ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈಗೆ ಜಾಮೀನು

Last Updated 15 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಗುತ್ತಿಗೆ ನೀಡುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಗುರುವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಸಂಬಂಧ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಹಲವು ಷರತ್ತುಗಳನ್ನು ಒಳಗೊಂಡ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು. ಬಂಧನದ ಸಂದರ್ಭ ಎದುರಾದರೆ ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್ ಮತ್ತು ಒಬ್ಬ ವ್ಯಕ್ತಿಯ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಹತ್ತು ದಿನಗಳ ಒಳಗಾಗಿ ಯಡಿಯೂರಪ್ಪ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯ ಎದುರು ಹಾಜರಾಗಬೇಕು. ತನಿಖಾಧಿಕಾರಿ ಬಯಸುವ ಎಲ್ಲ ಸಂದರ್ಭಗಳಲ್ಲೂ ತನಿಖೆಗೆ ಹಾಜರಾಗಿ, ಅಗತ್ಯ ಸಹಕಾರ ನೀಡಬೇಕು. ಸಾಕ್ಷ್ಯನಾಶ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕಲು ಪ್ರಯತ್ನಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ವಿದೇಶಕ್ಕೆ ತೆರಳಬಾರದು ಎಂಬ ಷರತ್ತುಗಳನ್ನು ನಿರೀಕ್ಷಣಾ ಜಾಮೀನಿನಲ್ಲಿ ವಿಧಿಸಲಾಗಿದೆ.

ಯಡಿಯೂರಪ್ಪ ಅವರು ಯಾವುದೇ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನು ಪ್ರತಿವಾದಿಗಳಿಗೆ ನೀಡಲಾಗಿದೆ.

ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ವೈ.ಎಸ್.ವಿ.ದತ್ತ ಅವರು ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಯಡಿಯೂರಪ್ಪ ವಿರುದ್ಧ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದಲ್ಲಿ ಜುಲೈ 27ರಂದು ಖಾಸಗಿ ದೂರು ಸಲ್ಲಿಸಿದ್ದರು.  ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆಗಸ್ಟ್ 8ರಂದು ಆದೇಶ ಹೊರಡಿಸಿತ್ತು. 

 ಈ ಸಂಬಂಧ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಆಗಸ್ಟ್ 10ರಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ತನಿಖೆ ಪ್ರಗತಿಯಲ್ಲಿದೆ.

ಕಡಿಮೆ ಮೊತ್ತ ನಮೂದಿಸಿದ್ದ ಕಂಪೆನಿಯ ಬಿಡ್ ಅನ್ನು ತಿರಸ್ಕರಿಸಿ ಹೆಚ್ಚಿನ ಮೊತ್ತಕ್ಕೆ ಬಿಡ್ ಸಲ್ಲಿಸಿದ್ದ ಆರ್.ಎನ್. ಶೆಟ್ಟಿ ಜ್ಯೋತಿ ಜಾಯಿಂಟ್ ವೆಂಚರ್ ಕಂಪೆನಿಗೆ ಕಾಮಗಾರಿಯ ಗುತ್ತಿಗೆ ನೀಡಿರುವ ಆರೋಪ ಈ ಪ್ರಕರಣದಲ್ಲಿದೆ.

ಕಾಮಗಾರಿಯ ಗುತ್ತಿಗೆ ನೀಡಿರುವುದಕ್ಕಾಗಿ ಆರ್.ಎನ್.ಶೆಟ್ಟಿ ಸಮೂಹದ ಮುರ್ಡೇಶ್ವರ ಕಂಪೆನಿಯಿಂದ ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯ ಪಾಲುದಾರರಾಗಿರುವ ಧವಳಗಿರಿ ಪ್ರಾಪರ್ಟೀಸ್ ಮತ್ತು ಡೆವಲಪರ್ಸ್ ಕಂಪೆನಿಗೆ 11 ಕೋಟಿ ರೂಪಾಯಿ ಮತ್ತು ಸಹ್ಯಾದ್ರಿ ಹೆಲ್ತ್‌ಕೇರ್ ಅಂಡ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ಗೆ 2 ಕೋಟಿ ರೂಪಾಯಿ ಲಂಚ ಪಾವತಿಯಾಗಿದೆ ಎಂಬ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು `ಪ್ರಥಮ ಮಾಹಿತಿ ವರದಿ~ (ಎಫ್‌ಐಆರ್) ದಾಖಲಿಸಿದ್ದರು.

ಬಂಧನದ ಆತಂಕದಲ್ಲಿ ಕೋರಿಕೆ: ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ತನಿಖೆಯ ಸಂದರ್ಭದಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದ್ದು, ತಮಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಗುತ್ತಿಗೆಯನ್ನು ಆರ್‌ಎನ್‌ಎಸ್ ಜ್ಯೋತಿ ಜಾಯಿಂಟ್ ವೆಂಚರ್ ಕಂಪೆನಿಗೆ ನೀಡಿರುವ ಕ್ರಮವನ್ನು ನೀರಾವರಿ ಇಲಾಖೆಯ ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದು ಇದೇ ಆಗಸ್ಟ್ 23ರಂದು ಆದೇಶ ಹೊರಡಿಸಿದೆ. ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಯಡಿಯೂರಪ್ಪ ಪರ ವಕೀಲರು ವಾದಿಸಿದ್ದರು.

ನಿರೀಕ್ಷಣಾ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದ ಲೋಕಾಯುಕ್ತ ಪರ ವಕೀಲರು, `ಯಡಿಯೂರಪ್ಪ ಅವರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯೂ ಪ್ರಗತಿಯಲ್ಲಿದೆ. ಈಗ ಪ್ರಕರಣ ನಿರೀಕ್ಷಣಾ ಜಾಮೀನು ಹಂತ ದಾಟಿದೆ. ಆದ್ದರಿಂದ ಅರ್ಜಿದಾರರ ವಾದವನ್ನು ಮಾನ್ಯ ಮಾಡಬಾರದು~ ಎಂದು ವಾದಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT