ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಕೆಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

Last Updated 20 ಸೆಪ್ಟೆಂಬರ್ 2013, 6:54 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ, ಕೆಜೆಪಿ ನಡುವೆ ಮುಸುಗಿನ ಗುದ್ದಾಟ ಶುರುವಾಗಿದೆ. ಶುಕ್ರವಾರ ಜಿ.ಪಂ.­ಸಭಾಭವನದಲ್ಲಿ ನಡೆಯುವ ಚುನಾ­ವಣೆಯಲ್ಲಿ ಎರಡೂ ಪಕ್ಷಗಳಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು
ನಿಗೂ­ಢವಾಗಿದೆ.

ಜಿಲ್ಲಾ ಪಂಚಾಯ್ತಿಯ 32 ಸದಸ್ಯರ ಪೈಕಿ 27 ಬಿಜೆಪಿ, ನಾಲ್ವರು ಕಾಂಗ್ರೆಸ್‌ ಹಾಗೂ ಒಬ್ಬ ಪಕ್ಷೇತರ ಸದಸ್ಯರನ್ನು ಹೊಂದಿದೆ. 27 ಸದಸ್ಯರನ್ನು ಹೊಂದಿದ ಬಿಜೆಪಿಗೆ ಸ್ಪಷ್ಟಬಹುಮತವಿದ್ದರೂ, ಕೆಲ ಸದಸ್ಯರು ಕೆಜೆಪಿ ಬೆಂಬಲಿತ ಬಿಜೆಪಿ ಸದಸ್ಯರಾಗಿದ್ದಾರೆ.

ಬಿಜೆಪಿಯಲ್ಲಿಯೇ ಮೂಲ ಬಿಜೆಪಿ, ಕೆಜೆಪಿ ಎಂಬ ಎರಡು ಭಾಗಗಳಾಗಿ ಒಡೆದಿದೆ. ಇದರಿಂದ ಯಾವ ಭಾಗಕ್ಕೆ ಅಧ್ಯಕ್ಷ ಸ್ಥಾನ ಸಿಗಲಿದೆ. ಯಾವ ಪಕ್ಷ ಅಧ್ಯಕ್ಷ ಸ್ಥಾನ ಪಡೆಯಲು ಏನು ತಂತ್ರಗಾರಿಕೆ ಹೆಣೆದಿದೆ ಎಂಬ ಸಹಜ ಕುತೂಹಲ ಜಿಲ್ಲೆಯ ಜನರಲ್ಲಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ, ಕೆಜೆಪಿಯಲ್ಲಿ ಸೇರಿ ಮೂವರು ಆಕಾಂಕ್ಷಿಗಳಿದ್ದಾರೆ. ಕೆಜೆಪಿ ಬೆಂಬಲಿತ ಅಭ್ಯರ್ಥಿ ಸ್ಪರ್ಧಿಸಿದರೆ ಬಿಜೆಪಿ ಸದಸ್ಯರು ಬೆಂಬಲ ನೀಡುವು­ದಿಲ್ಲ. ಮೂಲ ಬಿಜೆಪಿ ಸದಸ್ಯ ಸ್ಪರ್ಧಿ­ಸಿದರೆ, ಕೆಜೆಪಿ ಬೆಂಬಲಿತ ಬಿಜೆಪಿ ಸದ­ಸ್ಯರು ಬೆಂಬಲಿಸುವುದಿಲ್ಲ ಎನ್ನುವ ಪರಿಸ್ಥಿತಿ ಎರಡೂ ಪಕ್ಷಗಳಲ್ಲಿದೆ.

ಅಧ್ಯಕ್ಷ ಆಕಾಂಕ್ಷಿಗಳಲ್ಲಿ ಕಬ್ಬೂರ ಜಿ.ಪಂ.ಕ್ಷೇತ್ರದ ರಾಜೇಂದ್ರ ಹಾವೇರ­ಣ್ಣನವರ ಯಲವಿಗಿ ಜಿ.ಪಂ.ಕ್ಷೇತ್ರದ ಕೃಷ್ಣಾ ಸುಣಗಾರ ಹಾಗೂ ದುಂಡಸಿ ಜಿ.ಪಂ. ಕ್ಷೇತ್ರದ ಸರೋಜಾ ಆಡಿನ ಪ್ರಮುಖರಾ­ಗಿ­ದ್ದಾರೆ. ಹಾವೇರಣ್ಣ­ನವರ ಸಂಪೂರ್ಣ­ವಾಗಿ ಕೆಜೆಪಿ ಮುಖಂ­ಡರನ್ನು ಹಾಗೂ ಆ ಪಕ್ಷದ ಬೆಂಬಲಿತ ಸದಸ್ಯರನ್ನು ಅವಲಂಬಿ­ಸಿ­ದ್ದಾರೆ. ಇನ್ನಿ­ಬ್ಬರು ಆಕಾಂಕ್ಷಿಗಳಲ್ಲಿ ಕೃಷ್ಣಾ ಸುಣಗಾರ ಹಾಗೂ ಸರೋಜಾ ಆಡಿನ ಬಿಜೆಪಿ, ಕೆಜೆಪಿ ಎಂಬ ವ್ಯತ್ಯಾಸ ಮಾಡದೇ ಎರಡೂ ಪಕ್ಷಗಳ ಮುಖಂ­ಡರ ಹಾಗೂ ಸದಸ್ಯರ ನಿಕಟ ಸಂಪರ್ಕದಲ್ಲಿದ್ದಾರೆ.

ಅವಕಾಶ ನೀಡಲು ಮನವಿ:  ಪ್ರಮುಖ ಆಕಾಂಕ್ಷಿಗಳಾದ ರಾಜೇಂದ್ರ ಹಾವೇರ­ಣ್ಣನವರ ಹಾಗೂ ಕೃಷ್ಣಾ ಸುಣಗಾರ ಅವರು ತಮಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡಬೇಕೆಂದು ಮುಖಂಡ­ರಲ್ಲಿ ಮನವಿ ಮಾಡಿದ್ದಾರೆ. 

ಜಿ.ಪಂ. ಅಧ್ಯಕ್ಷರಾಗುವ ಅವಕಾಶ ಈ ಬಾರಿ ಹಾವೇರಿ ತಾಲ್ಲೂಕಿನ ಸದಸ್ಯ­ರಿಗೆೆ ಇಲ್ಲಿ­ವರೆಗೆ ದೊರೆತಿಲ್ಲ. ಅದಕ್ಕಾಗಿ ಈ ಬಾರಿ ಹಾವೇರಿ ತಾಲ್ಲೂಕಿಗೆ ಅವ­ಕಾಶ ಮಾಡಿ­ಕೊಡಬೇಕು. ಹಿಂದಿನ ಅವ­ಧಿಯ ಅಧ್ಯ­ಕ್ಷರ ಆಯ್ಕೆ ಸಂದರ್ಭದಲ್ಲಿ ಮುಂದಿನ ಅವಧಿಗೆ ಅವಕಾಶ ನೀಡುವ ಭರವಸೆ ನೀಡಲಾಗಿದೆ. ಅದಕ್ಕಾಗಿ ಈ ಸಲ ತಮಗೆ ಅವಕಾಶ  ನೀಡಬೇಕು ಎಂದು ರಾಜೇಂದ್ರ ಹಾವೇರಣ್ಣನವರ ಕೆಜೆಪಿ ಮುಖಂಡರಲ್ಲಿ ವಿನಂತಿಸಿ­ಕೊಳ್ಳು­ತ್ತಿದ್ದಾರೆ.

ನಮ್ಮ ಸಮುದಾಯಕ್ಕೆ ಅವಕಾಶ­ಗಳು ಸಿಗುವುದೇ ಅಪರೂಪ. ಈಗ ಅವಕಾಶ ಒದಗಿ ಬಂದಿದೆ. ತಮಗೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಣ್ಣ ಸಮಾಜವನ್ನು ಬೆಂಬಲಿಸಬೇಕು ಎಂದು ಇನ್ನೊಬ್ಬ ಆಕಾಂಕ್ಷಿ ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ಕೃಷ್ಣ ಸುಣ­ಗಾರ ಅವರು ಕೆಜೆಪಿ, ಬಿಜೆಪಿ ಮುಖಂ­ಡರಲ್ಲಿ ಮನವಿ ಮಾಡಿದ್ದಾರೆ.

ಶಿಗ್ಗಾವಿ ತಾಲ್ಲೂಕಿಗೆ ಈವರೆಗೂ ಅವಕಾಶ ಸಿಕ್ಕಿಲ್ಲ. ಹಿಂದಿನ ಅವಧಿಯಲ್ಲಿ ಪುರುಷರಿಗೆ ಅವಕಾಶ ನೀಡಲಾಗಿದೆ. ಕೊನೆಯ ಅವಧಿಯಲ್ಲಿ ಮಹಿಳೆಗೆ ಅವಕಾಶ ನೀಡುವ ಮೂಲಕ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಶಿಗ್ಗಾವಿ ತಾಲ್ಲೂಕಿನ ದುಂಡಸಿ ಕ್ಷೇತ್ರದ ಸದಸ್ಯೆ ಸರೋಜಾ ಆಡಿನ ಸದಸ್ಯರಲ್ಲಿ ಹಾಗೂ ಎರಡೂ ಪಕ್ಷಗಳ ಮುಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅವಕಾಶ ತಪ್ಪುವ ಸಾಧ್ಯತೆ: ನಿರ್ಗಮಿತ ಜಿ.ಪಂ. ಅಧ್ಯಕ್ಷ ಬ್ಯಾಡಗಿ ತಾಲ್ಲೂಕಿನ ಶಂಕ್ರಣ್ಣ ಮಾತನವರ ಸಹ ಕುರುಬ ಜನಾಂಗಕ್ಕೆ ಸೇರಿದ್ದರು. ಈಗ ಆಕಾಂಕ್ಷಿ­ಯಾಗಿರುವ ಹಾವೇರಣ್ಣನವರ ಕೂಡಾ ಕುರುಬ ಜನಾಂಗಕ್ಕೆ ಸೇರಿದ್ದಾರೆ. ಅದು ಅಲ್ಲದೇ, ಕಬ್ಬೂರ ಕ್ಷೇತ್ರ ಹಾವೇರಿ ತಾಲ್ಲೂಕಿನಲ್ಲಿ ಇದ್ದರೂ, ಬ್ಯಾಡಗಿ ಮತಕ್ಷೇತ್ರಕ್ಕೆ ಬರಲಿದೆ. ಒಂದೇ ಸಮು­ದಾಯಕ್ಕೆ, ಒಂದೇ ಮತ ಕ್ಷೇತ್ರಕ್ಕೆ ಸೇರಿ­ರುವ ಹಾವೇರಣ್ಣನವರಿಗೆ ಅವಕಾಶ ನೀಡುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಕೇಳಿಬರುತ್ತದೆ.

ಕೃಷ್ಣ ಸುಣಗಾರ ಪೂರ್ಣ ಪ್ರಮಾ­ಣದಲ್ಲಿ ಯಾವುದೇ ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳದೇ, ಎರಡೂ ಪಕ್ಷದ ಮುಖಂಡರಲ್ಲಿ ಓಡಾಡುತ್ತಿದ್ದಾರೆ. ಎರಡೂ ಪಕ್ಷಗಳ ಮುಖಂಡರಲ್ಲಿ ಈತ­ನನ್ನು ನಂಬುವುದು ಹೇಗೆ ಎನ್ನುವ ಗೊಂದಲವಿದೆ. ಅಲ್ಲದೇ, ಯಲವಿಗಿ ಜಿ.ಪಂ.ಕ್ಷೇತ್ರ ಸವಣೂರು ತಾಲ್ಲೂಕಿಗೆ ಸೇರಿದ್ದರೂ, ಹಾವೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದೆ. ಈಗಾ­ಗಲೇ ಸವಣೂರು ತಾಲ್ಲೂಕಿನ ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹತ್ತಿ­ಮತ್ತೂರ ಜಿ.ಪಂ.ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನದ ಅವಕಾಶ ನೀಡಲಾಗಿದೆ. ಮತ್ತೆ ಅದೇ ಕ್ಷೇತ್ರ ವ್ಯಾಪ್ತಿಗೆ ಅವಕಾಶ ನೀಡಿ­ದರೆ, ಹಾವೇರಿ ತಾಲ್ಲೂಕು ಅನ್ಯಾಯ­ಕ್ಕೊಳಗಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ.
ಸರೋಜಾ ಆಡಿನ ಅವರ ಪರ ಬಿಜೆಪಿಯ ಕೆಲ ಮುಖಂಡರ ಒಲವು ಕಂಡು ಬಂದರೂ, ಅವರು ಗಂಭೀರ ಪ್ರಯತ್ನ ನಡೆಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಪ್ರಮುಖ ಆಕಾಂಕ್ಷಿಗಳಾದ ರಾಜೇಂದ್ರ ಹಾವೇರ­ಣ್ಣನವರ, ಕೃಷ್ಣ ಸುಣಗಾರ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ.

ಬಿಜೆಪಿ ಸದಸ್ಯರಲ್ಲಿ ಬಹುತೇಕ ಸದ­ಸ್ಯರು ಕೆಜೆಪಿ ಬೆಂಬಲಕ್ಕೆ ನಿಂತಿರುವು­ದರಿಂದ ಕೆಜೆಪಿ ಮುಖಂಡರು ಸೂಚಿ­ಸಿದ ಅಭ್ಯರ್ಥಿ ಅಧ್ಯಕ್ಷರಾಗುವುದು ಖಚಿತ ಎಂದು ಹೇಳಲಾಗುತ್ತಿದ್ದರೂ, ಬಿಜೆಪಿ ಪಾಳೆಯದಲ್ಲಿ ಮಾಜಿ ಸಚಿವ ಹಾಗೂ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಬಿಜೆಪಿ ಜಿ.ಪಂ.ಸದಸ್ಯರ ಸಭೆ ನಡೆಸುವ ಮೂಲಕ ಕೆಜೆಪಿಗೆ ಅನಿರೀಕ್ಷಿತ ಪೆಟ್ಟು ನೀಡಲು ತಂತ್ರಗಾರಿಕೆ ರೂಪಿಸುತ್ತಿದೆ ಎಂದು ಹೇಳಲಾಗುತ್ತದೆ.

ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದಾಗಲೂ ಕೆಜೆಪಿಯ ಮುಖಂಡ ಶಿವರಾಜ ಸಜ್ಜನರ, ಮಾಜಿ ಸಚಿವ ಉದಾಸಿ ಅವರ ಮಾರ್ಗ­ದರ್ಶನದಲ್ಲಿ ಒಮ್ಮತದ ಅಭ್ಯರ್ಥಿ ಹಾಕಲು ತೀವ್ರ ಕಸರತ್ತು ನಡೆದಿದೆ. ಇತ್ತ ಬಿಜೆಪಿ ಪಾಳೆಯದ ಜತೆ ಬೊಮ್ಮಾಯಿ ಅವರು ಕೈಜೋಡಿಸಿದರೆ, ಚುನಾವಣೆ­ಯಲ್ಲಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಿ ಎಲ್ಲ ಸದಸ್ಯರಿಗೆ ವಿಪ್‌ ಜಾರಿ ಮಾಡುವ ಬಗ್ಗೆ ಇಲ್ಲವೇ ಕಾಂಗ್ರೆಸ್‌ ಸದಸ್ಯರ ಬೆಂಬಲ ಪಡೆದು ಚುನಾವಣೆ ಎದುರಿ­ಸುವ ಕುರಿತ ತಂತ್ರಗಾರಿಕೆಗಳ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಎರಡೂ ಪಕ್ಷಗಳ ಖಚಿತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT