ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚಾಣಿಕೆದಾರರಿಗೆ ತಡೆ: ಸಮಸ್ಯೆ ಪರಿಹರಿಸಲು ಆಗ್ರಹ

Last Updated 6 ಆಗಸ್ಟ್ 2013, 6:45 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ರೇಷ್ಮೆ ಗೂಡು ಕೊಳ್ಳಲು ಕೊಳ್ಳೇಗಾಲ, ರಾಮನಗರ ಮತ್ತಿತರ ಜಿಲ್ಲೆಗಳಿಂದ ಬರುವ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ತಡೆಯೊಡ್ಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ತಡೆಯುವಂತೆ ಕೋರಿ ರೈತ ಮುಖಂಡರು ಸೋಮವಾರ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆ ಉಪನಿರ್ದೇಶಕ ನರಸಿಂಹಮೂರ್ತಿ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.

ಕೊಳ್ಳೇಗಾಲ ಮತ್ತು ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗೂಡಿನ ಅಭಾವದಿಂದಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಶಿಡ್ಲಘಟ್ಟ ಮಾರುಕಟ್ಟೆಗೆ ಬರುತ್ತಿದ್ದಾರೆ. ಇದರಿಂದ ಇಲ್ಲಿಗೆ ರೇಷ್ಮೆ ಗೂಡು ತರುವ ರೈತರಿಗೆ ಲಾಭವಾಗುತ್ತದೆ. ಆದರೆ ಇದನ್ನು ಸಹಿಸದ ಕೆಲವರು ಹೊರಗಿನವರು ಇಲ್ಲಿ ಗೂಡು ಕೊಳ್ಳಬಾರದು ಎಂದು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.

ಇಂಥ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಬೇಕು. ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ರೈತರು ಯಾವುದೇ ಮಾರುಕಟ್ಟೆಯಲ್ಲಿ ಗೂಡನ್ನು ಮಾರಬಹುದು ಮತ್ತು ರೀಲರುಗಳೂ ಯಾವುದೇ ಮಾರುಕಟ್ಟೆಯಲ್ಲಿ ಕೊಳ್ಳಬಹುದಾಗಿದೆ. ರೈತ ವಿರೋಧಿ ಚಟುವಟಿಕೆಗಳು ಮುಂದುವರಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕಳ್ಳತನ, ಅನಾಮಧೇಯ ವ್ಯಕ್ತಿಗಳು ಬೀಟ್ ಕೂಗುವುದು, ಸ್ಯಾಂಪಲ್ ಹೆಸರಿನಲ್ಲಿ ರೀಲರ್ ಅಲ್ಲದವರು ಗೂಡು ಕದಿಯುವುದನ್ನು ತಪ್ಪಿಸಲು ಸಿ.ಸಿ. ಕ್ಯಾಮೆರಾ ಶೀಘ್ರವಾಗಿ ಅಳವಡಿಸಬೇಕು. ಹಳೆ ಬಾಕ್ಸ್‌ಗಳನ್ನು ಬದಲಿಸಬೇಕು. ಮುರಿದ ಜಾಲರಿಗಳನ್ನು ಸರಿಪಡಿಸಬೇಕು. ರಸೀದಿಗಳ ಪ್ರಿಂಟ್ ಸರಿಯಾಗಿರಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ, ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಅಜ್ಜವಾರ ಮುನಿರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ರೇಷ್ಮೆ ರಕ್ಷಣಾ ವೇದಿಕೆ ಅಧ್ಯಕ್ಷ ಕಲ್ಯಾಣಬಾಬು, ಅಂಗತಟ್ಟಿ ಗೋವಿಂದರಾಜು, ವೀರಾಪುರ ಮುನಿನಂಜಪ್ಪ, ಮಳಮಾಚನಹಳ್ಳಿ ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT