ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಾಂ, ಬಿಬಿಎಂ ಪದವೀಧರರಿಗೆ ಬಿ.ಇಡಿ ಅವಕಾಶ

ಕುವೆಂಪು ವಿಶ್ವವಿದ್ಯಾಲಯ ತಾತ್ವಿಕ ಒಪ್ಪಿಗೆ
Last Updated 6 ಡಿಸೆಂಬರ್ 2012, 6:33 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿ.ಇಡಿ ಪದವಿ ಪಡೆಯಲು ಬಿ.ಕಾಂ., ಬಿ.ಬಿ.ಎಂ. ಪದವೀಧರರಿಗೆ ಅವಕಾಶ ಮಾಡಿಕೊಡಲು ಕುವೆಂಪು ವಿಶ್ವವಿದ್ಯಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಜ್ಞಾನಸಹ್ಯಾದ್ರಿಯಲ್ಲಿ ಬುಧವಾರ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಗಳ ನಂತರ ವಿಶ್ವವಿದ್ಯಾಲಯ ತನ್ನ ನಿಲುವು ಸ್ಪಷ್ಟಪಡಿಸಿತು.

ಸರ್ಕಾರದ ಪ್ರಸ್ತುತ ಆದೇಶದ ಪ್ರಕಾರ ಬಿ.ಕಾಂ., ಬಿ.ಬಿ.ಎಂ. ಪದವೀಧರರಿಗೆ ಬಿ.ಇಡಿ ಪದವಿ ಪಡೆಯಲು ಅವಕಾಶ ಇಲ್ಲ. ಆದರೆ, ಇದು ವಿದ್ಯಾರ್ಥಿಯ ಓದಿನ ಹಕ್ಕನ್ನು ಕಸಿದುಕೊಂಡಂತೆ; ಯಾವುದೇ ವಿಷಯವನ್ನು, ಯಾವುದೇ ವಯಸ್ಸಿನಲ್ಲಿ ಓದಲು ಅವಕಾಶ ಕಲ್ಪಿಸುವ ಸಮುದಾಯದ ಕಾಲೇಜಿನಂತಹ ಕಲ್ಪನೆಗಳು ಬರುತ್ತಿರುವ ಇಂತಹ ಸನ್ನಿವೇಶದಲ್ಲಿ ಆಸಕ್ತ ಬಿ.ಕಾಂ., ಬಿ.ಬಿ.ಎಂ. ವಿದ್ಯಾರ್ಥಿಗಳಿಗೆ ಬಿ.ಇಡಿ ಮಾಡಲು ಅವಕಾಶ ನಿರಾಕರಿಸುವುದು ಸರಿ ಇಲ್ಲ. ಈ ಕುರಿತಂತೆ ಆದೇಶವನ್ನು ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕುಲಪತಿ ಪ್ರೊ.ಎಸ್.ಎ. ಬಾರಿ ತಿಳಿಸಿದರು.

ಇದೇ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ಸರ್ಕಾರದೊಂದಿಗೆ ನಡೆಯುವ ವಿವಿಧ ಕುಲಪತಿಗಳ ಸಭೆಯಲ್ಲಿ ತಾವು ಈ ವಿಷಯ ಪ್ರಸ್ತಾಪಿಸುವುದಾಗಿ ಬಾರಿ ಭರವಸೆ ನೀಡಿದರು.

ಇದಕ್ಕೂ ಮೊದಲು ಶಿಕ್ಷಣ ನಿಕಾಯದ ಡೀನ್ ಡಾ.ಎಸ್.ಎಸ್.ಪಾಟೀಲ್ ಮಾತನಾಡಿ, ಸರ್ಕಾರದ ಈಗಿರುವ ನಿಯಮಾವಳಿಗಳಂತೆ ಬಿ.ಬಿ.ಎಂ. ಮತ್ತು ಬಿ.ಕಾಂ. ಪದವೀಧರರು ಪ್ರೌಢಶಾಲೆಯಲ್ಲಿ ಬೋಧಿಸುವಂತಹ ವಿಷಯಗಳಲ್ಲಿ ಯಾವುದಾದರೂ ಎರಡು ವಿಷಯಗಳಲ್ಲಿ ಪದವಿ ಮಟ್ಟದಲ್ಲಿ ಐಚ್ಚಿಕ ವಿಷಯಗಳನ್ನಾಗಿ ಕಡ್ಡಾಯವಾಗಿ ವ್ಯಾಸಂಗ ಮಾಡಿರಬೇಕು. ಆದರೆ, ಬಿ.ಬಿ.ಎಂ. ಮತ್ತು ಬಿ.ಕಾಂ. ಪದವೀಧರರು ಪ್ರೌಢಶಾಲೆಯಲ್ಲಿ ಬೋಧಿಸುವ ವಿಷಯಗಳನ್ನು ಪದವಿ ಮಟ್ಟದಲ್ಲಿ ಐಚ್ಚಿಕ ವಿಷಯಗಳಾಗಿ ವ್ಯಾಸಂಗ ಮಾಡಿರುವುದಿಲ್ಲ. ಹಾಗಾಗಿ, ಸರ್ಕಾರದ ನಿಯಮಾವಳಿಗಳಲ್ಲಿ ತಿದ್ದುಪಡಿಯಾದರೆ ಮಾತ್ರ ಅವಕಾಶ ಕಲ್ಪಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ಬಿ.ಬಿ.ಎಂ. ಮತ್ತು ಬಿ.ಕಾಂ. ಪದವೀಧರರಿಗೆ ಬಿ.ಇಡಿಗೆ ಅವಕಾಶ ಮಾಡಿದರೆ ಕಲಾ ವಿಭಾಗದ ಪದವೀಧರರಿಗೆ ಉದ್ಯೋಗಕ್ಕೆ ತೊಂದರೆಯಾಗುತ್ತಿದೆ. ಬಿ.ಬಿ.ಎಂ. ಮತ್ತು ಬಿ.ಕಾಂ. ಪದವೀಧರರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ, ಕಲಾ ವಿಭಾಗದ ಪದವೀಧರರಿಗೆ ಅವಕಾಶ ಕಡಿಮೆ ಇದೆ. ಅವರಲ್ಲಿ ಬಹುತೇಕರು ಬಡವರು ಹಾಗೂ ಗ್ರಾಮೀಣ ಪ್ರದೇಶದವರು. ಅವರು ಶಿಕ್ಷಕರಾಗಲು ಬಿ.ಇಡಿ ಅವಕಾಶ ಒದಗಿಸಿದೆ ಎಂದು ಸದಸ್ಯ ಪ್ರೊ. ಚಂದ್ರಶೇಖರ್ ಹೇಳಿದರು.

ಆದರೆ, ಈ ವಾದವನ್ನು ಅಲ್ಲಗಳೆದ ಪ್ರೊ.ಎಸ್.ಎ. ಬಾರಿ, ಉದ್ಯೋಗ ಮತ್ತು ವ್ಯಾಸಂಗವನ್ನು ಜೋಡಿಸುವುದು ಸರಿ ಇಲ್ಲ ಎಂದರು.
ಇದನ್ನು ವ್ಯವಹಾರ ನಿರ್ವಹಣಾಶಾಸ್ತ್ರದ ಡೀನ್ ಡಾ.ಹೀರೇಮಣಿನಾಯ್ಕ, ಪ್ರೊ. ಮುರುಳೀಧರ್ ಮತ್ತಿತರ ಸದಸ್ಯರು ಅನುಮೋದಿಸಿದರು. ಚರ್ಚೆಯಲ್ಲಿ ಪ್ರೊ. ಬಾಳಿಗಾ, ಪ್ರೊ. ಶ್ರೀಧರ್ ಪಾಲ್ಗೊಂಡಿದ್ದರು.

ಬಿ.ಇಡಿ ಪದವಿ ಎರಡು ವರ್ಷದ ಕೋರ್ಸ್: ಚಿಂತನೆ
ಮುಂಬರುವ ಶೈಕ್ಷಣಿಕ ವರ್ಷ 2013-14ನೇ ಸಾಲಿನಿಂದಲೇ ಬಿ.ಇಡಿ ಪದವಿ ಕೋರ್ಸ್‌ನ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲು ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಲಿದೆ ಎಂದು ಕುಲಪತಿ ಪ್ರೊ.ಎಸ್.ಎ. ಬಾರಿ ಭರವಸೆ ನೀಡಿದರು.

ಬಿ.ಇಡಿಗೂ ಸೆಮಿಸ್ಟರ್ ಪದ್ಧತಿ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ಮೊದಲು ಕುಲಸಚಿವ (ಆಡಳಿತ) ಪ್ರೊ.ಟಿ.ಆರ್. ಮಂಜುನಾಥ ಮಾತನಾಡಿ, ಒಂದು ವರ್ಷದ ಬಿ.ಇಡಿ ಪದವಿ ಮಾಡಲು ವಿದ್ಯಾರ್ಥಿಗಳು ಈಗ ಮೂರು ವರ್ಷ ನಷ್ಟ ಮಾಡಿಕೊಳ್ಳಬೇಕಾಗಿದೆ. ಆದಷ್ಟು ಬೇಗ ಈ ಅವೈಜ್ಞಾನಿಕ ಪದ್ಧತಿ ಬದಲಾಗಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ನಿಕಾಯದ ಡೀನ್ ಡಾ.ಎಸ್.ಎಸ್.ಪಾಟೀಲ್, ಇಡೀ ರಾಜ್ಯದಲ್ಲಿ ಶಿವಮೊಗ್ಗ, ಗುಲ್ಬರ್ಗ ಬಿಟ್ಟರೆ ಉಳಿದೆಲ್ಲ ವಿಶ್ವವಿದ್ಯಾಲಯಗಳಲ್ಲಿ ಬಿ.ಇಡಿ ಕೋರ್ಸ್ ಈಗ ಎರಡು ವರ್ಷಕ್ಕೆ ವಿಸ್ತರಿಸಲಾಗಿದೆ. ಇಲ್ಲಿಯೂ ಅಳವಡಿಸುವ ಮುಂಚೆ ಕೋರ್ಸ್ ಹೇಗಿರಬೇಕೆಂಬ ಬಗ್ಗೆ ಕಾರ್ಯಾಗಾರ ನಡೆಸಿದರೆ ಉತ್ತಮ ಎಂದು ಸಲಹೆ ಮಾಡಿದರು.

ಉಳಿದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪರೀಕ್ಷೆಗಳ ಫಲಿತಾಂಶ ತಡವಾಗಿ ಪ್ರಕಟವಾಗುತ್ತಿದೆ. ಇದರಿಂದ ಸಕಾಲಕ್ಕೆ ಬಿ.ಇಡಿ ಕೋರ್ಸ್ ಆರಂಭಿಸಲು ಆಗುತ್ತಿಲ್ಲ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT