ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟೀಕೆಗೆ ನಿತೀಶ್ ತೀಕ್ಷ್ಣ ಉತ್ತರ

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ/ಐಎಎನ್‌ಎಸ್): ಗುಜರಾತ್ ಗಲಭೆ ಬಗ್ಗೆ ನಿತೀಶ್ ಕುಮಾರ್ ಅವರು ಆ ಸಮಯದಲ್ಲಿ ತೆಪ್ಪಗಿದ್ದದ್ದೇಕೆ ಎಂಬ ಟೀಕೆಗೆ ಬಿಹಾರದ ಮುಖ್ಯಮಂತ್ರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಹೊಣೆ ಎಂದು ನರೇಂದ್ರ ಮೋದಿಗೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಗುಜರಾತ್ ಗಲಭೆ ಘಟಿಸಿದ (2002) ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದರು. ಆಗ ಅವರು ನರೇಂದ್ರ ಮೋದಿ ಅವರ ಧೋರಣೆಯನ್ನು ಟೀಕಿಸಿ, ತಮ್ಮ ಸಚಿವ ಸ್ಥಾನವನ್ನು ಏಕೆ ತೊರೆಯಲಿಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಕಟುವಾಗಿ ಟೀಕಿಸಿದ್ದರು.

`ಇದೇ ವಿಚಾರವನ್ನು ಈ ಹಿಂದೆ ಲಾಲು ಅವರು ಸಂಸತ್ತಿನಲ್ಲೂ ಎತ್ತಿದ್ದರು. ಆಗ ಅದಕ್ಕೆ ತಕ್ಕ ಉತ್ತರ ನೀಡಿದ್ದೆ' ಎಂದು ಸ್ಮರಿಸಿದ ನಿತೀಶ್, `ಇಲಾಖಾ ಸಚಿವನಾಗಿ ರೈಲ್ವೆ ಸುರಕ್ಷತೆ ಬಗ್ಗೆ ಒತ್ತು ನೀಡುವುದು ನನ್ನ ಕರ್ತವ್ಯವಾಗಿತ್ತು. ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಬಗೆಹರಿಸುವುದು ರಾಜ್ಯ ಸರ್ಕಾರದ ಹೊಣೆ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.ಮೋದಿ ವಿಷಯದಲ್ಲಿ ತಮ್ಮ ವಿರುದ್ಧ ಕಿಡಿಕಾರುತ್ತಿರುವ ಬಿಜೆಪಿ ಮುಖಂಡರಿಗೂ ನಿತೀಶ್ ಇದೇ ಉತ್ತರ ನೀಡಿದ್ದಾರೆ.

ನಿತೀಶ್ ಶ್ಲಾಘನೆ: ನರೇಂದ್ರ ಮೋದಿ ವಿಚಾರವಾಗಿ ನಿತೀಶ್ ಕುಮಾರ್ ಅವರು ಬಿಜೆಪಿ ಮುಖಂಡರಿಂದ ಟೀಕೆಗೆ ಗುರಿಯಾಗಿದ್ದರೂ, ತಮ್ಮ ಸಂಪುಟ ಸಹೋದ್ಯೋಗಿಗಳಾದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಪಶುಸಂಗೋಪನಾ ಸಚಿವ ಗಿರಿರಾಜ್ ಸಿಂಗ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಬಿಹಾರದಲ್ಲಿ ಕಂದರ ವಿಸ್ತಾರ:  ಜಾತ್ಯತೀತ ನಿಲುವು ಕಾಯ್ದುಕೊಳ್ಳಲು ಯತ್ನಿಸುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವುದರಿಂದ  ರಾಜ್ಯದಲ್ಲಿ ಬಿಜೆಪಿ- ಜೆಡಿಯು ನಡುವಿನ ಕಂದರ ವಿಸ್ತರಿಸಿದೆ.

ಈ ಮಧ್ಯೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಹೊರನಡೆದರೂ ಸರ್ಕಾರಕ್ಕೆ ಧಕ್ಕೆಯಿಲ್ಲ ಎಂದು ಜೆಡಿಯು ಮುಖಂಡರು ಹೇಳಿಕೊಂಡಿದ್ದಾರೆ.ಜಾತ್ಯತೀತ ನಿಲುವಿನವರು ಎನ್‌ಡಿಎ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿತೀಶ್ ಕುಮಾರ್ ಅವರು ನವದೆಹಲಿಯಲ್ಲಿ ಭಾನುವಾರ ಹೇಳಿದ್ದರು.

ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ,  ಮೋದಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿ. ಮೈತ್ರಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಅವರನ್ನು ದೂರ ಇರಿಸಲಾಗದು. ಗುಜರಾತ್ ಮುಖ್ಯಮಂತ್ರಿ ಅವರಿಗೆ ಜಾತ್ಯತೀತತೆಯ ಪ್ರಮಾಣ ಪತ್ರವನ್ನು ಯಾರೂ ಕೊಡಬೇಕಾಗಿಲ್ಲ ಎಂದೂ ಹೇಳಿದೆ.

ಇದಕ್ಕೆ ಅಷ್ಟೇ ತೀವ್ರವಾಗಿ ತಿರುಗೇಟು ನೀಡಿರುವ ಜೆಡಿಯು, ಸರ್ಕಾರಕ್ಕೆ ಕುತ್ತು ತರುವ ಬಿಕ್ಕಟ್ಟು ಉಂಟಾದರೆ ಸರ್ಕಾರ ಉಳಿಸಿಕೊಳ್ಳುವಷ್ಟು ಅಗತ್ಯ ಸಂಖ್ಯಾಬಲ ಪಕ್ಷದ ಬಳಿ ಇದೆ ಎಂದು ಹೇಳಿದೆ.

`ಮೋದಿ ಅವರ ಸಲುವಾಗಿಯೇ 17 ವರ್ಷಗಳ ಮೈತ್ರಿಯನ್ನು ಕಳೆದುಕೊಳ್ಳಲು ಬಿಜೆಪಿ ಬಯಸಿದರೆ  ಸರ್ಕಾರವೇನೂ ಬಿದ್ದುಹೋಗುವುದಿಲ್ಲ. ಬಹುಮತಕ್ಕೆ ಅಗತ್ಯದಷ್ಟು ಸಂಖ್ಯಾಬಲವನ್ನು ಪಕ್ಷ ಹೊಂದಿದೆ' ಎಂದು ನಿತೀಶ್ ಅವರಿಗೆ ಆಪ್ತರಾದ ಜೆಡಿಯು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

`243 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಶಾಸಕರ ಬೆಂಬಲ ಅಗತ್ಯವಿದೆ. ಪಕ್ಷವು ಈಗಾಗಲೇ 118 ಶಾಸಕರನ್ನು ಹೊಂದಿದೆ. ಆರು ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

`ಮೈತ್ರಿಗೆ ಧಕ್ಕೆ ಇಲ್ಲ': ಬಿಹಾರದಲ್ಲಿ ಜೆಡಿಯು ಜೊತೆಗಿನ ಮೈತ್ರಿಗೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಬಿಜೆಪಿ ವಕ್ತಾರ ಷಾನವಾಜ್ ಹುಸೇನ್ ಮಂಗಳವಾರ ಕೋಲ್ಕತ್ತದಲ್ಲಿ ಸ್ಟಷ್ಟಪಡಿಸಿದ್ದಾರೆ.

`2014ರ ಲೋಕಸಭಾ ಚುನಾವಣೆಗೆ ಪ್ರಧಾನಿ ಹುದ್ದೆ ಅಭ್ಯರ್ಥಿ ಯಾರು ಎನ್ನುವುದನ್ನು ಪಕ್ಷದ ಸಂಸದೀಯ ಮಂಡಳಿಯು ಸೂಕ್ತ ಸಮಯದಲ್ಲಿ ನಿರ್ಧರಿಸುತ್ತದೆ' ಎಂದೂ ಅವರು ಹೇಳಿದ್ದಾರೆ.ವಿಧಾನಸಭೆಯಲ್ಲಿ ಬಿಜೆಪಿ 91, ರಾಷ್ಟ್ರೀಯ ಜನತಾ ದಳದ 22, ಕಾಂಗ್ರಸ್ 4, ಲೋಕ ಜನಶಕ್ತಿ ಮತ್ತು ಎಡಪಕ್ಷಗಳ ತಲಾ ಒಬ್ಬರು  ಸದಸ್ಯರಾಗಿದ್ದಾರೆ.

`ರಾಷ್ಟ್ರದಾದ್ಯಂತ ಮೋದಿ ಪ್ರಚಾರ'
ನವದೆಹಲಿ ವರದಿ:ಜೆಡಿಯು ಜೊತೆಗಿನ ಮೈತ್ರಿಯನ್ನು ಮುರಿಯಲು  ಬಿಜೆಪಿ ಬಯಸಿಲ್ಲ. ಭಿನ್ನಾಭಿಪ್ರಾಯ ಹೋಗಲಾಡಿಸಲು ಚರ್ಚಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

`ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ಬಿಹಾರದಲ್ಲಿ ಜೆಡಿಯು ಸಖ್ಯ ತೊರೆಯಲಿದೆಯೇ' ಎಂಬ ಪ್ರಶ್ನೆ ಉತ್ತರಿಸಿದ ಅವರು, `ಜೆಡಿಯು ಜೊತೆಗಿನ ಸ್ನೇಹ ಬಿಡುವುದಿಲ್ಲ. ಈವರೆಗೂ ಏನಾಗಿದೆಯೋ ಆ ಕುರಿತು ಮಾತುಕತೆ ನಡೆಸಲಾಗುವುದು' ಎಂದಿದ್ದಾರೆ.

`ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ದೇಶಾದದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗುವರು' ಎಂದು ಅವರು ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT