ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಡಾಯಿಸಿದೆ ಸಮಸ್ಯೆ

ಕೊಳವೆಬಾವಿಗೆ ದೊರಕದ ವಿದ್ಯುತ್ ಸಂಪರ್ಕ
Last Updated 8 ಏಪ್ರಿಲ್ 2013, 9:38 IST
ಅಕ್ಷರ ಗಾತ್ರ

ಮುಳಬಾಗಲು: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಈಗಾಗಲೇ ಸುಮಾರು 29 ಕೊಳವೆ ಬಾವಿ ಕೊರೆಸಲಾಗಿದ್ದರೂ; ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡುವಂತಿಲ್ಲ. ಬಾವಿಗಳನ್ನು ಕೊರೆದು ಮೂರು ತಿಂಗಳಿಗೂ ಹೆಚ್ಚು ದಿನಗಳಾಗಿದ್ದರೂ ನೀರು ಪಡೆಯದ ಸನ್ನಿವೇಶ ನಿರ್ಮಾಣವಾಗಿದೆ.

ಪುರಸಭೆ ಪ್ರತಿನಿಧಿಗಳು. ಅಧಿಕಾರಿಗಳು, ಪ್ರಜಾಪ್ರತಿನಿಧಿಗಳು ಚುನಾವಣೆ ಗುಂಗಿನಲ್ಲಿದ್ದಾರೆ. ಹೀಗಾಗಿ ಎಲ್ಲ ವಯೋಮಾನದವರು ಕುಡಿಯುವ ನೀರಿಗಾಗಿ ಪಟ್ಟಣದ ಹೊರವಲಯದ ಕೆಲ ಆಯ್ದ ಪ್ರದೇಶಗಳಿಗೆ ಪ್ರತಿ ದಿವಸ ಅಲೆಯುವುದು ಸಾಮಾನ್ಯ ದೃಶ್ಯವಾಗಿದೆ.
ಚುನಾವಣೆ ಘೋಷಣೆಗೂ ಮುನ್ನ ಕೆಲ ಮುಖಂಡರು ಪುಕ್ಕಟೆ ನೀರು ಸರಬರಾಜು ಮಾಡುತ್ತಿದ್ದರು. ಈಗ ನೀತಿ ಸಂಹಿತೆ ಕಾರಣ ಅದೂ ನಿಂತಿದೆ. ಪುರಸಭೆಯ ನೀರಿನ ಟ್ಯಾಂಕರ್ ಮುಂದೆ ಜನ ಜಾತ್ರೆ ನೆರೆಯುತ್ತಿದೆ.

ಜನಸಂಖ್ಯೆಯಲ್ಲಿ ಶೇ 15ರಷ್ಟು ಶ್ರೀಮಂತರು ಬದಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಶೇ 85ರಷ್ಟು ಸಾಮಾನ್ಯರು ಪುರಸಭೆ ಸರಬರಾಜು ಮಾಡುವ ನೀರಿಗಾಗಿಯೇ ಕಾಯುತ್ತಾರೆ. ಆದರೂ ಪುರಸಭೆ  ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಜನರ ದೂರು.

108 ಬಾವಿ: ಪಟ್ಟಣದ 141 ಕೊಳವೆಬಾವಿಗಳ ಪೈಕಿ 108 ಕೆಲಸ ಮಾಡುತ್ತಿವೆ. ಆ ಮೂಲಕ ಪಟ್ಟಣದ ನಾಗರಿಕರಿಗೆ ಅಗತ್ಯವಿರುವ ನೀರು ಸರಬರಾಜು ಮಾಡಬಹುದು. ಆದರೆ ಹಲ ಮಂದಿ ಅಕ್ರಮವಾಗಿ ಕೊಳಾಯಿ ಸಂಪರ್ಕ ಪಡೆದಿರುವುದರಿಂದ ಹೆಚ್ಚಿನ ನೀರು ಬಲಿಷ್ಠರ ಪಾಲಾಗುತ್ತಿದೆ ಎಂಬ ದೂರು ಬಹಳ ದಿನಗಳಿಂದ ಇದೆ.

ಅಕ್ರಮ ಸಂಪರ್ಕ ಪಡೆದವರ ಮೇಲೆ ಕ್ರಮಕ್ಕಾಗಿ ಹಲ ಬಾರಿ ಜನ ಪುರಸಭೆ ಮುಂದೆ ಧರಣಿ, ಪ್ರತಿಭಟನೆ ನಡೆಸಿದ್ದಾರೆ. ಆದರೆ ತಾತ್ಕಾಲಿಕವಾಗಿ ಅಕ್ರಮ ಸಂಪರ್ಕ ಕಡಿತಗೊಳಿಸಿದರೂ ನಂತರ ಅದೇ ಪರಿಪಾಠ ಮುಂದುವರಿಯುತ್ತಿದೆ.

ಅಕ್ರಮ ನಲ್ಲಿ ಸಂಪರ್ಕವಿರುವವರೆಲ್ಲ ಬಲಿಷ್ಠರಾದ ಕಾರಣ ಅಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳೂ ಇವೆ. ವಿದ್ಯುತ್‌ನ ಏರುಪೇರು ಸಹ ಕುಡಿಯುವ ನೀರಿನ ಸರಬರಾಜಿಗೆ ಅಡ್ಡಿಯುಂಟು ಮಾಡಿದೆ. ಕಡಿಮೆ ವೊಲ್ಟೇಜ್ ಕಾರಣ ಕರೆಂಟ್ ಇದ್ದರೂ ಸಹ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ.

ವಿದ್ಯುತ್ ಸಂಪರ್ಕ: ಮುಖ್ಯಮಂತ್ರಿಗಳ ನಿಧಿಯಿಂದ ಎರಡು ತಿಂಗಳ ಹಿಂದೆ ಮಸೀದಿಪಾಳ್ಯ, ಎಂ.ಎನ್.ಹಳ್ಳಿ, ಬಸ್‌ನಿಲ್ದಾಣ, ವೀರಭದ್ರನಗರ ದೇವಸ್ಥಾನ ರಸ್ತೆ, ಆಶ್ರಯ ಬಡಾವಣೆ, ಮುತ್ಯಾಲಪೇಟಿ, ಅಬಕಾರಿ ಕಚೇರಿ ಬಳಿ, ಭಜಂತ್ರಿಪಾಳ್ಯ, ನೂಗಲಬಂಡೆ, ರಾಮಸಮುದ್ರರಸ್ತೆ, ಕುರುಬರಪಾಳ್ಯ, ಓಣಿಟ್ಯಾಂಕ್ ರಸ್ತೆ, ಹೈದರಿ ನಗರ, ಹೈದರಿನಗರದ ಆರ್‌ಎಂಸಿ ಹೊರಭಾಗದ ಪೂರ್ವ, ಬಜಾರು ಬೀದಿ, ಪಳ್ಳಿಗರಪಾಳ್ಯ, ಸಾಮಿಲ್ ಹಿಂಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.


ಶಿವಕೇಶವನಗರ, ಹೊಸ ಎಡಿ ಕಾಲೊನಿ ಪೂರ್ವ, ಮುತ್ಯಾಲಪೇಟಿ, ಕುರುಬರಪೇಟೆ, ನೂಗಲಬಂಡೆ, ಮಾರುತಿ ನಗರ, ದರ್ಗಾ ಹಿಂಭಾಗದ ಪುಷ್ಕರಣಿ, ಬಜಾರು ಬೀದಿ, ಜಹಂಗೀರ್ ಮೊಹಲ್ಲಾ, ಹೂವಿನ ಮಾರುಕಟ್ಟೆ ಬಳಿ, ಬೂಸಾಲಕುಂಟೆ , 15ನೇ ವಾರ್ಡ್‌ನ ಹೊಸಕಟ್ಟಿ ಕೆರೆ ಮೇಲಿನ ಭಾಗ, 17ನೇ ವಾರ್ಡ್‌ನ ಆರ್‌ಎಂಸಿ ಮಾರ್ಕೆಟ್ ಪಂಪ್‌ಹೌಸ್ ಬಳಿ, 9ನೇ ವಾರ್ಡ್‌ನ ಮಾಕಂರಾಮಯ್ಯ ಕಟ್ಟಡ ಸೇರಿದಂತೆ ಒಟ್ಟು 31 ಕೊಳವೆಬಾವಿಗಳಿಗೆ ಪಂಪು ಮೋಟರ್‌ಗಳನ್ನು ಇಳಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ನೀಡದ ಕಾರಣ ಹೆಸರಿಗಷ್ಟೇ ಕೊಳವೆಬಾವಿ ಕೊರೆಸಿದಂತಾಗಿದೆ. ನೀರಿದ್ದೂ ಅದನ್ನು ಸಮರ್ಪಕವಾಗಿ ಹೊರತೆಗೆಯಲಾರದೇ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ವಿದ್ಯುತ್ ಸಂಪರ್ಕಕ್ಕಾಗಿ ಅಗತ್ಯವಿರುವ ಠೇವಣೆ ನೀಡುವುದಾಗಿ ಬೆಸ್ಕಾಂ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆಯೇ ಮನವಿ ಮಾಡಲಾಗಿದೆ. ಆದರೆ ಬೆಸ್ಕಾಂ ಸ್ಪಂದಿಸಿಲ್ಲ ಎನ್ನುತ್ತಾರೆ  ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT