ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕೆಂಡಾಮಂಡಲ

Last Updated 22 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಮಕ್ಕಳು ಹೆದರಿಸಿ, ಬೆದರಿಸಿ ದೇಣಿಗೆ ಪಡೆಯುತ್ತಿದ್ದರು ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯಕುಮಾರ್ ಮಾಡಿರುವ ಆರೋಪ ರಾಜ್ಯದ ಬಿಜೆಪಿ ಮುಖಂಡರನ್ನು ಕೆರಳಿಸಿ ವಾಕ್ಸಮರಕ್ಕೆ ಎಡೆಮಾಡಿದೆ.

ಭಾನುವಾರ ರಾಜ್ಯದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಅಡ್ವಾಣಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೊದಲ ಮೂರು ವರ್ಷಗಳ ಅವಧಿಯಲ್ಲಿ (ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿ) ಭ್ರಷ್ಟಾಚಾರ ವ್ಯಾಪಕವಾಗಿತ್ತು ಎಂದು ಬಹಿರಂಗ ಸಭೆಯಲ್ಲೇ ಒಪ್ಪಿಕೊಂಡಿದ್ದರು. ಆ ಮೂಲಕ ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿಯನ್ನೂ ನಡೆಸಿದ್ದರು.

ಕೆಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಧನಂಜಯಕುಮಾರ್, ಅಡ್ವಾಣಿ ವಿರುದ್ಧ ವಾಗ್ದಾಳಿ ನಡೆಸಿದರು. `ಭ್ರಷ್ಟಾಚಾರದ ಆರೋಪ ಹೊತ್ತಿದ್ದವರು ಪಕ್ಷದಿಂದ ಹೊರನಡೆದ ಬಳಿಕ ಬಿಜೆಪಿ ಪರಿಶುದ್ಧವಾಗಿದೆ ಎನ್ನುವ ಮೂಲಕ ಅಡ್ವಾಣಿ ಅವರು ಯಡಿಯೂರಪ್ಪ ಅವರನ್ನು ಟೀಕಿಸಿದ್ದಾರೆ. ಅವರ ಮಕ್ಕಳೇ ಹಣ ವಸೂಲಿಯಲ್ಲಿ ತೊಡಗಿದ್ದರೂ ಈ ರೀತಿ ಬೇರೆಯವರನ್ನು ಟೀಕಿಸುವುದು ಸರಿಯಲ್ಲ. ಅವರು ಮೊದಲು ತಮ್ಮ ಮನೆಯಲ್ಲಿನ ಹುಳುಕನ್ನು ಮುಚ್ಚಿಕೊಳ್ಳಲಿ' ಎಂದು ವ್ಯಂಗ್ಯವಾಡಿದರು.

ಹಣ ವಸೂಲಿಯಲ್ಲಿ ತೊಡಗಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕರು ಯಾರು? ಯಡಿಯೂರಪ್ಪ ಅವರು ಯಾವ ಮೂಲದಿಂದ ಹಣ ನೀಡಿದ್ದರು? ಅಂತಹ ಅನಿವಾರ್ಯತೆ ಏನಿತ್ತು? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ, `ಅಧಿಕಾರ ಉಳಿಸಿಕೊಳ್ಳಲಿಕ್ಕಾಗಿ ಯಡಿಯೂರಪ್ಪ ಅವರು ಹಣ ನೀಡಲೇಬೇಕಾಗಿತ್ತು. ಇತರ ರಾಷ್ಟ್ರೀಯ ನಾಯಕರು ಭಾಗಿಯಾಗಿರುವ ಬಗ್ಗೆ ಮತ್ತು ನೀಡಲಾಗಿರುವ ಹಣದ ಮೂಲದ ಬಗ್ಗೆ ಸೂಕ್ತ ಸಂದರ್ಭದಲ್ಲಿ ಪೂರ್ಣ ವಿವರಗಳನ್ನು ಬಹಿರಂಗ ಪಡಿಸುತ್ತೇನೆ' ಎಂದು ಹೇಳಿದರು.

ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಹಣ ಎಣಿಸುವ ಯಂತ್ರ ಸಿಕ್ಕಿದೆ. ಉಪ ಮುಖ್ಯಮಂತ್ರಿ ಆರ್.ಅಶೋಕ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೂ ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧದ ಆರೋಪಗಳ ಪಟ್ಟಿ ನೀಡಿದರು.

`ಸಂಸದ ಅನಂತಕುಮಾರ್ ಅವರು ಕೇಂದ್ರದ ನಗರಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ವಸತಿ ಮತ್ತು ನಗರಾಭಿವೃದ್ಧಿ ನಿಗಮದಲ್ಲಿ (ಹುಡ್ಕೊ) 12 ಸಾವಿರ ಕೋಟಿ ರೂಪಾಯಿ ಮೊತ್ತದ ಹಗರಣ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತ ವಿಚಾರಣೆ ಸುಪ್ರೀಕೋರ್ಟ್‌ನಲ್ಲಿ ಬಾಕಿ ಇದೆ. ಬಿಜೆಪಿಯ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೂ ಕಂಪೆನಿಯೊಂದರಲ್ಲಿ ಬೇನಾಮಿಯಾಗಿ ಹೂಡಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೀಗಿದ್ದರೂ ಬಿಜೆಪಿ ಪರಿಶುದ್ಧವಾಗಿದೆ ಎಂದು ಅಡ್ವಾಣಿ ಅವರು ಹೇಗೆ ಹೇಳುತ್ತಾರೆ' ಎಂದು ಪ್ರಶ್ನಿಸಿದರು.

ಬಿಜೆಪಿ ಸವಾಲು: ಧನಂಜಯಕುಮಾರ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, `ಇದೊಂದು ಆಧಾರರಹಿತ ಆಪಾದನೆ' ಎಂದಿದೆ. ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದೆ.
ರಾಜನಾಥ್, ಶೆಟ್ಟರ್ ಕೋಪ: ಧನಂಜಯಕುಮಾರ್ ಮಾಡಿರುವ ಆರೋಪ ನಿರಾಧಾರವಾದುದು. ಹಣ ಪಡೆದ ಸಾಕ್ಷ್ಯಾಧಾರಗಳು ಇದ್ದರೆ ಅವರು ಬಹಿರಂಗಪಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೊಸಪೇಟೆಯಲ್ಲಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸಿ.ಎಂ. ಜಗದೀಶ ಶೆಟ್ಟರ್ ಸಹ ಈ  ಆರೋಪವನ್ನು ಅಲ್ಲಗಳೆದಿದ್ದಾರೆ.

ದೇಣಿಗೆ ಹೆಸರಿನಲ್ಲಿ ಹಣ
 

ಅಡ್ವಾಣಿ ಅವರ ಮಕ್ಕಳು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ದೇಣಿಗೆ ಹೆಸರಿನಲ್ಲಿ ಹಣ ಪಡೆಯುತ್ತಿದ್ದರು. ಯಡಿಯೂರಪ್ಪ ಅವರಿಂದಲೂ ಹಣ ಪಡೆದಿದ್ದಾರೆ. ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಅಧಿಕಾರ ಉಳಿಸಿಕೊಳ್ಳಲು ಅಡ್ವಾಣಿ ಅವರ ಮಕ್ಕಳಿಗೆ ಹಣ ನೀಡುತ್ತಿದ್ದರು. ಬಿಜೆಪಿಯ ಇತರ ಕೆಲವು ನಾಯಕರೂ ದೇಣಿಗೆ ವಸೂಲಿಯಲ್ಲಿ ತೊಡಗಿದ್ದರು'.
ವಿ.ಧನಂಜಯಕುಮಾರ್

ಕ್ಷಮೆ ಯಾಚಿಸುತ್ತೇನೆ
 

`ಬಿಜೆಪಿ ಮುಖಂಡ ಎಲ್. ಕೆ.ಅಡ್ವಾಣಿ ಅವರ ಬಗೆಗೆ ನನಗೆ ಗೌರವವಿದೆ. ಅವರ ಮಕ್ಕಳ ಜೊತೆಗೆ ನನಗೆ ಯಾವುದೇ ವ್ಯವಹಾರವಿಲ್ಲ. ಈ ಕುರಿತು ಕೇಳಿಬಂದಿರುವ ಮಾತುಗಳಲ್ಲಿ ಯಾವುದೇ ಹುರುಳಿಲ್ಲ' ಎಂದು ಯಡಿಯೂರಪ್ಪ ಸೋಮವಾರ ಬಸವಕಲ್ಯಾಣದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

`ಧನಂಜಯಕುಮಾರ್  ಹೇಳಿಕೆಯಲ್ಲಿ ಹುರುಳಿಲ್ಲ. ಈ ಹೇಳಿಕೆಗಾಗಿ ರಾಜ್ಯದ ಜನರಲ್ಲಿ ನಾನು ಕ್ಷಮೆ ಕೋರುತ್ತೇನೆ. ಅವರು ಏಕೆ ಅಂಥ ಹೇಳಿಕೆ ನೀಡಿದರೋ ಗೊತ್ತಿಲ್ಲ' ಎಂದರು.

ಕೊಟ್ಟಿರಬಹುದು: ಸಿದ್ದು
ಬಸವಕಲ್ಯಾಣ:
ಇದೇ ವಿಷಯ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, `ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಜಮೀನನ್ನು ಅಕ್ರಮವಾಗಿ ಕೈಬಿಟ್ಟ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆದಿವೆ.

ಹಣ ಕೊಟ್ಟಿರಬಹುದು. ಅವರ ಹೇಳಿಕೆ ಸರಿಯಾಗಿದೆ, ಬಿಡಿ' ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT