ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ, ಪುತ್ರರಿಗೆ ಜಾಮೀನು

ಜಿಂದಾಲ್‌ನಿಂದ ಹಣ ಪಡೆದ ಪ್ರಕರಣ
Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಬೆಂಗಳೂರು: ಜಿಂದಾಲ್ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ಕಾನೂನು ಬಾಹಿರವಾಗಿ 40 ಕೋಟಿ ರೂಪಾಯಿ ಹಣ ಪಡೆದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಷರತ್ತಿನ ಜಾಮೀನು ನೀಡಿದೆ.

ಯಡಿಯೂರಪ್ಪ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಆರ್.ಎನ್. ಸೋಹನ್ ಕುಮಾರ್, ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಸೇರಿ 13 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಎಂ.ಸಿ. ಬಿರಾದಾರ ಅವರು ಜಾಮೀನು ಮಂಜೂರು ಮಾಡಿದರು.

ಆರೋಪಿಗಳು ತಲಾ ರೂ ಎರಡು ಲಕ್ಷ ಮೊತ್ತದ ಬಾಂಡ್ ನೀಡಬೇಕು, ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು, ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳಬಾರದು, ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

`ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿ ಆಗಿದೆ. ಈ ಸಂದರ್ಭದಲ್ಲಿ ಸಾಕ್ಷ್ಯಗಳನ್ನು ನಾಶಮಾಡಲಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಅಲ್ಲದೆ, ಯಡಿಯೂರಪ್ಪ, ಅವರ ಪುತ್ರರು, ಅಳಿಯ, ಕೃಷ್ಣಯ್ಯ ಶೆಟ್ಟಿ ಮತ್ತಿತರ ಆರೋಪಿಗಳಲ್ಲಿ ಯಾರೂ ದೇಶ ಬಿಟ್ಟು ತೆರಳುವುದಿಲ್ಲ' ಎಂದು ಯಡಿಯೂರಪ್ಪ ಪರ ವಕೀಲರು ವಾದಿಸಿದರು. ನ್ಯಾಯಾಲಯ ಇದನ್ನು ಮಾನ್ಯ ಮಾಡಿತು. ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.

ಕೋರ್ಟ್‌ನಲ್ಲಿ: ಬೆಳಿಗ್ಗೆ 11.10ಕ್ಕೆ ವಿಚಾರಣೆ ಆರಂಭವಾಯಿತು. ಯಡಿಯೂರಪ್ಪ ವಿಚಾರಣೆ ಆರಂಭಕ್ಕೂ ಮುನ್ನ ಕೋರ್ಟ್ ಹೊರಗೆ ಕೆಲ ಹೊತ್ತು ನಿಂತಿದ್ದರು. ವಿಚಾರಣೆ ಆರಂಭವಾದ ತಕ್ಷಣ, ಕೋರ್ಟ್ ಹಾಲ್ ಪ್ರವೇಶಿಸಿ ಹಿಂದಿನ ಬೆಂಚ್‌ನಲ್ಲಿ ಮಕ್ಕಳ ಜತೆ ಕುಳಿತುಕೊಂಡರು. ಅವರ ಪಕ್ಕದಲ್ಲೇ ಕೃಷ್ಣಯ್ಯ ಶೆಟ್ಟಿ ಅವರೂ ಕುಳಿತರು. ಮಧ್ಯಾಹ್ನ 1.20ರವರೆಗೂ ಇವರೆಲ್ಲ ಕೋರ್ಟ್‌ನಲ್ಲೇ ಇದ್ದರು.

ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಕ್ಟೋಬರ್ 16ರಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಯಡಿಯೂರಪ್ಪ, ಅವರ ಪುತ್ರರು, ಅಳಿಯ, ಕೃಷ್ಣಯ್ಯ ಶೆಟ್ಟಿ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿತ್ತು. ಜಿಂದಾಲ್ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ, ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಸೇರಿದ `ಪ್ರೇರಣಾ' ಟ್ರಸ್ಟ್‌ನ ಹೆಸರನ್ನೂ ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

`ರಾಚೇನಹಳ್ಳಿಯಲ್ಲಿ ಸರ್ಕಾರ ಸ್ವಾಧೀನ ಮಾಡಿಕೊಂಡಿದ್ದ ಭೂಮಿಯನ್ನು 20 ಲಕ್ಷ ರೂಪಾಯಿಗೆ ಖರೀದಿ ಮಾಡಿದ ಯಡಿಯೂರಪ್ಪ ಪುತ್ರರು, ಅದನ್ನು 40 ಕೋಟಿ ರೂಪಾಯಿಗೆ ಜಿಂದಾಲ್ ಸೌತ್‌ವೆಸ್ಟ್ ಕಂಪೆನಿಗೆ ಮಾರಾಟ ಮಾಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ರಾಚೇನಹಳ್ಳಿಯ ಜಮೀನನನ್ನು ಸ್ವಾಧೀನ ಪ್ರಕ್ರಿಯೆಯಿಂದ ನಿಯಮ ಬಾಹಿರವಾಗಿ ಕೈಬಿಟ್ಟಿದ್ದಾರೆ' ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT