ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟು: ಸಿಂಗ್ ಸಲಹೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ರಿಟೋರಿಯಾ (ಪಿಟಿಐ): ಯೂರೋಪ್ ಆರ್ಥಿಕ ಬಿಕ್ಕಟ್ಟು ಅಭಿವೃದ್ಧಿಶೀಲ ದೇಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಜಾಗತಿಕ ಅರ್ಥವ್ಯವಸ್ಥೆಯು ಮತ್ತೆ ಆರ್ಥಿಕ ಹಿಂಜರಿತಕ್ಕೆ ಒಳಗಾಗುವುದನ್ನು ತಡೆಯಲು ಅಭಿವೃದ್ಧಿಹೊಂದಿದ ದೇಶಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಅರ್ಥವ್ಯವಸ್ಥೆಯ ಸಾಂಪ್ರದಾಯಿಕ ಎಂಜಿನ್‌ಗಳಾಗಿರುವ ಅಮೆರಿಕ, ಜಪಾನ್ ಮತ್ತು ಸಾಲದ ಬಿಕ್ಕಟ್ಟಿಗೆ ಸಿಲುಕಿರುವ ಐರೋಪ್ಯ ಒಕ್ಕೂಟವು ಜಾಗತಿಕ ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಗೆ ನಕಾರಾತ್ಮಕ ಸಂಕೇತ ಕಳಿಸುತ್ತಿವೆ. ಇದರಿಂದ ಎಲ್ಲೆಡೆ ದುಗುಡ ಕಂಡುಬರುತ್ತಿದೆ ಎಂದು ಪ್ರಧಾನಿ ವಿಶ್ಲೇಷಿಸಿದ್ದಾರೆ. ಇಲ್ಲಿ ನಡೆಯುತ್ತಿರುವ `ಐಬಿಎಸ್‌ಎ~ ಶೃಂಗಸಭೆಯ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು.

ಇಂತಹ ನಕಾರಾತ್ಮಕ ಬೆಳವಣಿಗೆಗಳು ಸದ್ಯಕ್ಕೆ ಅಭಿವೃದ್ಧಿಶೀಲ ದೇಶಗಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರಿಲ್ಲ. ಆದರೆ, ಇದರಿಂದ ಈ ದೇಶಗಳು ಎದುರಿಸುತ್ತಿರುವ ಅಭಿವೃದ್ಧಿಯ ಸವಾಲು ಎದುರಿಸುವ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಯೂರೋಪ್ ಮತ್ತಿತರ ಸಿರಿವಂತ ದೇಶಗಳು ಪರಿಣಾಮಕಾರಿಯಾದ ಕ್ರಮಗಳನ್ನು ಸಕಾಲಕ್ಕೆ ಕೈಗೊಂಡರೆ ಬಂಡವಾಳ ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಕಂಡು ಬರುತ್ತಿರವ ಆತಂಕ ದೂರವಾಗಲಿದೆ.
 
ಇದರಿಂದ ಜಾಗತಿಕ ಅರ್ಥ ವ್ಯವಸ್ಥೆಯು ಎರಡನೇ ಬಾರಿಗೆ ಆರ್ಥಿಕ ಹಿಂಜರಿಕೆಗೆ ಒಳಪಡುವುದನ್ನು ತಡೆಯಲು ಸಾಧ್ಯವಾಗುವುದು ಎಂದರು.ಪಶ್ಚಿಮ ದೇಶಗಳಲ್ಲಿನ ಹಣಕಾಸು ಬಿಕ್ಕಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು `ಐಬಿಎಸ್‌ಎ~ 5ನೇ ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುತ್ತಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸದ್ಯದ ಜಾಗತಿಕ ವ್ಯವಸ್ಥೆಯನ್ನು ಸಮರ್ಥವಾಗಿ ಬಿಂಬಿಸುವ ರೀತಿಯಲ್ಲಿ ಬದಲಾಯಿಸಲು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಾದ ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ (ಐಬಿಎಸ್‌ಎ) ಒತ್ತಾಯಿಸುತ್ತಿವೆ.

ಐಬಿಎಸ್‌ಎ ಶೃಂಗ: ಸಾಗರೋತ್ತರ ಮತ್ತು ವಾಯುಯಾನ ಕ್ಷೇತ್ರದ ವ್ಯವಹಾರ ವೃದ್ಧಿಗೆ ಸಂಬಂಧಿಸಿದಂತೆ ಭಾರತ- ಬ್ರೆಜಿಲ್ - ದಕ್ಷಿಣ ಆಫ್ರಿಕಾ  (ಐಬಿಎಸ್‌ಎ) ದೇಶಗಳು ವ್ಯವಹಾರಕ್ಕೆ ಸಂಬಂಧಿಸದ ಅಡೆತಡೆಗಳನ್ನು ತೆಗೆದು ಹಾಕಲು ನಿರ್ಧರಿಸಿವೆ.

ಈ ಮೂರು ದೇಶಗಳು 2015ರ ವೇಳೆಗೆ ತಮ್ಮ ವ್ಯವಹಾರವನ್ನು 25 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ಅವಕಾಶ ನೀಡುವಂತಹ ಮಾರ್ಗೋ ಪಾಯಗಳನ್ನು ಕಂಡು ಹಿಡಿಯುತ್ತಿದ್ದು, ಈ ನಿಟ್ಟಿನಲ್ಲಿ ವ್ಯವಹಾರಕ್ಕೆ ಸಂಬಂಧಿಸದ ಅಡೆತಡೆಗಳನ್ನು ನಿವಾರಣೆ ಮಾಡಲು ಸಮ್ಮತಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT