ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬೈಕ್ ಮೇನಿಯಾ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಯುವಕರು ಕಟ್ಟುಮಸ್ತಾದ ಮೈಕಟ್ಟಿನ ಬಗ್ಗೆ ಯೋಚಿಸುವಷ್ಟೇ ಸಹಜವಾಗಿ ಅದಕ್ಕೆ ಹೊಂದುವಂಥ ಒಂದು ಕಟ್ಟುಮಸ್ತಾದ ದೊಡ್ಡ ಬೈಕ್ ಹೊಂದಬೇಕೆಂಬ ಕನಸನ್ನೂ ಕಟ್ಟಿಕೊಂಡಿರುತ್ತಾರೆ.

ಸಾಮಾನ್ಯವಾಗಿ ಎಲ್ಲ ಯುವಕರೂ ಬೈಕ್ ಅನ್ನು ಕೊಳ್ಳಬೇಕು ಎಂದು ಇಷ್ಟಪಡುತ್ತಾರೆಯೇ ಹೊರತು, ಸ್ಕೂಟರ್‌ನ ಆಸೆ ಇರುವುದಿಲ್ಲ. ಏಕೆಂದರೆ ಸ್ಕೂಟರ್ ಸಂಸಾರಿಗಳ ಅಥವಾ ಅಂಕಲ್‌ಗಳ ವಾಹನ.  ಕೆಲವರ ದೃಷ್ಟಿಯಲ್ಲಿ ಅದೇನಿದ್ದರೂ ಮಹಿಳೆಯರಿಗೇ ಸರಿ!

ಭಾರತದಲ್ಲೆಗ ಮೋಟಾರ್ ಸೈಕಲ್‌ಗಳ ಜಾತ್ರೆಯೇ ನೆರೆದಿದೆ. ಕಣ್ಣಿಗೆ ಬೇಕಾದ ತರಾವರಿ ಬೈಕ್‌ಗಳು ಸಿಗುತ್ತವೆ. ಹಿಂದಿಗಿಂತಲೂ ಕಡಿಮೆ ಬೆಲೆಯಲ್ಲಿ, ಅತ್ಯುತ್ತಮ ತಂತ್ರಜ್ಞಾನದ ಬೈಕ್‌ಗಳು ಸಿಗುತ್ತಿವೆ.

ಆದರೆ ಹಿಂದೆ ಹೀಗಿರಲಿಲ್ಲ. ಆಗ ಇದ್ದದ್ದು ರಾಯಲ್ ಎನ್‌ಫೀಲ್ಡ್ ಹಾಗೂ ಜಾವಾ ಬೈಕ್‌ಗಳು ಮಾತ್ರ. ನಂತರ ಯಜ್ಡಿ ಬೈಕ್‌ಗಳು ಕಾಲಿಟ್ಟವು. ಈ ಎಲ್ಲವೂ ದೈತ್ಯ ಬೈಕ್‌ಗಳೇ. ಭಾರತದ ಮಟ್ಟಿಗೆ ಇವು ದೊಡ್ಡ ಬೈಕ್‌ಗಳೆಂದೇ ಹೇಳಬಹುದು. 250 ರಿಂದ 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯ ಇದ್ದ ಬೈಕ್‌ಗಳಿವು. ನಂತರ ರಾಯಲ್ ಎನ್‌ಫೀಲ್ಡ್ 500 ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್‌ಗಳನ್ನೂ ರಸ್ತೆಗಿಳಿಸಿತು.

ತಂತ್ರಜ್ಞಾನದ ಬೆಳವಣಿಗೆ ಹಾಗೂ ಆರ್ಥಿಕ ಉದಾರೀಕರಣದ ಪರಿಣಾಮವಾಗಿ ಹೊಸ ಹೊಸ ಕಂಪೆನಿಗಳು ಬೈಕ್ ತಯಾರಿಸಲು ಮುಂದಾದ ಬಳಿಕವಂತೂ ಬಿಗ್ ಬೈಕ್‌ಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಕಡಿಮೆ ಸಾಮರ್ಥ್ಯದ ಬೈಕ್‌ಗಳು ಮಧ್ಯಮ ವರ್ಗದ ಯುವಕರಿಗೆ ಇಷ್ಟವಾದರೆ, ಕೊಂಚ ಶ್ರೀಮಂತವರ್ಗದ ಯುವಕರು ದೊಡ್ಡ ಬೈಕ್‌ಗಳನ್ನೇ ಇಷ್ಟ ಪಡಲು ಆರಂಭಿಸಿದರು.

ವಾಸ್ತವದಲ್ಲಿ ಭಾರತದಲ್ಲಿ ದೊಡ್ಡ ಸಾಮರ್ಥ್ಯದ ಬೈಕ್‌ಗಳು ಇಲ್ಲವೇ ಇಲ್ಲ. ಅಮೆರಿಕದ ಹಾರ್ಲಿ ಡೇವಿಡ್‌ಸನ್, ಜಪಾನ್‌ನ ಸುಜುಕಿ, ಕವಾಸಾಕಿ, ಇಟಲಿಯ ಇಟಾಲಿಯಾನೋ, ಜರ್ಮನಿಯ ಬಿಎಂಡಬ್ಯೂ, ಮರ್ಸಿಡಿಸ್ ಕಂಪೆನಿಗಳು ತಯಾರಿಸುವ ಬೈಕ್‌ಗಳು ಕನಿಷ್ಠ 1000 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುತ್ತವೆ. ಆದರೆ ನಮ್ಮ ದೇಶದ ಬೈಕ್‌ಗಳು ಹೆಚ್ಚೆಂದರೆ 500 ಸಿಸಿಯಷ್ಟೇ.

ಆದರೂ ಭಾರತದ ಬಿಗ್ ಬೈಕ್ ಪಟ್ಟಿಯನ್ನು ಹೀಗೆ ವ್ಯಾಖ್ಯಾನಿಸಬಹುದು. ಎಂಜಿನ್ ಸಾಮರ್ಥ್ಯ 150 ಸಿಸಿಯಿಂದ 500 ಸಿಸಿ ವರೆಗೆ. ಸಾಂಪ್ರದಾಯಿಕ ಕಾರ್ಬುರೇಟರ್ ಹೊಂದಿದ ಇಂಧನ ನಿರ್ವಹಣೆ ವ್ಯವಸ್ಥೆ. ಸ್ಪೋಕ್ ವ್ಹೀಲ್‌ಗಳು, ಅಲಾಯ್ ವ್ಹೀಲ್‌ಗಳು ಕಡಿಮೆ. ಹೆಚ್ಚು ಮೈಲೇಜ್, ಸಾಧಾರಣ ವೇಗ ಮತ್ತು ಶಕ್ತಿ.

ಈ ಗುಣಲಕ್ಷಣ ಹೊಂದಿನ ಬಿಗ್‌ಬೈಕ್‌ಗಳು ಕೇವಲ ತಮ್ಮ ಆಧುನಿಕ ನೋಟ, ಗಡಸುತನದಿಂದ ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಗಡಸುತನಕ್ಕೆ ರಾಯಲ್ ಎನ್‌ಫೀಲ್ಡ್ ಇಂದಿಗೂ ಪ್ರಸಿದ್ಧವಾದರೆ, ಹೊಸ ನೋಟಕ್ಕೆ ಇತರ ಅನೇಕ ಕಂಪೆನಿಗಳ ಬೈಕ್ ಇವೆ.

ರಾಯಲ್ ಎನ್‌ಫೀಲ್ಡ್ ಬಿಟ್ಟರೆ ಈಗ ಸದ್ಯಕ್ಕೆ ಹೆಸರು ಮಾಡಿರುವ ಬೈಕ್ ಕಂಪೆನಿ ಎಂದರೆ ಬಜಾಜ್. ಬಜಾಜ್ ತನ್ನ ಪಲ್ಸರ್ ಮೂಲಕ ಬೈಕ್ ಕ್ಷೇತ್ರದಲ್ಲಿ ತನ್ನದೇ ಸ್ಥಾನ ನಿರ್ಮಿಸಿಕೊಂಡಿತು ಎನ್ನಬಹುದು. ಈವರೆಗೆ ಬಜಾಜ್ ಸುಮಾರು 10 ಹೊಸ ಅವತರಣಿಕೆಗಳ ಪಲ್ಸರ್ ಬೈಕ್‌ಗಳನ್ನು ಹೊರಬಿಟ್ಟಿದೆ.
 
ಆರಂಭದಲ್ಲಿ ಹೊರಬಿಟ್ಟ 150 ಸಿಸಿಯ ಪಲ್ಸರ್ ತನ್ನ ಶಕ್ತಿ ಹಾಗೂ ಅದ್ಭುತ ನೋಟದಿಂದ ಯುವಕರ ಮನಸನ್ನು ಸೆಳೆದಿತ್ತು. ಇದನ್ನೇ ಅನುಸರಿದ ಪಲ್ಸರ್‌ನ ಮುಂದುವರಿದ ಅವತರಣಿಕೆಗಳಾದ ಪಲ್ಸರ್ 135, ಪಲ್ಸರ್ 180, ಪಲ್ಸರ್ 220 ಎಫ್‌ಐ, ಈಗ ಹೊರಬಂದಿರುವ ಪಲ್ಸರ್ 200 ಎನ್‌ಎಸ್ ಬೈಕ್‌ಗಳು ಅತ್ಯುತ್ತಮವಾದ ಸ್ಪೋರ್ಟ್ಸ್ ಬೈಕ್‌ಗಳು ಎನ್ನಬಹುದು. ಇವುಗಳ ಬೆಲೆಯೂ ಅಂತಹ ಹೆಚ್ಚೇನೂ ಅಲ್ಲ. 70 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗಿನ ಆನ್ ರೋಡ್ ಬೆಲೆಗೆ ಪಲ್ಸರ್ ಸಿಗುತ್ತವೆ.

ಟಿವಿಎಸ್ ಅಪಾಚೆ ಸಹ ಅತಿ ಹೆಚ್ಚಿನ ಬದಲಾವಣೆಗಳನ್ನು ಕಂಡ ಬೈಕ್. ಪಲ್ಸರ್‌ಗಿಂತ ಚಿಕ್ಕ ಬೈಕ್ ಇದಾದರೂ, ಎಂಜಿನ್ ಸಾಮರ್ಥ್ಯ ಮಾತ್ರ ಅಷ್ಟೇ ಇತ್ತು. ಹಾಗಾಗಿ ಈ ಬೈಕ್‌ಗೆ ಪಾದರಸದಂತಹ ಗುಣ. ಇದೇ ಇದರ ಹೆಗ್ಗಳಿಕೆ. ನಗರ ರಸ್ತೆಗಳಲ್ಲಿ ಪಾದರಸದಂತೆ ನುಗ್ಗುವ, ಬಳುಕಿ ಸಾಗಬಲ್ಲ ಈ ಬೈಕ್ ಯುವಕರ ಮನಸ್ಸನ್ನು ಗೆಲ್ಲಲು ಹೆಚ್ಚು ಕಾಲ ಬೇಕಾಗಲಿಲ್ಲ.

ಬೆಲೆಯಲ್ಲಿ ಇದು ಪಲ್ಸರ್ ಕುಟುಂಬಕ್ಕಿಂತ ಕಡಿಮೆಯೇ. ಸುಮಾರು 90 ಸಾವಿರ ರೂಪಾಯಿ ಒಳಗೆ ಉತ್ತಮ ಅಪಾಚೆ ಬೈಕ್ ಹೊಂದಬಹುದು.ಇವುಗಳ ಜತೆಗೆ ಬಜಾಜ್‌ನ ಕ್ರೂಸರ್ ಬೈಕ್ ಅವೆಂಜರ್ ಸಹ ಇಂದು ಚಾಲ್ತಿಯಲ್ಲಿ ಇದೆ. ಇದು ಅಪ್ಪಟ ಕ್ರೂಸರ್ ಬೈಕ್ ಅಲ್ಲದೇ ಇದ್ದರೂ, ಭಾರತದ ರಸ್ತೆಗಳಿಗೆ ಇದೇ ಕ್ರೂಸರ್. ಮಹಿಂದ್ರಾ ಮೋಜೋ ಹೆಸರಿನ ಸ್ಪೋರ್ಟ್ ಬೈಕ್ ಶೀಘ್ರ ಹೊರತರಲಿದೆ.

ಇನ್ನು ಭವಿಷ್ಯದ ಬೈಕ್‌ಗಳ ಭರಾಟೆ ಜೋರಾಗೇ ಇರಲಿದೆ. ಹೀರೋ ಕಂಪೆನಿ ಮೊಟ್ಟ ಮೊದಲ ವಿದ್ಯುತ್ ಚಾಲಿತ ಸ್ಪೋರ್ಟ್ಸ್ ಬೈಕ್ ಹೊರತರುವುದಾಗಿ ಹೇಳಿಕೊಂಡಿದೆ. ಇದು ಭಾರತದಲ್ಲಿ ಹೊಸ ಅಧ್ಯಾಯವನ್ನೇ ಆರಂಭಿಸಬಹುದು. ಇದು ಸುಮಾರು 100 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಬೈಕ್.
 
ಹಾಗೆಯೇ ಎಲೆಕ್ಟ್ರೋಥರ್ಮ್ ಕಂಪೆನಿ ಸಹ ಇಂತಹುದೇ ಬೈಕ್ ತರುವುದಾಗಿ ಪ್ರಕಟಿಸಿದೆ. ಅಮೆರಿಕದ ಹಾರ್ಲಿ ಡೇವಿಡ್‌ಸನ್ ಇನ್ನೂ ಭಾರತದಲ್ಲಿ ನೇರ ಮಾರಾಟ ಆರಂಭಿಸಿಲ್ಲ. ಆದರೆ ಇಂಥದ್ದೊಂದು ಬೆಳವಣಿಗೆಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದು ಬಂದಿದ್ದೇ ಆದಲ್ಲಿ ಯುವಕರ ಬಿಗ್ ಬೈಕ್ ಮೋಹಕ್ಕೆ ಕಡಿವಾಣವೇ ಇರುವುದಿಲ್ಲವೋ ಏನೋ!




 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT