ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟಿಗೆ ತಾತ್ಕಾಲಿಕ ಕದನ ವಿರಾಮ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರು ಇಡೀ ದಿನ ನಡೆಸಿದ ಸಂಧಾನದಿಂದ ಆಡಳಿತಾರೂಢ ಬಿಜೆಪಿಯ ಅಂತಃಕಲಹ ಸದ್ಯಕ್ಕೆ ಶಮನವಾಗಿದೆ. ಕಳೆದುಕೊಂಡಿದ್ದ  ಮುಖ್ಯಮಂತ್ರಿ ಪಟ್ಟವನ್ನು ಪುನಃ ದಕ್ಕಿಸಿಕೊಳ್ಳಲು ಪಟ್ಟುಹಿಡಿದು ತಮ್ಮ ಬೆಂಬಲಿಗರ ಮೂಲಕ ಒತ್ತಡ ಹೇರುತ್ತಿರುವ ಬಿ.ಎಸ್.ಯಡಿಯೂರಪ್ಪ ಕೂಡ ಆರ್‌ಎಸ್‌ಎಸ್ ನಾಯಕರ ಹಿತಬೋಧೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

`ಸಂಕ್ರಾಂತಿ ಒಳಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಮುಂದಿನ ನಡೆ ನೆಟ್ಟಗಿರುವುದಿಲ್ಲ~ ಎಂದು ಯಡಿಯೂರಪ್ಪ ಪರೋಕ್ಷ ಎಚ್ಚರಿಕೆ ಕೊಟ್ಟ ನಂತರ ಆರ್‌ಎಸ್‌ಎಸ್ ಮುಖಂಡರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನದ ಸಲುವಾಗಿ ಬುಧವಾರ ಪ್ರಮುಖರ ಸಭೆ ನಡೆಸಿದರು.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವರಾದ ಆರ್.ಅಶೋಕ, ಜಗದೀಶ ಶೆಟ್ಟರ್, ಎಸ್.ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ ಸಭೆಯಲ್ಲಿ ಹಾಜರಿದ್ದರು.

ಆರ್‌ಎಸ್‌ಎಸ್ ಪ್ರಮುಖರಾದ ಮೈ.ಚ.ಜಯದೇವ, ವಿ.ಸತೀಶ್, ಕೆ.ಪ್ರಭಾಕರ ಭಟ್, ಕೆ.ನರಹರಿ, ಮಂಗೇಶ್ ಭೇಂಡೆ, ಮುಕುಂದ್, ಎಂ.ಪಿ.ಕುಮಾರ್ ಸೇರಿದಂತೆ ಇತರ ಪ್ರಮುಖರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಯಡಿಯೂರಪ್ಪನವರ ಆಪ್ತ, ವಿಧಾನ ಪರಿಷತ್ ಸದಸ್ಯ ಲೆಹರ್‌ಸಿಂಗ್ ಅವರ ಡಾಲರ್ಸ್‌ ಕಾಲೋನಿ ಮನೆಯಲ್ಲಿ ಮಧ್ಯಾಹ್ನ 3ರಿಂದ ಸಂಜೆ 7ರ ವರೆಗೆ ಸಂಧಾನ ಸಭೆ ನಡೆಯಿತು. ಅಧಿಕೃತ ಸಭೆ ನಂತರ ಯಡಿಯೂರಪ್ಪ, ಸದಾನಂದ ಗೌಡ ಮತ್ತು ಈಶ್ವರಪ್ಪ ಪರಸ್ಪರ ಚರ್ಚೆ ನಡೆಸಿದರು.

ಸಂಧಾನ ಸಭೆಯಿಂದಾಗಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆ ಕಡೆಗೆ ಹೆಚ್ಚು ಗಮನ ನೀಡಲಿದ್ದು, ಅವರಿಗೆ ಮುಖ್ಯಮಂತ್ರಿ ಅಥವಾ ಪಕ್ಷದ ಅಧ್ಯಕ್ಷ ಸ್ಥಾನ ಸದ್ಯಕ್ಕೆ ಇಲ್ಲ ಎನ್ನಲಾಗಿದೆ. ಪಕ್ಷ ಮತ್ತು ಸರ್ಕಾರ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಲು ಅವರಿಗೆ ಸೂಚಿಸಲಾಗಿದೆ. ಅಲ್ಲದೆ, ಪಕ್ಷ ಸಂಘಟನೆ ಸಲುವಾಗಿ ರಾಜ್ಯ ಪ್ರವಾಸ ಹೋಗಲೂ ಅವರಿಗೆ ಒಪ್ಪಿಗೆ ನೀಡಲಾಗಿದೆ. ಪರಸ್ಪರ ಹೊಂದಾಣಿಕೆಯಿಂದ ಎಲ್ಲರೂ ಒಟ್ಟಾಗಿ ಹೋಗಬೇಕು ಎಂಬ ಸೂಚನೆಯನ್ನೂ ಆರ್‌ಎಸ್‌ಎಸ್ ಪ್ರಮುಖರು ನೀಡಿದ್ದಾರೆ.

ಇತ್ತೀಚೆಗೆ ಯಡಿಯೂರಪ್ಪ ಅವರು ಈಶ್ವರಪ್ಪ ವಿರುದ್ಧ ಕೊಟ್ಟ ಹೇಳಿಕೆ; ಯಡಿಯೂರಪ್ಪ ಬೆಂಬಲಿಗರಾದ ಎಂ.ಪಿ.ರೇಣುಕಾಚಾರ್ಯ, ಸುರೇಶ್ ಗೌಡ, ಬಿ.ಪಿ.ಹರೀಶ್ ಸೇರಿದಂತೆ ಇತರರು ಕೊಡುತ್ತಿರುವ ಹೇಳಿಕೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

ಬೇಕಾಬಿಟ್ಟಿ ಹೇಳಿಕೆ ಕೊಡುವವರಿಗೆ ಕಡಿವಾಣ ಹಾಕಬೇಕು. ಅನಗತ್ಯವಾಗಿ ಮುಖ್ಯಮಂತ್ರಿ ಸೇರಿದಂತೆ ಯಾರು ಕೂಡ ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಬಾರದು ಎನ್ನುವ ಸಲಹೆಯನ್ನೂ ಸಂಘ ಪರಿವಾರದ ಮುಖಂಡರು ನೀಡಿದರು ಎನ್ನಲಾಗಿದೆ.

ಬಿಕ್ಕಟ್ಟು ತಿಳಿಗೊಳಿಸುವ ಕುರಿತು ಪಕ್ಷದ ಹೈಕಮಾಂಡ್‌ಗೆ ಮನವಿ ಸಲ್ಲಿಸಲು ಸಚಿವರಾದ ಅಶೋಕ, ಶೋಭಾ, ಮುರುಗೇಶ ನಿರಾಣಿ ಅವರು ಪ್ರತ್ಯೇಕವಾಗಿ ದೆಹಲಿಗೆ ಹೋಗಿದ್ದರ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಈ ರೀತಿ ನೇರವಾಗಿ ದೆಹಲಿಗೆ ಹೋಗುವ ಸಂಪ್ರದಾಯ ಕೈಬಿಡಬೇಕೆನ್ನುವ ಸೂಚನೆ ನೀಡಿದರು ಎಂದು ಗೊತ್ತಾಗಿದೆ.

ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿ, `ಈ ಮಟ್ಟಕ್ಕೆ ಬೆಳೆಸಿದ ಪಕ್ಷಕ್ಕೆ ದ್ರೋಹ ಬಗೆಯಲಾರೆ. ಪಕ್ಷದಲ್ಲಿದ್ದು, ಅದನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಕಟ್ಟುತ್ತೇನೆ~ ಎಂದು ಹೇಳಿದರು ಎನ್ನಲಾಗಿದೆ. ಸಭೆ ನಂತರ ಯಡಿಯೂರಪ್ಪ ಸುದ್ದಿಗಾರರ ಜತೆ ಮಾತನಾಡಿ, `ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಕಟ್ಟುತ್ತೇವೆ~ ಎಂದು ಹೇಳಿದರು.

ಸ್ಥಾನಮಾನದ ಬಗ್ಗೆ ಯಾವ ತೀರ್ಮಾನವಾಯಿತು ಎಂದು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಲಿಲ್ಲ.
ಇದೇ ಸಂದರ್ಭದಲ್ಲಿ ಈಶ್ವರಪ್ಪ ಮಾತನಾಡಿ, `ಪಕ್ಷ ಸಂಘಟನೆ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಸಂಘ ಪರಿವಾರದ ಪ್ರಮುಖರು ಸಲಹೆ ನೀಡಿದ್ದು, ಆ ಪ್ರಕಾರ ನಡೆದುಕೊಳ್ಳಲು ಎಲ್ಲರೂ ಒಪ್ಪಿಗೆ ಕೊಟ್ಟರು~ ಎಂದರು.

ಗೋಪ್ಯ ಸಭೆ: ಈ ಸಭೆಯನ್ನು ಅತಿ ಗೋಪ್ಯವಾಗಿಯೇ ಇಡಲಾಗಿತ್ತು. ಮುಖ್ಯಮಂತ್ರಿ ಸೇರಿದಂತೆ ಯಾವೊಬ್ಬ ಸಚಿವರು ಕೂಡ ಸರ್ಕಾರಿ ವಾಹನಗಳನ್ನು ಬಳಸಲಿಲ್ಲ. ಎಲ್ಲರೂ ಆರ್‌ಎಸ್‌ಎಸ್ ಕಳುಹಿಸಿದ್ದ ವಾಹನಗಳಲ್ಲಿಯೇ ರಹಸ್ಯವಾಗಿ ಲೆಹರ್‌ಸಿಂಗ್ ಮನೆಗೆ ತೆರಳಿದರು. ಆದರೆ, ವಿಷಯ ಮಾಧ್ಯಮಗಳಿಗೆ ಗೊತ್ತಾದ ಕಾರಣ ಮಾಧ್ಯಮ ಪ್ರತಿನಿಧಿಗಳೂ ಅಲ್ಲಿಗೆ ದೌಡಾಯಿಸಿದರು.

ನರಹರಿ ಮನೆಯಲ್ಲೂ ಸಭೆ: ಪ್ರಮುಖ ಸಂಧಾನ ಸಭೆಗೂ ಮುನ್ನವೇ ಆರ್.ಎಸ್.ಎಸ್ ಪ್ರಮುಖರು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ನರಹರಿ ಅವರ ಶ್ರೀರಾಮಪುರದ ಮನೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಚರ್ಚೆ ನಡೆಸಿದರು.

ಯಡಿಯೂರಪ್ಪ ಇಟ್ಟಿರುವ ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ, ಅವರ ಸಮ್ಮುಖದಲ್ಲಿ ಯಾವ ರೀತಿ ಚರ್ಚೆ ನಡೆಸಬೇಕು ಎಂಬುದರ ಬಗ್ಗೆ ಪೂರ್ವ ತಯಾರಿ ನಡೆಸಿದರು.

ಈ ಸಭೆಯಲ್ಲಿ ಜಯದೇವ ಸೇರಿದಂತೆ ಇತರರು ಭಾಗವಹಿಸಿದ್ದರು. ರಾಜಕೀಯ ವಿದ್ಯಮಾನಗಳ ಜತೆಗೆ ಇದೇ 27ರಿಂದ 29ರವರೆಗೆ ಹುಬ್ಬಳ್ಳಿಯಲ್ಲಿ ನಡೆಯುವ ಆರ್‌ಎಸ್‌ಎಸ್‌ನ `ಹಿಂದೂ ಶಕ್ತಿ ಸಂಗಮ~ ಕಾರ್ಯಕ್ರಮದ ಸಿದ್ಧತೆ ಬಗ್ಗೆಯೂ ಚರ್ಚಿಸಲಾಯಿತು ಎಂದು ಗೊತ್ತಾಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಈ ಕಾರ್ಯಕ್ರಮ ನಡೆಯಲಿದ್ದು, 40 ಸಾವಿರಕ್ಕೂ ಹೆಚ್ಚು ಸರ ಸಂಚಾಲಕರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT