ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ರಣಕಹಳೆ

ವೇದಿಕೆ ಮೇಲೆ ಮಂತ್ರಿ, 13 ಶಾಸಕರು, 6 ಎಂಎಲ್‌ಸಿಗಳು
Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಹಾವೇರಿ: ಶಿಸ್ತುಕ್ರಮದ ಬೆದರಿಕೆಯನ್ನು ಧಿಕ್ಕರಿಸಿ ಬಂದ 13 ಶಾಸಕರು, ಒಬ್ಬ ಸಚಿವರು ಮತ್ತು ವಿಧಾನ ಪರಿಷತ್‌ನ ಆರು ಸದಸ್ಯರನ್ನು ವೇದಿಕೆಯ ಮೇಲೆ ಬರಮಾಡಿಕೊಂಡು ಬಿಜೆಪಿ ಸರ್ಕಾರ ಮತ್ತು ಪಕ್ಷಕ್ಕೆ ಸವಾಲು ಹಾಕುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಇಲ್ಲಿ ಬೃಹತ್ ಸಮಾವೇಶದಲ್ಲಿ ಕೆಜೆಪಿ ಸಾರಥ್ಯ ವಹಿಸಿಕೊಂಡರು.

ನಿರೀಕ್ಷೆಗೂ ಮೀರಿ ಹರಿದುಬಂದ ಜನಸಾಗರದಿಂದ ಖುಷಿಯಾಗಿ ಬೀಗುತ್ತಿದ್ದ ಅವರು ಬಿಜೆಪಿ ಮುಖಂಡರಿಗೆ ನೇರವಾಗಿಯೇ ಪಂಥಾಹ್ವಾನ ನೀಡಿದರು. `ತಾಕತ್ತಿದ್ದರೆ ವಿಧಾನಸಭೆಯನ್ನು ತಕ್ಷಣವೇ ವಿಸರ್ಜಿಸಲಿ' ಎಂದು ಗುಡುಗಿದರು.`ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಒಪ್ಪಂದ ಉಲ್ಲಂಘಿಸಿ ಅಧಿಕಾರ ಹಸ್ತಾಂತರಿಸದೇ ನಂಬಿಕೆ ದ್ರೋಹ ಮಾಡಿದರು.

ನನ್ನಿಂದಲೇ ಮುಖ್ಯಮಂತ್ರಿಯಾದ ಡಿ.ವಿ.ಸದಾನಂದ ಗೌಡ ಅವರೂ ವಿಶ್ವಾಸ ದ್ರೋಹ ಬಗೆದರು. ನಂತರ ಶೆಟ್ಟರ್ ಅವರನ್ನು ಮನೆಗೆ ಕರೆಸಿ ಸಿಹಿ ತಿನ್ನಿಸಿ ಮುಖ್ಯಮಂತ್ರಿ ಮಾಡಿದೆ. ಅವರು ಬಿಜೆಪಿ ಹೈಕಮಾಂಡ್ ಜೊತೆ ಕೈಜೋಡಿಸಿ ನನ್ನ ಬೆಂಬಲಿಗ ಶಾಸಕರ ವಿರುದ್ಧ ಕ್ರಮ ಜರುಗಿಸಲು ಮುಂದಾಗುವುದಾದರೆ ವಿಧಾನಸಭೆಯನ್ನೇ ವಿಸರ್ಜಿಸಲಿ' ಎಂದು ಪುನರುಚ್ಚರಿಸಿದರು.

ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿ.ಧನಂಜಯಕುಮಾರ್ ಅವರಿಂದ ಧ್ವಜ ಪಡೆಯುವ ಮೂಲಕ ಕೆಜೆಪಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪ ಅವರು ರಾಜಕೀಯ ಜೀವನದ ಹೊಸ ಇನಿಂಗ್ಸ್ ಆರಂಭಿಸಿದರು. ಅರ್ಧ ಗಂಟೆ ಕಾಲ ಮಾತನಾಡಿದ ಅವರು, ಮಾತಿನುದ್ದಕ್ಕೂ ಪ್ರಾದೇಶಿಕ ಪಕ್ಷದ ಅಗತ್ಯವನ್ನು ಒತ್ತಿ ಒತ್ತಿ ಹೇಳಿದರು.

ದೇಶದ ವಿವಿಧ ರಾಜ್ಯಗಳು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ಕಾರಣಕ್ಕಾಗಿಯೇ ಪಡೆಯುತ್ತಿರುವ ಅನುಕೂಲವನ್ನು ತಮ್ಮ ವಾದಕ್ಕೆ ನಿದರ್ಶನವಾಗಿ ಬಳಸಿಕೊಂಡರು. ತಾವು ಅಧಿಕಾರ ಪಡೆಯುವ ಉದ್ದೇಶದಿಂದ ಪಕ್ಷ ಕಟ್ಟುತ್ತಿಲ್ಲ. ರಾಜ್ಯದಲ್ಲಿ ಬದಲಾವಣೆ ತರುವ ಪ್ರಾಮಾಣಿಕ ಉದ್ದೇಶದಿಂದ ಕೆಜೆಪಿಯ ಸಾರಥ್ಯ ವಹಿಸಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು.

ವಚನ ಪಡೆದರು: ಮಾತಿನ ನಡುವೆಯೇ ಗದ್ಗದಿತರಾದ ಯಡಿಯೂರಪ್ಪ, `ಕೆಜೆಪಿ ಈಗಷ್ಟೇ ಅಂಬೆಗಾಲಿಡುತ್ತಿದೆ. ಪ್ರತಿ ಹಳ್ಳಿಯಲ್ಲೂ ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಯುವಕರು ವಹಿಸಿಕೊಳ್ಳಬೇಕು' ಎಂದು ಕೋರಿದರು. `ನಿಮ್ಮ ಜೊತೆ ಇದ್ದೇವೆ' ಎಂಬ ವಚನ ನೀಡಿ ಎಂದೂ ಮನವಿ ಮಾಡಿದರು. ಆಗ, ಸಭಾಂಗಣದಲ್ಲಿ ನೆರೆದಿದ್ದ ಜನರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದಕ್ಕೆ ಪ್ರತಿಯಾಗಿ, `ನಿಮ್ಮ ನಂಬಿಕೆಗೆ ದ್ರೋಹ ಮಾಡುವುದಿಲ್ಲ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ' ಎಂದು ಭಾವುಕರಾದರು.

`ಬಹುಮತ ಇಲ್ಲ, ರಾಜೀನಾಮೆ ನೀಡಿ'
`ಜಗದೀಶ ಶೆಟ್ಟರ್ ಅವರೇ... ನಿಮಗೆ ಬಹುಮತ ಇಲ್ಲ. ಈ ಯಡಿಯೂರಪ್ಪನ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದೀರಿ. ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಿ. ಜನರ ಬಳಿ ಹೋಗೋಣ. ಮುಂದೆ ಯಾರು ಆಡಳಿತ ನಡೆಸಬೇಕು ಎಂಬುದನ್ನು ಅವರು ನಿರ್ಧರಿಸಲಿ'
-ಬಿ.ಎಸ್. ಯಡಿಯೂರಪ್ಪ

`ಇದು ಕೆಜೆಪಿ-ಬಿಜೆಪಿ ಸರ್ಕಾರ ಅಲ್ಲ'
`ಬಿಜೆಪಿ ಸರ್ಕಾರಕ್ಕೆ ಈಗಲೂ ಸ್ಪಷ್ಟ ಬಹುಮತ ಇದೆ. ಯಾವುದೇ ಕಾರಣಕ್ಕೂ ವಿಧಾನಸಭೆ ವಿಸರ್ಜಿಸುವ ಪ್ರಶ್ನೆಯೇ ಇಲ್ಲ. ಈಗಿರುವುದು ಕೆಜೆಪಿ- ಬಿಜೆಪಿ ಸರ್ಕಾರವಲ್ಲ. ಬಿಜೆಪಿ ಬಹುಮತದ ಸರ್ಕಾರ'
-ಮುಖ್ಯಮಂತ್ರಿ ಜಗದೀಶ ಶೆಟ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT