ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ

Last Updated 30 ಡಿಸೆಂಬರ್ 2010, 10:30 IST
ಅಕ್ಷರ ಗಾತ್ರ

ಮಡಿಕೇರಿ:  ‘ಕಾಫಿ’ಯ ನಾಡು ಕೊಡಗಿನಲ್ಲಿ ಚಳಿ ಹೆಚ್ಚ ತೊಡಗಿದಂತೆ ಚುನಾವಣಾ ಕಾವು ನಿಧಾನವಾಗಿ ಏರ ತೊಡಗಿದೆ. ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಕೊಡಗಿನಲ್ಲಿ ಈ ಬಾರಿಯ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮಾಜಿ ಸಚಿವ ಬಿ.ಎ. ಜೀವಿಜಯ ಅವರ ಪ್ರಾಬಲ್ಯವಿರುವ ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಾತ್ರ ಜೆಡಿಎಸ್ ಸಮರ್ಥವಾಗಿ ಹೋರಾಟ ನೀಡಲಿದೆ.

ಕೊಡಗು ಜಿ.ಪಂ.ನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳೆಯರಿಗೆ ಸಿಂಹಪಾಲು ಮೀಸಲಾತಿ ಸಿಕ್ಕಿದೆ.  29 ಕ್ಷೇತ್ರಗಳ ಪೈಕಿ 16 ಸ್ಥಾನಗಳು ಮಹಿಳೆಯರ ಪಾಲಾಗಿವೆ. ಇದರಿಂದ ಹಾಲಿ ಸದಸ್ಯರಿಗೇ ಕ್ಷೇತ್ರವಿಲ್ಲದೆ  ಎಲ್ಲರೂ ಹೊರ ಕ್ಷೇತ್ರಗಳಿಗೆ ವಲಸೆ ಹೋಗಿದಾರೆ. ಪರಿಣಾಮ, ಎಲ್ಲ ಪಕ್ಷಗಳೂ ಹೊಸಬರಿಗೆ ಮಣೆ ಹಾಕಿವೆ.ಕಾಂಗ್ರೆಸ್-ಜೆಡಿಎಸ್‌ಗಿಂತ ಮೊದಲೇ ಅಭ್ಯರ್ಥಿಗಳ ಘೋಷಿಸಿದ ಬಿಜೆಪಿ ಪ್ರಚಾರದಲ್ಲಿಯೂ ಸ್ವಲ್ಪ ಮುಂದಿದೆ. ಕೊಡಗಿನಲ್ಲಿ ಕಾರ್ಯಕರ್ತರ ಪಡೆ ಇರುವುದು ಕೂಡ ಬಿಜೆಪಿಗೆ ವರದಾನವಾಗಿದೆ. ಹಲವು ಚುನಾವಣೆಗಳಲ್ಲಿ ಸೋತು ಸುಣ್ಣವಾದರೂ ಕಾಂಗ್ರೆಸ್ ಸಂಘಟನೆಯ ಕೊರತೆ ಕಾಣಿಸುತ್ತಿದೆ. ನಾಯಕರಲ್ಲಿನ ಗುಂಪುಗಾರಿಕೆ ಸ್ವಲ್ಪ ಶಮನಗೊಂಡಂತೆ ಕಂಡು ಬಂದರೂ ಯಾರೂ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿಲ್ಲ.

ಜಿಪಂ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಆರು ಮಂದಿಯನ್ನು ಪಕ್ಷದಿಂದ ಕಾಂಗ್ರೆಸ್ ಈಗಾಗಲೇ ಉಚ್ಚಾಟಿಸಿದೆ. ಸಂಸದ ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಟಿ. ಜಾನ್ ಹಾಗೂ ಮಾಜಿ ಶಾಸಕ ಸಿ.ಎಸ್.ಅರುಣ್ ಮಾಚಯ್ಯ ಸದ್ಯಕ್ಕೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.ಈ ಹಿಂದಿನ ಆಡಳಿತ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ಅಧಿಕಾರಕ್ಕಾಗಿ ಬಿಜೆಪಿ ಜತೆ ಕೈಜೋಡಿಸಿದ  ಎಸ್.ಎನ್.ರಾಜಾರಾವ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಸದಸ್ಯರಾದ ಮಾಜಿ ಸಚಿವ ಬಿ.ಎ.ಜೀವಿಜಯ ಪುತ್ರ ಸಂಜಯ್ ಜೀವಿಜಯ, ಮಡಿಕೇರಿ ಜಿ.ಪಂ. ಹಾಲಿ ಅಧ್ಯಕ್ಷ ವಿ.ಎಂ.ವಿಜಯ, ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೀವಿಜಯ ಜೆಡಿಎಸ್‌ನಿಂದ ಸ್ಪರ್ಧಿಸಿದ ನಂತರ ಅವರ ಬೆಂಬಲಿಗರೆಲ್ಲರೂ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಕ್ತಿ ಕಳೆದುಕೊಂಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ 29 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ 22  ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಮಡಿಕೇರಿ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಜೆಡಿಎಸ್‌ನ ಅಸ್ತಿತ್ವ  ಇಲ್ಲದಿರುವುದರಿಂದ ಕೆಲವೆಡೆ ಸುಮ್ಮನೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯನವರ ಸ್ವಕ್ಷೇತ್ರವಾದ ವಿರಾಜಪೇಟೆ ತಾಲ್ಲೂಕಿನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗಿಳಿದ ಸಂದರ್ಭದಲ್ಲಿ ಶಾಸಕರ ಬಗ್ಗೆ ಲಘುವಾದ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡ ಎಂ.ಎಂ. ರವೀಂದ್ರ ಅವರ ಗುಂಪು ಈ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆದಿದೆ. ಇದರಿಂದ ಬಿಜೆಪಿಗೆ ದಕ್ಷಿಣ ಕೊಡಗಿನಲ್ಲಿ ಸ್ವಲ್ಪ ಹಿನ್ನಡೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಇನ್ನು, ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕುಗಳೆರಡನ್ನೂ (ಸೋಮವಾರಪೇಟೆ ವಿಧಾನಸಭಾ  ಕ್ಷೇತ್ರ ರದ್ದಾಗಿದೆ) ಪ್ರತಿನಿಧಿಸುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಈ ಚುನಾವಣೆ  ಸವಾಲಾಗಿ ಪರಿಣಮಿಸಿದೆ. ಒಂದೆಡೆ ಜೆಡಿಎಸ್, ಮತ್ತೊಂದೆಡೆ ಕಾಂಗ್ರೆಸ್ ಪೈಪೋಟಿ ನಡುವೆ ಪಕ್ಷವನ್ನು ಗೆಲ್ಲಿಸುವ  ಹೊಣೆ ಶಾಸಕರ ಮೇಲಿದೆ. ಹೀಗಾಗಿ, ರಂಜನ್ ತಮ್ಮ ಪ್ರತಿಷ್ಠೆುನ್ನು ಒರೆಗೆ ಹಚ್ಚಿ ಪ್ರಚಾರದಲ್ಲಿ ಧುಮುಕಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿ.ಪಂ. ಚುನಾವಣೆ ಈ ಬಾರಿಯೂ ಕುತೂಹಲ ಮೂಡಿಸಿದೆ. ಜಿ.ಪಂ.ನ 29 ಸ್ಥಾನಗಳಿಗೆ  107 ಅಭ್ಯರ್ಥಿಗಳು ಕಣದಲ್ಲಿದ್ದರೆ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾ.ಪಂ.ನ 49  ಸ್ಥಾನಗಳಿಗೆ 161 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 10, ಜೆಡಿಎಸ್ 3 ಹಾಗೂ 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT