ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ಹುದ್ದೆ- ಪ್ರಧಾನಿ ಅಭ್ಯರ್ಥಿ ಮೋದಿಗೆ ಗಡ್ಕರಿ ಬೆಂಬಲ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಹಾಗೂ ಪಕ್ಷದ ಅಧ್ಯಕ್ಷರನ್ನಾಗಿಸಲು ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ತಾವು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಲ್ಲ ಎಂದಿರುವ ಗಡ್ಕರಿ, ಯಾರೇ ಅಭ್ಯರ್ಥಿಯಾದರೂ ಅದನ್ನು ವಿರೋಧಿಸುವುದಿಲ್ಲ ಎಂದಿದ್ದಾರೆ. ಮೋದಿ ಅವರಿಗೆ ಪ್ರಧಾನಿಯಾಗುವ ಹಾಗೂ ಪಕ್ಷದ ಅಧ್ಯಕ್ಷರಾಗುವ ಎಲ್ಲ ಅರ್ಹತೆಯೂ ಇದೆ ಎಂದು ಟಿ.ವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಹುದ್ದೆಗೆ ಬಿಜೆಪಿ ಯಾರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪ್ರಶ್ನಿಸಿದಾಗ, ಬಿಜೆಪಿ ಏಕಸ್ವಾಮ್ಯದ ನಾಯಕತ್ವ ಹೊಂದಿದ ಪಕ್ಷವಲ್ಲ,  ಸೂಕ್ತ ಸಮಯದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಉತ್ತರ ಪ್ರದೇಶದಲ್ಲಿ ಉಮಾ ಭಾರತಿ ಅವರನ್ನು ಚುನಾವಣಾ ಪ್ರಚಾರ ಕಣಕ್ಕೆ ಇಳಿಸಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಈ ಕುರಿತು ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನ ಇದೆ ಎಂಬ ಹೇಳಿಕೆಗಳನ್ನು ಅಲ್ಲಗಳೆದರು.

`ಉಮಾ ಭಾರತಿ ರಾಷ್ಟ್ರೀಯ ನಾಯಕಿ. ಇಟಲಿಯ ಸೋನಿಯಾ ಗಾಂಧಿ ಅಮೇಥಿಯಲ್ಲಿ ಸ್ಪರ್ಧಿಸಬಹುದಾದರೆ, ಉಮಾ ಭಾರತಿ ಉತ್ತರ ಪ್ರದೇಶಕ್ಕೆ ಹೋದರೆ ತಪ್ಪೇನು~ ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಹೊರಗಿನವರನ್ನು ಮುಖ್ಯಮಂತ್ರಿ ಮಾಡುವ ಪ್ರಶ್ನೆಗೆ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡದ ಕುರಿತು ಕೇಳಿದಾಗ, ಉಮಾ ಭಾರತಿ ಅವರನ್ನು ಕಂಡರೆ ಯಾರಿಗೂ ಭಯವಿಲ್ಲ ಎಂದರು.

ಉತ್ತರ ಪ್ರದೇಶ ಚುನಾವಣೆ ನಂತರ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಲ್ಲಿ ಬಹುಜನ ಸಮಾಜ ಪಕ್ಷ ಅಥವಾ ಸಮಾಜವಾದಿ ಪಕ್ಷದ ಜತೆ ಕೈಜೋಡಿಸುವಿರಾ ಎಂಬ ಪ್ರಶ್ನೆಗೆ, `ವಿಶ್ವಾಸಾರ್ಹತೆ ನಮ್ಮ ಬಲ. ಬಿಎಸ್‌ಪಿ ಅಥವಾ ಎಸ್‌ಪಿ ಜತೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ~ ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನ  ದಾಟುವಂತೆ ಮಾಡುವುದು ತಮ್ಮ ಮುಂದಿರುವ ಸವಾಲು ಎಂದು ಗಡ್ಕರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT