ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಪೊಲೀಸ್ ಬಂದೋಬಸ್ತ್

Last Updated 11 ಅಕ್ಟೋಬರ್ 2012, 9:55 IST
ಅಕ್ಷರ ಗಾತ್ರ

ಬೆಳಗಾವಿ: ಸುವರ್ಣಸೌಧದ ಉದ್ಘಾಟನೆ ಅ. 11 ರಂದು ನಡೆಯಲಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ತಿಳಿಸಿದ್ದಾರೆ.

ರಾಷ್ಟ್ರಪತಿಗಳು ಸೇರಿದಂತೆ ಅತೀ ಗಣ್ಯಾತಿಗಣ್ಯ ವ್ಯಕ್ತಿಗಳು ನಗರಕ್ಕೆ ಆಗಮಿಸುತ್ತಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮತ್ತು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರಪತಿಗಳು ಸುವರ್ಣ ವಿಧಾನಸೌಧ ಉದ್ಘಾಟನೆ ಕಾರ್ಯಕ್ರಮ ಸೇರಿದಂತೆ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುವರ್ಣ ವಿಧಾನಸೌಧ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳು, ಚುನಾಯಿತ ಜನಪ್ರತಿನಿಧಿಗಳು ಮತ್ತು ಪತ್ರಿಕಾ ವರದಿಗಾರರಿಗೆ ಸುವರ್ಣ ವಿಧಾನಸೌಧದ ಮುಖ್ಯ ದ್ವಾರದಿಂದ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗಾಗಿ ಸುವರ್ಣ ವಿಧಾನಸೌಧದ ದಕ್ಷಿಣ ದಿಕ್ಕಿನಲ್ಲಿರುವ ಎರಡು ದ್ವಾರಗಳ ಮೂಲಕ ಪ್ರವೇಶವನ್ನು ಕಲ್ಪಿಸಲಾಗಿದೆ. ಈ ಸದಂರ್ಭದಲ್ಲಿ ಮೋಬೈಲ್ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದ ನಂತರ ರಾಷ್ಟ್ರಪತಿಗಳು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದು, ಈ ಕಾರ್ಯಕ್ರಮದಲ್ಲಿ ಚುನಾಯಿ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪತ್ರಿಕಾ ವರದಿಗಾರರಿಗೆ ಮಾತ್ರ ಪ್ರವೇಶವಿದೆ.

ಗಣ್ಯ ವ್ಯಕ್ತಿಗಳ ಭದ್ರತೆ, ಸುಗಮ ಸಾರಿಗೆ ಸಂಚಾರದ ಅನುಕೂಲಕ್ಕಾಗಿ ಕೆಲವು ಮಾರ್ಗಗಳಲ್ಲಿ ಸಂಚಾರ ನಿಷೇಧ ಹಾಗೂ ಕೆಲವು ಮಾರ್ಗಗಳ ಸಂಚಾರ ಬದಲಾವಣೆಯ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳು ಹಾಗೂ ಗುಲಬರ್ಗಾ, ಬೀದರ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ಶಿವಮೊಗ್ಗ, ಡಾವಣಗೆರೆ ಜಿಲ್ಲೆಯಿಂದ ಸಿಬ್ಬಂದಿ ಕರೆಯಿಸಲಾಗಿದೆ. ನಾಲ್ವರು ಎಸ್‌ಪಿ, 14 ಮಂದಿ ಡಿಎಸ್‌ಪಿ, 50 ಮಂದಿ ಸಿಪಿಐ, 150 ಮಂದಿ ಪಿಎಸ್‌ಐ, 250 ಮಂದಿ ಎಎಸ್‌ಐ ಮತ್ತು 2000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೇ 30 ಲೋಹ ಶೋಧಕಗಳನ್ನು (ಮೆಟಲ್ ಡಿಟೆಕ್ಟರ್) ಅಳವಡಿಸಲಾಗಿದೆ. 8 ಶ್ವಾನ ದಳಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭಕ್ಕೆ ಅಡ್ಡಿಪಡಿಸಲು ಯತ್ನಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆಗೆ ಮುಂದಾದರೆ ಬಂಧಿಸಲಾಗುವುದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಎಚ್ಚರಿಕೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT