ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಸಮಕ್ಷಮದತ್ತ ಎಲ್ಲರ ಚಿತ್ತ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸ ಪಕ್ಷ ಕಟ್ಟುವ ಹಾದಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅ. 20ರಂದು ಸಂಜೆ 4.30ಕ್ಕೆ ನಗರದಲ್ಲಿ ಆಯೋಜಿಸಿರುವ `ಪರಾಮರ್ಶೆಯ ಪರಿಕ್ರಮ... ನಿಮ್ಮ ಸಮಕ್ಷಮ~ ಎಂಬ ಕಾರ್ಯಕ್ರಮಕ್ಕೆ ಇನ್ನಿಲ್ಲದ ಮಹತ್ವ ಬಂದಿದೆ. ಜಿಲ್ಲೆಯ ಎಲ್ಲರ ಚಿತ್ತ ಇತ್ತ ಹರಿದಿದೆ.

ನಗರದ ಸಾಗರ ರಸ್ತೆಯಲ್ಲಿರುವ ತಮ್ಮ ಕುಟುಂಬದ ಒಡೆತನದ ಪ್ರೇರಣಾ ಎಜುಕೇಷನ್ ಸೊಸೈಟಿಯ ಪಿಇಎಸ್ ಕಾಲೇಜಿನ ಆವರಣದಲ್ಲಿ ನಡೆಯಲಿರುವ `ಸಮಕ್ಷಮ~ದಲ್ಲಿ ಸಾಕ್ಷಿಯಾಗಲು ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು, ಸಾಹಿತಿಗಳು, ವೈದ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ.
ಯಡಿಯೂರಪ್ಪ ಅವರ ಸಹಿ ಇರುವ, ಅವರ ಮನದ ಮಾತುಗಳಿರುವ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿದೆ.

ಅದರಲ್ಲಿ ಯಡಿಯೂರಪ್ಪ ತಮ್ಮ ರಾಜಕೀಯ ಜೀವನ, ಮುಂದಿನ ರಾಜಕೀಯ ಹೋರಾಟ, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೇಳಿಕೊಂಡಿದ್ದಾರೆ. ಈ ಆಹ್ವಾನ ಪತ್ರಿಕೆ ಈಗ ಜಿಲ್ಲೆಯ ಎಲ್ಲ ಗಣ್ಯರ ಕೈ ಸೇರಿದೆ.

ಸಾಂಸ್ಕೃತಿಕ ಸ್ವರೂಪ: `ಸಮಕ್ಷಮ~ಕ್ಕೆ ಸಾಂಸ್ಕೃತಿಕ ರೂಪ ನೀಡುವ ಪ್ರಯತ್ನವೂ ನಡೆದಿದೆ. ಸಭೆ ಆರಂಭಕ್ಕೂ ಮೊದಲು ಒಂದೂವರೆ ಗಂಟೆ ಕಾಲ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾವಿದೆ ಸಂಗೀತಾ ಕಟ್ಟಿ ಮತ್ತು ತಂಡದಿಂದ ಗೀತ-ಗಾಯನ, ಮತ್ತಿತರ ಕಾರ್ಯಕ್ರಮ ವೈವಿಧ್ಯಗಳು ನೆರೆದ ಗಣ್ಯರನ್ನು ರಂಜಿಸಲಿವೆ.

ಆಗಮಿಸುವ ಎಲ್ಲರಿಗೂ ಆರಂಭದಲ್ಲಿ ಲಘು ಉಪಾಹಾರ, ಚಹ ವ್ಯವಸ್ಥೆ ಇದೆ. ರಾತ್ರಿ ಕಾರ್ಯಕ್ರಮ ಮುಗಿದ ನಂತರ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಆರಂಭದಲ್ಲಿ ಮೂರು ಸಾವಿರ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿತ್ತು. ಈಗ ಅನೇಕ ಗಣ್ಯರಿಂದ ಹೆಚ್ಚಿದ ಒತ್ತಡದಿಂದ ಮತ್ತೆ ಎರಡು ಸಾವಿರ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ.
 
ಇದು ಪಕ್ಷಾತೀತ, ಜಾತ್ಯತೀತ ಸಭೆ. ಅಭಿವೃದ್ಧಿ ಬಗ್ಗೆ ಚಿಂತನೆ ಇರುವವರು, ಯಡಿಯೂರಪ್ಪ ಅವರ ಹೋರಾಟಗಳನ್ನು ಬೆಂಬಲಿಸುವವರು ಸಲಹೆ-ಸೂಚನೆ ನೀಡಬಹುದು ಎನ್ನುತ್ತಾರೆ `ಸಮಕ್ಷಮ~ದ ಆಯೋಜಕರೊಬ್ಬರು.

`ಸಮಕ್ಷಮ~ದಲ್ಲಿ ಯಡಿಯೂರಪ್ಪ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ, ಎಲ್ಲರ ಅಭಿಪ್ರಾಯಗಳನ್ನು ಆಲಿಸುತ್ತಾರೆ. ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡುತ್ತಾರೆ ಎಂಬುದು ಅವರ ಕಟ್ಟಾ ಬೆಂಬಲಿಗರ ನುಡಿ.

ಯಡಿಯೂರಪ್ಪ ಈ ಹಿಂದೆ ಉಪ ಮುಖ್ಯಮಂತ್ರಿ ಆದಾಗಲೂ ಇದೇ ರೀತಿ ಸಭೆ ನಡೆಸಿದ್ದರು; ಗಣ್ಯರ ಅಭಿಪ್ರಾಯ ಸಂಗ್ರಹಿಸಿದ್ದರು. ಅದರಲ್ಲಿ ಬಹಳಷ್ಟು ಯಶ ಕಂಡಿದ್ದವು. ಆದರೆ, ಈಗ ಸಂದರ್ಭ-ಸನ್ನಿವೇಶವೇ ಬೇರೆ ಇದೆ.

ಆಹ್ವಾನ ಪತ್ರಿಕೆ ಒಕ್ಕಣೆ- ದೃಢ ಬೆಂಬಲ ಬೇಕು
`ಶಿವಮೊಗ್ಗ ಜಿಲ್ಲೆ ಕಳೆದ 60 ವರ್ಷಗಳಲ್ಲಿ ಕಾಣದ ಮಿಂಚಿನ ಬದಲಾವಣೆ ಕಂಡಿದೆ. ಇಲ್ಲಿನ ಒಂದೊಂದು ಕೆಲಸವೂ ನನ್ನ ಇಚ್ಛಾಶಕ್ತಿ, ಶ್ರದ್ಧೆ ಹಾಗೂ ನಿರಂತರ ಪರಿಶ್ರಮಗಳ ಫಲ. ಆಡಳಿತಾತ್ಮಕ ತೊಂದರೆ, ಕಾನೂನಿನ ತೊಡಕು, ವಿರೋಧಿಗಳ ಅಡ್ಡಿ ಇವುಗಳನ್ನು ಸರಿಪಡಿಸಿಕೊಂಡೇ ನಿಮ್ಮೆಲ್ಲರ ಬಹುದಿನದ ಕನಸುಗಳನ್ನು ನನಸಾಗಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ.
 
ಮುಖ್ಯಮಂತ್ರಿಯಾಗಿ ಮೂರು ವರ್ಷಗಳ ಹಲವು ಕನಸುಗಳು ಸಾಕಾರಗೊಂಡಿವೆ. ಕೆಲವು ಇನ್ನೂ ಮುಗಿಯುವ ಹಂತದಲ್ಲಿವೆ. ಈವರೆಗಿನ ಅಭಿವೃದ್ಧಿ ಕಾರ್ಯಗಳನ್ನು ಪರಾಮರ್ಶೆ ನಡೆಸಲು ಆಶಿಸಿದ್ದೇನೆ. ಜತೆಗೆ, ಭವಿಷ್ಯದ ಹಿತದೃಷ್ಟಿಯಿಂದ ಹಮ್ಮಿಕೊಳ್ಳಬಹುದಾದ ಯೋಜನೆಗಳ ವಿಮರ್ಶೆ- ಚಿಂತನೆಗಳಿಗಾಗಿ ಸಭೆ ಆಯೋಜಿಸಿದ್ದೇನೆ.

ಪ್ರಮುಖವಾಗಿ ಶಿವಮೊಗ್ಗ ಜಿಲ್ಲೆಯನ್ನು ಸಮಗ್ರವಾಗಿ ಮುನ್ನಡೆಸಲು ದೂರದರ್ಶಿ ಆಲೋಚನೆ, ಸಲಹೆ, ಸಮರ್ಥವಾದ ದೃಢ ಬೆಂಬಲದ ಹಾದಿ ಬೇಕಾಗಿದೆ~ ಎಂದು ಆಹ್ವಾನ ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT