ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಚಿಂತನ ಶಿಬಿರ ಹಠಾತ್ ಮೊಟಕು

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದವರು ಅರ್ಧದಲ್ಲೇ ಶಿಬಿರವನ್ನು ಬಹಿಷ್ಕರಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಡೆಯಬೇಕಿದ್ದ ಬಿಜೆಪಿ ಚಿಂತನ ಶಿಬಿರವನ್ನು ಕೇವಲ ಎರಡು ಗಂಟೆಗೆ ಮೊಟಕುಗೊಳಿಸಲಾಯಿತು.

ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಸಚಿವರು, ಶಾಸಕರು, ಸಂಸದರು ಮತ್ತು ಪಕ್ಷದ ಮುಖಂಡರಿಗಾಗಿ ಶುಕ್ರವಾರದಿಂದ ಎರಡು ದಿನಗಳ ಕಾಲ ಚಿಂತನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಮೊದಲೇ ಸಿದ್ಧಪಡಿಸಿದ್ದ ವೇಳಾಪಟ್ಟಿ ಪ್ರಕಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಪಕ್ಷದ ಹಿರಿಯ ಮುಖಂಡರು, ಆರ್‌ಎಸ್‌ಎಸ್ ನಾಯಕರು ಶಿಬಿರದಲ್ಲಿ ಉಪನ್ಯಾಸ ನೀಡಬೇಕಿತ್ತು.

ಆದರೆ ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುವ ಯಡಿಯೂರಪ್ಪ ಮತ್ತು ಅವರ ಬಣದ ಶಾಸಕರು ಶಿಬಿರವನ್ನು ಬಹಿಷ್ಕರಿಸಿ ಗೋವಾದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂಬ ಊಹಾಪೋಹಗಳು ಶುಕ್ರವಾರ ಬೆಳಿಗ್ಗೆಯಿಂದಲೇ ಕೇಳಿಬರುತ್ತಿದ್ದವು.

ಇದರಿಂದ ಎಚ್ಚೆತ್ತುಕೊಂಡ ಗಡ್ಕರಿ, ಪಕ್ಷಕ್ಕೆ ಮುಜುಗರ ಆಗುವುದನ್ನು ತಪ್ಪಿಸುವ ದೃಷ್ಟಿಯಿಂದ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶಿಬಿರವನ್ನು ಮುಕ್ತಾಯಗೊಳಿಸಿ, ಉತ್ತರ ಪ್ರದೇಶದತ್ತ ಪ್ರಯಾಣ ಬೆಳೆಸಿದರು.
ಉಡುಪಿ- ಚಿಕ್ಕಮಗಳೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿಬಿರವನ್ನು ಮೊಟಕುಗೊಳಿಸಿ, ಪ್ರಚಾರಕ್ಕೆ ತೆರಳುವಂತೆ ಗಡ್ಕರಿ ಸೂಚಿಸಿದರು ಎಂದು ಬಿಜೆಪಿ ಮುಖಂಡರು ಹೇಳಿದರು.
 
ಆದರೆ ವಾಸ್ತವವೇ ಬೇರೆ. ಶಿಬಿರ ಮೊಟಕುಗೊಳಿಸಲು ಯಡಿಯೂರಪ್ಪ ಬೆದರಿಕೆಯೇ ಕಾರಣ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಾಸಕರೊಬ್ಬರು ತಿಳಿಸಿದರು. ಶಿಬಿರದ ಪ್ರಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಶಿಬಿರದಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಿಸಿದ್ದರು.
 
ಆದರೆ ಗಡ್ಕರಿ ಬಿಟ್ಟರೆ ಬೇರೆಯವರಿಗೆ ಮಾತನಾಡಲು ಅವಕಾಶವೇ ಇರಲಿಲ್ಲ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಸಚಿವರು, ಶಾಸಕರು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರು ಶಿಬಿರದಲ್ಲಿ ಭಾಗವಹಿಸಿದ್ದರು.

ಫಲಿಸದ ಒತ್ತಡ ತಂತ್ರ: ಲಲಿತ್ ಅಶೋಕ ಹೋಟೆಲ್‌ನಲ್ಲಿ ತಂಗಿದ್ದ ಗಡ್ಕರಿ ಅವರನ್ನು ಬೆಳಿಗ್ಗೆ ಭೇಟಿ ಮಾಡಿದ್ದ ಯಡಿಯೂರಪ್ಪ, `ಮತ್ತೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ. ಬಹುತೇಕ ಶಾಸಕರು ನಾನು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ~ ಎಂದು ವಿವರಿಸಿದರು.
ಇದಕ್ಕೆ ಮಣಿಯದ ಗಡ್ಕರಿ, `ಮೊದಲು ಆರೋಪಗಳಿಂದ ಮುಕ್ತರಾಗಿ ಹೊರಬನ್ನಿ, ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಿರಿ~ ಎಂದು ಸಲಹೆ ಮಾಡಿದರು.

ಇದರಿಂದ ಸಮಾಧಾನಗೊಳ್ಳದ ಯಡಿಯೂರಪ್ಪ ಸಿಟ್ಟಿನಿಂದಲೇ ರೇಸ್‌ಕೋರ್ಸ್ ನಿವಾಸಕ್ಕೆ ಹಿಂತಿರುಗಿದರು.
ಅಲ್ಲಿ ತಮ್ಮ ಬೆಂಬಲಿಗ ಶಾಸಕರೊಂದಿಗೆ ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದ ನಂತರ ಎಲ್ಲರೂ ಒಟ್ಟಾಗಿ ರೆಸಾರ್ಟ್‌ನತ್ತ ತೆರಳಿದರು.

ಮುಖ್ಯಮಂತ್ರಿ ಕೂಡ ಗಡ್ಕರಿ ಅವರನ್ನು ಭೇಟಿಯಾಗಿ, ಯಡಿಯೂರಪ್ಪ ಮತ್ತು ಅವರ ಬಣದವರ ಅಸಹಕಾರ, ಕೆಲ ಸಚಿವರು ಬಹಿರಂಗವಾಗಿ ಪಕ್ಷಕ್ಕೆ ಮುಜುಗರವಾಗುವ ಹೇಳಿಕೆಗಳನ್ನು ನೀಡುತ್ತಿರುವುದು, ಇಲಾಖೆ ಬಗ್ಗೆ ನಿರ್ಲಕ್ಷ್ಯ ತಾಳಿರುವ ಕುರಿತು ವಿವರಿಸಿದರು.

ಗಡ್ಕರಿ, ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಒಟ್ಟಾಗಿ ರೆಸಾರ್ಟ್‌ಗೆ ತೆರಳಿದರು.

ಗುರುವಾರ ರಾತ್ರಿಯಿಂದಲೇ ಯಡಿಯೂರಪ್ಪ ಮತ್ತು ಸದಾನಂದ ಗೌಡ ಕಡೆಯವರು ಪ್ರತ್ಯೇಕವಾಗಿ ಗಡ್ಕರಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು.  ಆದರೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ನಾಯಕತ್ವ ಬದಲಾವಣೆ ಇಲ್ಲ ಎಂದು ಗಡ್ಕರಿ ಅವರು ಸ್ಪಷ್ಟವಾಗಿ ಹೇಳುತ್ತಿದ್ದಂತೆಯೇ ಸದಾನಂದ ಗೌಡ ಮತ್ತು ಅವರ ಬೆಂಬಲಿಗರು ನಿಟ್ಟುಸಿರುಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT