ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ 371 ತಿದ್ದುಪಡಿಗೆ ನಿರಾಕರಿಸಿತ್ತು

Last Updated 3 ಅಕ್ಟೋಬರ್ 2012, 5:20 IST
ಅಕ್ಷರ ಗಾತ್ರ

ಬಸವಕಲ್ಯಾಣ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ 371 ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ಈ ಭಾಗದವರು ನಿಯೋಗ ತೆಗೆದುಕೊಂಡು ಹೋದಾಗ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿಯವರು ತಿದ್ದುಪಡಿ ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಶಾಸಕರಾದ ಈಶ್ವರ ಖಂಡ್ರೆ ಆರೋಪಿಸಿದರು.

ಇಲ್ಲಿನ ಸಾಹಿಲ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡ `ಕಾಂಗ್ರೆಸ್‌ನೊಂದಿಗೆ ಬನ್ನಿ ಬದಲಾವಣೆ ತನ್ನಿ~ ಅಭಿಯಾನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 371 ನೇ ಕಲಂಗೆ ತಿದ್ದುಪಡಿ ತರಲಾಗಿದೆ. ಇದಕ್ಕೆಲ್ಲ ಈ ಭಾಗದ ಕಾಂಗ್ರೆಸ್ ನಾಯಕರ ಸತತ ಪರಿಶ್ರಮ ಕಾರಣವಾಗಿದೆ ಎಂದರು. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರಕ್ಕೆ ಮತ್ತು ಪಕ್ಷದಲ್ಲಿನ ಜಗಳಕ್ಕೆ ಹೆಸರಾಗಿದೆ.

ಈ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಲಾಗಿದೆ. ಚರ್ಚ್‌ಗಳ ಮೇಲೆ ದಾಳಿ ನಡೆದಿದೆ. ಗಣಿ ಹಗರಣದಲ್ಲಿ ಸಿಕ್ಕಿಕೊಂಡು ನಾಯಕರು ಜೈಲು ಮತ್ತು ಬೇಲು ಎನ್ನುತ್ತ ತಿರುಗಾಡುತ್ತಿದ್ದಾರೆ ಎಂದರು.
ಬಸವಕಲ್ಯಾಣದಲ್ಲಿ ಕಳೆದ ಐವತ್ತು ವರ್ಷಗಳಿಂದ ಕಾಂಗ್ರೆಸ್‌ನ ಶಾಸಕರು ಆಯ್ಕೆ ಆಗಿಲ್ಲ. ಆದ್ದರಿಂದ ಈ ಸಲ ಎಲ್ಲರೂ ಒಗ್ಗೂಡಿ ಈ ಕ್ಷೇತ್ರವನ್ನು ತಮ್ಮ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೇಕಾಗಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದರು.

ಉದ್ಘಾಟನೆ ನೆರವೇರಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದರಾದ ಎನ್. ಧರ್ಮಸಿಂಗ್ ಮಾತನಾಡಿ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ರಚನೆ, ಬೀದರ್ -ಶ್ರೀರಂಗಪಟ್ಟಣ ರಸ್ತೆ ನಿರ್ಮಾಣ ಒಳಗೊಂಡು ಅನೇಕ ಕೆಲಸಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಾಡಲಾಗಿದೆ ಎಂದರು.

ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್, ಹಿರಿಯ ಮುಖಂಡ ಬಿ.ನಾರಾಯಣರಾವ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಪಕ್ಷದ ತಾಲ್ಲೂಕು ಅಧ್ಯಕ್ಷ ಶಂಕರರಾವ ಜಮಾದಾರ, ನಗರ ಘಟಕದ ಅಧ್ಯಕ್ಷ ಅಜರಅಲಿ ನವರಂಗ, ಮುಖಂಡರಾದ ಪ್ರಕಾಶ ಪಾಟೀಲ, ಶರಣು ಬಿರಾದಾರ, ದತ್ತಾತ್ರಿ ಪರಶುರಾಮ, ಸುಧಾಕರ ಗುರ್ಜರ್ ಮಾತನಾಡಿದರು.

ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ ಉಪಸ್ಥಿತರಿದ್ದರು. ಅರ್ಜುನ ಕನಕ ನಿರೂಪಿಸಿದರು.
ಅವಕಾಶ: ಸಂಸದ ಎನ್.ಧರ್ಮ ಸಿಂಗ್ ಮಾತನಾಡುವಾಗ ಬಿ.ನಾರಾಯಣ ಅವರಿಗೆ ಎಲ್ಲೆಡೆ ಮಾತನಾಡಲು ಅವಕಾಶ ಕೊಡುತ್ತೇವೆ. ಸೋನಿಯಾ ಗಾಂಧಿ ಅವರಿಗೂ ಭೇಟಿಯಾಗಲು ಅವಕಾಶ ಕೊಟ್ಟಿದ್ದೇವೆ. ಈಗ ವಿಧಾನಸಭೆಯಲ್ಲಿ ಮಾತಾಡಲು ಅವಕಾಶ ಕೊಡಬೇಕಾಗಿದ್ದು, ಅದನ್ನು ಮಾಡುತ್ತೇವೆ ಎಂದರು.

ಕಾರ್ಯಕ್ರಮ ಆರಂಭ ಆದಾಗಿನಿಂದ ಯುವಕರಲ್ಲಿ ಕೆಲವರು ಬಿ.ನಾರಾಯಣ ಅವರಿಗೆ ಜಯವಾಗಲಿ ಎಂದರೆ ಇನ್ನು ಕೆಲವರು ಆನಂದ ದೇವಪ್ಪ ಮತ್ತು ಶರಣು ಬಿರಾದಾರ ಅವರಿಗೆ ಜಯವಾಗಲಿ ಎಂದು ಕೂಗುತ್ತಿದ್ದರು.  ಆಯೋಜಕರು ಎಷ್ಟೇ ವಿನಂತಿಸಿದರೂ ಕಾರ್ಯಕ್ರಮ ಸಮಾಪ್ತಿಗೊಳ್ಳುವವರೆಗೆ ಈ ರೀತಿಯ ಜಯಘೋಷ ಕೇಳಿ ಬಂದವು.

ಪಕ್ಷದ ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT