ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬಿ ಮತ್ತು ಬೆಡಗಿ

Last Updated 5 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮೊದಲಾದ ಖ್ಯಾತನಾಮರು ಅಭಿನಯಿಸಿರುವ ಹಿಂದಿ ಚಿತ್ರ `ಆರಕ್ಷಣ್~ ಬಿಡುಗಡೆಗೂ ಮೊದಲೇ ಬಾಲಿವುಡ್‌ನಲ್ಲಿ ಸದ್ದು, ಸುದ್ದಿ ಮಾಡುತ್ತಿದೆ.

ದೇಶದಲ್ಲಿರುವ ಜಾತಿ ಆಧಾರಿತ ಮೀಸಲಾತಿ, ದುಡ್ಡು ಮಾಡುವ ಕೇಂದ್ರಗಳಾಗಿ ರೂಪುಗೊಂಡಿರುವ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆತನದ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಮೀಸಲಾತಿಯಂತೂ ದೇಶದಲ್ಲಿ ಬಿಸಿ ಚರ್ಚೆಯ ವಿಷಯ. ಹೀಗಾಗಿ ಈ ಚಿತ್ರದ ಬಗ್ಗೆ ಕಟು ಟೀಕೆ- ಬಲವಾದ ಸಮರ್ಥನೆ ಎರಡೂ ಕೇಳಿಬರುತ್ತಿದೆ. 

 ಮುಂದಿನ ಶುಕ್ರವಾರ ಚಿತ್ರ ತೆರೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅಮಿತಾಬ್, ದೀಪಿಕಾ ಹಾಗೂ ನಿರ್ದೇಶಕ ಪ್ರಕಾಶ್ ಝಾ ಚಿತ್ರ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಇತ್ತೀಚೆಗೆ ಆರಂಭವಾಗಿರುವ ಯಶವಂತಪುರದ ಶೆರಾಟನ್ ಹೋಟೆಲ್‌ನಲ್ಲಿ ತಂಗಿದ್ದರು. ಹೊಸ ಹೋಟೆಲ್‌ನಲ್ಲಿನ ಸೇವೆಗಳ ಬಗ್ಗೆ ತಾರೀಫು ಮಾಡಿದರು.

`ಬೆಂಗಳೂರು ತನ್ನ ಮೊದಲಿನ ವರ್ಚಸ್ಸು ಕಳೆದುಕೊಂಡಿದೆ. ಹಿಂದೆ ಬೆಂಗಳೂರಿನ ಚೆಲುವಿಗೆ ಕಾರಣವಾಗಿದ್ದ ಹಸಿರು ಇಂದಿನ ಕಾಂಕ್ರೀಟ್ ಕಟ್ಟಡಗಳ ನಡುವೆ ಕಳೆದು ಹೋಗಿದೆ.
 
ನಾನು ಶೋಲೆ ಸಿನಿಮಾ ಶೂಟಿಂಗ್‌ಗೆಂದು ಬಂದಿದ್ದಾಗ ಕಂಡ ಅಂದಿನ ಬೆಂಗಳೂರಿಗೂ, ಇಂದಿನ ಬೆಂಗಳೂರಿಗೂ ತುಂಬಾ ವ್ಯತ್ಯಾಸವಿದೆ. ಆದಾಗ್ಯೂ ಬಹಳ ದಿನಗಳ ನಂತರ ಇಲ್ಲಿ ಬಂದಿರುವುದು ನನ್ನಲ್ಲಿ ಖುಷಿ ಮೂಡಿಸಿದೆ~ ಎಂದರು ನಕ್ಕರು ಬಿಗ್ ಬಿ.

`ಜಾತಿಯನ್ನು ಮುಂದಿಟ್ಟುಕೊಂಡು ನಾವು ಯಾರನ್ನೂ ಅಳೆಯಬಾರದು. ಆದರೆ ಹೆಸರಿನ ಮುಂದಿರುವ ಮನೆತನದ ಹೆಸರುಗಳು ಜಾತಿ ಸೂಚಕವಾಗಿರುತ್ತವೆ. ನನ್ನ ಚಿತ್ರರಂಗದ ವೃತ್ತಿಬದುಕನ್ನು ಉತ್ತುಂಗಕ್ಕೆ ಕೊಂಡೊಯ್ದ ಬಚ್ಚನ್ ಎಂಬ ಅಡ್ಡ ಹೆಸರಿನ ಬಗ್ಗೆ ಬಗ್ಗೆ ಹೆಮ್ಮೆಯಿದೆ~ ಎಂದರು. ಅಂದಹಾಗೆ ಬಿಗ್ ಬಿ ಶಾಲೆಯಲ್ಲಿ ಕಲಿಯುವಾಗ ಅವರ ಅಡ್ಡ ಹೆಸರು ಬಚ್ಚನ್ ಆಗಿರಲಿಲ್ಲ; ಶ್ರೀವಾಸ್ತವ ಎಂದಿತ್ತಂತೆ. ಅದನ್ನೂ ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮಾತ್ರ ಈ ಹಿಂದೆ ಕನ್ನಡ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಬಹಳ ಸಂಕೋಚದಿಂದ ಹೇಳಿಕೊಂಡರು. ನಂತರ ಅವರ ಮಾತು ಬಾಲಿವುಡ್‌ನತ್ತ ಹೊರಳಿತು. ಆಗ ಇದ್ದಕ್ಕಿದ್ದಂತೆ ಅವರ ಮುಖ ಕಳೆಗಟ್ಟಿತು. `ಬಾಲಿವುಡ್ ಬಾದ್‌ಷಾ ಜೊತೆ ಅಭಿನಯಿಸುತ್ತಿರುವುದು ಅಪಾರ ಖುಷಿ ತಂದಿದೆ.
 
ನಿರ್ದೇಶಕ ಪ್ರಕಾಶ್ ಝಾ ಅವರ ಕ್ರಿಯಾಶೀಲತೆ ನನ್ನಲ್ಲಿ ಉತ್ಸಾಹ ಪುಟಿದೇಳುವಂತೆ ಮಾಡಿದೆ~ ಎಂದು ಕೊಂಡಾಡಿದರು. ಜೊತೆಗೆ `ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದಕ್ಕಿದ್ದರಿಂದ ನನಗೆ ಭಾರತದ ಜಾತಿ ವ್ಯವಸ್ಥೆ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅವಕಾಶ ಲಭ್ಯವಾಯಿತು~ ಎಂದು ನಕ್ಕರು.

ಪ್ರಕಾಶ್ ಝಾ ಸದಾ ಸಾಮಾಜಿಕ ವಿಷಯಗಳನ್ನು ಕೈಗೆತ್ತಿಕೊಂಡು ಚಿತ್ರ ನಿರ್ಮಿಸುತ್ತಾರೆ. ಅವರ ಆರಕ್ಷಣ್ ಚಿತ್ರ ಕೂಡ ಇದಕ್ಕೆ ಹೊರತಾಗಿಲ್ಲ. `ಬಿಡುಗಡೆಗೂ ಮುನ್ನವೇ ಈ ಚಿತ್ರದ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ.

ಈ ಸಿನಿಮಾ ಜಾತಿ ಮೀಸಲಾತಿ ಕುರಿತು ಮಾತ್ರ ಹೇಳುವುದಿಲ್ಲ, ಬದಲಿಗೆ ಶಿಕ್ಷಣ ಸಂಸ್ಥೆಗಳು ಇಂದು ದುಡ್ಡು ಮಾಡುವ ಕೇಂದ್ರಗಳಾಗಿ ರೂಪುಗೊಂಡಿರುವುದನ್ನು ಸಹ ಅನಾವರಣಗೊಳಿಸಲಿದೆ~ ಎಂದರು.

`ಚಿತ್ರಕಥೆ ಪೂರ್ಣ ರೂಪ ಪಡೆದುಕೊಳ್ಳಲು ಬರೋಬ್ಬರಿ 7 ವರ್ಷ ಬೇಕಾಯಿತು. ಈ ಚಿತ್ರಕಥೆ ಸಮಾಜದೊಂದಿಗೆ ನೇರ ನಂಟು ಹೊಂದಿರುವುದರಿಂದ ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುವುದು ಸಹಜ. ನಾನು ಎಲ್ಲ ರೀತಿಯ ಪ್ರತಿಕ್ರಿಯೆ ಆಲಿಸಲು ಉತ್ಸುಕನಾಗಿದ್ದೇನೆ~ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT