ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಕ್ರಮದ ಪ್ರಸ್ತಾಪವಿಲ್ಲ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: `ಭ್ರಷ್ಟಾಚಾರ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾಪ ಪಕ್ಷದ ಮುಂದೆ ಇಲ್ಲ~ ಎಂದು ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಶುಕ್ರವಾರ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರ ಮೇಲೆ ಕ್ರಮ ಜರುಗಿಸಬೇಕೆಂಬ ಒತ್ತಾಯ ಪಕ್ಷದೊಳಗಿಲ್ಲ. ಯಾವುದೇ ಸಂದರ್ಭದಲ್ಲೂ ಈ ವಿಷಯ ರಾಷ್ಟ್ರ ಮಟ್ಟದಲ್ಲಾಗಲೀ ಅಥವಾ ರಾಜ್ಯ ಮಟ್ಟದಲ್ಲಾಗಲೀ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. `ರಾಷ್ಟ್ರೀಯ ಅಭಿವೃದ್ಧಿ ಮಂಡಳಿ~ (ಎನ್‌ಡಿಸಿ) ಸಭೆಯಲ್ಲಿ ಭಾಗವಹಿಸಲು ಸದಾನಂದಗೌಡರು ರಾಜಧಾನಿಗೆ      ಆಗಮಿಸಿದ್ದಾರೆ.

~ಯಡಿಯೂರಪ್ಪ ಅವರ ಬಂಧನ ಪಕ್ಷಕ್ಕೆ ಮುಜುಗರದ ಸಂಗತಿ~ ಎಂದು ಪಕ್ಷದ ಹಿರಿಯ ಮುಖಂಡ ಅಡ್ವಾಣಿ ಹೇಳಿರುವುದನ್ನು  ಗಮನಿಸಿದ್ದೇನೆ. ಬೇರೆ ಬೇರೆ ಪತ್ರಿಕೆಗಳು ಬೇರೆ ಬೇರೆ ರೀತಿಯಲ್ಲಿ ಈ ಸುದ್ದಿ ಪ್ರಕಟವಾಗಿದೆ. ಯಡಿಯೂರಪ್ಪ ಜನ ನಾಯಕರು. ಅವರ ಅಗತ್ಯ ಪಕ್ಷಕ್ಕಿದೆ. ಹೀಗಾಗಿ ಕ್ರಮದ ಪ್ರಶ್ನೆ ಇಲ್ಲ ಎಂದರು.

~ಮಾಜಿ ಮುಖ್ಯಮಂತ್ರಿಯನ್ನು ನಾನು ನೋಡಲು ಹೋಗಿದ್ದು ಆಸ್ಪತ್ರೆಗೆ ವಿನಾ ಜೈಲಿಗಲ್ಲ. ಯಡಿಯೂರಪ್ಪ ನನ್ನ ಸಹಪಾಠಿ. ಶಾಸನಸಭೆ ಸದಸ್ಯರು. ಅವರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೇನೆ. ಅವರ ಆರೋಗ್ಯ ಸರಿಯಾಗಿಲ್ಲ ಎಂದು ಆಸ್ಪತ್ರೆಗೆ ದಾಖಲಾದಾಗ ಸೌಜನ್ಯಕ್ಕೆ ಆಸ್ಪತ್ರೆಗೆ ಭೇಟಿ ಮಾಡಿದ್ದು ತಪ್ಪಲ್ಲ. ಮಾನವೀಯತೆ ದೃಷ್ಟಿಯಿಂದ ಹೋಗಿದ್ದೇನೆ~ ಎಂದು ಸದಾನಂದಗೌಡರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

`ಆರೂವರೆ ಕೋಟಿ ಕನ್ನಡಿಗರಲ್ಲಿ ಯಾರನ್ನು ಬೇಕಾದರೂ ನೋಡಲು ನಾನು ಆಸ್ಪತ್ರೆಗೆ ಹೋಗುತ್ತೇನೆ. ನನ್ನನ್ನು ತಡೆಯಲು ಸಾಧ್ಯವಿಲ್ಲ~ ಎಂದು ಮುಖ್ಯಮಂತ್ರಿ ಟೀಕಾಕಾರರಿಗೆ ತಿರುಗೇಟು ಕೊಟ್ಟರು. ಶನಿವಾರ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಕಂಡು  ದೀಪಾವಳಿ ಶುಭಾಶಯ ಹೇಳಲಿದ್ದೇನೆ. ರಾಜ್ಯದ ಬೆಳವಣಿಗೆ ಕುರಿತು ಪ್ರಸ್ತಾಪ ಮಾಡಿದರೆ ವಿವರ ಕೊಡುತ್ತೇನೆ~ ಎಂದು ನುಡಿದರು.

~ರಾಜ್ಯ ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಯಾರೂ ನನ್ನ ವಿರುದ್ಧ ಪಿತೂರಿ ಮಾಡುತ್ತಿಲ್ಲ. ಪಕ್ಷದ ಅಧ್ಯಕ್ಷನಾಗಿದ್ದ 4 ವರ್ಷದ ಅವಧಿಯಲ್ಲಿ ಇಂಥ ಮಾತುಗಳನ್ನು ಕೇಳಿದ್ದೆ. ಮುಖ್ಯಮಂತ್ರಿ ಆದ ಬಳಿಕವೂ ಇಂಥ ಚರ್ಚೆ ನಡೆಯುತ್ತಿವೆ. ಇದ್ಯಾವುದರಲ್ಲೂ ನಿಜ ಇಲ್ಲ~ ಎಂದು   ಸದಾನಂದಗೌಡರು ಹೇಳಿದರು.

~ರಾಜ್ಯ ವಿಧಾನಸಭೆಗೆ ಅವಧಿಗೆ ಮುನ್ನ ಮಧ್ಯಂತರ ಚುನಾವಣೆ ಇಲ್ಲ. ಕೆಲವರು ಚುನಾವಣೆ ನಡೆಯಬಹುದು ಎಂದು ಕನಸು ಕಾಣುತ್ತಿದ್ದಾರೆ. ನಾವು 110 ಸ್ಥಾನಗಳನ್ನು ಪಡೆದಾಗಿನಿಂದಲೂ ಈ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುವವರಿಗೆ ಬೇಡ ಎನ್ನುವುದು ಏಕೆ?~ ಎಂದು ಅವರು ಕೇಳಿದರು.ಗೃಹ ಸಚಿವ ಆರ್. ಅಶೋಕ್ ವಿರುದ್ಧದ ದೂರು ಕುರಿತು ಮುಖ್ಯಮಂತ್ರಿ ಪ್ರತಿಕ್ರಿಯಿಸಲಿಲ್ಲ.

ಗೌಡರು ರಾತ್ರಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಗಳ ಸಭೆ ಕರೆದು ರಾಜ್ಯದ ಯೋಜನೆಗಳನ್ನು ಕುರಿತು   ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT