ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ

Last Updated 16 ಏಪ್ರಿಲ್ 2013, 20:24 IST
ಅಕ್ಷರ ಗಾತ್ರ

ನವದೆಹಲಿ: ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಉತ್ತರ ಹಾಗೂ ಕಾಪು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಮಧ್ಯರಾತ್ರಿ ಪ್ರಕಟಿಸಿದ್ದು, ಕ್ರಮವಾಗಿ ಎಸ್. ಎಸ್. ಮಲ್ಲಿಕಾರ್ಜುನ ಮತ್ತು ವಿನಯ ಕುಮಾರ ಸೊರಕೆ ಅವರನ್ನು `ಅಖಾಡ'ಕ್ಕಿಳಿಸಿದೆ. ಬಿಜೆಪಿ 14 ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಸಚಿವ ಗೋವಿಂದ ಕಾರಜೋಳ ಅವರಿಗೆ ಮುಧೋಳ (ಎಸ್‌ಸಿ) ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದರಿಂದಾಗಿ ಎರಡು ಪ್ರಮುಖ ಪಕ್ಷಗಳು ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಿವೆ.

ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳನ್ನು ತಮಗೇ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಮಲ್ಲಿಕಾರ್ಜುನ ಅವರಿಗೆ ಹೈಕಮಾಂಡ್ ಕೊನೆಗೂ ತಲೆ ಬಾಗಿದೆ. ಬಳ್ಳಾರಿಯಲ್ಲಿ ಅನಿಲ್ ಲಾಡ್ ಅವರ ಬಂಡಾಯದ ಬೆದರಿಕೆಗೆ ಬೆಚ್ಚಿ ಟಿಕೆಟ್ ನೀಡಿದ ಹೈಕಮಾಂಡ್, ದಾವಣಗೆರೆಯಲ್ಲೂ ಅದೇ ಕೆಲಸ ಮಾಡಿತು.

ಎರಡು ದಿನಗಳ ಹಿಂದೆ ದಾವಣಗೆರೆ ದಕ್ಷಿಣಕ್ಕೆ ಶಿವಶಂಕರಪ್ಪ ಅವರ ಹೆಸರನ್ನು ಪ್ರಕಟಿಸಲಾಗಿತ್ತಾದರೂ ಉತ್ತರಕ್ಕೆ ಯಾರು ಅಭ್ಯರ್ಥಿ ಎನ್ನುವ ಗುಟ್ಟನ್ನು ಮಂಗಳವಾರ ಮಧ್ಯರಾತ್ರಿವರೆಗೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಪುತ್ರ ಮಹಿಮ ಪಟೇಲರ ಸ್ಪರ್ಧೆಗೆ ಒಲವು ತೋರಿದ್ದರು ಎನ್ನಲಾಗಿದೆ.

ದಾವಣಗೆರೆ ಉತ್ತರದಲ್ಲಿ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಲು ಹಿಂದೇಟು ಹಾಕಿದ ಹೈಕಮಾಂಡ್ ನಡವಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜುನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದರು. ಇದರ ಸುಳಿವರಿತ ಕಾಂಗ್ರೆಸ್ ನಾಯಕರು ಮಂಗಳವಾರ ಮಧ್ಯರಾತ್ರಿ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಿ ಗೊಂದಲಕ್ಕೆ ತೆರೆ ಎಳೆದರು.

ಇದಕ್ಕೂ ಮುನ್ನ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಮುಸ್ಲಿಂ ಸಮುದಾಯಕ್ಕೆ ಬಿಟ್ಟುಕೊಟ್ಟು, ಉತ್ತರಕ್ಕೆ ಶಿವಶಂಕರಪ್ಪ ಅಥವಾ ಮಲ್ಲಿಕಾರ್ಜುನ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ನಿಲುವನ್ನು ಹೈಕಮಾಂಡ್ ಹೊಂದಿತ್ತು. ಆದರೆ, ಎರಡೂ ಕ್ಷೇತ್ರ ತಮಗೇ ಬೇಕೆಂದು ಅಪ್ಪ ಮತ್ತು ಮಗ ಹಟ ಹಿಡಿದು ಕುಳಿತಿದ್ದರು. ಅಲ್ಲದೆ, ದಾವಣಗೆರೆ ದಕ್ಷಿಣದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಯದ್ ಸೈಫುಲ್ಲಾ ಇದೇ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದರು. ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ಶಾಮನೂರು ಕುಟುಂಬದ ಒತ್ತಡಕ್ಕೆ ಕಾಂಗ್ರೆಸ್ ಮಣಿಯಿತು.

ಕಾಪುವಿನಲ್ಲಿ ಎಐಸಿಸಿ ಕಾರ್ಯದರ್ಶಿ ವಿನಯ ಕುಮಾರ್ ಸೊರಕೆ ಹಾಗೂ ಮಾಜಿ ಸಚಿವ ವಸಂತ ಸಾಲಿಯಾನ ಅವರ ನಡುವೆ ಹಣಾಹಣಿ ನಡೆದಿತ್ತು. ಈ ಹೋರಾಟದಲ್ಲಿ ಸೊರಕೆ ಕೈ ಮೇಲಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಲಿಯಾನ ಇಲ್ಲಿ ಕೇವಲ 967 ಮತಗಳ ಅಂತರದಿಂದ ಸೋತಿದ್ದರು. ಈ ಮಧ್ಯೆ, ಬಿಜೆಪಿ 14 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸಚಿವ ಗೋವಿಂದ ಕಾರಜೋಳ ಅವರಿಗೆ ಮುಧೋಳ ಮೀಸಲು ಕ್ಷೇತ್ರದಿಂದ ಅವಕಾಶ ನೀಡಲಾಗಿದೆ. ಅಪರಾಧ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದ ವೈ. ಸಂಪಂಗಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.  ಕೆಜಿಎಫ್ ಮೀಸಲು ಕ್ಷೇತ್ರದಿಂದ ಸಂಪಂಗಿ ಅವರ ತಾಯಿ ವೈ. ರಾಮಕ್ಕ ಅವರನ್ನು ಕಣಕ್ಕಿಳಿಸಲಾಗಿದೆ.

ಹೆಬ್ಬಾಳದಲ್ಲಿ ಜಗದೀಶ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಟ್ಟಾ ಅವರಿಗೆ ಜಗದೀಶ್ ಕುಮಾರ್ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದರೆನ್ನಲಾಗಿದೆ. ಮಾಲೂರಿನಲ್ಲಿ ಡಿ.ವಿ. ವೆಂಕಟೇಶಗೌಡ ಅವರಿಗೆ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಅವರ ಪಕ್ಷ ಸೇರಿದ ಮಾಜಿ ಸಚಿವ ಸಿ.ಎಂ. ಉದಾಸಿ ಪ್ರತಿನಿಧಿಸಿದ್ದ ಹಾನಗಲ್‌ನಿಂದ ಬಸವರಾಜ ವೀರಪ್ಪ ಹಾದಿಮನಿ ಅವರಿಗೆ ಟಿಕೆಟ್ ಕೊಡಲಾಗಿದೆ.

ಕಾಂಗ್ರೆಸ್ ಪಟ್ಟಿ
ದಾವಣಗೆರೆ ಉತ್ತರ- ಎಸ್.ಎಸ್. ಮಲ್ಲಿಕಾರ್ಜುನ
ಕಾಪು- ವಿನಯ ಕುಮಾರ ಸೊರಕೆ

ಬಿಜೆಪಿ ಪಟ್ಟಿ
ಮಳವಳ್ಳಿ (ಎಸ್‌ಸಿ)- ಕುಮಾರಸ್ವಾಮಿ
ಕೆ,ಆರ್.ಪೇಟೆ- ವರದರಾಜೇಗೌಡ
ಹಾನಗಲ್- ಬಸವರಾಜ ವೀರಪ್ಪ ಹಾದಿಮನಿ
ಕಲಘಟಗಿ- ವೀರೇಶ್ ಉರುಫ್ ಈರಪ್ಪ ಸಲಗಾರ
ಯಮಕನಮರಡಿ (ಎಸ್‌ಟಿ)- ಮಾರುತಿ ಮಲ್ಲಪ್ಪ ಅಷ್ಟಗಿ
ಮುಧೋಳ (ಎಸ್‌ಸಿ)- ಗೋವಿಂದ ಕಾರಜೋಳ
ನಾಗಠಾಣ (ಎಸ್‌ಸಿ)- ನಾಗೇಂದ್ರ ಮಾಯವಂಶಿ
ಕಂಪ್ಲಿ (ಎಸ್‌ಟಿ) - ಬಿ. ಶಿವಕುಮಾರ್
ದೇವನಹಳ್ಳಿ (ಎಸ್‌ಸಿ)- ಚಂದ್ರಣ್ಣ
ಕೆಜಿಎಫ್ (ಎಸ್‌ಸಿ)- ವೈ ರಾಮಕ್ಕ
ಮಾಲೂರು- ಡಿ.ವಿ. ವೆಂಕಟೇಶಗೌಡ
ಹೆಬ್ಬಾಳ- ಜಗದೀಶ ಕುಮಾರ್
ಯಶವಂತಪುರ- ಎಚ್.ಎಲ್. ಕೃಷ್ಣಪ್ಪ
ಬಿಟಿಎಂ ಲೇಔಟ್- ಎನ್ ಸುಧಾಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT