ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಿಜೆಪಿ ಜತೆ ವಿಲೀನ ಇಲ್ಲ, ಮೈತ್ರಿಗೆ ಸಿದ್ಧ'

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಬಿಜೆಪಿ ಜತೆ ಮೈತ್ರಿಗೆ ಸಿದ್ಧ. ಆದರೆ, ಕರ್ನಾಟಕ ಜನತಾ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷದ ರಾಜ್ಯ ಮತ್ತು ಜಿಲ್ಲಾ ಪ್ರಮುಖ ನಾಯಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕೆಜೆಪಿ ಅಸ್ತಿತ್ವ ಉಳಿಸಿಕೊಳ್ಳಬೇಕು ಎನ್ನುವುದು ಕಾರ್ಯಕರ್ತರ ಅಭಿಪ್ರಾಯ. ಆದ್ದರಿಂದ ಯಾವುದೇ ಪಕ್ಷದ ಜತೆ ವಿಲೀನ ಇಲ್ಲ.

ಕಾಂಗ್ರೆಸ್ ಜತೆ ಹೊಂದಾಣಿಕೆ ಇಲ್ಲ. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ. ಒಂದು ವೇಳೆ ತೃತೀಯ ರಂಗ ರಚನೆಯಾದರೆ ಸಮಾನ ಮನಸ್ಕ ಪಕ್ಷಗಳ ಜತೆಯೂ ಹೊಂದಾಣಿಕೆ ಮಾಡಿಕೊಳ್ಳಲು ಚಿಂತನೆ ಮಾಡಲಾಗುವುದು' ಎಂದು ತಿಳಿಸಿದರು.

`ಹೊಂದಾಣಿಕೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ನಾಯಕರಾದ ರಾಜನಾಥ್‌ಸಿಂಗ್, ಅರುಣ್ ಜೈಟ್ಲಿ, ನರೇಂದ್ರ ಮೋದಿ ಜತೆ ಮಾತುಕತೆಗೆ ಸಿದ್ಧ. ಆದರೆ, ಕೆಜೆಪಿ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಮಾತುಕತೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಡಿಯೂರಪ್ಪ, `ಮೋದಿ ಈ ದೇಶದ ಪ್ರಧಾನಿಯಾಗಬೇಕು ಎನ್ನುವುದು ಜನತೆಯ ಆಶಯವಾಗಿದೆ. ಹೀಗಾಗಿ ಮೋದಿ ಅವರನ್ನು ನಾನು ಬೆಂಬಲಿಸುತ್ತೇನೆ' ಎಂದರು.

`ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಗ್ಗದ ದರದಲ್ಲಿ ಅಕ್ಕಿ ವಿತರಿಸುವ ಬಗ್ಗೆ ಆತುರದ ತೀರ್ಮಾನ ಕೈಗೊಂಡಿದೆ. ಸಮರ್ಪಕವಾಗಿ ಫಲಾನುಭವಿಗಳ ಪಟ್ಟಿಯೂ ತಯಾರಿಸದೆ ಅಕ್ಕಿ ವಿತರಣೆಗೆ ಮುಂದಾಗಿದೆ. `ಸರ್ಕಾರ' ಎನ್ನುವುದು ಕೇವಲ ಬೆಂಗಳೂರಿಗೆ ಸೀಮಿತವಾಗಿದೆ.

ಹೊಸ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದರೂ ಅನುಷ್ಠಾನವಾಗುತ್ತಿಲ್ಲ. ರಾಜ್ಯದಲ್ಲಿನ ಜಲಾಶಯಗಳು ಭರ್ತಿಯಾಗುತ್ತಿದ್ದರೂ ಹಲವು ಜಿಲ್ಲೆಗಳಲ್ಲಿ ಇನ್ನೂ ಭೀಕರ ಬರ ಇದೆ. ಬರ ನಿರ್ವಹಣೆಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರ ತಮ್ಮ ಪಾಲಿಗೆ ಬದುಕಿದೆಯಾ ಎನ್ನುವ ಸಂಶಯ ಜನಸಾಮಾನ್ಯರಿಗೆ ಕಾಡುತ್ತಿದೆ' ಎಂದು ದೂರಿದರು.

`ಕಳೆದ ನಾಲ್ಕು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅಭಿವೃದ್ಧಿಗಾಗಿ ಅನುದಾನವೂ ಬಿಡುಗಡೆಯಾಗಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದರು.

`ಅಕ್ಟೋಬರ್‌ನಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮತ್ತು ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಬೇಕು. ಆದರೆ, ಕಾಂಗ್ರೆಸ್ ಪಕ್ಷದ ನಡವಳಿಕೆ ನೋಡಿದರೆ ಲೋಕಸಭೆ ಮತ್ತು ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ' ಎಂದರು.

`ಇಂದು ಇಡೀ ರಾಜಕೀಯ ಕವಲು ದಾರಿಯಲ್ಲಿದೆ. ರಾಜ್ಯ ರಾಜಕೀಯ ಬೂದಿಮುಚ್ಚಿದ ಕೆಂಡದಂತಿದೆ. ಈ ಸನ್ನಿವೇಶದಲ್ಲಿ ಕೆಜೆಪಿ ಪ್ರಬಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಲೋಕಸಭೆ ಚುನಾವಣೆಗೂ ಸನ್ನದ್ಧರಾಗಬೇಕು. ಪಕ್ಷದಲ್ಲಿನ ಕೊರತೆಗಳನ್ನು ತುಂಬಿಕೊಂಡು ಮುಂದಿನ ಹೆಜ್ಜೆ ಇಡಬೇಕು' ಎಂದು ಮುಖಂಡರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT