ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ- ಮಠಾಧೀಶರ ಭೇಟಿ: ನಾಚಿಕೆಗೇಡು

Last Updated 22 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಬಳ್ಳಾರಿ: ನಾಡಿನ ಪ್ರಮುಖ ಮಠಾಧೀಶರು ಆಸ್ಪತ್ರೆಗೆ ತೆರಳಿ ಬಂಧಿತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ನಾಚಿಕೆಗೇಡು ಎಂದು ಮಾಜಿ ಶಾಸಕ, ಸಿಪಿಎಂ ಮುಖಂಡ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ಸಲ್ಲಿಸಿರುವ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಸಿಪಿಎಂ ವತಿಯಿಂದ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರ ಮತ್ತು ಭೂ ಹಗರಣದ ಆರೋಪದಲ್ಲಿ ಬಂಧಿತರಾಗಿ, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪ ಅವರನ್ನು ಮಠಾಧೀಶರು ಭೇಟಿ ಮಾಡಿರುವುದು ಖೇದಕರ ಎಂದ ಅವರು, ಅವರ ಮಠಗಳ ಪಾವಿತ್ರ್ಯ ಏನಾಯಿತು? ಎಂದು ಅವರು ಪ್ರಶ್ನಿಸಿದರು.

ಮಠಾಧೀಶರು ಬಂಧಿತರ ಆರೋಗ್ಯ ವಿಚಾರಿಸಲು ಭೇಟಿ ಮಾಡಿರುವುದನ್ನು ನೋಡಿದರೆ, ಭ್ರಷ್ಟರ ಹಣವನ್ನು ಮಠಾಧೀಶರೇ ಇರಿಸಿಕೊಂಡಿರಬಹುದು ಎಂಬ ಶಂಕೆ ಮೂಡಲಿದೆ ಎಂದು ಅವರು ಟೀಕಿಸಿದರು.

ನಾಡಿನ ಖ್ಯಾತ ದೇವಸ್ಥಾನಗಳಲ್ಲಿ ತೆರಿಗೆವಂಚಕ ಶ್ರೀಮಂತ ಭಕ್ತರು ಹಣವನ್ನು ಹುಂಡಿಗೆ ಹಾಕುತ್ತಾರೆ. ಆ ಹಣದಿಂದ ಶ್ರೀಮಂತವಾಗುವ ದೇವಸ್ಥಾನಗಳ ಆಡಳಿತ ಮಂಡಳಿಗಳು ತೆರಿಗೆ ಕಟ್ಟುತ್ತವೆಯೇ ಎಂಬುದನ್ನು ತನಿಖೆಗೆ ಒಳಪಡಿಸಬೇಕು. ಹೊರ ದೇಶ ಗಳಲ್ಲಿ ಇರುವ ಭ್ರಷ್ಟರ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುವುದರ ಜತೆಗೆ ದೇವಸ್ಥಾನಗಳಲ್ಲಿನ ಇಂತಹ ಕಪ್ಪು ಹಣವನ್ನು ದೇಶದ ಅಭಿವೃದ್ಧಿಗಾಗಿ ಬಳಸಬೇಕು ಎಂದು ಅವರು ಕೋರಿದರು.

ತಾಯಿಗೂ ಭಯ: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧಿತರಾದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಬಗ್ಗೆ ಲೋಕಸಭೆಯ ವಿರೋದ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಯಾವುದೇ ಹೇಳಿಕೆ ನೀಡದೆ ಸಮ್ಮನಿರು ವುದರ ಹಿಂದೆ ತೀವ್ರ ಆತಂಕ, ಭಯವೂ ಇದೆ ಎಂದ ಅವರು, ತಾಯಿಯ (ಸುಷ್ಮಾ) ಬಗ್ಗೆ ಪುತ್ರ (ಜನಾರ್ದನರೆಡ್ಡಿ) ಬಾಯಿ ಬಿಟ್ಟರೆ ಅವರೂ ಕಂಬಿ ಎಣಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದ ಬೊಕ್ಕಸ, ಗಣಿ, ಭೂಮಿ ಯನ್ನು ಲೂಟಿ ಹೊಡೆದಿರುವ ಕರ್ನಾಟಕದ ಬಿಜೆಪಿ ಸರ್ಕಾರ, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ತನಿಖಾ ವರದಿಯನ್ನು ಜಾರಿಗೊಳಿಸಿದರೆ ಅನೇಕರು ಜೈಲಿಗೆ ಹೋಗುತ್ತಾರೆ. ಯಡಿಯೂರಪ್ಪ ಸಂಪುಟದಲ್ಲಿದ್ದ ನಾಲ್ಕೈದು ಜನ ಸಚಿವರನ್ನು ಹೊರತು ಪಡಿಸಿ ಮಿಕ್ಕವರೆಲ್ಲ ಕಡುಭ್ರಷ್ಟರಾಗಿದ್ದಾರೆ ಎಂದು ಅವರು ಮೂದಲಿಸಿದರು.

ಗೃಹ ಸಚಿವ ಆರ್.ಅಶೋಕ್ ಸಹ ಭೂ ಹಗರಣದಲ್ಲಿ ಪಾಲ್ಗೊಂಡಿದ್ದು, ಕೂಡಲೇ ಅವರೂ ಜೈಲು ಪಾಲಾಗುವು ದರಲ್ಲಿ ಶಂಕೆಯಿಲ್ಲ ಎಂದ ಅವರು, ಈ ಎಲ್ಲ ಮುಖಂಡರು ರಾಜ್ಯದ ಮಾನವನ್ನು ಹರಾಜು ಹಾಕಿದ್ದಾರೆ ಎಂದರು.
ಕೇವಲ ಯಡಿಯೂರಪ್ಪ ಅವರು ಮಾತ್ರ ಡಿನೋಟಿಫೈ ಮಾಡಿದ್ದಾರಾ? ಎಂದು ಪ್ರಶ್ನಿಸುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ, ಭ್ರಷ್ಟಾಚಾರದ ಪರ ಇದ್ದಾರೆ. ಪಕ್ಷದ ರಾಷ್ಟ್ರೀಯ ಮುಖಂಡ ಎಲ್.ಕೆ. ಅಡ್ವಾಣಿ ರಾಜ್ಯದ ವಿದ್ಯಮಾನಗಳಿಂದ ಪಕ್ಷಕ್ಕೆ `ಮುಜುಗರ~ ಉಂಟಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.

ಅಕ್ರಮ ಗಣಿಗಾರಿಕೆಯ ಲೋಕಾಯುಕ್ತ ವರದಿಯಲ್ಲಿ ಬಿ. ಶ್ರೀರಾಮುಲು, ಜಿ.ಕರುಣಾಕರರೆಡ್ಡಿ, ಜಿ.ಸೋಮಶೇಖರರೆಡ್ಡಿ ಅವರ ಹೆಸರುಗಳಿವೆ. ಅವರನ್ನೂ ಕೂಡಲೇ ಬಂಧಿಸಬೇಕು ಎಂದು ಜಿ.ಎನ್. ನಾಗರಾಜ್ ಕೋರಿದರು.

ಬಳ್ಳಾರಿಯಲ್ಲಿರುವ ಅನೇಕ ಬಡವರ ನಿವೇಶನ, ಮನೆಗಳನ್ನು ವಶಪಡಿಸಿ ಕೊಂಡಿರುವ ಬಗ್ಗೆ, ಪಾಲಿಕೆ ಸದಸ್ಯೆ ಯಾಗಿದ್ದ ಪದ್ಮಾವತಿ ಅವರ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ವಿಧಿಸ ಬೇಕು ಎಂದು ಅವರು ಆಗ್ರಹಿಸಿದರು.

ಯು. ಬಸವರಾಜ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಾರುತಿ ಮಾನ್ಪಡೆ, ನಿತ್ಯಾನಂದ ಸ್ವಾಮಿ, ಸತ್ಯ ಬಾಬು, ಕೆ.ನಾಗರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಗಾಂಧಿ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಿವಿಧ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT