ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಾಪುರದ ತ್ರಿಪುರ ಸುಂದರಿ

Last Updated 18 ಜನವರಿ 2011, 10:50 IST
ಅಕ್ಷರ ಗಾತ್ರ

ನಲವತ್ತರ ದಶಕದ ಹಾಡುನಟಿ ಅಮೀರಬಾಯಿ ಕರ್ನಾಟಕಿ ಅವರ ಬಗ್ಗೆ ಸಂಶೋಧನೆ ಮಾಡುವಾಗ, ಹಿರಿಯ ತಲೆಮಾರಿಗೆ ಸೇರಿದ ಅನೇಕರನ್ನು ಭೇಟಿಯಾಗಬೇಕಾಯಿತು. ಅವರಲ್ಲಿ ಹುಬ್ಬಳ್ಳಿಯ ಶ್ರೀ ಬೆಳಂಕರ್ ಅವರೂ ಒಬ್ಬರು. ಕಂಪನಿ ನಾಟಕ, ಹಳೇ ಹಿಂದಿ ಸಿನಿಮಾ ಹಾಗೂ ಸಿನಿಮಾ ಸಂಗೀತದ ಮೇಲೆ ವ್ಯಾಮೋಹವೂ ತಿಳಿವಳಿಕೆಯೂ ಇರುವ ಬೆಳಂಕರ್, ತಮಗೆ ತಿಳಿದಿರುವುದನ್ನೆಲ್ಲ ನನ್ನೊಂದಿಗೆ ಹಂಚಿಕೊಂಡರು. ಮಾತು ಮುಗಿದ ಬಳಿಕ, ಬಿಜಾಪುರದ ತ್ರಿಪುರ ಸುಂದರಿ ಟಾಕೀಸಿನ ಛತ್ರೆ ಕುಟುಂಬದವರನ್ನು ನಾನು ಭೇಟಿಮಾಡಬೇಕೆಂದು ಸೂಚಿಸಿದರು. ಮುಂಬೈ ಕರ್ನಾಟಕದ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ಛತ್ರೆಯವರ ಮನೆತನವು,

ಏಶಿಯಾದ ಮೊಟ್ಟಮೊದಲ ಸರ್ಕಸನ್ನು ಸ್ಥಾಪಿಸಿತು; ಹಿಂದೂಸ್ತಾನಿ ಸಂಗೀತದ ದೊಡ್ಡ ಗಾಯಕ ಭೂಗಂಧರ್ವ ರೆಹಮತ್ ಖಾನರಿಗೆ ಆಶ್ರಯ ಕೊಟ್ಟಿತು; ಬಿಜಾಪುರದಲ್ಲಿ ಮೊಟ್ಟಮೊದಲ ನಾಟಕ ಮತ್ತು ಸಿನಿಮಾ ಥಿಯೇಟರ್ ನಿರ್ಮಿಸಿತು. ವಿಜಾಪುರ ಸೀಮೆಗೆ ನಾಸಿಕದಿಂದ ದ್ರಾಕ್ಷಿ ಬೆಳೆ ತಂದು ಪರಿಚಯಿಸಿತು- ಎಂದು ಮುಂತಾಗಿ ಬೆಳಂಕರ್ ವಿವರಿಸಿದರು. ಸರ್ಕಸ್ಸು, ದ್ರಾಕ್ಷಿಬೆಳೆ, ಹಿಂದೂಸ್ತಾನಿ ಸಂಗೀತ, ಸಿನಿಮಾ, ನಾಟಕ- ಎಲ್ಲಿಂದೆಲ್ಲಿಗೆ ಸಂಬಂಧ ಎಂದು ನನಗೆ ಸೋಜಿಗವಾಯಿತು.

ಒಂದು ದಿನ ಛತ್ರೆ ಕುಟುಂಬದವರನ್ನು ಭೇಟಿ ಮಾಡಲು ಬಿಜಾಪುರಕ್ಕೆ ಹೋಗಿ, ಶತಮಾನಕ್ಕೂ ಹಿಂದೆ ಕಟ್ಟಲಾದ ತ್ರಿಪುರ ಸುಂದರಿ ಟಾಕೀಸಿನ ಎದುರು ನಿಂತೆ. ಯಾವುದೋ ಕನ್ನಡ ಸಿನಿಮಾ ನಡೆಯುತ್ತಿತ್ತು. ಕುಚ್ಚಿದ ಹಸಿಶೇಂಗಾ, ಸುಟ್ಟ ಗೋವಿನಜೋಳ, ಹಣ್ಣು ಹಾಗೂ ಪಾನ್‌ಬೀಡ ಮಾರುವವರು, ಬೆಲ್ಲದುಂಡೆಗೆ ಇರುವೆ ಮುತ್ತಿಕೊಂಡಂತೆ ಟಾಕೀಸಿನ ಸುತ್ತ ಆವರಿಸಿಕೊಂಡು, ಕಿಲ್ಲೆಯನ್ನೇ ಕಟ್ಟಿದ್ದರು. ಕಟ್ಟಡದ ಮೇಲಣ ಕಿರೀಟಾಕಾರದಿಂದ ಮಾತ್ರವೇ ಅಲ್ಲೊಂದು ಥಿಯೇಟರ್ ಇದೆಯೆಂದು ಗುರುತಿಸಬೇಕಾಯಿತು.

ಥಿಯೇಟರ್‌ಗೆ ಲಗತ್ತಾಗಿ ಹಿಂಭಾಗದಲ್ಲಿ ಛತ್ರೆಯವರ ಕುಟುಂಬ ವಾಸವಿತ್ತು. ಹಳಗಾಲದ ದೊಡ್ಡ ಮನೆ. ಹೋಗಿ ಬಾಗಿಲು ತಟ್ಟಿದೆ. ಎಷ್ಟೋ ಹೊತ್ತಿನ ಬಳಿಕ ‘ಕೋಣ್’ ಎಂದು ದೊಡ್ಡಸ್ವರದಲ್ಲಿ ವಿಚಾರಿಸುತ್ತ, ಬಿಳೀ ಪಾಯಿಜಾಮ ಮತ್ತು ಬನಿಯನ್ ತೊಟ್ಟ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಉಪ್ಪರಿಗೆಯ ಪಾವಟಿಗೆಗಳಿಂದ ಇಳಿದುಬಂದರು. ಅವರು ಛತ್ರೆ ಕುಟುಂಬದ ಆರನೇ ತಲೆಮಾರಿಗೆ ಸೇರಿದ ಸಂಜಯ ಛತ್ರೆ. ವೃತ್ತಿಯಿಂದ ವಕೀಲರು. ‘ಸರ್ಕಸ್ ಆರಂಭಿಸಿದ ವಿಷ್ಣುಪಂಥರ ಬಗ್ಗೆ ತಿಳಿಕೋಬೇಕಿತ್ತು’ ಎಂದೆ. ‘ಒಳಗ ಬರ್ರೀ, ಹೊರಗ ನಿಂತೇ ಚೌಕಸಿ ಮಾಡ್ಲಿಕ್ಕ ಹತ್ತೀರಲ್ಲ’ ಎಂದು ವಿಶ್ವಾಸದಿಂದ ಬರಮಾಡಿಕೊಂಡರು. ನನ್ನ ಪರಿಚಯ ಮಾಡಿಕೊಂಡೆ. ‘ಪ್ರೊಫೆಸರ್ ಅದೀರಿ!’ ಎಂದು ಕೂತಿದ್ದ ಬೆಂಚಿನಿಂದ ಎಬ್ಬಿಸಿ, ತಾವು ಕೂಡುವ ಸುಖಾಸನದಲ್ಲಿ ನನ್ನನ್ನು ಪ್ರತಿಷ್ಠಾಪಿಸಿ, ಕುಡಿಯಲು ಚಹ ಕೊಟ್ಟರು. ಅವರ ಪೂರ್ವಜರ ಕಥೆ ಮೆಲ್ಲಮೆಲ್ಲಗೆ ಬಿಚ್ಚಿಕೊಳ್ಳತೊಡಗಿತು.

ನನಗೆ ಕುತೂಹಲವಿದ್ದುದು ಛತ್ರೆ ಎಂಬ ಅಡ್ಡಹೆಸರು ಯಾಕೆ ಬಂದಿರಬಹುದು ಎಂಬ ಬಗ್ಗೆ. ಅದಕ್ಕಿಂತ ಹೆಚ್ಚಿನ ಕುತೂಹಲವಿದ್ದುದು, ಬ್ರಾಹ್ಮಣರಲ್ಲೇ ತಮ್ಮನ್ನು ಶ್ರೇಷ್ಠವೆಂದು ಕರೆದುಕೊಳ್ಳುವ ಚಿತ್ಪಾವನರ ಕುಟುಂಬವೊಂದು, ಅಧೋಜಗತ್ತಿಗೆ ಸಂಬಂಧಪಟ್ಟ ಸರ್ಕಸ್ ಸಿನಿಮಾ ನಾಟಕ ಸಂಗೀತಗಳ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಬಗ್ಗೆ. ಬಹುಶಃ ಚಿತ್ಪಾವನ ಸಮುದಾಯದಲ್ಲೇ ಏನೋ ಒಂದು ಸಾಹಸ ಪ್ರವೃತ್ತಿಯಿದ್ದಂತೆ ತೋರುತ್ತದೆ. ಭಾರತದ ಚಲನಚಿತ್ರದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಕೂಡ ಚಿತ್ಪಾವನರು. ಅವರು ಸಿನಿಮಾ ತೆಗೆಯಲು ಪಡಬಾರದ ಪಾಡು ಪಟ್ಟದ್ದನ್ನು ಓದುವಾಗ, ಈ ಸಾಹಸದೊಂದು ಝಲಕು ಗೋಚರಿಸುತ್ತದೆ.

ಇದೇ ಸಾಮಾಜಿಕ ಹಿನ್ನೆಲೆಯಿಂದ ಬಂದವರು, ಮಾನವಧರ್ಮದ ಪ್ರತಿಪಾದಕರೂ ಕನ್ನಡದ ದೊಡ್ಡ ಸಂಶೋಧಕರೂ ಆದ ಶಂಬಾ ಜೋಶಿಯವರು. ತಮ್ಮ ಕಾಲದ ಬಹುತೇಕ ವಿದ್ವಾಂಸರು ಗತಕಾಲದ ವೈಭವೀಕರಣ ಮಾಡುತ್ತಿದ್ದಾಗ, ನಮ್ಮ ಸಂಸ್ಕೃತಿಯು ಹೇಗೆ ದ್ವಿಧಾವೃತ್ತಿಯಿಂದ ಕೂಡಿದ್ದು, ನಮ್ಮ ವರ್ತಮಾನದ ಅವನತಿಗೆ ಕಾರಣವಾಗಿದೆ ಎಂದು ದಿಟ್ಟವಾಗಿ ಹೇಳಿದ ಶಂಬಾ, ಇನ್ನೊಂದು ಬಗೆಯ ವಿದ್ವತ್ ಸಾಹಸಗೈದವರು. ತಮ್ಮ ಚಿಂತನೆಯ ಪ್ರಖರತೆ ಮತ್ತು ಉರಿವನಾಲಗೆಯಿಂದ ಮಾತಾಡುವ ದಿಟ್ಟತನದ ಕಾರಣದಿಂದಲೇ ಏಕಾಂಗಿಯಾಗಿ, ಸಂಪ್ರದಾಯಸ್ಥರಿಂದ ಕುಹಕ ಟೀಕೆ ಎದುರಿಸಿದವರು. ಅದರೂ ತಮ್ಮ ಹಟವನ್ನು ಬಿಟ್ಟುಕೊಡದವರು. 

ಪೇಶ್ವೆಯವರ ಮತ್ತು ಬೇರೆಬೇರೆ ಮರಾಠಾ ಸಂಸ್ಥಾನಿಕರ ಆಳ್ವಿಕೆಯಿದ್ದಾಗ, ದೊಡ್ಡ ಸಂಖ್ಯೆಯ ಚಿತ್ಪಾವನ ಬ್ರಾಹ್ಮಣರು, ನಾನಾ ಕಾರಣದಿಂದ ಕೊಂಕಣ ಪ್ರದೇಶವಾದ ಮಹಾರಾಷ್ಟ್ರದ ರತ್ನಗಿರಿ ಸೀಮೆಯಿಂದ, ಉತ್ತರ ಕರ್ನಾಟಕದ ಊರುಗಳಿಗೆ ವಲಸೆ ಬಂದು ನೆಲೆಸಿದರು. ಹಾಗೆ ಛತ್ರೆಯವರ ಕುಟುಂಬವೂ ರತ್ನಗಿರಿ ಭಾಗದಿಂದ ಬಂದು ನೆಲೆಸಿತು. ಕನ್ನಡ ಕವಿ ಬೇಂದ್ರೆಯವರ ಕುಟುಂಬ ಕೂಡ ರತ್ನಗಿರಿ ಮೂಲದಿಂದ ಬಂದಿದ್ದೇ. ಇದಕ್ಕೆ ಪೂರಕವಾಗಿ ರಾಮದುರ್ಗ, ನರಗುಂದ, ಜಮಖಂಡಿ, ಕುರುಂದವಾಡಿ ಮುಂತಾದ ಸಂಸ್ಥಾನಿಕರಲ್ಲಿ ಹೆಚ್ಚಿನವರು ಚಿತ್ಪಾವನರು. ಸಾಂಗಲಿ ಪಕ್ಕದಲ್ಲಿರುವ ಕುರುಂದವಾಡಿ ಸಂಸ್ಥಾನದ ಪಟವರ್ಧನರ ಆಳ್ವಿಕೆಗೆ ಒಳಪಟ್ಟ ಅನೇಕ ಊರುಗಳು ಬಿಜಾಪುರ ಜಿಲ್ಲೆಯಲ್ಲಿದ್ದವು.

ಅದರಲ್ಲಿ ಛತ್ರೆಯವರು ಇದ್ದ ತಿಕೋಟವೂ ಒಂದು. ನರಗುಂದ ಹಾಗೂ ರಾಮದುರ್ಗದಲ್ಲಿದ್ದ ತನ್ನ ಬಂಧುಗಳ ಮನೆಗೆ ಬಂದು ಹೋಗುತ್ತಿದ್ದ ನಾಥೂರಾಮ ಗೋಡ್ಸೆಯು, ಗಾಂಧಿ ಹತ್ಯೆಯಂತಹ ದುಸ್ಸಾಹಸ ಮಾಡಿದ ಬಳಿಕ, ಕರ್ನಾಟಕದ ಚಿತ್ಪಾವನ ಬ್ರಾಹ್ಮಣರ ಮೇಲೆ ಹಲ್ಲೆ ನಡೆದವು. ಆಗ ಅನೇಕ ಚಿತ್ಪಾವನರು ಪುಣೆ, ನಾಸಿಕಗಳಿಗೆ ವಲಸೆ ಹೋದರು ಎಂದು ತಿಳಿದುಬರುತ್ತದೆ. ಕರ್ನಾಟಕದ ಚಿತ್ಪಾವನರ ಮೇಲೆ ಒಂದು ಚಾರಿತ್ರಿಕ ಅಧ್ಯಯನ ನಡೆಯುವ ಅಗತ್ಯವಿದೆ.

ಆದರೆ ತಿಕೋಟ ಮತ್ತು ಬಿಜಾಪುರವನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡ ಛತ್ರೆ ಕುಟುಂಬ, ಆಳವಾಗಿ ಬೇರುಬಿಟ್ಟು ಕರ್ನಾಟಕದಲ್ಲೇ ನಿಂತಿತು. ಛತ್ರೆ ಮನೆತನದ್ದು ಎರಡು ಶತಮಾನ ಕಾಲದ ಆರೇಳು ತಲೆಮಾರುಗಳ ಕಥೆ. ಅದು ಶುರುವಾಗುವುದು ಮೋರೇಶ್ವರ ಛತ್ರೆ (1821-1881) ಅವರಿಂದ. ಕುರುಂದವಾಡಿ ಸಂಸ್ಥಾನದಲ್ಲಿ ಅಧಿಕಾರಿಯಾಗಿದ್ದ ಮೋರೇಶ್ವರ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ, ಭೂಗತರಾದವರು. ಇವರ ಮಗನೇ ಸರ್ಕಸ್ ಸ್ಥಾಪಿಸಿದ ವಿಷ್ಣುಪಂಥ ಛತ್ರೆ. ವಿಷ್ಣುಪಂಥ ಈಗ ಸಾಂಗಲಿ ನಗರದ ಭಾಗವಾಗಿರುವ ಅಂಕಖಾಪ್‌ನಲ್ಲಿ ಹುಟ್ಟಿದವರು; ಕುರುಂದವಾಡಿ ಸಂಸ್ಥಾನದಲ್ಲಿ ಅಶ್ವಲಾಯದ ಮೇಲುಸ್ತುವಾರಿದಾರ ಹಾಗೂ ಅಶ್ವಾರೋಹಿ ಆಗಿದ್ದ ವಿಷ್ಣುವಿಗೆ, ಕುದುರೆ ಸವಾರಿಯಲ್ಲಿ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ವಿಶಿಷ್ಟ ಹವ್ಯಾಸವಿತ್ತು.

ವಿಷ್ಣು, ರಾಜನ ಜತೆ ಸೈನ್ಯಕ್ಕೆ ಅರಮನೆ ಬಳಕೆಗೆ ಬೇಕಾದ ಜಾತಿ ಕುದುರೆ ಕೊಳ್ಳಲು ಬರೋಡ, ಗ್ವಾಲಿಯರ್, ಇಂದೋರ್, ಮುಂಬೈ ಮುಂತಾದ ಕಡೆ ಹೋಗುತ್ತಿದ್ದವರು; ಒಮ್ಮೆ ಅವರು ರಾಜನ ಜತೆಗೂಡಿ ಸರ್ಕಸ್ಸೊಂದನ್ನು ನೋಡಲು ಮುಂಬೈಗೆ (1879) ಹೋಗಿದ್ದರು. ಕಲ್ಕತ್ತ, ಮುಂಬೈ, ಮದರಾಸು ಮುಂತಾದ ನಗರಗಳಲ್ಲಿ ವಾಸವಿದ್ದ ಬ್ರಿಟಿಶ್ ಸೈನಿಕರ ಹಾಗೂ ಅಧಿಕಾರಿಗಳ ಕುಟುಂಬ ವರ್ಗದವರ ಮನರಂಜನೆಗಾಗಿ, ಯೂರೋಪಿನಿಂದ ನಾಟಕ ಮತ್ತು ಸರ್ಕಸ್ಸಿನ ಕಂಪನಿಗಳು ಮುಂಬೈಗೆ ಬರುತ್ತಿದ್ದವು.

ಛತ್ರೆಯವರು ನೋಡಹೋಗಿದ್ದ ರಾಯಲ್ ಇಟಾಲಿಯನ್ ಸರ್ಕಸ್ಸಿನ ಮಾಲಿಕ ವಿಲಿಯಂ ಚಿರಿನಿ, ಪ್ರಸಿದ್ಧ ಅಶ್ವಾರೋಹಿಯಾಗಿದ್ದನು. ಜೀನುರಹಿತ ಜೋಡಿ ಕುದುರೆಗಳ ಮೇಲೆ ನಿಂತುಕೊಂಡು ಕುದುರೆಗಳನ್ನು ಓಡಿಸುವ ಚಮತ್ಕಾರವನ್ನು ಮಾಡುತ್ತಿದ್ದ ಅವನು, ಪ್ರದರ್ಶನ ಮುಗಿದ ಬಳಿಕ ‘ರಾಣಿರಾಜ್ಯದಲ್ಲಿ ಯಾರಾದರೂ ಇಂತಹ ಚಮತ್ಕಾರ ಮಾಡುವ ಗಂಡಸರಿದ್ದರೆ ಮುಂದೆ ಬರಬಹುದು. ಇಲ್ಲದಿದ್ದರೆ ನನಗೆ ಜಯಪತ್ರ ಕೊಡಬೇಕು’ ಎಂದು ಘೋಷಿಸುತ್ತಿದ್ದನು. ವಿಷ್ಣುವಿಗೆ ಚಿರಿನಿಯ ಪ್ರದರ್ಶನ ಬಹಳ ಹಿಡಿಸಿತು. ಆದರೆ ಆತ ಹಾಕಿದ ಸವಾಲು ಸ್ವಾಭಿಮಾನವನ್ನು ಕೆಣಕಿತು. ವಿಷ್ಣು ಕೂಡಲೇ ಸರ್ಕಸ್ ರಿಂಗಿನೊಳಗೆ ನುಗ್ಗಿ, ಚಿರಿನಿಯ ಸವಾಲನ್ನು ಸ್ವೀಕರಿಸಿ, ಅವನಿಗಿಂತಲೂ ಚೆನ್ನಾಗಿ ಅಶ್ವಾರೋಹದ ಪ್ರದರ್ಶನ ಮಾಡಿದರೆಂದೂ ಕತೆಯಿದೆ.

ಒಟ್ಟಿನಲ್ಲಿ ಜಿದ್ದಿಗೆ ಬಿದ್ದು ವಿಷ್ಣು ರಾಜನ ಕುಮ್ಮಕ್ಕಿನಿಂದ, ಒಂದು ವರ್ಷದಲ್ಲೇ ಸರ್ಕಸ್ ಕಂಪನಿಯನ್ನು ಕಟ್ಟಿದರು. ಅದುವೇ ಏಶಿಯಾದ ಪ್ರಪ್ರಥಮ ‘ಗ್ರ್ಯಾಂಡ್ ಇಂಡಿಯಾ ಸರ್ಕಸ್’. ಬಿಳಿಯರ ಕೈಯಿಂದ ರೈಲಿನಿಂದ ಹೊರ ದಬ್ಬಿಸಿಕೊಂಡ ಗಾಂಧಿ, ಸ್ವಾತಂತ್ರ್ಯ ಹೋರಾಟದ ಚಳವಳಿ ಕಟ್ಟಿದರು; ಯೂರೋಪಿಯನ್ ಒಬ್ಬನಿಂದ ಕೆಣಕಲ್ಪಟ್ಟ ವಿಷ್ಣುಪಂಥ್ ಸರ್ಕಸ್ ಕಟ್ಟಿದರು. ಇದರ ಹಿಂದೆ, ತಮ್ಮ ತಂದೆ ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿದ್ದ ಸ್ಮೃತಿಗಳೂ ಇದ್ದವು.   

ಆ ಕಾಲದ ಸರ್ಕಸ್ ಎಂದರೆ ಮುಖ್ಯವಾಗಿ ಪ್ರಾಣಿಗಳ ಚಮತ್ಕಾರ ಪ್ರದರ್ಶನವೇ ಆಗಿತ್ತು. 1880ರಂದು ಸರ್ಕಸ್ಸಿನ ಪ್ರಥಮ ಪ್ರದರ್ಶನವು ರಾಜನ ಮುಂದೆ ನಡೆಯಿತು. ಜನ ಹುಚ್ಚೆದ್ದು ಇದನ್ನು ನೋಡುತ್ತಿದ್ದರು. 1882ರ ಹೊತ್ತಿಗೆ ಅದು ಪೂರ್ಣಪ್ರಮಾಣದ ಸರ್ಕಸ್ಸಾಗಿ ರೂಪುಗೊಂಡಿತು. ಅದರಲ್ಲಿ ವಿಷ್ಣು ಸ್ವತಃ ಅಶ್ವಾರೋಹಿಯಾಗಿ ಪ್ರದರ್ಶನ ನೀಡುತ್ತಿದ್ದರು. ಸರ್ಕಸ್ ಭಾರತದಾದ್ಯಂತ ತಿರುಗಾಟ ಆರಂಭಿಸಿತು. ಅದು ಮುಂದೆ ಅಮೆರಿಕೆಗೂ ಹೋಯಿತು. ಮೂರು ತಿಂಗಳ ಕಾಲ ಇಡೀ ಸರ್ಕಸ್ಸಿನ ಪ್ರಾಣಿಗಳನ್ನು ಹಡಗಿನಲ್ಲಿ ಸಾಗಿಸಲಾಯಿತು. ಸಿಯಾಟಲ್, ವಾಷಿಂಗ್ಟನ್ ನಗರದಲ್ಲಿ ಪ್ರದರ್ಶನಗಳಾದವು.

ವಿಷ್ಣುವಿನ ಮರಣಾನಂತರ (1905) ಹೊಣೆಗಾರಿಕೆ ಅವರ ಮಗ ಕಾಶಿನಾಥರಿಗೆ ಬಂದಿತು. 1902ರಲ್ಲಿ ಕಾಶಿನಾಥರು ಸರ್ಕಸ್ಸನ್ನು ಮತ್ತಷ್ಟು ಅಭಿವೃದ್ಧಿ ಮಾಡಿ ಶ್ರೀಲಂಕಾ, ಹಾಂಕಾಂಗ್, ಚೀನಾ, ಜಪಾನ್, ಸಿಂಗಪುರಗಳಿಗೆ ಒಯ್ದರು. ಜಪಾನಿನ ಚಕ್ರವರ್ತಿಯ ಮುಂದೆ ಪ್ರದರ್ಶನವಾಗಲು, ಚಕ್ರವರ್ತಿ ಚಿನ್ನದ ಪದಕವಿತ್ತು ಸಮ್ಮಾನಿಸಿದನು. ಬಾಲಗಂಗಾಧರ್ ತಿಲಕರು ಕಾಶಿನಾಥರ ಅಭಿಮಾನಿಯಾಗಿದ್ದು, ‘ಕೇಸರಿ’ ಪತ್ರಿಕೆಯಲ್ಲಿ ಅವರ ಬಗ್ಗೆ ಲೇಖನ ಬರೆಯುತ್ತಿದ್ದರು. ಆಂಗ್ಲರ ವಿರುದ್ಧ ಕೆಚ್ಚಿನಿಂದ ಕಟ್ಟಿದ ಈ ಸರ್ಕಸ್ಸಿಗೆ ವಿಚಿತ್ರವಾದ ವಸಾಹತುಶಾಹಿ ವಿರೋಧಿ ಆಯಾಮವಿತ್ತು. ಆಗ (1899) ಸರ್ಕಸ್ ಪ್ರದರ್ಶನಕ್ಕೆಂದು ಕಟ್ಟಿದ್ದೇ ತ್ರಿಪುರ ಸುಂದರಿ ಥಿಯೇಟರ್.

ಸಂಜಯ ಛತ್ರೆ ತಮ್ಮ ಹಿರೀಕರು ಪಡೆದ ಪದವಿ ಪ್ರಶಸ್ತಿಗಳನ್ನೆಲ್ಲ ಅಭಿಮಾನದಿಂದ ನನ್ನ ಮುಂದೆ ಹರಡಿಟ್ಟು ತೋರಿಸಿದರು. ನಂತರ ‘ಬರ್ರಿಲ್ಲಿ’ ಎಂದು ಒಂದು ದೊಡ್ಡ ಖೋಲಿಗೆ ಕರೆದೊಯ್ದರು. ಅಲ್ಲಿ ಚಾಪೆಯಗಲದ ಒಂದು ಕನ್ನಡಿಯಿತ್ತು. ಮೈಸೂರು ಅರಮನೆಯಲ್ಲಿ ಇಂತಹ ಹೆಗ್ಗನ್ನಡಿಗಳನ್ನು ನಾನು ನೋಡಿದ್ದೆ. ಆದರೆ ಈ ಕನ್ನಡಿ ವಿಷ್ಣುಪಂಥರ ಸಾಹಸತನದ ಇನ್ನೊಂದು ಮುಖವಾದ ಸಂಗೀತಕ್ಕೆ ಸಂಬಂಧಪಟ್ಟಿತ್ತು. ಸಂಜಯ ಛತ್ರೆ ಹೇಳಿದ ಪ್ರಕಾರ: ವಿಷ್ಣುವು ಗ್ವಾಲಿಯರ್‌ಗೆ ಅಶ್ವವಿದ್ಯೆ ಕಲಿಯಲು ಹೋಗಿದ್ದಾಗ, ಅಲ್ಲಿನ ಆಸ್ಥಾನಗಾಯಕ ದದ್ದೂಖಾನರಲ್ಲಿ ಹಿಂದೂಸ್ತಾನಿ ಸಂಗೀತ ಕಲಿತಿದ್ದರಂತೆ; ಒಮ್ಮೆ ಕಾಶಿಯಲ್ಲಿ ಸರ್ಕಸ್ ಕ್ಯಾಂಪು ಹಾಕಿದ್ದಾಗ, ವಿಷ್ಣು ಬೀದಿಬದಿಯಲ್ಲಿ ಕುಳಿತು ಒಬ್ಬ ಸಂಗೀತಗಾರ ಅದ್ಭುತವಾಗಿ ಹಾಡುವುದನ್ನು ಗಮನಿಸಿದರು. ವಿಚಾರಣೆ ಮಾಡಲಾಗಿ ಆತನ ಹೆಸರು ರೆಹಮತ್ ಖಾನನೆಂದೂ (1852-1922), ಆತನು ತಾನು ಹಿಂದೆ ಗ್ವಾಲಿಯರ್‌ನಲ್ಲಿದಾಗ ಸಂಗೀತ ಕಲಿಸಿದ್ದ ಹದ್ದುಖಾನರ ಮಗನೆಂದೂ ತಿಳಿಯಿತು.

ಕೂಡಲೇ ಗುರುಪುತ್ರನನ್ನು ವಿಷ್ಣು ತನ್ನ ಜತೆ ಕರೆತಂದು ಪೋಷಿಸಿದರು. ಸರ್ಕಸ್ಸಿನಲ್ಲಿ ರೆಹಮತ್ ಖಾನರ ಗಾಯನವನ್ನು ಅಳವಡಿಸಿದರು. ಮುಂದೆ ರೆಹಮತ್ ಖಾನರ ಜತೆ ಸಹಗಾಯಕರಾಗಿ ಹಾಡುತ್ತ ತಿರುಗಲಾರಂಭಿಸಿದರು. ಭೂಗಂಧರ್ವರೆಂದು ಹೆಸರಾದ ರೆಹಮತ್ ಖಾನ್ ಒಬ್ಬ ಸೂಫಿಯೂ ಆಗಿದ್ದರು. ಅವರಿಗೆ ಲೌಕಿಕ ಸಂಗತಿಗಳಲ್ಲಿ ಆಸಕ್ತಿಯಿರಲಿಲ್ಲ; ಸಾರ್ವಜನಿಕ ಕಛೇರಿ ಕೊಡುವುದಕ್ಕೆ ಇಷ್ಟವಿರಲಿಲ್ಲ. ಗೆಳೆಯನ ಒತ್ತಾಸೆಯಿಂದ ಹಾಡುತ್ತಿದ್ದರು. ಸಂಗೀತವು ಒಳಗಿನ ಅಂತರಾತ್ಮಕ್ಕೆ ಮಾಡಿಕೊಳ್ಳುವ ಸ್ವಯಂಬೋಧೆ ಎಂದು ತಿಳಿದಿದ್ದರು ಅವರು.

ಹೀಗಾಗಿ ವಿಷ್ಣು ಅವರ ಮುಂದೆ ಹಿಂದೆ ಎರಡು ದೊಡ್ಡ ಕನ್ನಡಿಗಳನ್ನಿಟ್ಟು, ‘ನೋಡು ಅಲ್ಲಿ ಯಾರೂ ಇಲ್ಲ. ನೀನೇ ಇರುವೆ. ನಿನಗಾಗಿ ಹಾಡು’ ಎಂದು ಹೇಳುತ್ತಿದ್ದರಂತೆ. ರೆಹಮತ್ ಖಾನರು ಆ ಕನ್ನಡಿಗಳ ಮುಂದೆ ಕುಳಿತು ರಿಯಾಜ್ ಮಾಡುತ್ತಿದರಂತೆ. ತನ್ನ ಆಶ್ರಯದಾತನನೂ ಗೆಳೆಯನೂ ಆದ ವಿಷ್ಣು ತೀರಿಕೊಂಡ ಬಳಿಕ, ಅವರು ಗಾಯಕಿ ನಿಲ್ಲಿಸಿದರೆಂದು ತಿಳಿದುಬರುತ್ತದೆ. ಆದರೇನಂತೆ. ರೆಹಮತ್ ಖಾನರಿಂದ ಕಿರಾಣಾ ಘರಾಣೆಯ ಅಬ್ದುಲ್ ಕರೀಂಖಾನರು ತುಂಬ ಪ್ರಭಾವಿತರಾದರು. ಅವರು ಕುಂದಗೋಳದ ಸವಾಯಿ ಗಂಧರ್ವರಂತಹ ಶಿಷ್ಯರನ್ನು ತಯಾರು ಮಾಡಿದರು. ಸವಾಯಿ ಗಂಧರ್ವರ ಶಿಷ್ಯರಾಗಿ ಗಂಗೂಬಾಯಿ ಮತ್ತು ಭೀಮಸೇನ ಜೋಶಿಯವರು ಹೊಮ್ಮಿದರು. ಹೀಗೆ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ನೆಲೆಗೊಳ್ಳಲು ಛತ್ರೆ ಕುಟುಂಬವು ಪರೋಕ್ಷ ಕಾರಣವಾಯಿತು. ಇದನ್ನೆಲ್ಲ ಕೇಳುತ್ತ ನನ್ನಲ್ಲಿ ವಿಚಿತ್ರ ಭಾವಸಂಚಾರವಾಯಿತು. ನಸುಗತ್ತಲೆ ತುಂಬಿದ್ದ ಆ ಖೋಲಿಯಲ್ಲಿ ಕನ್ನಡಿಯ ಮುಂದೆ ಕೊಂಚ ಹೊತ್ತು ಧ್ಯಾನಸ್ಥನಾಗಿ ಕುಳಿತುಕೊಂಡೆ.

ಸರ್ಕಸ್ ಯುಗ ಮುಗಿದ ಬಳಿಕ ತ್ರಿಪುರಸುಂದರಿಯು ರಂಗಭೂಮಿ ಥಿಯೇಟರಾಗಿ ಬದಲಾಯಿತು. ಅದರಲ್ಲಿ ಮರಾಠಿಯ ಪ್ರಸಿದ್ಧ ನಟ ಮತ್ತು ಗಾಯಕ, ಬಾಲಗಂಧರ್ವರ ನಾಟಕಗಳು ನಡೆಯುತ್ತಿದ್ದವು. ಹಾಗೆ ನಡೆಯುತ್ತಿದ್ದಾಗಲೇ ಬಿಜಾಪುರ ಸೀಮೆಯ ಕಲಾವಿದೆ, ಮುಂದೆ ಗಂಧರ್ವರ ಜೀವನ ಸಂಗಾತಿಯಾದ ಗೋಹರಬಾಯಿ ಕರ್ನಾಟಕಿ ಅವರು, ಗಂಧರ್ವ ಕಂಪನಿಗೆ ಸೆಳೆಯಲ್ಪಟ್ಟಿದ್ದು. ಸಿನಿಮಾ ಯುಗ ಆರಂಭವಾದಾಗ, ಈ ಥಿಯೇಟರ್ ಬಿಳೀ ಪರದೆ ಕಟ್ಟಿಸಿಕೊಂಡು ಸಿನಿಮಾ ಪ್ರದರ್ಶನಕ್ಕೆ ಅಣಿಯಾಯಿತು; ಸ್ವಾತಂತ್ರ್ಯ ಚಳವಳಿಯಲ್ಲಿ ರಾಷ್ಟ್ರನಾಯಕರ ಸಾರ್ವಜನಿಕ ಸಭೆಗಳಿಗೆ ವೇದಿಕೆ ಆಯಿತು. ಗಾಂಧೀಜಿ ಬಿಜಾಪುರಕ್ಕೆ ಬಂದಾಗಲೆಲ್ಲ ಈ ಥಿಯೇಟರಿನಲ್ಲಿ ಭಾಷಣ ಮಾಡುತ್ತಿದ್ದರು. ಗಾಂಧಿಯವರ ಭಾಷಣವು ಮೋರೇಶ್ವರ ಛತ್ರೆ 1857ರಲ್ಲಿ ಮಾಡಿದ ದಂಗೆಯ ತಾರ್ಕಿಕ ಕೊನೆಯಂತಿತ್ತು. ತನ್ನ ಜೀವಮಾನದಲ್ಲಿ ನಾನಾ ರೂಪಧಾರಣೆ ಮಾಡಿದ ತ್ರಿಪುರಸುಂದರಿ, ಛತ್ರೆ ಕುಟುಂಬದ ಸಾಹಸ ಪ್ರವೃತ್ತಿ ಹಾಗೂ ಪ್ರಯೋಗಶೀಲತೆಯ ಸಂಕೇತದಂತಿದೆ. ಅದರ ಮುಂದಿನ ರೂಪಧಾರಣೆ ಯಾವುದೊ ತಿಳಿಯದಾಗಿದೆ. 

ರೂಪಾಂತರ ಎಂಬುದು ಎಲ್ಲ ಕಲೆಗಳ ಆಳದಲ್ಲಿರುವ ಸೃಜನಶೀಲ ಪ್ರವೃತ್ತಿ ಎಂದು ತೋರುತ್ತದೆ. ಅದರಲ್ಲೂ ಕಲಾಲೋಕದಲ್ಲಿ ಸಹಜವಾಗಿ ಸಂಭವಿಸುವ ಈ ರೂಪಾಂತರವು, ಸ್ಥಾಪಿತ ಜಾತಿ ಮತ್ತು ಧರ್ಮಗಳ ಎಲ್ಲೆಯಾಚೆ ಹೋಗಿಬಿಡುತ್ತದೆ. ಭಾರತದಲ್ಲಿ ಸಿನಿಮಾ, ನಾಟಕ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳಿಗೆ ಹೀಗೆ ಎಲ್ಲೆಯಾಚೆ ಹೋಗುವ ಗುಣವಿದೆ. ಬಹುಶಃ ಬಿಜಾಪುರದ ನೆಲದಲ್ಲೇ ಪ್ರಯೋಗಶೀಲತೆ ಮತ್ತು ರೂಪಾಂತರದ ಯಾವುದೋ ಅದಮ್ಯ ಗುಣವೊಂದು ಸುಪ್ತವಾಗಿರುವಂತಿದೆ. ಬಿಜಾಪುರವನ್ನಾಳಿದ ದೊರೆ ಎರಡನೇ ಇಬ್ರಾಹಿಂ ಆದಿಲಶಾಹಿ, ರಾಜಕಾರಣದೊಳಗಿದ್ದೇ ಸಂಗೀತದ ಸಾಧನೆ ಮಾಡುತ್ತ, ‘ಕಿತಾಬೆ ನವರಸ್’ ಕೃತಿ ರಚಿಸಿದನು; ಸಂಗೀತ ಸಾಧಕರಿಗಾಗಿ ನವರಸಪುರ ಎಂಬ ನಗರವನ್ನೇ ಕಟ್ಟಿಸಿದನು.

ಇದೇ ನೆಲದಿಂದ ಮೂಡಿಬಂದ ಅಮೀರಬಾಯಿ- ಗೋಹರ್‌ಬಾಯಿ ಎಂಬ ಅದ್ಭುತ ಗಾಯಕ ನಟಿಯರು, ರಂಗಭೂಮಿಯಿಂದ ತಮ್ಮ ಜೀವನ ಆರಂಭಿಸಿ, ಸಿನಿಮಾಕ್ಕೆ ಹೋಗಿ, ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದರು. ಎರಡನೇ ಇಬ್ರಾಹಿಂ ಸಮಾಧಿ ಇಬ್ರಾಹಿಂ ರೋಜಾ, ಅವನು ಕಟ್ಟಿಸಿದ ನವರಸ್ ಮಹಲ್, ಅಮೀರಬಾಯಿ ಅವರ ಸಮಾಧಿ ಹಾಗೂ ಛತ್ರೆಯವರ ತ್ರಿಪುರಸುಂದರಿ ಥಿಯೇಟರು- ಇವೆಲ್ಲವೂ ತಮ್ಮ ಕಲಾಪ್ರಯೋಗದ ಅಪೂರ್ವ ಚರಿತ್ರೆಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಬಿಜಾಪುರದಲ್ಲಿ ಆಸುಪಾಸಿನಲ್ಲೇ ನೆಲೆಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT