ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈಗೆ ಜಾಮೀನು, ಪುತ್ರರು ನಿರಾಳ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಗಳವಾರ ಇನ್ನೊಮ್ಮೆ ಬಂಧನದ ಭೀತಿಯಿಂದ ಮುಕ್ತರಾದರು. ಅವರ ಪುತ್ರರು ಷರತ್ತುಗಳ `ಬಂಧನ~ದಿಂದ ಹೊರಕ್ಕೆ ಬಂದಿದ್ದಾರೆ.

ನಗರದ ನಾಗದೇವನಹಳ್ಳಿ ಬಳಿ  ಸ್ವಾಧೀನ ಪಡಿಸಿಕೊಂಡ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ನಿರೀಕ್ಷಣಾ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ.

ಇದೇ ಪ್ರಕರಣದಲ್ಲಿ ಇತರ ಆರೋಪಿಗಳಾಗಿದ್ದ  ಸಚಿವ ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಅವರಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಆದೇಶಿಸಿದ್ದಾರೆ.

ಸರ್ವೇ ನಂ.47 ಮತ್ತು 48ರಲ್ಲಿರುವ 3.40 ಎಕರೆ ಜಮೀನಿಗೆ ಸಂಬಂಧಿಸಿದಂತೆ ಇವರು ಅಕ್ರಮ ಎಸಗಿರುವುದಾಗಿ ರವಿಕೃಷ್ಣ ರೆಡ್ಡಿ ಎನ್ನುವವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನ ಅನ್ವಯ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಇವರೆಲ್ಲ ನಿರೀಕ್ಷಣಾ ಜಾಮೀನು ಕೋರಿದ್ದರು.

`ನಿಯಮ ಮೀರಿಲ್ಲ~: `ಇವರ ವಿರುದ್ಧ ದೂರು ದಾಖಲಾಗಿ ಎರಡು ತಿಂಗಳು ಕಳೆಯುತ್ತ ಬಂದಿದೆ. ಆದರೆ ಇದುವರೆಗೆ ಆರೋಪಿಗಳು ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಪ್ರಯತ್ನ ಸೇರಿದಂತೆ ಯಾವುದೇ ರೀತಿಯ ನಿಯಮಗಳನ್ನು ಮೀರಿಲ್ಲ. ಇವರು ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳಾದ ಕಾರಣ ತನಿಖೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ಅದೂ ಅಲ್ಲದೆ, ತನಿಖೆಗೆ ಅಸಹಕಾರ ತೋರುತ್ತಾರೆ ಎಂಬ ಲೋಕಾಯುಕ್ತ ಪರ ವಕೀಲರ ವಾದವನ್ನು ಸದ್ಯದ ಪರಿಸ್ಥಿತಿಯಲ್ಲಿ ಮಾನ್ಯ ಮಾಡಲಾಗದು. ಒಂದು ವೇಳೆ ನಿರೀಕ್ಷಣಾ ಜಾಮೀನು ನೀಡದೆ ಹೋದರೆ ಸಂವಿಧಾನ ಅವರಿಗೆ ನೀಡಿರುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಎರಡು ಲಕ್ಷ ರೂಪಾಯಿಗಳ ಬಾಂಡ್, ಅಷ್ಟೇ ಮೊತ್ತದ ಭದ್ರತೆ ನೀಡುವಂತೆ, ಕೋರ್ಟ್ ಅನುಮತಿ ಇಲ್ಲದೆ ಊರು ಬಿಟ್ಟು ಹೋಗದಂತೆ, ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ ಷರತ್ತು ವಿಧಿಸಲಾಗಿದೆ. ಒಂದು ವೇಳೆ ಇದಾವುದೇ ಷರತ್ತುಗಳನ್ನು ಮೀರಿ ನಡೆದುಕೊಂಡರೆ ಜಾಮೀನು ರದ್ದುಗೊಳ್ಳಲಿದೆ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.

ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆಯೂ ಈ ಹಿಂದೆ ಯಡಿಯೂರಪ್ಪನವರಿಗೆ ನಿರೀಕ್ಷಣಾ ಜಾಮೀನು ದೊರಕಿದೆ.

ಭಾಗಶಃ ಮಾನ್ಯ: ಇನ್ನೊಂದು ಪ್ರಕರಣದಲ್ಲಿ, ತಮಗೆ ಜಾಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತುಗಳ ಸಡಿಲಿಕೆಗೆ ಕೋರಿ ಯಡಿಯೂರಪ್ಪನವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ವಿಜಯೇಂದ್ರ ಅವರ ಮನವಿಯನ್ನು ಇದೇ ನ್ಯಾಯಮೂರ್ತಿಗಳು ಭಾಗಶಃ ಮಾನ್ಯ ಮಾಡಿದ್ದಾರೆ.

ಇವರ ಒಡೆತನದ `ಧವಳಗಿರಿ ಪ್ರಾಪರ್ಟೀಸ್~ ಹಾಗೂ `ಭಗತ್ ಹೋಮ್ ಲಿಮಿಟೆಡ್~ ಕಂಪೆನಿಗಳ ಲೆಕ್ಕಪತ್ರಗಳ ದಾಖಲೆ  ಮತ್ತು ಇಬ್ಬರ ಬ್ಯಾಂಕ್ ಖಾತೆಗಳ ದಾಖಲೆಗಳನ್ನು ಹಾಜರು ಪಡಿಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಷರತ್ತು ವಿಧಿಸಿತ್ತು. ಈ ಷರತ್ತುಗಳನ್ನು ಹೈಕೋರ್ಟ್ ಸಡಿಲಗೊಳಿಸಿದೆ.

`ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಆರೋಪಿಗಳಿಗೆ ಈ ದಾಖಲೆಗಳ ಅವಶ್ಯಕತೆ ಇದೆ. ಎಲ್ಲವನ್ನೂ ಅವರೇ ಪೊಲೀಸರ ವಶಕ್ಕೆ ಒಪ್ಪಿಸಿದರೆ, ಸ್ವಂತ ರಕ್ಷಣೆಗೆ ಅವರಿಗೆ ತೊಂದರೆ ಆಗುತ್ತದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಪಾಸ್‌ಪೋರ್ಟ್ ಅನ್ನು ಲೋಕಾಯುಕ್ತ ಪೊಲೀಸರ ವಶಕ್ಕೆ ಒಪ್ಪಿಸುವಂತೆ ವಿಧಿಸಿದ್ದ ಷರತ್ತನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳು, ಇದರ ಸಡಿಲಿಕೆ ಅಗತ್ಯ ಇಲ್ಲ ಎಂದಿದ್ದಾರೆ.

ವಿಚಾರಣೆ ಮುಂದಕ್ಕೆ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ವರದಿ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದತಿಗೆ ಕೋರಿ ಯಡಿಯೂರಪ್ಪನವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಾ.ಕೆ.ಭಕ್ತವತ್ಸಲ ನೇತೃತ್ವದ ವಿಭಾಗೀಯ ಪೀಠ ಬುಧವಾರಕ್ಕೆ (ಜ.18) ಮುಂದೂಡಿದೆ.

ಆನೆ ಕಾರ್ಯಪಡೆ ಕಾಲಾವಕಾಶ
ಆನೆಗಳ ಹಾವಳಿ ತಡೆಗೆ ಕಾರ್ಯಪಡೆ ರಚಿಸಲು ಜ.24ರವರೆಗೆ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರವು ಹೈಕೋರ್ಟನ್ನು ಮಂಗಳವಾರ ಕೋರಿಕೊಂಡಿತು.

2009ರಲ್ಲಿ ವಿವಿಧೆಡೆ ನಡೆದ ಆನೆ ಹಾವಳಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಆಧಾರದ ಮೇಲೆ ಕೋರ್ಟ್ ಖುದ್ದಾಗಿ ನಡೆಸುತ್ತಿರುವ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಸಮಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT