ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾಲೆಳೆಯಲು ಕೆಜೆಪಿ ರಣತಂತ್ರ!

ಬೆಳಗಾವಿ: ವಿಧಾನಸಭೆ ಚುನಾವಣೆ
Last Updated 16 ಏಪ್ರಿಲ್ 2013, 10:47 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಎದುರು ನಿಂತು ಹೊಸ ಪಕ್ಷದ ಘೋಷಣೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಕ್ಕರೆ ನಾಡಿನಲ್ಲಿ ನೆಲೆ ಇಲ್ಲದಂತಾಗಿದೆ. ಜಿಲ್ಲೆಯ ಸಚಿವರು, ಸಂಸದರು ಹಾಗೂ ಶಾಸಕರು ತಮ್ಮ ಪಕ್ಷಕ್ಕೆ ಬರಬಹುದು ಎಂಬ ಭರವಸೆ ಹೊಂದಿದ್ದ ಯಡಿಯೂರಪ್ಪ ಅವರಿಗೆ ಸಧ್ಯದ ಪರಿಸ್ಥಿತಿ ನುಂಗಲಾರದ ಬಿಸಿ ತುಪ್ಪವಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಗದ್ದುಗೆಗೆ ಏರುವಲ್ಲಿ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರವಾಗಿತ್ತು. ಜಿಲ್ಲೆಯ 18 ಕ್ಷೇತ್ರಗಳಲ್ಲಿ 11 ಬಿಜೆಪಿ ಅಭ್ಯರ್ಥಿಗಳನ್ನು ಜಿಲ್ಲೆಯ ಮತದಾರರು ಗೆಲ್ಲಿಸುವ ಮೂಲಕ ಬಹುಮತಕ್ಕೆ ದೊಡ್ಡ ಕೊಡುಗೆ ನೀಡಿದ್ದರು.

ಸಚಿವ ಉಮೇಶ ಕತ್ತಿ, ಸಂಸದ ಡಾ. ಪ್ರಭಾಕರ ಕೋರೆ, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಜಿಲ್ಲೆಯ ಅನೇಕ ಶಾಸಕರು ತಮ್ಮಂದಿಗೆ ಇದ್ದಾರೆ ಎಂದು ಬೀಗಿದ ಯಡಿಯೂರಪ್ಪ ಅವರಿಗೆ ಈಗ ಮುಖಭಂಗವಾದಂತಾಗಿದೆ. ಜಿಲ್ಲೆಯ ಯಾವೊಬ್ಬ ಸಚಿವರು, ಸಂಸದರು, ಶಾಸಕರು ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಕಡೆಗೆ ಮುಖಮಾಡಲಿಲ್ಲ. ಇದರಿಂದ ನಿರಾಸೆಗೊಂಡ ಯಡಿಯೂರಪ್ಪ ಅವರು ಜಿಲ್ಲೆಯ 18 ಕ್ಷೇತ್ರಗಳ ಪೈಕಿ 16 ರಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಹುಡುಕಾಡಿ ಕಣಕ್ಕಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ಬಿಜೆಪಿಯ ಕೆಲವು ಕಾರ್ಯಕರ್ತರನ್ನು ಹೊರತುಪಡಿಸಿ ಜಿಲ್ಲೆಯ ಯಾವೊಬ್ಬ ನಾಯಕರೂ ಕೆಜೆಪಿ ಸೇರಲಿಲ್ಲ. ಇದರಿಂದ ಚುನಾವಣಾ ಕಣಕ್ಕಿಳಿಸಲು ಪ್ರಬಲ ಅಭ್ಯರ್ಥಿಗಳು ಸಿಗಲಿಲ್ಲ. ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ ಕೆಜೆಪಿ ಟಿಕೆಟ್ ನೀಡಿದೆ.

ಕಳೆದ (2008) ಬಾರಿಯ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಆಪ್ತರಾಗಿದ್ದುಕೊಂಡು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೈಕಾರ ಕೂಗುತ್ತ ಆಗಮಿಸಿದ್ದವರು ಈ ಬಾರಿಯ ಚುನಾವಣೆಯಲ್ಲಿ ಕೆಜೆಪಿಯಿಂದ ಸರ್ಧಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ- ಕೆಜೆಪಿ ನಡುವೆ ಚುನಾವಣಾ ಗುದ್ದಾಟ ಸೋಮವಾರ ಆರಂಭವಾಯಿತು.

ರಾಯಬಾಗ (ಎಸ್‌ಸಿ) ಕ್ಷೇತ್ರಕ್ಕೆ ಕೆಜೆಪಿಯಿಂದ ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಸವದತ್ತಿ ಕ್ಷೇತ್ರಕ್ಕೆ ಕೆಜೆಪಿಯಿಂದ ಮಾಜಿ ಶಾಸಕ ರಾಜಣ್ಣ ಮಾಮನಿ, ಬೈಲಹೊಂಗಲ ಕ್ಷೇತ್ರಕ್ಕೆ ಕೆಜೆಪಿಯಿಂದ ಡಾ. ವಿಶ್ವನಾಥ ಪಾಟೀಲ, ರಾಮದುರ್ಗದಿಂದ ಕೆಜೆಪಿ ಅಭ್ಯರ್ಥಿ ಎಸ್.ಸಿ.ಪಂಚಗಟ್ಟಿಮಠ, ನಿಪ್ಪಾಣಿಯಿಂದ ಕೆಜೆಪಿ ಅಭ್ಯರ್ಥಿ ನಿಯಾಜಗೌಸ್ ಪಠಾಣ, ಖಾನಾಪುರದಿಂದ ಬಾಬುರಾವ್ ದೇಸಾಯಿ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೆಜೆಪಿಯಿಂದ ಡಾ. ಎಸ್.ಎಂ.ದೊಡಮನಿ ಸೇರಿದಂತೆ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಅಖಾಡಕ್ಕೆ ಇಳಿದರು.

ಕೆಜೆಪಿ ಅಭ್ಯರ್ಥಿಗಳ ಸ್ಪರ್ಧೆಯು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಮುಳುವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಇತರೆ ಪಕ್ಷಗಳು ಕೆಜೆಪಿ ಅಭ್ಯರ್ಥಿಗಳನ್ನು ಪರಿಗಣಿಸಿಯೇ ಇಲ್ಲ ಎನ್ನಲಾಗುತ್ತಿದೆ. ಹೀಗಿದ್ದರೂ, ಜಿಲ್ಲೆಯ 18 ಕ್ಷೇತ್ರಗಳಲ್ಲಿ ಕನಿಷ್ಟ 5 ಸ್ಥಾನಗಳು ಕೆಜೆಪಿಗೆ ದೊರೆಯಲಿವೆ ಎಂಬ ವಿಶ್ವಾಸ ಕೆಜೆಪಿ ನಾಯಕರಲ್ಲಿದೆ.

ಸಹೋದರರ ಸವಾಲ್: ಸವದತ್ತಿಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಮಾಮನಿ ಅವರ ಗೆಲುವಿಗೆ ಶ್ರಮಿಸಿದ್ದ ಅವರ ಸಹೋದರ ಸಂಬಂಧಿ ರಾಜಣ್ಣ ಮಾಮನಿ ಈ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಕೆಜೆಪಿಯಿಂದ ತೊಂದರೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

`ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳ ಪರ್ವ ಆರಂಭವಾಗಿದೆ. ರಾಷ್ಟ್ರೀಯ ಪಕ್ಷಗಳ ಧೋರಣೆಗಳಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲಿದ್ದಾರೆ' ಎಂದು ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಪಾಟೀಲ ಹೇಳಿದರು.

`ಯಡಿಯೂರಪ್ಪ ಅವರ ಅವಧಿಯಲ್ಲಿ ರಾಜ್ಯವು ಅನೇಕ ಅಭಿವೃದ್ಧಿ ಕೆಲಸಗಳನ್ನು ಕಂಡಿದೆ. ಯಡಿಯೂರಪ್ಪ ಅವರ ಅಭಿವೃದ್ಧಿ ಕೆಲಸದಿಂದಲೇ ಬಿಜೆಪಿಗೆ ಹೆಸರು ಬಂದಿತ್ತು. ಆದರೆ, ಬಿಜೆಪಿ ನಾಯಕರು ಯಡಿಯೂರಪ್ಪ ಅವರ ವಿರುದ್ಧವೇ ಕುತಂತ್ರ ನಡೆಸಿದರು.

ಇದೆಲ್ಲವೂ ಜನರಿಗೆ ಗೊತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಜಿಲ್ಲೆಯ ಸಚಿವರು, ಪ್ರಮುಖ ನಾಯಕರು ಯಡಿಯೂರಪ್ಪ ಅವರ ಜೊತೆಗೆ ಗುರುತಿಸಿಕೊಂಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಏಕಾಂಗಿಯಾಗಿ ಮಾಡಿದರು' ಎಂದು ಪಾಟೀಲ ವಿಷಾದ ವ್ಯಕ್ತಪಡಿಸಿದರು.

`ಕೆಜೆಪಿಯಲ್ಲಿ ನಾಯಕರ ಕೊರತೆ ಇಲ್ಲ. ಯಾರು ಬರಲಿ, ಬಿಡಲಿ ಚುನಾವಣೆಯಲ್ಲಿ ಪಕ್ಷದ ತಾಕತ್ತು ಗೊತ್ತಾಗಲಿದೆ. ಜಿಲ್ಲೆಯ 18 ಕ್ಷೇತ್ರಗಳಲ್ಲಿ ಕನಿಷ್ಠ 5 ಸ್ಥಾನಗಳು ಕೆಜೆಪಿ ಪಾಲಾಗಲಿವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೆಜೆಪಿ ಅಷ್ಟೇನು ಬಲಿಷ್ಠವಾಗಿರದಿದ್ದರೂ, ಬಿಜೆಪಿ ಅಭ್ಯರ್ಥಿಗಳಿಗೆ ತಲೆನೋವಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಕೆಜೆಪಿ- ಬಿಜೆಪಿ ಗುದ್ದಾಟದ ನಡುವೆ ಇತರರಿಗೆ ಲಾಭವಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT