಬೇಕು ಎನ್ನುವ ಪ್ರಸ್ತಾಪ ಇಟ್ಟರು ಎನ್ನಲಾಗಿದೆ.

 ಇದಕ್ಕೆ ಪಕ್ಷದ ಮುಖಂಡರು `ನೀವು ಮತ್ತೆ ಸಿ.ಎಂ ಆಗುವುದಕ್ಕೆ ನಮ್ಮ ವಿರೋಧವೇನೂ ಇಲ್ಲ. ಆದರೆ, ಅದನ್ನು ಪಕ್ಷದ ವರಿಷ್ಠರು ಹೇಳಲಿ~ ಎಂದಿದ್ದಾರೆ. 

  ಇದಕ್ಕೆ ಯಡಿಯೂರಪ್ಪ ಅವರು,   `ವರಿಷ್ಠರನ್ನು ಮನವೊಲಿಸುವ ಕೆಲಸವನ್ನೂ ನೀವೇ ಮಾಡಬೇಕು~ ಎಂದು ಸೂಚಿಸಿದ್ದಾರೆ. 

 ಆದರೆ ಪಕ್ಷದ ಮುಖಂಡರು, `ರಾಜ್ಯದ ಪರಿಸ್ಥಿತಿ ಬಗ್ಗೆ ಅವರಿಗೇ ಎಲ್ಲವೂ ಗೊತ್ತಿದೆ. ಅವರಿಗೆ ವಿವರಿಸುವುದು ಏನಿದೆ~ ಎಂದು ಕೇಳಿದ್ದಾರೆ.

ನಂತರ ಸದಾನಂದ ಗೌಡ ಅವರ ವಿರುದ್ಧ ಪ್ರತಿನಿತ್ಯ ಕೆಲ ಸಚಿವರು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆಯೂ ಚರ್ಚಿಸಲಾಗಿದೆ.

ಬೀಳಗಿ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ತಮಗೆ ಅವಮಾನ ಮಾಡಿದರು ಎಂದು ಮುಖ್ಯಮಂತ್ರಿ ಅವರೇ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಯಡಿಯೂರಪ್ಪ, `ವಿಷಯ ತಿಳಿದ ತಕ್ಷಣವೇ ನಿರಾಣಿ ಅವರಿಗೆ ಬೈಯ್ದೆ~ ಎಂದು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ಪಕ್ಷದ ಮುಖಂಡರು `ನೀವು ಬೈಯ್ದಿದ್ದು ಅವರಿಗೆ ಮಾತ್ರ ಗೊತ್ತಾಗಿದೆ. ಆದರೆ ನಿರಾಣಿ ಅವರು ಮುಖ್ಯಮಂತ್ರಿಯವರಿಗೆ ಅವಮಾನ ಮಾಡಿದ್ದು ಇಡೀ ರಾಜ್ಯಕ್ಕೆ ಗೊತ್ತಾಯಿತು~ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.
ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳುವ ಪ್ರವಾಸದಲ್ಲಿ ಎಲ್ಲರೂ ಒಟ್ಟಿಗೆ ಭಾಗವಹಿಸಬೇಕು ಎಂಬ ತೀರ್ಮಾನಕ್ಕೆ ಮುಖಂಡರು ಬಂದರು ಎಂಬುದಾಗಿ ಗೊತ್ತಾಗಿದೆ.

ವಿಧಾನಮಂಡಲ ಅಧಿವೇಶನದ ಬಳಿಕ ಅಂದರೆ, ಫೆಬ್ರುವರಿ 13 ಮತ್ತು 14ರಂದು ಎಲ್ಲ ಶಾಸಕರು, ಸಂಸದರಿಗೆ ತರಬೇತಿ ಕಾರ್ಯಕ್ರಮವನ್ನು ಕೂಡ ಆಯೋಜಿಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT